ಮನೆಗಳಲ್ಲಿ, ಚಿಕ್ಕ ಪುಟ್ಟ ಕಚೇರಿಗಳು, ಸಣ್ಣ ಉದ್ಯಮಗಳು ಇಂಥ ಜಾಗಗಳಲ್ಲಿ ಕಂಪ್ಯೂಟರ್, ಲ್ಯಾಪ್ ಟಾಪ್ ಇರುತ್ತದೆ. ಯಾವುದಾದರೂ ದಾಖಲೆಗಳನ್ನು ಪ್ರಿಂಟೌಟ್ ತೆಗೆಯಬೇಕೆನಿಸಿದಾಗ, ಪೆನ್ ಡ್ರೈವ್ ಗೆ ಹಾಕಿಕೊಂಡು ಜೆರಾಕ್ಸ್ ಅಂಗಡಿಗಳಿಗೆ ಹೋಗಬೇಕಾಗುತ್ತದೆ. ಹೆಚ್ಚು ಪ್ರತಿಗಳು ಬೇಕೆನಿಸಿದರೆ ಜೆರಾಕ್ಸ್ ಮಾಡಿಸಬೇಕಾಗುತ್ತದೆ. ಹಲವು ಕೆಲಸಗಳ ಒತ್ತಡವಿದ್ದಾಗ ಇದೊಂದು ರಗಳೆ ಎನಿಸುತ್ತದೆ. ಅಂಥ ಸಂದರ್ಭದಲ್ಲಿ ಒಂದು ಪ್ರಿಂಟರ್ ನಮ್ಮ ಬಳಿಯೇ ಇದ್ದರೆ ಚೆನ್ನಾಗಿತ್ತು ಅಂದುಕೊಳ್ಳುತ್ತೇವೆ. ಯಾವ ಪ್ರಿಂಟರ್ ಕೊಂಡರೆ ಸೂಕ್ತ ಎಂಬ ಗೊಂದಲ ಕಾಡುತ್ತದೆ. ಇಂಥವರು ಪರಿಗಣಿಸಬಹುದಾದ ಒಂದು ಉತ್ತಮ ಪ್ರಿಂಟರ್ ಎಚ್.ಪಿ. ಲೇಸರ್ ಜೆಟ್ ಟ್ಯಾಂಕ್ 1005w.
ಈ ಪ್ರಿಂಟರ್ ಇತ್ತೀಚಿಗೆ ತಾನೇ ಬಿಡುಗಡೆಯಾಗಿದ್ದು, ಎಚ್‍ಪಿಯ ಎಂದಿನ ಉತ್ತಮ ಗುಣಮಟ್ಟದ ಉತ್ಪನ್ನವಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಾಲೀಕರಿಗೆ, ಅಂಗಡಿ ಮುಂಗಟ್ಟುಗಳು, ವಕೀಲರು, ಆಡಿಟರ್ ಗಳು, ವಿಮಾ ಸಲಹೆಗಾರರು ಇಂತಹ ಕಚೇರಿಗಳಿಗೆ, ಅಷ್ಟೇ ಏಕೆ ಮನೆಯಲ್ಲಿ ಮಕ್ಕಳ ಹೋಂ ವರ್ಕ್ ಗಾಗಿ ಪ್ರತಿ ತೆಗೆಸಬೇಕಾದಾಗ, ನೆಟ್‍ನಲ್ಲಿನ ಚಿತ್ರಗಳನ್ನು ಪ್ರಿಂಟ್ ಹಾಕಿಸುವ ಅಗತ್ಯವಿರುವವರು, ಒಂದು ಪ್ರಿಂಟರ್ ಇದ್ದರೆ ಒಳ್ಳೆಯದು ಎಂದುಕೊಂಡಿದ್ದರೆ ಅಂಥವರಿಗೆ ಸೂಕ್ತ ಆಯ್ಕೆ ಎಚ್ ಪಿ ಲೇಸರ್ ಜೆಟ್ ಟ್ಯಾಂಕ್ 1005w ಪ್ರಿಂಟರ್.
ಇದರ ದರ ಪ್ರಸ್ತುತ ಎಚ್‍ಪಿ.ಕಾಮ್ ನಲ್ಲಿ, ರೂ. 22,668. ಪ್ರಸ್ತುತ ಅಮೆಜಾನ್.ಇನ್ ನಲ್ಲಿ 21,899 ರೂ. ಸದ್ಯ ನಡೆಯುತ್ತಿರುವ ಆಫರ್ ನಲ್ಲಿ ಅಮೆಜಾನ್.ಇನ್ ನಲ್ಲಿ ಎಸ್‍ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಕೊಂಡರೆ 1500 ರೂ. ರಿಯಾಯಿತಿ ಸಹ ಇದೆ. (ಈಗ ಕೊಂಡರೆ 20,399 ರೂ.ಗೆ ದೊರಕುತ್ತದೆ)
ಇದಕ್ಕೆ ಹಾಕುವ ಟೋನರ್ ಬೆಲೆ ಇಂತಿದೆ. 2500 ಪುಟಗಳವರೆಗೂ ಮುದ್ರಿಸುವ ಟೋನರ್ ಕಿಟ್ (158ಎ ಕಾಟ್ರಿಜ್ ಗೆ) 888 ರೂ. ಹಾಗೂ 5000 ಪುಟಗಳ ಮುದ್ರಣ ಸಾಮರ್ಥ್ಯದ ಟೋನರ್ ಕಿಟ್ (158ಎಕ್ಸ್ ಕಾಟ್ರಿಜ್ ಗೆ) 1464 ರೂ. 5000 ಪುಟಗಳ ಮುದ್ರಣ ಸಾಮರ್ಥ್ಯದ ಟೋನರ್ ಕಿಟ್ ಈ ಪ್ರಿಂಟರ್ ನಲ್ಲಿ ಅಡಕವಾಗಿರುತ್ತದೆ. ಕಾಟ್ರಿಜ್ ಮುಗಿದ ನಂತರ ಹೊಸ ಕಾಟ್ರಿಜ್ ಅನ್ನು 15 ಸೆಕೆಂಡಿನಲ್ಲಿ ಹಾಕಿಕೊಳ್ಳುವಷ್ಟು ಸುಲಭ ಸೌಲಭ್ಯ ನೀಡಲಾಗಿದೆ. ಪ್ರತಿ ಪುಟಕ್ಕೆ 29 ಪೈಸೆಯಷ್ಟು ಕಡಿಮೆ ಖರ್ಚು ಬೀಳುತ್ತದೆ ಎಂದು ಕಂಪೆನಿ ಹೇಳಿದೆ.
ಇದನ್ನೂ ಓದಿ:6ನೇ ಯಕ್ಷರಂಗಾಯಣ: ಮೂಲ ಕಥೆ 1837ರ ಅಮರ ಕ್ರಾಂತಿಯ ರೈತ ದಂಗೆ!
ಇದು ಸುಮಾರು ಒಂದು ಕಾಲು ಅಡಿ ಅಗಲ ಹಾಗೂ ಸುಮಾರು ಮುಕ್ಕಾಲು ಅಡಿ ಎತ್ತರ ಹಾಗೂ ಉದ್ದ, 8 ಕೆಜಿ ತೂಕವಿರುವ ಪ್ರಿಂಟರ್. ಹೆಚ್ಚು ಜಾಗ ಬೇಡುವುದಿಲ್ಲ. ಇದು ಎ4 ಮತ್ತು ಲೆಟರ್ ಗಾತ್ರದ ಹಾಳೆಗಳನ್ನು ಪ್ರಿಂಟ್ ತೆಗೆಯುತ್ತದೆ. ನೆನಪಿರಲಿ ಇದು ಕಪ್ಪು ಬಿಳುಪು ಇಮೇಜ್ ತೆಗೆಯುವ ಪ್ರಿಂಟರ್. ಕಲರ್ ಅಲ್ಲ. ಇನ್ ಪುಟ್ ಟ್ರೇಯಲ್ಲಿ ಒಮ್ಮೆಗೆ 150 ಹಾಳೆಗಳನ್ನು ಹಾಕಬಹುದು.
ಪ್ರಿಂಟರ್ ಕೊಂಡ ನಂತರ ಇದನ್ನು ಬಳಸುವುದು ಹೇಗೆಂದು ತಲೆಕೆಡಿಸಿ ಕೊಳ್ಳಬೇಕಾಗಿಲ್ಲ. ಎಚ್ ಪಿ. ಸ್ಮಾರ್ಟ್ ಆಪ್ ಅನ್ನು ಮೊಬೈಲ್ ಫೋನ್ ಗೆ ಅಥವಾ ನಿಮ್ಮ ಪಿಸಿ/ಲ್ಯಾಪ್ ಟಾಪ್ ಗೆ ಇನ್ ಸ್ಟಾಲ್ ಮಾಡಿಕೊಳ್ಳಬೇಕು. ಅದರಲ್ಲಿ ನಮ್ಮ ಪ್ರಿಂಟರ್ ಅನ್ನು ಆಡ್ ಮಾಡಬೇಕು. ಇದು ವೈಫೈ ಸೌಲಭ್ಯ ಉಳ್ಳ ಸ್ಕ್ಯಾನರ್ ಆಗಿದ್ದು, ನಿಮ್ಮ ಕಂಪ್ಯೂಟರ್ ಗೆ ಯುಎಸ್‍ಬಿ ಮೂಲಕ ಅಥವಾ ವೈಫೈ ಮೂಲಕ ಸಂಪರ್ಕ ಮಾಡಿಕೊಳ್ಳಬಹುದು.
ಈಗ ಹೆಚ್ಚು ಮೊಬೈಲ್ ಬಳಸುವುದರಿಂದ ಮೊಬೈಲ್‍ನಲ್ಲಿ ಆಪ್ ತೆರೆದು, ಸಂಪರ್ಕ ಮಾಡಿಕೊಂಡು ಮೊಬೈಲ್ ನಲ್ಲಿರುವ ಡಾಕ್ಯುಮೆಂಟ್ ಇತ್ಯಾದಿಗಳನ್ನು ಸುಲಭವಾಗಿ ಪ್ರಿಂಟ್ ತೆಗೆದುಕೊಳ್ಳಬಹುದು. ಪ್ರಿಂಟರ್ ಮೇಲೆ ಇರುವ ಬಟನ್ ನಲ್ಲಿ ಸಂಖ್ಯೆ ಆಯ್ಕೆ ಮಾಡಿಕೊಂಡರೆ ನಿಮಗೆ ಅಗತ್ಯವಿರುವಷ್ಟು ಸಂಖ್ಯೆಯ ಪ್ರತಿಗಳು ಪ್ರಿಂಟಾಗುತ್ತವೆ.
ಕೇವಲ ಪ್ರಿಂಟರ್ ಮಾತ್ರವಲ್ಲ, ಕಾಪಿಯರ್ (ಜೆರಾಕ್ಸ್) ಆಗಿಯೂ ಇದು ಕೆಲಸ ಮಾಡುತ್ತದೆ. ಎ4 ಸೈಜಿನವರೆಗೂ ಕಾಪಿ ತೆಗೆಯಬಹುದು. ಐಡಿ ಕಾರ್ಡ್ ಅನ್ನು ಒಂದೇ ಬಾರಿಗೆ ಎರಡೂ ಬದಿಯ ಪ್ರಿಂಟ್ ತೆಗೆಯುವ ವಿಶೇಷ ಆಯ್ಕೆ ಕೂಡ ಇದೆ. ಬಟನ್ ಗಳ ಸಾಲಿನಲ್ಲಿ ಐಡಿ ಕಾರ್ಡ್ ಸಿಂಬಲ್ ಇದ್ದು, ಅದನ್ನು ಒಮ್ಮೆ ಒತ್ತಿದಾಗ ಕಾರ್ಡಿನ ಒಂದು ಬದಿಯನ್ನು ಸ್ಕ್ಯಾನ್ ಮಾಡಿಕೊಳ್ಳುತ್ತದೆ. ಬಳಿಕ ಮೂಲ ಕಾರ್ಡ್ ಅನ್ನು ಉಲ್ಟಾ ಮಾಡಿ ಇಟ್ಟು, ಬಾಣದ ಗುರುತಿನ ಬಟನ್ ಒತ್ತಿದರೆ ಹಾಳೆಯ ಒಂದೇ ಬದಿಯಲ್ಲಿ ಕಾರ್ಡಿನ ಎರಡೂ ಬದಿ ಒಂದರ ಕೆಳಗೆ ಇನ್ನೊಂದು ಮುದ್ರಣಗೊಳ್ಳುತ್ತದೆ. ಆದರೆ ಕಾಪಿಯರ್ ಆಗಿ ಪ್ರಿಂಟ್ ಇರಲಿ, ಕಾಪಿಯರ್ (ಜೆರಾಕ್ಸ್) ಇರಲಿ, ಇದರ ಮುದ್ರಣ ಗುಣಮಟ್ಟ ಬಹಳ ಚೆನ್ನಾಗಿದೆ. ಮೂಲ ಪ್ರತಿಯಷ್ಟೇ ಸ್ಟಷ್ಟವಾದ ಪ್ರತಿ ದೊರಕುತ್ತದೆ. ಇತರ ಕಾರ್ಟ್ರಿಜ್ ಗಳಿಗೆ ಹೋಲಿಸಿದರೆ ಟೋನರ್ ಗಳು 5 ಪಟ್ಟು ಹೆಚ್ಚು ಪುಟಗಳ ಮುದ್ರಣ ನೀಡುತ್ತವೆ.
ಪ್ರಿಂಟ್, ಫೋಟೋಕಾಪಿ, ಸ್ಕ್ಯಾನ್ ಇತ್ಯಾದಿ ಅಗತ್ಯವುಳ್ಳ ವೈಯಕ್ತಿಕ ಬಳಕೆದಾರರಿಗೆ ಈ ಪ್ರಿಂಟರ್ ಉತ್ತಮ ಆಯ್ಕೆ. 2500 ಕಾಪಿಗಳ ಮುದ್ರಣದ ಟೋನರ್ ಕಿಟ್ ಗೆ 888 ರೂ. ದರವಿರುವುದರಿಂದ ಟೋನರ್ ಬದಲಿಸಲು ಹೆಚ್ಚು ವೆಚ್ಚವೂ ತಗುಲುವುದಿಲ್ಲ. ಟೋನರ್ ಅನ್ನು ತಂತ್ರಜ್ಞರ ಅಗತ್ಯವಿಲ್ಲದೇ ಗ್ರಾಹಕರೇ ಬದಲಿಸಿಕೊಳ್ಳಬಹುದು. ಎಚ್.ಪಿ. ಮಾರಾಟ ನಂತರದ ಸೇವೆಯೂ ಚೆನ್ನಾಗಿರುವುದರಿಂದ ಎಚ್ ಪಿ. ಲೇಸರ್ ಜೆಟ್ ಟ್ಯಾಂಕ್ 1005w ಗಮನ ಸೆಳೆಯುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ