ಹುಬ್ಬಳ್ಳಿ: ‘ಬಲವಂತದ ಲೈಂಗಿಕ ದೌರ್ಜನ್ಯ, ಸಂಗಾತಿಯಿಂದ ಮನಬಂದಂತೆ ಹಲ್ಲೆಯ ಆ ಘಟನಾವಳಿ ವಿವರಿಸುವಾಗ ಆ ಮಹಿಳೆ ಕಣ್ಣಲ್ಲಿ ನೀರಾಡುತ್ತಿತ್ತು, ನೀರು ತುಂಬಿದ ಕಣ್ಣಲ್ಲಿಯೇ ತಪ್ಪು ಮರೆತು ನನ್ನಂತೆಯೇ ನೊಂದ ಸಾವಿರಾರು ಮಹಿಳೆಯರಿಗೆ ಸಹಾಯ ಮಾಡುತ್ತಿರುವ ಬಗ್ಗೆ ಸಾರ್ಥಕತೆ ಇತ್ತು, ಸಂತಸ ಮಿನುಗುತ್ತಿತ್ತು.’
ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡು ನಾಲ್ವರು ಮಕ್ಕಳೊಂದಿಗೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಆ ಮಹಿಳೆ (ಸುರಕ್ಷತೆ ದೃಷ್ಟಿಯಿಂದ ಆ ಮಹಿಳೆ ಹೆಸರು ಬಳಸುತ್ತಿಲ್ಲ)ಯನ್ನು ಕಾಮುಕನೊಬ್ಬ, ಮೋಸದ ಜಾಲ ಬೀಸಿ, ಬಲವಂತದಿದ್ದ ಒಲಿಸಿಕೊಂಡಿದ್ದ. ಆನಂತರದಲ್ಲಿ ಮಹಿಳೆಯ ಬದುಕು ಅಲ್ಲೋಲ ಕಲ್ಲೋಲ ಸ್ಥಿತಿಗೆ ತಲುಪಿತ್ತು. ಇಂತಹದ್ದೇ ದೌರ್ಜನ್ಯಕ್ಕೆ ಸಿಲುಕಿ ನಲುಗಿದ ಸಾವಿರಾರು ಮಹಿಳೆಯರಿಗೆ ಧಾರವಾಡದ ಬೆಳಕು ಸಂಸ್ಥೆ ಆಶ್ರಯ ನೀಡಿದ್ದು, ಆ ಮಹಿಳೆಯರಲ್ಲಿ ಇವರು ಒಬ್ಬರು.
ಆ ಮಹಿಳೆ ಗೋಳಿನ ಕಥೆ ಕೇಳಿದರೆ ಎಂತಹವರಿಗೂ ಕಣ್ಣಂಚಿಗೆ ನೀರು ಬರದೇ ಇರದು. ಕ್ರೂರವಾಗಿ ನಡೆದುಕೊಂಡ ಕಾಮುಕರ ಬಗ್ಗೆ ಆಕ್ರೋಶ ಬರದೇ ಇರದು. ಒಂದು ಕಡೆ ವಯಸ್ಸಾದ ತಂದೆ-ತಾಯಿ, ನಾಲ್ವರು ಮಕ್ಕಳೊಂದಿಗೆ ಬದುಕಿನ ಜಟಕಾ ಬಂಡಿ ಸಾಗಿಸುವ ಜವಾಬ್ದಾರಿ. ಇನ್ನೊಂದು ಕಡೆ ಸಂಗಾತಿಯಿಂದ ನಿತ್ಯವೂ ಹಲ್ಲೆ. ದೌರ್ಜನ್ಯಕ್ಕೊಳಾದ ಸ್ಥಿತಿಯಲ್ಲೇ ಐದು ವರ್ಷ ನೂಕಿದ್ದ ಆ ಮಹಿಳೆ, ಬೇರೊಂದು ಕಡೆ ಸ್ಥಳಾಂತರಗೊಂಡಿದ್ದರು. ಅಲ್ಲಿಯೂ ಅನಿವಾರ್ಯ ಕಾರಣಕ್ಕೆ ಮತ್ತಿಬ್ಬರು ಸಂಗಾತಿಗಳನ್ನು ಹೊಂದಬೇಕಿತ್ತು. ಮೂರನೇ ಸಂಗಾತಿ ಒಂದಿಷ್ಟು ಕರುಣೆ ತೋರಿ ಡಬ್ಟಾ ಅಂಗಡಿಗೆ ನೆರವು ನೀಡಿದ್ದ. ಅದೇ ಅಂಗಡಿಯ ಆದಾಯದಲ್ಲೇ ಕುಟುಂಬ ಸಾಗಿಸಿದ್ದ ಮಹಿಳೆ ನಾಲ್ವರು ಮಕ್ಕಳನ್ನು ಬೆಳೆಸಿದ್ದರು.
ನೋವುಂಡರೂ ಇನ್ನೊಬ್ಬರಿಗೆ ನೆರವು: 2014ರಲ್ಲಿ ಬೆಳಕು ಸಂಸ್ಥೆಯ ಸದಸ್ಯತ್ವ ಪಡೆದ ಈ ಮಹಿಳೆ ಸಂಗಾತಿಗಳ ಜಂಜಾಟದಿಂದ ಹೊರ ಬಂದು ತನ್ನಂತೆಯೇ ಬಲವಂತದ, ಮೋಸದ ಜಾಲಕ್ಕೆ ಸಿಲುಕಿ ನಲುಗುತ್ತಿರುವ ಮಹಿಳೆಯರ ಸುಧಾರಣೆಗೆ ಶ್ರಮಿಸುತ್ತಿದ್ದಾರೆ. ‘ಸಾರ್ ನನ್ನ ಕಣ್ಣೀರ ಕಥೆ ಏನ್ ಕೇಳ್ತೀರಿ. ಮನೆಗೆ ಕಿರಿಯವಳು ನಾನು, ಸಿರಿವಂತಿಕೆ ಇಲ್ಲಿದ್ದರೂ ಕಷ್ಟ ಗೊತ್ತಿರಲಿಲ್ಲ. 13ನೇ ವಯಸ್ಸಿನಾಗ, ಲಾರಿ ಚಾಲಕನನ್ನು ಮದ್ವಿ ಆದೆ, ಸಂಸಾರ ಸುಖವಾಗಿತ್ತು. ಐದು ಮಕಾÛದುÌ. ಒಂದು ಮಗು ಸತ್ತೋಯ್ತು. ಎಲ್ಲ ಚೆಂದೈತಿ ಅಂದಾಗ್ಲೆ ದುರಂತ ಎದುರಾಗಿ ಅಪಘಾತದಲ್ಲಿ ಗಂಡ ತೀರಿಕೊಂಡ್ರು. ಹೊರ ಜಗತ್ತು ಗೊತ್ತಿಲ್ಲದ ನನಗೆ ಏನೂ ತೋಚದಾಗಿತ್ತು. ಲಾರಿ ಕಂಪೆನಿಯಿಂದ ಬಂದ 70 ಸಾವಿರ ರೂ.ಗಳಲ್ಲಿ ಇದ್ದ ಜಾಗದಲ್ಲಿ ಸಣ್ಣ ಮನೆ ಕಟ್ಟಿಕೊಂಡಿದ್ದೆ. ಬದುಕು ಸಾಗಿಸಲು, ಕಲ್ಲು ಕ್ವಾರಿ ಕೆಲಸಕ್ಕೆ ಹೋಗುತ್ತಿದ್ದೆ. ಆ ಕ್ವಾರಿಯೇ ನನಗೆ ಆಘಾತ ನೀಡುತ್ತೇ ಅಂದುಕೊಂಡಿರಲಿಲ್ಲ.
ಕ್ವಾರಿ ಮಾಲಿಕನನ್ನು ಅಣ್ಣಾ ಎಂದೇ ಕರೆಯುತ್ತಿದ್ದೆ. ಆದರವನು ನನ್ನನ್ನು ಬೇರೆ ದೃಷ್ಟಿಯಿಂದಲೇ ನೋಡಿದ್ದ. ಒಂದು ದಿನ ಹೊಂಚು ಹಾಕಿ ಬಲವಂತದಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ. ನಂತರದಲ್ಲಿ ಅನಿವಾರ್ಯವಾಗಿ ಶರಣಾಗಿದ್ದೆ. ಕೆಲವೇ ದಿನಗಳಲ್ಲಿ ಅವನ ದೌರ್ಜನ್ಯದ ಮತ್ತೊಂದು ಮುಖ ತೋರ್ಸಿದ್ದ. ಇಲ್ದ ಸಲ್ದ ಅನುಮಾನ ತೋರಿ ನನ್ನ ಮೇಲೆ ಹಲ್ಲೆ ಆರಂಭಿಸಿದ. ಎಷ್ಟರ ಮಟ್ಟಿಗೆ ಎಂದರೆ ರಾತ್ರಿಯಿಡಿ ಕಟ್ಟಿಗೆಯಿಂದ ಬಡೀತಿದ್ದ. ಐದು ವರ್ಷಾ ಇದೇ ದೌರ್ಜನ್ಯದಲ್ಲೇ ಕಾಲ ಕಳ್ದೆ, ನಂತ್ರ ಅವನಿಂದ ದೂರವಾಗಲು ಇದ್ದ ಊರು ಬಿಟ್ಟು ಬೇರೊಂದು ಊರಿಗೆ ಬಂದೆ.
ಅಲ್ಲಿಯೂ ಮತ್ತಿಬ್ಬರು ಸಂಗಾತಿ ಜತೆಯಾಗಬೇಕಾಯಿತು. ಕೊನೆಯ ಸಂಗಾತಿ ಡಬ್ಟಾ ಅಂಗಡಿಗೆ ಸಹಾಯ ಮಾಡಿದ. ಅದೇ ಜೀವನ ಆಧಾರವಾಯ್ತು. ಹೇಗೋ ಬೆಳಕು ಸಂಸ್ಥೆ ಸಂಪರ್ಕಕ್ಕೆ ಸಿಕ್ತು. ಅದಕ್ಕ ಸದಸ್ಯಳಾದ್ಮೇಲೆ ತಿಳಿತು. ನಾನೊಬ್ಳೆ ಅಲ್ಲ. ನನ್ನಂತೆ ಸಾವಿರಾರು ಮಹಿಳೆಯರು ಇಂತಹ ಸಂಕಷ್ಟಕ್ಕೆ ಸಿಲುಕಿದ್ದಾರೆಂದು. ಇಂತಹ ಮಹಿಳೆಯರ ಕಣ್ಣೀರು ಒರೆಸಲು ನಿರ್ಧರಿಸಿದೆ. ಈಗ ಮಕ್ಕಳು ದೊಡ್ಡವರಾಗಿದ್ದು, ಅವರು ದುಡಿಮೆಯಲ್ಲಿದ್ದಾರೆ. ಎಚ್‌ಐವಿ/ಏಡ್ಸ್ ತಡೆ ಕಾರ್ಯದ ಎನ್‌ಜಿಒ ಒಂದರಲ್ಲಿ ನನಗೆ ಮಾಸಿಕ 3,300ರೂ. ಗೌರವಧನ ದೊರೆಯುತ್ತಿದ್ದು, ಅದೇ ಹಣದಲ್ಲೇ ಪೂರ್ಣ ಪ್ರಮಾಣದಲ್ಲಿ ದೌರ್ಜನ್ಯಕ್ಕೊಳಗಾದ, ಎಚ್‌ಐವಿ ಪೀಡಿತ ಮಹಿಳೆಯರ ಕಣ್ಣೀರೊರೆಸುವ ಕೆಲ್ಸಕ್ಕ ನಿಂತೀನಿ. ದೇವ್ರು ಒಂದ್ ತುತ್ತು ಊಟಕ್ಕ ತೊಂದ್ರೆ ಮಾಡಿಲ್ಲ. ಹೋದಲ್ಲಿ ನನ್ನಂತೆ ನೋವುಂಡ ಮಹಿಳೆಯರು ಅಕ್ಕಾ ನಮ್ಮನ್ಯಾಗ ಊಟ ಮಾಡು ಅಂತಾ ಪ್ರೀತಿಯಿಂದ ಊಟ ಕೊಡ್ತಾರೆ’ ಹೀಗೆಂದು ತಮ್ಮ ಕಣ್ಣೀರ ಕಥೆ ಮುಗಿಸುವಾಗ ಆ ಮಹಿಳೆ ಕಣ್ಣಲ್ಲಿ ಇನ್ನೊಬ್ಬರ ಬದುಕಿಗೆ ನೆರವಾಗುತ್ತಿರುವ ಸಂತಸ ಮಿನುಗುತ್ತಿತ್ತು. ನಮ್ಮಂತೆ ನಮ್ಮ ಮಕ್ಕಳಾಗಬಾರದು ಎಂಬ ಜಾಗೃತಿಯಿಂದ ಅದೆಷ್ಟೋ ಹೆಣ್ಣು ಮಕ್ಕಳು,ಯುವತಿಯರನ್ನು ಪಾಪದ ಕೂಪದಿಂದ ದೂರವಿರಿಸಿದ ಸಾಧನೆ ಹೆಮ್ಮೆ ರೂಪದಲ್ಲಿ ಗೋಚರಿಸುತ್ತಿತ್ತು.
ಅಮರೇಗೌಡ ಗೋನವಾರ