ಹುಬ್ಬಳ್ಳಿ: ಅವಳಿನಗರದಲ್ಲಿ ನಾಲ್ಕು ಆಮ್ಲಜನಕ ಉತ್ಪಾದಕ ಘಟಕಗಳ ಸ್ಥಾಪನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಯತ್ನದ ಫಲವಾಗಿ ಜಿಲ್ಲೆಗೆ ನಾಲ್ಕು ಘಟಕಗಳು ದೊರೆತಿವೆ.
ಆಮ್ಲಜನಕ ಕೊರತೆ ನೀಗಿಸುವ ನಿಟ್ಟಿನಲ್ಲಿ ಆಮ್ಲಜನಕ ಘಟಕ ಆರಂಭಕ್ಕೆ ಅವಕಾಶ ನೀಡುವಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪತ್ರ ಬರೆದಿರುವ ಪರಿಣಾಮವಾಗಿ ಕಿಮ್ಸ್‌ನಲ್ಲಿ ಮೂರು ಹಾಗೂ ಧಾರವಾಡ ಸರಕಾರಿ ಆಸ್ಪತ್ರೆಯಲ್ಲಿ ಒಂದು ಘಟಕ ಸ್ಥಾಪನೆಗೆ ಒಪ್ಪಿಗೆ ದೊರೆತಿದೆ.
ಕೇಂದ್ರ ಸರಕಾರ ಸ್ವಾಮ್ಯದ ಎಂಆರ್ ಪಿಎಲ್, ಒಎನ್‌ಜಿಸಿ ಹಾಗೂ ಎನ್ ಎಂಡಿಸಿ ಕಂಪೆನಿಗಳಿಗೆ ಆದೇಶಿರುವ ಕೇಂದ್ರ ಪೆಟ್ರೋಲಿಯಂ ಸಚಿವರು, ಕರ್ನಾಟಕದ ಧಾರವಾಡ ಜಿಲ್ಲೆಗೆ ನಾಲ್ಕು ಆಮ್ಲಜನಕ ಉತ್ಪಾದನಾ ಘಟಕ ಮಂಜೂರು ಮಾಡಿದ್ದು, ಇದರಲ್ಲಿ ಮೂರು ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಹಾಗೂ ಒಂದು ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುತ್ತಿದೆ.ಪ್ರತಿ ಘಟಕ ನಿಮಿಷಕ್ಕೆ 1,000 ಲೀಟರ್ ಆಮ್ಲಜಕ ಉತ್ಪಾದಿಸಲಿವೆ. ತಕ್ಷಣದಿಂದಲೇ ಘಟಕಗಳ ಕಾರ್ಯಾರಂಭಕ್ಕೆ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ನಾಲ್ಕು ಘಟಕಗಳ ಸ್ಥಾಪನೆಯಿಂದ ಅವಳಿಗರದಲ್ಲಿ ಆಮ್ಲಜನಕ ಪೂರೈಕೆ ಸಮಸ್ಯೆ ತಪ್ಪಲಿದ್ದು, ಶಾಶ್ವತ ಪರಿಹಾರ ದೊರೆತಂತಾಗಲಿದೆ. 24/7 ಮಾದರಿಯಲ್ಲಿ ಆಮ್ಲಜನಕ ಲಭ್ಯವಾಗಲಿದೆ. ಇದರಿಂದ ಸಾಗಣೆ ವೆಚ್ಚ ತಗ್ಗುವುದಲ್ಲದೆ ಸಕಾಲಿಕವಾಗಿ ಆಕ್ಸಿಜನ್ ಲಭ್ಯವಾಗಲಿದೆ. ಅವಳಿನಗರಕ್ಕೆ ನಾಲ್ಕು ಆಮ್ಲಜನಕ ತಯಾರಿಕಾ ಘಟಕಗಳ ಸ್ಥಾಪನೆಗೆ ಮಂಜೂರಾತಿ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.