ನವದೆಹಲಿ : ಅನ್ ಲಾಕ್ 5.0 ಮಾರ್ಗಸೂಚಿಯ ಅನ್ವಯ ಸಿನಿಮಾ ಮಂದಿರಗಳು ಶೇ.50 ರಷ್ಟು ಸ್ಥಳಾವಕಾಶದೊಂದಿಗೆ ಅಕ್ಟೋಬರ್ 15 ರಿಂದ ಬಾಗಿಲು ತೆರೆಯಲಿವೆ. ಸಿನಿ ಪ್ರೇಕ್ಷಕರಿಗೆ ತಮ್ಮ ಮೆಚ್ಚಿನ ಸ್ಟಾರ್ಸ್ ಗಳ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡಲು ನಾಳೆಯಿಂದ ಮುಕ್ತ ಅವಕಾಶ ದೊರಕಲಿದೆ.
ಮಾರ್ಗಸೂಚಿಯ ಪ್ರಕಾರ ಸಿನಿಮಾ ಮಂದಿರಗಳು ಬಾಗಿಲು ತೆರಲಿವೆ. ಆದರೆ ಹೊಸ ಸಿನಿಮಾಗಳನ್ನು ತೆರಯ ಮೇಲೆ ನೋಡಲು ಪ್ರೇಕ್ಷಕರು ಇನ್ನು ಒಂದಿಷ್ಟು ತಿಂಗಳು ಕಾಯಬೇಕಾಗಿ ಬರಬಹುದು. ಲಾಕ್ ಡೌನ್ ವೇಳೆಯಲ್ಲಿ ಓಟಿಟಿಯಲ್ಲಿ ಬಿಡುಗಡೆಯಾದ ಕೆಲ ಚಿತ್ರಗಳು ಸಿನಿ ಪರದೆಯಲ್ಲಿ ಮತ್ತೆ ಮರು ಬಿಡುಗಡೆಯಾಗಲಿವೆ.
ಖ್ಯಾತ ಚಲನಚಿತ್ರ ವಿಮರ್ಶಕ ಹಾಗೂ ವಿಶ್ಲೇಷಕ ತರಣ್ ಆದರ್ಶ್ ಟ್ವೀಟರ್ ನಲ್ಲಿ ಮರು ಬಿಡುಗಡೆಯಾಗುವ ಚಿತ್ರಗಳ ಹೆಸರನ್ನು ಟ್ವೀಟ್ ಮಾಡಿದ್ದಾರೆ. ಅಜಯ್ ದೇವಗನ್ ಅಭಿನಯದ ‘ತಾನಾಜಿ’ ಸೇರಿದಂತೆ, ಅಯುಷ್ಮಾನ್ ಖುರಾನ ಅಭಿನಯದ ‘ಶುಭ್ ಮಂಗಲ್ ಝ್ಯಾದಾ ಸಾವ್ದಾನ್’, ಸುಶಾಂತ್ ಸಿಂಗ್ ನಟಮೆ ‘ಕೇದಾರನಾಥ್’, ಆದಿತ್ಯ ರಾಯ್ ಅವರ ‘ಮಲಾಂಗ್’, ತಾಪ್ಸಿ ಅವರ ‘ಥಪ್ಪಡ್’ ಚಿತ್ರಗಳು ಮರು ಬಿಡುಗಡೆಯಾಗಿ ಚಿತ್ರ ಮಂದಿರದಲ್ಲಿ ಪ್ರದರ್ಶನ ಕಾಣಲಿವೆ. ಇದರೊಂದಿಗೆ ಹೃತಿಕ್ ರೋಶನ್ ಟೈಗರ್ ಶ್ರಾಫ್ ನಟನೆಯ ವಾರ್ ಚಿತ್ರವೂ ಮರು ಬಿಡುಗಡೆಯಾಗಲಿದೆ.
ಈ ವರ್ಷ ಬಾಲಿವುಡ್ ನಲ್ಲಿ ಬಿಡುಗಡೆಯ ಹಾದಿಯಲ್ಲಿದ್ದ ನಿರೀಕ್ಷಿತ ಚಿತ್ರಗಳು ಕೋವಿಡ್ ಹೊಡೆತದ ಕಾರಣದಿಂದ ಮುಂದಿನ ವರ್ಷಕ್ಕೆ ಬಿಡುಗಡೆಯನ್ನು ಮುಂದೂಡಿವೆ. ಇದರಲ್ಲಿ ಅಕ್ಷಯ್ ಕುಮಾರ್ ಅವರ ‘ಸೂರ್ಯವಂಶಿ’ ಚಿತ್ರವೂ ಒಂದು.