ಅನಂತ ಪದ್ಮನಾಭ ಮತ್ತು ಕಾಶಿ ವಿಶ್ವೇಶ್ವರ ದೇಗುಲ, ಹೊಸ ಬೂದನೂರು
ಹೊಯ್ಸಳ ರಾಜ ಮನೆತನವೆಂದರೆ ನಮಗೆ ನೆನಪಾಗುವುದೇ ಭವ್ಯವಾದ ದೇಗುಲಗಳು. ಅದರಲ್ಲೂ ಅವರ ಕಾಲದಲ್ಲಿ ಕಟ್ಟಲಾದ ಅನಂತ ಪದ್ಮನಾಭ ದೇಗುಲಗಳದ್ದು ಅಪರೂಪದ ಸೌಂದರ್ಯ. ಮಂಡ್ಯದ ಸಮೀಪವಿರುವ ಹೊಸ ಬೂದನೂರಿನ ಅನಂತ ಪದ್ಮನಾಭ ದೇವಾಲಯ ಕೂಡ ವಿರಳ ಸೌಂದರ್ಯದ ಕಲಾಸಾಕ್ಷಿ.
ಎತ್ತರದ ಜಗತಿಯ ಮೇಲಿನ ದೇಗುಲವು ಗರ್ಭಗುಡಿ, ಅಂತರಾಳ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿದೆ. 13ನೇ ಶತಮಾನದ ಕಾಲಘಟ್ಟಕ್ಕೆ ಸೇರುವ ಈ ದೇಗುಲಕ್ಕೆ ಕ್ಕೆಹೊಯ್ಸಳ ದೊರೆ ಮೂರನೇ ನರಸಿಂಹನು 1276ರಲ್ಲಿ ದತ್ತಿ ನೀಡಿದ ಉಲ್ಲೇಖವಿದೆ. ಗರ್ಭಗುಡಿಯಲ್ಲಿ ಪೀಠದ ಮೇಲೆ ಸ್ಥಾನಿಕ ಭಂಗಿಯಲ್ಲಿರುವ 5 ಅಡಿ ಎತ್ತರದ ಸುಂದರ ಅನಂತ ಪದ್ಮನಾಭನ ಮೂರ್ತಿ ನಿಜಕ್ಕೂ ಮನೋಹರ ಪ್ರತಿಮೆ. ಮೂರ್ತಿಯು ಪದ್ಮ, ಚಕ್ರ, ಗದಾ ಮತ್ತು ಶಂಖಧಾರಿಯಾಗಿದ್ದು, ಪ್ರಭಾವಳಿಯಲ್ಲಿ ಸುಂದರ ದಶಾವತಾರದ ಕೆತ್ತನೆ ಇದೆ. ಎಡಬಲದಲ್ಲಿ ಶ್ರೀದೇವಿ- ಭೂದೇವಿಯರ ಕೆತ್ತನೆ ಇದೆ.
ನವರಂಗದಲ್ಲಿ ತಿರುಗಣೆಯಿಂದ ಮಾಡಿದ ಸುಂದರ ನಾಲ್ಕು ಕಂಬಗಳಿದ್ದು, ವಿತಾನದಲ್ಲಿ ಕಮಲದ ಮೊಗ್ಗಿನ ರಚನೆ ಇದೆ. ಹೊರ ಭಿತ್ತಿಯಲ್ಲಿ ಯಾವುದೇ ಅಲಂಕಾರಿಕ ಶಿಲ್ಪಗಳ ಕೆತ್ತನೆಗಳಿಲ್ಲ. ಸುಂದರ ದ್ರಾವಿಡ ಶೈಲಿಯ ಶಿಖರವಿದೆ. ಮುಖಮಂಟಪದಲ್ಲೂ ತಿರುಗಣೆಯ ಕಂಬ ಇದ್ದು ಬಾಗಿಲುವಾಡ ಸರಳವಾಗಿದೆ. ಇಡೀ ದೇಗುಲ, ಸರಳ- ಸುಂದರ. ಅನಂತ ಪದ್ಮನಾಭ ವ್ರತದಂದು ಇಲ್ಲಿ ವಿಶೇಷ ಪೂಜೆ ನೆರವೇರುತ್ತದೆ.
ಇಲ್ಲಿ ಇದೇ ಶೈಲಿಯಲ್ಲಿ ಕಾಶಿ ವಿಶ್ವೇಶ್ವರನ ದೇಗುಲವನ್ನೂ ನಿರ್ಮಿಸಲಾಗಿದೆ. ಇದರ ಗರ್ಭಗುಡಿಯ ಪಾಣಿಪೀಠದಲ್ಲಿ ಸುಂದರ ಶಿವಲಿಂಗವಿದೆ. ನವರಂಗದಲ್ಲಿ ನಾಲ್ಕು ಕಂಬಗಳಿದ್ದು, ನಂದಿ ಮೋಡಿ ಮಾಡುತ್ತಾನೆ. ನಂದಿಯ ಘಂಟೆಸರ, ಗೆಜ್ಜೆ, ಕಾಲಿನ ಗೆಜ್ಜೆಗೆ ಕಲಾತ್ಮಕ ಸ್ಪರ್ಶವಿದೆ. ನವರಂಗದಲ್ಲಿ ಗಣಪತಿ ಮತ್ತು ಕಾರ್ತಿಕೇಯರ ಶಿಲ್ಪವಿದ್ದು, ನವಿಲಿನ ಮೇಲೆ ಕುಳಿತಂತೆ ಇರುವ ಕಾರ್ತಿಕೇಯನ ಶಿಲ್ಪ ಮನಮೋಹಕ. ವಿತಾನದಲ್ಲಿರುವ ಅಷ್ಟ ದಿಕ್ಪಾಲಕರ ಕೆತ್ತನೆ, ವಾದ್ಯಗಾರರ ದೃಶ್ಯದ ಕೆತ್ತನೆಯನ್ನು ಒಮ್ಮೆಯಾದರೂ ನೋಡಲೇಬೇಕು.
ಕಾಶಿ ವಿಶ್ವೇಶ್ವರನ ದೇಗುಲವು ಬಹುತೇಕ ಅನಂತ ಪದ್ಮನಾಭನ ದೇಗುಲ ಸ್ವರೂಪ ಹೋಲುತ್ತದೆ. ಮುಖಮಂಟಪದಲ್ಲಿ ಕಕ್ಷಾಸನವಿದ್ದು, ಹೊರಭಿತ್ತಿ ಅಲಂಕಾರರಹಿತವಾಗಿದೆ. ಸುಂದರ ದ್ರಾವಿಡ ಶೈಲಿಯ ಶಿಖರ ಹೊಂದಿದೆ. ಇಲ್ಲಿ ಕಾರ್ತೀಕ ಮಾಸದಲ್ಲಿ ಸೋಮವಾರ ಹಾಗೂ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ವಿನಾಶದ ಅಂಚಿನಲ್ಲಿದ್ದ ಈ ಎರಡೂ ದೇಗುಲಗಳನ್ನು ಧರ್ಮಸ್ಥಳದ ಮಂಜುನಾಥ ಟ್ರಸ್ಟ್ ಹಾಗೂ ಸ್ಥಳೀಯರ ಸಹಕಾರದೊಂದಿಗೆ ನವೀಕರಿಸಲಾಗಿದೆ.
ದರುಶನಕೆ ದಾರಿ…
ಮಂಡ್ಯದಿಂದ 7 ಕಿ.ಮೀ. ದೂರದಲ್ಲಿದೆ. ಬೆಂಗಳೂರು- ಮದ್ದೂರು- ಹೊಸಬೂದನೂರು ಕ್ರಾಸ್‌ನಿಂದ ಬಲಕ್ಕೆ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಹಾಗೂ ಮೈಸೂರು- ಮಂಡ್ಯ- ಹೊಸಬೂದನೂರು ಕ್ರಾಸ್ ಮೂಲಕ ಈ ದೇಗುಲವನ್ನು ತಲುಪಬಹುದು.
- ಶ್ರೀನಿವಾಸ ಮೂರ್ತಿ ಎನ್.ಎಸ್.