ರಾಯಚೂರು :ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಪ್ತ ಕಾರ್ಯದರ್ಶಿ ಎಸ್.ಎನ್. ಸುಯಮೀಂದ್ರಾಚಾರ್ (54) ಇಂದು(ಶುಕ್ರವಾರ, ಏ. 30) ನಿಧನ ಹೊಂದಿದ್ದಾರೆ.
ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಮಠದ ಪೂರ್ವ ಪೀಠಾಧಿಪತಿ ಶ್ರೀ ಸುಯತೀಂದ್ರತೀರ್ಥರ ಪೂರ್ವಾಶ್ರಮದ ಪುತ್ರ ಸುಯಮೀಂದ್ರಾಚಾರ್ ಅವರಿಗೆ ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಕೋವಿಡ್ ದೃಢವಾಗಿದ್ದರಿಂದ ಅವರನ್ನು ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಇನ್ನು, ಸುಯಮೀಂದ್ರಾಚಾರ್ ಅವರ ಸಾವಿಗೆ ಸಂತಾಪ ಸೂಚಿಸಿದ ಸಚಿವ ಅರವಿಂದ ಲಿಂಬಾವಳಿ, ಸುಯಮೀಂದ್ರಾಚಾರ್ ಅವರು ಇಂದು ಸಾಯಂಕಾಲ ಕೋವಿಡ್ ಗೆ ಬಲಿಯಾಗಿದ್ದಾರೆ. ಅವರ ಸಾವಿನ ಸುದ್ದಿ ನನಗೆ ಆಘಾತ ಉಂಟುಮಾಡಿದೆ, ಅವರು ಬಿ ಎಂ ಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನನ್ನ ಸಹಪಾಠಿಯಾಗಿದ್ದರು. ಸರಳ, ಸಜ್ಜನಿಕೆಯ ಸುಯಮೀಂದ್ರ ಆಚಾರ್ಯರು ದೆಹಲಿಯಲ್ಲಿ ಕೋವಿಡ್‍ಗೆ ಬಲಿಯಾಗಿರುವುದು ನಿಜಕ್ಕೂ ದುರದೃಷ್ಟಕರ.
ಅವರ ನಿಧನದಿಂದ ನಾನು ಸಹೃದಯಿ ಮಿತ್ರನನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬ ವರ್ಗಕ್ಕೆ ಮತ್ತು ಅವರ ಮಿತ್ರವೃಂದಕ್ಕೆ ಅವರ ಅಗಲಿಕೆಯಿಂದ ಉಂಟಾದ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ರಾಘವೇಂದ್ರ ಸ್ವಾಮಿಗಳು ಕರುಣಿಸಲಿ ಎಂದು ತಿಳಿಸಿದ್ದಾರೆ.
ಓದಿ : ಕಾಂಗ್ರೆಸ್ ಮಾಜಿ ಶಾಸಕ, ಹಿರಿಯ ನ್ಯಾಯವಾದಿ ಲೈಕುದ್ದೀನ್ ಸಾಹಬ್ ನಿಧನ