Advertisement

ವಿಜ್ಞಾನ ಅಖಾಡದಲ್ಲಿ ಗರಿಗೆದರಿದ ಕುತೂಹಲ

11:49 AM Jan 19, 2019 | Team Udayavani |

ಹುಬ್ಬಳ್ಳಿ: ರಾಸಾಯನಿಕದಿಂದ ಆಹಾರ ಪದಾರ್ಥಗಳನ್ನು ತಯಾರಿಸಬಹುದೇ, ಬೆಳಕಿಗಿಂತ ವೇಗವಾದ ಸಂಗತಿ ಬೇರೆ ಯಾವುದಿದೆ, ಭೂಕಂಪವಾದರೆ ವಿಮಾನದಲ್ಲಿರುವವರೆಗೆ ತೊಂದರೆಯಾಗುತ್ತದೆಯೇ, ಕತ್ತಲೆ ವೇಗ ಎಷ್ಟಿದೆ, ಅಂಗೈ ಮೇಲಿನ ಗೆರೆಗೂ ಜ್ಯೋತಿಷ್ಯಕ್ಕೂ ಸಂಬಂಧವೇನು, ಕೂದಲು ಉದುರುತ್ತೆ ಆದರೆ ಉಗುರು ಉದುರುವುದಿಲ್ಲ ಏಕೆ…

Advertisement

ಮಕ್ಕಳ ಮನದೊಳಗಿಂದ ಸಿಡಿದ ಪ್ರಶ್ನೆಗಳ ಪರಿಯಿದು. ವಿದ್ಯಾರ್ಥಿಗಳ ಕೆಲ ಕುತೂಹಲಕಾರಿ ಪ್ರಶ್ನೆಗಳು ವಿಜ್ಞಾನಿಗಳನ್ನೇ ನಿಬ್ಬೆರಗಾಗಿಸಿತು.

ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದಿಂದ ಇಲ್ಲಿನ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಶನ್‌ ಆವರಣದಲ್ಲಿ ಆಯೋಜಿಸಿರುವ ಜಿಜ್ಞಾಸಾ-2019 ರಾಷ್ಟ್ರಮಟ್ಟದ ವಿಜ್ಞಾನ ಮಾದರಿಗಳ ಸ್ಪರ್ಧೆ ಹಾಗೂ ಪ್ರದರ್ಶನದ ಎರಡನೇ ದಿನ ‘ವಿಜ್ಞಾನಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ’ದಲ್ಲಿ ತಂತ್ರಜ್ಞಾನ, ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನ ಶಾಸ್ತ್ರ, ಖಗೋಳ ವಿಜ್ಞಾನ ಸೇರಿದಂತೆ ವಿವಿಧ ವಿಷಯ ಕುರಿತು ವಿದ್ಯಾರ್ಥಿಗಳು ಪ್ರಶ್ನೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.

ಯಾವುದೇ ವಸ್ತುವನ್ನು ಕೃತಕವಾಗಿ ತಯಾರಿಸಲು ನಿಸರ್ಗದಿಂದ ಕಚ್ಚಾ ವಸ್ತು ಬೇಕಾಗುತ್ತದೆ. ನಿಸರ್ಗದಲ್ಲಿನ ಯಾವುದೇ ವಸ್ತುವನ್ನು ಬಳಸದೆ ಕೃತಕವಾಗಿ ಚಿನ್ನ ತಯಾರಿಸುವುದು ಅಸಾಧ್ಯ ಎಂದು ಪ್ರೊ| ಎಂ.ಆರ್‌. ನಾಗರಾಜ ಹೇಳಿದರು.

ಓರ್ವ ವ್ಯಕ್ತಿಯ ಅಂಗೈಯಲ್ಲಿನ ಗೆರೆಗಳು ಇತರರಲ್ಲಿ ಕಾಣಲು ಅಸಾಧ್ಯ. ಹೀಗಾಗಿ ಅಪರಾಧ ಪ್ರಕರಣಗಳ ಪತ್ತೆಗೆ ಇದು ಅನುಕೂಲವಾಗಿದೆ. ಆದರೆ ಅಂಗೈ ಮೇಲಿನ ಗೆರೆಗಳು ಜ್ಯೋತಿಷ್ಯಕ್ಕೆ ಎಷ್ಟು ಸಂಬಂಧವಿದೆ ಎಂಬುದು ಗೊತ್ತಿಲ್ಲ. ಜ್ಯೋತಿಷ್ಯದ ಪ್ರಕಾರ ಹೇಳುವುದಾದರೆ ಸತ್ಯ, ವಿಜ್ಞಾನದ ಪ್ರಕಾರ ಇದು ಸುಳ್ಳು ಎಂದು ಡಾ| ಎನ್‌.ಎಸ್‌.ಲೀಲಾ ಉತ್ತರಿಸಿದರು.

Advertisement

ಭೂಕಂಪ ಭೂಮಿಗೆ ಮಾತ್ರ ಸೀಮಿತವಾಗಿರುತ್ತದೆ. ವಿಮಾನದಲ್ಲಿರುವರಿಗೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಗಾಳಿಯಲ್ಲಿರುವ ವಿಮಾನಕ್ಕೆ ತಲುಪುವಷ್ಟು ಸಾಮರ್ಥ್ಯವನ್ನು ಈ ತರಂಗಗಳು ಹೊಂದಿರುವುದಿಲ್ಲ ಎಂದು ಸುಧೀರ ಮೂರ್ತಿ ತಿಳಿಸಿದರು.

ಹಾವು ಕಚ್ಚಿದ ಕೂಡಲೇ ಭಯದಿಂದ ಸಾಯುತ್ತಾನೆ. ಕಚ್ಚಿದ ತಕ್ಷಣ ವಿಷ ಮಾನವನ ದೇಹ ಸೇರುವುದಿಲ್ಲ. ಹಾವಿನ ವಿಷದಿಂದ ಔಷಧಿ ತಯಾರಿಸಲಾಗುತ್ತದೆ. ವಿಷವನ್ನು ನೇರವಾಗಿ ಕುಡಿದರೆ ಸಾವು ಸಂಭವಿಸುವುದಿಲ್ಲ. ಆದರೆ ಯಾವುದೇ ಗಾಯಗಳು ಇರಬಾರದು ಎಂದು ಪ್ರೊ| ಎಂ.ಆರ್‌.ನಾಗರಾಜು ಉತ್ತರಿಸಿದರು.

ಮಾನವ ಸಂವೇದನೆಗಳನ್ನು ಅಳವಡಿಸಿ ರೋಬೋಟ್‌ಗಳನ್ನು ತಯಾರಿಸುವ ಪ್ರಯತ್ನ ಜಪಾನ್‌ ದೇಶದಲ್ಲಿ ನಡೆದಿದೆ. ಕ್ಯಾಮರಾ ಹಾಗೂ ಸೆನ್ಸಾರ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮನುಷ್ಯನ ನಡವಳಿಕೆ, ಮುಖದ ಛಾಯೆ ಗುರುತಿಸಿ ಪ್ರತಿಕ್ರಿಯೆ ನೀಡುವಂತೆ ಸೂಕ್ಷ್ಮ ರೋಬೋಟ್‌ಗಳನ್ನು ತಯಾರಿಸಲಾಗಿದೆ. ಇವು ಸೆನ್ಸಾರ್‌ ಆಧಾರಿತ ಎಂದು ನಾರಾಯಣ ಅಯ್ಯರ್‌ ತಿಳಿಸಿದರು.

ಹಮ್ಮಿಂಗ್‌ ಪಕ್ಷಿ ಆಕಾರದಲ್ಲಿ ಅತೀ ಚಿಕ್ಕದಾಗಿದ್ದು, ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಪ್ರತಿ ನಿಮಿಷಕ್ಕೆ ಅದರ ಹೃದಯ ಬಡಿತ 500ರಷ್ಟಿರುತ್ತದೆ. ರಾತ್ರಿ ವೇಳೆಯಲ್ಲಿ ಇದರ ಬಡಿತ 10ಕ್ಕೆ ಇಳಿದಿರುತ್ತದೆ. ಇತರೆ ಪಕ್ಷಿಗಳಿಂತ ವಿಶೇಷ ಗುಣ ಹೊಂದಿದೆ. ಹೀಗಾಗಿ ಈ ಪಕ್ಷಿ ಮಾತ್ರ ಹಿಮ್ಮುಖವಾಗಿ ಚಲಿಸಬಲ್ಲದು ಎಂದು ಡಾ| ಎನ್‌.ಎಸ್‌. ಲೀಲಾ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next