Advertisement

Health: ಎಚ್‌ಪಿವಿ ಎಂದರೇನು ?

11:42 AM Feb 11, 2024 | Team Udayavani |

ಜನನಾಂಗಗಳು, ಶ್ವಾಸಾಂಗದ ಮೇಲ್ಭಾಗ ಮತ್ತು ಚರ್ಮದ ಲೋಳೆಪೊರೆಯನ್ನು ಆಕ್ರಮಿಸುವ ಗುಣವುಳ್ಳ ವೈರಾಣು ಎಚ್‌ ಪಿವಿ. ವಿವಿಧ ರೀತಿಯ ಸೋಂಕುಗಳನ್ನು ಉಂಟುಮಾಡುವ 200ಕ್ಕೂ ಹೆಚ್ಚು ವಿಧವಾದ ಎಚ್‌ಪಿಸಿ ವೈರಾಣುಗಳನ್ನು ಗುರುತಿಸಲಾಗಿದೆ. ನಮ್ಮ ದೇಹದ ಜೀವಕೋಶಗಳು ಸಹಜವಾಗಿ ಉತ್ಪಾದನೆ ಮತ್ತು ಸಾವನ್ನು ಕಾಣುತ್ತವೆ. ಈ ಚಕ್ರದಲ್ಲಿ ವ್ಯತ್ಯಯ ಉಂಟಾದಾಗ ಜೀವಕೋಶ ವಿದಳನ (ಉತ್ಪಾದನೆ) ಹತೋಟಿ ತಪ್ಪುತ್ತದೆ ಮತ್ತು ಜೀವಕೋಶ ನಾಶದಿಂದ ತಪ್ಪಿಸಿಕೊಳ್ಳುತ್ತವೆ. ಎಚ್‌ಪಿವಿಯು ಕ್ಯಾನ್ಸರ್‌ಗೆ ಕಾರಣವಾಗುವುದು ಹೀಗೆ. ಲೋಳೆಪೊರೆಯ ಅಂಗಾಂಶಗಳನ್ನು ಬಾಧಿಸುವ ಎಚ್‌ಪಿವಿಯನ್ನು ಕಡಿಮೆ ಅಪಾಯ, ಹೆಚ್ಚು ಅಪಾಯ ಎಂಬ ಎರಡು ವಿಧವಾಗಿ ವರ್ಗೀಕರಿಸಲಾಗಿದೆ. ಕಡಿಮೆ ಅಪಾಯದ ಎಚ್‌ಪಿವಿ ವೈರಾಣುಗಳು (ಎಚ್‌ಪಿವಿ 6, 11) ಜನನಾಂಗ, ಗುದ, ಬಾಯಿ ಮತ್ತು ಗಂಟಲಿನಲ್ಲಿ ಗಂಟುಗಳು ಉಂಟಾಗಲು ಕಾರಣವಾಗುತ್ತವೆ. ಹೆಚ್ಚು ಅಪಾಯ ವಿಧವಾದ ಎಚ್‌ಪಿವಿ ವೈರಾಣುಗಳು ಗರ್ಭಕಂಠದ ಕ್ಯಾನ್ಸರ್‌ (ಹೆಚ್ಚು ಕಡಿಮೆ 18 ಉಪವಿಧಗಳು, ಬಹಳ ಸಾಮಾನ್ಯವಾದವು ಎಂದರೆ ಎಚ್‌ಪಿವಿ 16 ಮತ್ತು 18) ಉಂಟು ಮಾಡುತ್ತವೆ. ಈ ಉಪ ಗುಂಪಿನಲ್ಲಿ ಬರುವ ಎಚ್‌ಪಿವಿ ವೈರಾಣುಗಳು ಗುದದ್ವಾರ, ಶಿಶ್ನ, ಯೋನಿದ್ವಾರ, ಯೋನಿ ಮತ್ತು ಶ್ವಾಸನಾಳದ ಕ್ಯಾನ್ಸರ್‌ ಉಂಟುಮಾಡುತ್ತವೆ.

Advertisement

ಎಚ್‌ಪಿವಿ ಎಂದರೇನು ಮತ್ತು ಅದು ಹೇಗೆ ಹರಡುತ್ತದೆ? ಎಚ್‌ಪಿವಿ ಸೋಂಕು ತಡೆಗಟ್ಟುವುದು ಹೇಗೆ?

ಚರ್ಮದ ಸಂಪರ್ಕ ಅಥವಾ ಲೋಳೆಪೊರೆ ಸಂಪರ್ಕದಿಂದ ಎಚ್‌ಪಿವಿ ವೈರಾಣು ಸೋಂಕು ಹರಡುತ್ತದೆ. ಯೋನಿ ಮೈಥುನ, ಗುದಮೈಥುನ, ಮುಖಮೈಥುನ ಮತ್ತು ಲೈಂಗಿಕ ಆಟಿಕೆಗಳು ಮತ್ತು ಅಂತಹ ಇತರ ವಸ್ತುಗಳ ಬಳಕೆಯಿಂದ ಇದು ಪ್ರಸಾರವಾಗಬಹುದು. ಲಿಂಗ, ವಯಸ್ಸು, ಲೈಂಗಿಕ ಸಂಪರ್ಕದ ಆದ್ಯತೆಯ ಬೇಧವಿಲ್ಲದೆ ಯಾರನ್ನೂ ಇದು ಬಾಧಿಸಬಹುದಾಗಿದೆ. ಲೈಂಗಿಕವಾಗಿ ಸಕ್ರಿಯರಲ್ಲದವರು ಕೂಡ ಎಚ್‌ಪಿವಿ ಸೋಂಕಿಗೆ ತುತ್ತಾಗಬಹುದು.

ಲೈಂಗಿಕವಾಗಿ ಸಕ್ರಿಯರಾಗಿರುವ ಮಹಿಳೆಯರಲ್ಲಿ ಶೇ. 80 ಮಂದಿ, ಪುರುಷರಲ್ಲಿ ಶೇ. 90 ಮಂದಿ ಕನಿಷ್ಠ ಒಂದು ವಿಧವಾದ ಎಚ್‌ಪಿವಿ ವೈರಾಣು ಸೋಂಕಿಗೆ ತುತ್ತಾಗಿರುತ್ತಾರೆ ಎನ್ನಲಾಗಿದೆ. ಸಾಮಾನ್ಯವಾಗಿ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯು ಈ ವೈರಾಣು ಸೋಂಕಿನ ವಿರುದ್ಧ ಹೋರಾಡುತ್ತದೆ. ಬಹುತೇಕ ಮಂದಿಯಲ್ಲಿ ಈ ವೈರಾಣು ಸೋಂಕು ಯಾವುದೇ ಲಕ್ಷಣಗಳನ್ನು ಉಂಟು ಮಾಡುವುದಿಲ್ಲ ಮತ್ತು ಸೋಂಕು 6ರಿಂದ 24 ತಿಂಗಳುಗಳ ಅವಧಿಯಲ್ಲಿ ಮಾಯವಾಗುತ್ತದೆ.

ಹೆಚ್ಚು ಅಪಾಯಕಾರಿಯಾಗಿರುವ ವೈರಾಣು ಉಪವಿಧಗಳು ಕೂಡ ಯಾವುದೇ ಲಕ್ಷಣಗಳನ್ನು ಉಂಟುಮಾಡದೆ ಇದ್ದರೂ ಗರ್ಭಕಂಠದ ಜೀವಕೋಶಗಳಲ್ಲಿ ನಿರ್ದಿಷ್ಟ ಬದಲಾವಣೆಗಳಿಗೆ ಕಾರಣವಾಗುತ್ತವೆ. ಈ ಬದಲಾವಣೆಗಳು ಪ್ಯಾಪ್‌ಸ್ಮಿಯರ್‌ ಪರೀಕ್ಷೆಯ ವೇಳೆ ಗರ್ಭಕಂಠದ ಕ್ಯಾನ್ಸರ್‌ ಪತ್ತೆಹಚ್ಚಲು ಆಧಾರವಾಗುತ್ತವೆ. ಎಚ್‌ಪಿವಿ ಸೋಂಕುಪೀಡಿತ ಜೀವಕೋಶಗಳು ಗಡ್ಡೆಯಾಗಿ ಬೆಳವಣಿಗೆ ಹೊಂದಲು ಸರಿಸುಮಾರು 15ರಿಂದ 20 ವರ್ಷಗಳನ್ನು ತೆಗೆದುಕೊಳ್ಳುತ್ತವೆ.

Advertisement

ಹೆಚ್ಚು ಅಪಾಯಕಾರಿಯಾದ ಎಚ್‌ಪಿವಿ ವೈರಾಣು ಸೋಂಕಿಗೆ ಒಳಗಾದವರಲ್ಲಿ ಹೆಚ್ಚು ಮಕ್ಕಳನ್ನು ಹೊಂದುವುದು, ಸಣ್ಣ ವಯಸ್ಸಿನಲ್ಲಿಯೇ ಮದುವೆ, ಧೂಮಪಾನ, ಗರ್ಭನಿರೋಧಕ ಗುಳಿಗೆಗಳ ದೀರ್ಘ‌ಕಾಲೀನ ಬಳಕೆ, ಎಚ್‌ಐವಿ ಸೋಂಕಿಗೆ ತುತ್ತಾಗುವುದು, ರೋಗ ನಿರೋಧಕ ಶಕ್ತಿ ಕುಂದಿಸುವ ಔಷಧಗಳನ್ನು ತೆಗೆದುಕೊಳ್ಳುವಂತಹ ಅಪಾಯ ಅಂಶಗಳು ಕ್ಯಾನ್ಸರ್‌ ಬೆಳವಣಿಗೆಗೆ ಪ್ರಚೋದನೆ ನೀಡಬಹುದಾಗಿದೆ. ಕಾಂಡೋಮ್‌ ಮತ್ತು ಡೆಂಟಲ್‌ ಡ್ಯಾಮ್‌ ಉಪಯೋಗ ಎಚ್‌ಪಿವಿ ಪ್ರಸರಣ ಸಾಧ್ಯತೆಯನ್ನು ಕಡಿಮೆ ಮಾಡಬಹುದಾದರೂ ಶತ ಪ್ರತಿಶತ ರಕ್ಷಣೆ ಒದಗಿಸುವುದಿಲ್ಲ.

ಪರೀಕ್ಷೆ ಹೇಗೆ?

ಭಾರತೀಯ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್‌ ಅತೀ ಸಾಮಾನ್ಯವಾಗಿ ಕಂಡುಬರುತ್ತಿರುವ ಕ್ಯಾನ್ಸರ್‌ ಆಗಿದ್ದು, ತಪಾಸಣೆಗೆ ಎಫ್ಡಿಎಯಿಂದ ಅಂಗೀಕೃತವಾಗಿರುವ ಏಕಮಾತ್ರ ಕ್ಯಾನ್ಸರ್‌ ಆಗಿದೆ. ಭಾರತದಲ್ಲಿ ಮಹಿಳೆಯರು 30 ವರ್ಷ ಕಳೆದ ಬಳಿಕ 65 ವರ್ಷ ವಯಸ್ಸಿನ ವರೆಗೆ ಪ್ರತೀ 3 ವರ್ಷಗಳಿಗೆ ಒಮ್ಮೆ ಪ್ಯಾಪ್‌ಸ್ಮಿಯರ್‌ ಪರೀಕ್ಷೆಯ ಮೂಲಕ ಗರ್ಭಕಂಠದ ಕ್ಯಾನ್ಸರ್‌ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಗರ್ಭಕಂಠದ ಜೀವಕೋಶಗಳಲ್ಲಿ ಎಚ್‌ಪಿವಿ ವೈರಾಣು ಸೋಂಕಿನಿಂದ ಉಂಟಾಗಿರುವ ಯಾವುದೇ ಬದಲಾವಣೆಯನ್ನು ಪ್ಯಾಪ್‌ಸ್ಮಿಯರ್‌ ಪರೀಕ್ಷೆಯ ಮೂಲಕ ಪತ್ತೆಹಚ್ಚಬಹುದಾಗಿದೆ.

ಇದು ಹೊರರೋಗಿ ವಿಭಾಗದಲ್ಲಿಯೇ ಮಾಡಿಸಿಕೊಳ್ಳಬಹುದಾದ ಪರೀಕ್ಷೆಯಾಗಿದ್ದು, ಗಾಯ ಅಥವಾ ನೋವನ್ನು ಉಂಟು ಮಾಡುವುದಿಲ್ಲ. ಪ್ಯಾಪ್‌ ಸ್ಮಿಯರ್‌ ಪರೀಕ್ಷೆಯ ವೇಳೆ ನಿಮ್ಮ ಸಿŒರೋಗ ಶಾಸ್ತ್ರಜ್ಞರು ಒಂದು ಸ್ಪೆಕ್ಯುಲಮ್‌ ಪರೀಕ್ಷೆಯನ್ನು ಮಾಡಿ ನಿಮ್ಮ ಗರ್ಭಕಂಠದಿಂದ ಬ್ರಶ್‌ ಉಪಯೋಗಿಸಿ ಮಾದರಿಯನ್ನು ಪಡೆಯುತ್ತಾರೆ. ವಾರದ ಒಳಗಾಗಿ ಈ ಪರೀಕ್ಷೆಯ ವರದಿ ಲಭ್ಯವಾಗುತ್ತದೆ.

ಎಚ್‌ಪಿವಿ ಸೋಂಕು ನಿರ್ಬಂಧ

ಎಚ್‌ಪಿವಿ ವೈರಾಣುವಿನ ಸಾಮಾನ್ಯ 4 ವಿಧಗಳು ಮತ್ತು ಇತರ 9 ವಿಧಗಳ ಸೋಂಕಿನಿಂದ ರಕ್ಷಣೆ ಒದಗಿಸುವ ಲಸಿಕೆಗಳು ಈಗ ಲಭ್ಯವಿವೆ. 9 ವರ್ಷದಷ್ಟು ಸಣ್ಣ ವಯಸ್ಸಿನಲ್ಲಿಯೇ ಬಾಲಕ ಮತ್ತು ಬಾಲಕಿಯರಿಬ್ಬರೂ ಈ ಲಸಿಕೆಯನ್ನು ಪಡೆಯಬೇಕು. ಗಾರ್ಡಸಿಲ್‌ 9 ಲಸಿಕೆಯನ್ನು 45 ವರ್ಷ ವಯಸ್ಸಿನ ವರೆಗೆ ಪಡೆಯಬಹುದು.

ಲಸಿಕೆಯನ್ನು ಸಣ್ಣ ವಯಸ್ಸಿನಲ್ಲಿ ಪಡೆದುಕೊಂಡಷ್ಟು ಅದರ ಪರಿಣಾಮಕಾರಿತನ ಹೆಚ್ಚು ಎನ್ನಲಾಗುತ್ತದೆ. ನೀವು ಲೈಂಗಿಕವಾಗಿ ಸಕ್ರಿಯರಾಗಿದ್ದರೆ ಎಚ್‌ಪಿಸಿ ವೈರಾಣು ಉಪತಳಿಗಳಿಂದ ರಕ್ಷಣೆ ಪಡೆಯಲು ಲಸಿಕೆ ಹಾಕಿಸಿಕೊಳ್ಳಬಹುದು. ಲಸಿಕೆಯು ಈಗಾಗಲೇ ಉಂಟಾಗಿರುವ ಎಚ್‌ಪಿವಿ ಸೋಂಕಿನಿಂದ ರಕ್ಷಣೆ ಒದಗಿಸುವುದಿಲ್ಲ. ಲಸಿಕೆಯ ವಿಧವನ್ನು ಆಧರಿಸಿ 1, 2/3 ಮತ್ತು 6 ತಿಂಗಳು ಲಸಿಕೆಯ ವೇಳಾಪಟ್ಟಿಯಾಗಿರುತ್ತದೆ. ಲಿಂಗತ್ವ ಅಲ್ಪಸಂಖ್ಯಾಕರು, ಸಲಿಂಗಿಗಳು ಕೂಡ ಈ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಗರ್ಭಕಂಠದ ಕ್ಯಾನ್ಸರ್‌ ತಡೆಯಬಹುದಾಗಿದ್ದು, ಗರ್ಭಕಂಠವನ್ನು ಹೊಂದಿರುವ ಎಲ್ಲರೂ ಪರೀಕ್ಷೆಗೆ ಒಳಗಾಗಬೇಕು ಮತ್ತು ಲಸಿಕೆ ಹಾಕಿಸಿಕೊಳ್ಳಬೇಕು.

-ಡಾ| ಮೃದುಲಾ ರಾಘವ,

ಸೀನಿಯರ್‌ ರೆಸಿಡೆಂಟ್‌,

ಒಬಿಜಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ , ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next