Advertisement

HSRP Registration: ಎಚ್‌ಎಸ್‌ಆರ್‌ಪಿ ನೋಂದಣಿ ವೇಳೆ ಎಚ್ಚರ!

12:03 PM Feb 18, 2024 | Team Udayavani |

ಬೆಂಗಳೂರು: ಸಾರಿಗೆ ಇಲಾಖೆ 2019ರ ಏ.1ಕ್ಕೂ ಮೊದಲು ನೋಂದಣಿಯಾದ ವಾಹನ ಗಳಿಗೆ ಹೈಸೆಕ್ಯೂರಿಟಿ ರಿಜಿಸ್ಟ್ರೇಷನ್‌ ನಂಬರ್‌ ಪ್ಲೇಟ್‌(ಎಚ್‌ಎಸ್‌ಆರ್‌ಪಿ) ಕಡ್ಡಾಯಗೊಳಿಸಿದೆ. ಆದರೆ, ಅದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್‌ ವಂಚಕರು, ನಕಲಿ ಕ್ಯೂ ಆರ್‌ ಕೋಡ್‌ ಲಿಂಕ್‌ಗಳನ್ನು ಕಳುಹಿಸಿ ಜನರಿಂದ ಹಣ ಸುಲಿಗೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

Advertisement

ಈ ಬಗ್ಗೆ ರಕ್ಷಿತ್‌ ಪಾಂಡೆ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ನಕಲಿ ಕ್ಯೂಆರ್‌ ಕೋಡ್‌ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. “ಆನ್‌ಲೈನ್‌ ಮೂಲಕ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಲಿಂಕ್‌ವೊಂದನ್ನು ಕ್ಲಿಕ್‌ ಮಾಡಿದೆ. ಬಳಿಕ ಪುಟವೊಂದು ತೆರೆಯಿತು. ಅದರಲ್ಲಿ ಕೆಲ ಮಾಹಿತಿಯನ್ನು ತುಂಬಿದೆ. ಆ ನಂತರ ಹಣ ಪಾವತಿಸುವಂತೆ ಲಿಂಕ್‌ವೊಂದು ಬಂದಿದೆ. ಅದನ್ನು ತೆರೆದಾಗ ಮೊಹಮ್ಮದ್‌ ಆಸೀಫ್ ಎಂಬ ಹೆಸರು ಕಂಡು ಬಂದಿತ್ತು. ಬಳಿಕ ಇದೊಂದು ನಕಲಿ ಲಿಂಕ್‌ ಎಂದು ಭಾವಿಸಿ ದೂರು ನೀಡುತ್ತಿದ್ದೇನೆ ಎಂದು ರಕ್ಷಿತ್‌ ಪಂಡಿತ್‌ ಎಕ್ಸ್‌ನಲ್ಲಿ ದೂರು ನೀಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಸೈಬರ್‌ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.

ಎಚ್‌ಎಸ್‌ಆರ್‌ಪಿಯಲ್ಲಿ ಸಮಸ್ಯೆ ಇದ್ರೆ ಸಹಾಯವಾಣಿ 112ಕ್ಕೆ ದೂರು ನೀಡಿ :

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಹೆಸರಲ್ಲಿ ವಂಚನೆಗೆ ಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಶಿವಪ್ರಕಾಶ್‌ ದೇವರಾಜ್‌ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನಕಲಿ ಲಿಂಕ್‌ಗಳು ಶೇರ್‌ ಆಗುತ್ತಿವೆ. ಜತೆಗೆ ನಕಲಿ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರ ಬಗ್ಗೆ ಸ್ವಲ್ಪ ಎಚ್ಚರದಿಂದಿರಿ. ಅಧಿಕೃತ ವೆಬ್‌ಸೈಟ್‌ ಮೂಲಕ ಮಾತ್ರ ನೀವು ನೋಂದಣಿ ಮಾಡಿ. ಆರ್‌ಟಿಒ ವೆಬ್‌ಸೈಟ್‌ನಿಂದ ಜನರೇಟ್‌ ಆಗಿಲ್ಲ ಅಂದರೆ, ಯಾವುದೇ ಕಾರಣಕ್ಕೂ ಹಣ ಹಾಕಬೇಡಿ, ಒಮ್ಮೆ ವೆಬ್‌ಸೈಟ್‌ ಅಧಿಕೃತವೇ? ಎಂದು ನೋಡಿಕೊಂಡು ನಂತರ ಹಣ ಪಾವತಿಸಿ. ಏನಾದರು ಸಮಸ್ಯೆ ಇದ್ದರೆ ಕೂಡಲೆ ಸೈಬರ್‌ ಕ್ರೈಂ ಅಥವಾ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ದೂರು ನೀಡಿ ಎಂದು ತಿಳಿಸಿದ್ದಾರೆ.

ಸಾರಿಗೆ ಇಲಾಖೆ ಸಹಾಯವಾಣಿ:

Advertisement

ಬೆಂಗಳೂರು: ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಆನ್‌ಲೈನ್‌ನಲ್ಲಿ ನೋಂದಣಿ ವೇಳೆ ಸಮಸ್ಯೆ ಉಂಟಾದರೆ ನೆರವಾಗಲು ಸಾರಿಗೆ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದೆ. ಸಾರ್ವಜನಿಕರು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಸಹಾಯವಾಣಿ ಸಂಖ್ಯೆ 9449863429/26 ಸಂಪರ್ಕಿಸಬಹುದು.  transport.karnataka.gov.in ಭೇಟಿ ನೀಡಿ ವಾಹನಗಳಿಗೆ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಲು ಆನ್‌ಲೈನ್‌ ಮೂಲಕ ವಿವರಗಳನ್ನು ಒದಗಿಸಬೇಕು. ಫಲಕ ಅಳವಡಿಸುವ ದಿನಾಂಕ, ವಾಹನ ಮಾರಾಟ ಕೇಂದ್ರದ ಹೆಸರು ಮತ್ತು ವಿಳಾಸ ಖಚಿತಪಡಿಸಿಕೊಳ್ಳಬೇಕು. ಈ ವೆಬ್‌ಸೈಟ್‌ಗಳ ಮೂಲಕ ನೋಂದಣಿ ಮಾಡಿ ಅಳವಡಿಸಿದ ಎಚ್‌ಎಸ್‌ಆರ್‌ಪಿಗಳು ಮಾತ್ರ ಮಾನ್ಯತೆ ಹೊಂದಿರುತ್ತವೆ. ಇತರ ವೆಬ್‌ ಪೋರ್ಟಲ್‌ ಬಳಸಬಾರದು ಎಂದು ಸಾರಿಗೆ ಮತ್ತು ಸುರಕ್ಷತೆ ಆಯುಕ್ತ ಎ.ಎಂ.ಯೋಗೀಶ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next