ಹುಬ್ಬಳ್ಳಿ: ಬಿಆರ್‌ಟಿಎಸ್ ಕಾಮಗಾರಿ ವೇಗ ಪಡೆದುಕೊಂಡಿದೆ. ವಿಭಾಗೀಯ ಕಾರ್ಯಾಗಾರ, ಘಟಕಗಳ ಕಾಮಗಾರಿ ಶೇ. 99 ಪೂರ್ಣಗೊಂಡಿದೆ. ರಸ್ತೆ ಕಾಮಗಾರಿ 10 ದಿನದೊಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ನ. 1ರಂದು ಬಸ್ ಸೇವೆ ಆರಂಭಿಸುವ ನಿಟ್ಟಿನಲ್ಲಿ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಹು-ಧಾ ಬಿಆರ್‌ಟಿಎಸ್ ಯೋಜನೆಯ ವಿವಿಧ ಕಾಮಗಾರಿ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಆರ್‌ಟಿಎಸ್ ಸೇವೆ ಆರಂಭವಾಗುವುದರಿಂದ ಹೊಸೂರು-ಉಣಕಲ್ಲ ಸಂಪರ್ಕ ರಸ್ತೆ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಹೀಗಾಗಿ ಬಿಆರ್‌ಟಿಎಸ್ ಹಾಗೂ ಸಿಆರ್‌ಎಫ್ ನಿಧಿಯಲ್ಲಿ ಚತುಷ್ಪಥವಾಗಿ ಅಭಿವೃದ್ಧಿಗೊಳ್ಳಲಿದೆ.
ಮುಂದೆ ಭೂ ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿನ ನಿವಾಸಿಗಳನ್ನು ತೆರವುಗೊಳಿಸುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು. ವಿವಿಧೆಡೆ ಭೇಟಿ-ಮಾಹಿತಿ ಸಂಗ್ರಹ: ಗೋಕುಲ ರಸ್ತೆಯಲ್ಲಿ ವಿಭಾಗೀಯ ಕಾರ್ಯಾಗಾರ, ಬಸ್ ಘಟಕ, ಹೊಸೂರು ವೃತ್ತದಲ್ಲಿ ರಸ್ತೆ, ಬಸ್ ನಿಲ್ದಾಣ, ಉಣಕಲ್ಲನ ಫ್ಲೈಓವರ್ ಕೆಳ ಭಾಗದ ರಸ್ತೆ ಸೇರಿದಂತೆ ಬಿಆರ್‌ಟಿಎಸ್ ರಸ್ತೆ ನಿರ್ಮಾಣ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಉಣಕಲ್ಲ ಹಾಗೂ ಪ್ರಸಿಡೆಂಟ್ ಹೋಟೆಲ್ ಮುಂಭಾಗದಲ್ಲಿರುವ ಬಿಆರ್‌ಟಿಎಸ್ ರಸ್ತೆಯನ್ನು 10 ದಿನದೊಳಗೆ ಪೂರ್ಣಗೊಳಿಸುವುದಾಗಿ ಬಿಆರ್ ಟಿಎಸ್ ಅಧಿಕಾರಿಗಳು ತಿಳಿಸಿದರು.
ಹೊಸೂರು ವೃತ್ತದ ಅಭಿವೃದ್ಧಿ ಕಾರ್ಯ ಇನ್ನೂ ಬಾಕಿ ಉಳಿದಿದ್ದು, ತರಾತುರಿಯಾಗಿ ಬಸ್ ಆರಂಭ ಮಾಡುವುದರಿಂದ ಇರುವ ರಸ್ತೆಯಲ್ಲೇ ಬಸ್ ಓಡಿಸುವಂತಾಗಲಿದೆ. ಬಸ್ ಸೇವೆ ಆರಂಭವಾಗುತ್ತಿದ್ದಂತೆ ಉಳಿದಿರುವ ಕಾಮಗಾರಿ ಕೈಗೊಳ್ಳಲು ಸಮಸ್ಯೆಯಾಗುತ್ತದೆ. ಆತುರದ ನಿರ್ಧಾರದಿಂದ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಲಿದೆ ಎನ್ನುವ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಯಿತು. ಇನ್ನೂ ವೃತ್ತಕ್ಕೆ ಹೊಂದಿಕೊಂಡು ನಿರ್ಮಾಣಗೊಂಡಿರುವ ಬಿಆರ್ ಟಿಎಸ್ ನಿಲ್ದಾಣದಿಂದ ಎರಡು ದಿಕ್ಕಿನಲ್ಲಿರುವ ರಸ್ತೆಗಳ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಮನವಿ ಮಾಡಿದರು. ಈ ಸಮಸ್ಯೆ ಪರಿಶೀಲಿಸುವಂತೆ ಮಾಜಿ ಸಿಎಂ ಶೆಟ್ಟರ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಸದಸ್ಯರಿಂದ ಮನವಿ: ಉಣಕಲ್ಲನಲ್ಲಿ ಪ್ರತಿ ಶನಿವಾರ ಸಂತೆ ಆಗುವುದರಿಂದ ಸಾಕಷ್ಟು ಸಂಚಾರ ದಟ್ಟಣೆ ಇರುತ್ತಿದೆ. ಹೀಗಾಗಿ ಉಣಕಲ್ಲ ಭಾಗದಿಂದ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಮಾಡುವಂತೆ ಸ್ಥಳೀಯ ಪಾಲಿಕೆ ಸದಸ್ಯ ಉಮೇಶ ಕೌಜಗೇರಿ ಮನವಿ ಮಾಡಿದರು. ಪೂರ್ಣ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ ಎಂದು ಬಿಆರ್ ಟಿಎಸ್ ಅಧಿಕಾರಿಗಳು ತಳ್ಳಿಹಾಕಿದರು. ಹೇಗಾದರೂ ಮಾಡಿ ಒಂದಿಷ್ಟು ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಶೆಟ್ಟರ ಸೂಚಿಸಿದರು.
ಬಿಆರ್‌ಟಿಎಸ್ ಡಿಜಿಎಂ ಬಸವರಾಜ ಕೇರಿ, ಪಾಲಿಕೆ ಸದಸ್ಯರಾದ ಮಹೇಶ ಬುರ್ಲಿ, ಉಮೇಶ ಕೌಜಗೇರಿ, ಮುಖಂಡರಾದ ನಾಗೇಶ ಕಲಬುರ್ಗಿ, ತಿಪ್ಪಣ್ಣ ಮಜ್ಜಗಿ ಹಾಗೂ ಬಿಆರ್‌ಟಿಎಸ್ ಅಧಿಕಾರಿಗಳು ಇದ್ದರು.