Advertisement

ಹೀಗಿರಲಿ ನಮ್ಮ ಜನಪ್ರತಿನಿಧಿಗಳ ವರ್ತನೆ

11:06 AM Jun 03, 2018 | Harsha Rao |

ಪ್ರಚಲಿತ ರಾಜಕೀಯ ವ್ಯವಸ್ಥೆಯಿಂದಾಗಿ ಸಾಮಾಜಿಕ ವಾತಾವರಣ ಕೂಡಾ ಕಲುಷಿತಗೊಂಡಿದೆ. ವ್ಯಕ್ತಿ ನಿಂದನೆ, ಮಿಥ್ಯಾರೋಪಗಳು, ಚಾರಿತ್ರ್ಯಹನನ ಹಾಗೂ ನೈತಿಕತೆ ಮತ್ತು ಸೈದ್ಧಾಂತಿಕ ಬದ್ಧತೆಯಿಲ್ಲದ ನಾಯಕರಿಂದ ಶಿಷ್ಟ ವರ್ಗ ರಾಜಕೀಯ ವ್ಯವಸ್ಥೆಯ ಮೇಲೆ ಭ್ರಮೆ ನಿರಸನಗೊಂಡಿದೆ. ಉತ್ತರದಾಯಿತ್ವವಿರುವ ಹಾಗೂ ಇದೇ ವೇಳೆ ಸರಳ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆ ಇಂದಿನ ತುರ್ತು ಅಗತ್ಯ. ಅದರಲ್ಲೂ ಮುಖ್ಯವಾಗಿ ಅಧಿಕಾರ 
ರೂಢ ಸರಕಾರದ ಮಂತ್ರಿ ಮಾಗಧರು ಇಂತಹ ಸರಳತೆ ಮತ್ತು ಪಾರದರ್ಶಕತೆಯನ್ನು ಪಾಲಿಸಿ ಉಳಿದವರಿಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಏನು ಮಾಡಬೇಕೆಂಬುದಕ್ಕೆ ಕೆಲವು ಸಲಹೆಗಳು ಇಲ್ಲಿವೆ…

Advertisement

– ಯಾವುದೇ ಕಾರಣಕ್ಕೂ ರಾಜ್ಯ ಸುತ್ತಲು ಬೊಕ್ಕಸ ಖಾಲಿ ಮಾಡುವ ಹೆಲಿಕಾಪ್ಟರ್‌ ಪ್ರವಾಸಬೇಡ. ಇಂಥ‌ ಹಾರಾಟವನ್ನು ಕೇವಲ ನೈಸರ್ಗಿಕ ಪ್ರಕೋಪಗಳು ಹಾಗೂ ಇನ್ನಿತರ ತುರ್ತು ಸನ್ನಿವೇಶಗಳಿಗೆ ಮಾತ್ರ ಸೀಮಿತಗೊಳಿಸತಕ್ಕದ್ದು.

– ರಾಜ್ಯದ ಬೊಕ್ಕಸದಿಂದ ಬೇಕಾಬಿಟ್ಟಿ ಧಾರ್ಮಿಕ ಸಂಸ್ಥೆಗಳು ಹಾಗೂ ಸಂಘಟನೆಗಳಿಗೆ ಸರಕಾರ ದಾನ ನೀಡುವ ಅಗತ್ಯವಿಲ್ಲ. 

– ಆರ್ಥಿಕ ಶಿಸ್ತು, ನಿಯಮಾವಳಿಗಳನ್ನು ಲೆಕ್ಕಿಸದೆ ಘೋಷಿಸುವ ಸಾಲ ಮನ್ನಾದಂಥ ದಿಢೀರ್‌ ಜನಪ್ರಿಯತೆ ಗಳಿಸಿಕೊಡುವ ಕಾರ್ಯ ಕ್ರಮಗಳು ಬೇಡ

– ಕಾವೇರಿ, ಮಹಾದಾಯಿ , ಅಂತರ್‌ ರಾಜ್ಯ ನೀರು ಹಂಚಿಕೆಯಂಥ ಜ್ವಲಂತ ಸಮಸ್ಯೆಗಳನ್ನು ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪûಾ ತೀತ ಹಾಗೂ ಸಮರ್ಪಕವಾಗಿ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು 

Advertisement

– ಈ ಹಿಂದಿನ ಮಂತ್ರಿಗಳು ಹಾಗೂ ಅಧಿಕಾರಿಗಳು ಬಳಸಿದ ಸುಸ್ಥಿಯಲ್ಲಿರುವ ಕಾರುಗಳನ್ನು ಬಳಸಿ. ಅನಿವಾರ್ಯವಾದರೆ ಮಾತ್ರ ಹೊಸ ವಾಹನ ಖರೀದಿಯಾಗಲಿ 

– ಅಧಿಕೃತ ಕಾರುಗಳಲ್ಲದೆ ತಮ್ಮ ಇಲಾಖೆಗೆ ಸೇರಿದ ಯಾವುದೇ ಕಾರುಗಳನ್ನು ಸಹಾಯಕರು ಮತ್ತು ಕುಟುಂಬದ ಸದಸ್ಯರುಗಳ ಬಳಕೆಗಾಗಿ ಎರವ‌ಲು ಪಡೆಯಬಾರದು

 – ಕಚೇರಿ ಅಥವಾ ಮನೆಯನ್ನು “ವಾಸ್ತು’ ನೆಪದಲ್ಲಿ ದುರಸ್ತಿಗೊಳಿಸಿ ದುಂದು ವೆಚ್ಚ ಮಾಡುವುದು ಬೇಡ
ಕಚೇರಿ ಹಾಗೂ ಮನೆಯ ದೂರಾವಣಿ, ಫ್ಯಾಕ್ಸ್‌ ಹಾಗೂ ಮೊಬೈಲ್‌ನಂಥ ಸಂಪರ್ಕ ಮಾಧ್ಯಮಗಳ ಬಳಕೆಯಲ್ಲಿ ಮಿತವ್ಯಯ ಪಾಲಿಸಲು ಪ್ರಯತ್ನಿಸಬೇಕು

– ಕಚೇರಿ ಹಾಗೂ ಅಧಿಕೃತ ನಿವಾಸಗಳಲ್ಲಿ ಅಗತ್ಯವಿರುವಷ್ಟೇ ಸಿಬಂದಿಗಳು ಮತ್ತು ಪರಿಚಾರಕರನಿಟ್ಟುಕೊಳ್ಳುವ ಮೂಲಕ ಕನಿಷ್ಠ ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳುವುದರಿಂದಲೂ ಮಿತವ್ಯಯ ಸಾಧಿಸಬಹುದು 

– ಉಭಯ ಸದನಗಳ ಕಲಾಪಗಳಿಗೆ ಪ್ರತಿನಿಧಿಗಳು ಹಾಜರಾಗಿ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸಬೇಕು. ಅಧಿವೇಶನ ನಡೆಯುವ ಸಂದರ್ಭದಲ್ಲಿ ಕ್ಷೇತ್ರ ಪ್ರವಾಸ, ಖಾಸಗಿ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಬಾರದು. ಪ್ರತಿ ಮೂರು ತಿಂಗಳಿಗೊಮ್ಮೆ ಸದನದ ಹಾಜರಾತಿಯನ್ನು ಬಹಿರಂಗಗೊಳಿಸುವ ಸಂಪ್ರದಾಯವನ್ನು ಪ್ರಾರಂಭಿಸಿದರೆ ಉತ್ತಮ.  

– ಸರಕಾರಿ ಕೆಲಸಗಳಿಗೆ ಮಾಡಿದ ಪ್ರಯಾಣದ ವೆಚ್ಚವನ್ನು ಮಾತ್ರ ಸರಕಾರದ ಬೊಕ್ಕಸದಿಂದ ಪಡೆದುಕೊಂಡು ಈ ವಿಚಾರದಲ್ಲಿ ಉಳಿದವರಿಗೆ ಮೇಲ್ಪಂಕ್ತಿ ಹಾಕಿಕೊಡಬಹುದು 

– ಅಧ್ಯಯನ, ಸಮ್ಮೇಳನ ಎಂಬಿತ್ಯಾದಿ ನೆನಪಗಳನ್ನಿಟ್ಟುಕೊಂಡು ಕೈಗೊಳ್ಳುವ ವಿದೇಶ ಪ್ರವಾಸಗಳಿಗೆ ಕಡಿವಾಣ ಹಾಕಬೇಕು. ಪ್ರಸ್ತುತ ರಾಜ್ಯದ ಬೊಕ್ಕಸ ಬರಿದಾಗಿರುವುದರಿಂದ ಐದು ವರ್ಷಗಳ ಮಟ್ಟಿಗೆ ಸರಕಾರದ ಯಾರೂ ವಿದೇಶ ಪ್ರವಾಸ ಕೈಗೊಳ್ಳುವುದಿಲ್ಲ ಎಂಬ ನಿರ್ಧಾರ ಮಾಡಿಕೊಂಡರೆ ಒಳ್ಳೆಯದು 

– ಗರಿಷ್ಠ ಸಮಯವನ್ನು ತಮ್ಮ ಕ್ಷೇತ್ರದಲ್ಲಿ ಕಳೆಯುವ ನಿರ್ಧಾರ ಕೈಗೊಳ್ಳಬೇಕು ಹಾಗೂ ತಾವು ಲಭ್ಯ ಇರುವ ದಿನಾಂಕ ಹಾಗೂ ಸಮಯವನ್ನು ಜನತೆಗೆ ಖಚಿತವಾಗಿ ಮುಂಚೆಯೇ ತಿಳಿಸುವ ಒಂದು ಉತ್ತಮ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು 

– ಸಾರ್ವಜನಿಕ ಅಹವಾಲುಗಳನ್ನು ಆಲಿಸುವ ವ್ಯವಸ್ಥೆ ಪûಾತೀತವಾಗಿರಬೇಕು. 

– ಹೂ, ಹಾರ, ಗದೆ, ಖಡ್ಗ, ಪೇಟ, ಸ್ಮರಣಿಕೆಗಳನ್ನು ಸ್ವೀಕರಿಸುವುದಿಲ್ಲ ಎಂದು ಅಭಿಮಾನಿಗಳಿಗೆ ಸ್ಪಷ್ಟವಾಗಿ ಹೇಳಬೇಕು 

– ಪ್ರತಿವರ್ಷ ಸಾಧನಾ ಸಮಾವೇಶದಂಥ ಭಾರೀ ಖರ್ಚು ಬೇಡುವ ಕಾರ್ಯಕ್ರಮಗಳನ್ನು ಹಾಕಿಕೊ ಳ್ಳುವ ಅಗತ್ಯವಿಲ್ಲ. ಸಾಧನೆಯನ್ನು ಜನರು ಗಮನಿಸುತ್ತಿರುತ್ತಾರೆ. ಅದನ್ನು ಸಮಾವೇಶದ ಮೂಲಕ ತಿಳಿಸುವ ಅಗತ್ಯವಿಲ್ಲ 

– ಅಂತೆಯೇ ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಸರಕಾರದ ಸಾಧನೆಯನ್ನು ಸಾರುವ ಜಾಹೀರಾತುಗಳನ್ನು ನೀಡುವುದನ್ನು ನಿಲ್ಲಿಸಬೇಕು

– ಮುಖ್ಯಮಂತ್ರಿಯಾದಿಯಾಗಿ ಸಚಿವರು ರಾಜಕೀಯ ಲಾಭದ ಉದ್ದೇಶವಿಟ್ಟುಕೊಂಡು ಧಾರ್ಮಿಕ ಸ್ಥಳಗಳಿಗೆ ಮತ್ತು ಧಾರ್ಮಿಕ ವ್ಯಕ್ತಿಗಳ ಭೇಟಿ ಮಾಡುವುದು ಬೇಡ 

– ಕ್ಷೇತ್ರದ ಸಮಸ್ಯೆ ಮತ್ತು ಬೇಡಿಕೆಗಳನ್ನು ಕ್ರಮಬದ್ಧವಾಗಿ ಪಟ್ಟಿ ಮಾಡಿ ಕಾಲಮಿತಿಯೊಳಗೆ ಪರಿಹರಿಸುವ/ಈಡೇರಿಸುವ ಶಿಸ್ತನ್ನು ರೂಢಿಸಿಕೊಳ್ಳುವುದು 

– ಕೇಂದ್ರ ಸರಕಾರ ನೆರೆ ರಾಜ್ಯಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡರೆ ರಾಜ್ಯಕ್ಕೂ ಒಳಿತಾಗುತ್ತದೆ ಎಂಬ ತಿಳಿವಳಿಕೆ ಹೊಂದಿರಬೇಕು.

– ಕಡ್ಡಾಯ ಕನ್ನಡ ಬಳಕೆ ಬರೀ ಘೋಷಣೆಗೆ ಮಾತ್ರ ಸೀಮಿತವಾಗದೆ ಅನುಷ್ಠಾನಕ್ಕೆ ಬರಲಿ. ಕನ್ನಡ ಪ್ರೇಮ ನವಂಬರ್‌ನಲ್ಲಿ ಮಾತ್ರವಲ್ಲ ಇಡೀ ವರ್ಷ ವ್ಯಕ್ತವಾಗುವಂತಹ ವಾತಾವರಣ ನಿರ್ಮಿಸಿ 

– ಶಾಸಕರು, ಸಚಿವರು ಬೆಂಗಳೂರನಲ್ಲಿ ಮಾಡುವ ದುಬಾರಿ ಬಾಡಿಗೆ ಮನೆ, ವಾಹನಗಳ ವೆಚ್ಚವನ್ನು ಸರಕಾರ ಭರಿಸುವುದು ಬೇಡ 

– ದುಂದುವೆಚ್ಚದ ಶಂಕು ಸ್ಥಾಪನೆ, ಉದ್ಘಾಟನೆ, ಚಾಲನೆ, ಉತ್ಸವ ಸಮಾರಂಭಗಳ ಅಗತ್ಯವಿಲ್ಲ. ಇವುಗಳನ್ನು ಸರಳ ಕಾರ್ಯಕ್ರಮಗಳ ಮೂಲಕವೂ ಮಾಡಬಹುದು 

– ಜನ ಸಾಮಾನ್ಯರು ಬಳಸುವ ಸರಕಾರಿ ಆಸ್ಪತ್ರೆ, ಶಾಲೆ, ಬಸ್‌ಸ್ಟ್ಯಾಂಡ್‌, ಸರಕಾರಿ ಕಚೇರಿ ಮುಂತಾದವುಗಳನ್ನು ಅಭಿವೃದ್ಧಿ ಪಡಿಸುವ ಬದ್ಧತೆ ತೋರಿಸಬೇಕು 

– ಮೂಲಭೂತ ವ್ಯವಸ್ಥೆಗಳಾದ ರಸ್ತೆ, ಕುಡಿಯುವ ನೀರು, ದಾರಿದೀಪ ಆಸ್ಪತ್ರೆ ಹಾಗೂ ಸಾರ್ವಜನಿಕ ಶೌಚಾಲಯ, ತಂಗುದಾಣ ಮತ್ತು ಸಾರಿಗೆ ಇತ್ಯಾದಿಗಳಿಗೆ ಪ್ರಾಶಸ್ತ್ಯ ನೀಡಬೇಕು 

– ಅಕ್ರಮ ಗಣಿಗಾರಿಕೆ, ಅಕ್ರಮ ಮರಳು ಸಾಗಾಟ, ಭೂ ಕಬಳಿಕೆ, ಅರಣ್ಯ ಸಂಪತ್ತು ಲೂಟಿ ಮಾಡುವಂಥ ಮಾಫಿಯಾಗಳನ್ನು ಹತ್ತಿಕ್ಕಬೇಕು 

– ಪ್ರವಾಸದಲ್ಲಿರುವಾಗ ಸರಕಾರಿ ಅತಿಥಿ ಗೃಹ ಬಳಸುವುದನ್ನು ಕಡ್ಡಾಯಗೊಳಿಸಬೇಕು. ಸ್ಟಾರ್‌ ಹೋಟೆಲ್‌ ವಾಸ್ತವ್ಯ ಹಾಗೂ ಅತಿಥಿ ಸತ್ಕಾರದ ಖರ್ಚುಗಳನ್ನೆಲ್ಲ ಸ್ವಂತ ಜೇಬಿನಿಂದ ಭರಿಸುವ ನಿಯಮ ರೂಪಿಸಬೇಕು 
ತನ್ನ ಹಾಗೂ ಕುಟುಂಬದ ಆರೋಗ್ಯ ತಪಾ ಸಣೆಗಾಗಿ ಕ್ಷೇತ್ರದ ಹಾಗೂ ನಗರದ ಸರಕಾರಿ ಆಸ್ಪತ್ರೆಗಳ ಸೇವೆಯ ಬಳಕೆ. 

– ಅನಗತ್ಯವಾದ ಪತ್ರಿಕಾಗೋಷ್ಠಿ, ಹೇಳಿಕೆ, ಪರರ ದೂಷಣೆ ಹಾಗೂ ನಿಂದನೆಗಳ ಪ್ರವೃತ್ತಿಗಳಿಗೆ ಕಡಿವಾಣ ಹಾಕಿ 
ಸರಕಾರಿ ಬಸ್‌, ರೈಲು ಮೂಲಕ ಪ್ರಯಾಣ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ 

– ಪ್ರತಿ ಸಲ ಕ್ಷೇತ್ರ ಸಂದರ್ಶಿಸುವಾಗ ಸರಕಾರಿ ಶಾಲೆ, ಆಸ್ಪತ್ರೆ, ಕಚೇರಿ, ಹಾಸ್ಟೆಲ್‌ ಹಾಗೂ ಬಸ್‌ ನಿಲ್ದಾಣ ಗಳಿಗೆ ಭೇಟಿ ನೀಡುವ ಅಭ್ಯಾಸ ಮಾಡಿಕೊಳ್ಳಿ 

– ಜಾತಿ ಮತ್ತು ಧಾರ್ಮಿಕ ಸಂಘಟನೆಗಳ ಕಾರ್ಯಕ್ರ ಮಗಳಲ್ಲಿ ಭಾವಹಿಸದಿರುವುದು ಉತ್ತಮ 

– ಸ್ವಾಗತ ಕಮಾನು, ಕಟ್‌ಔಟ್‌, ಫ್ಲೆಕ್ಸ್‌ ಬೋರ್ಡ್‌ ಮತ್ತು ಇನ್ನಿತರ ಪ್ರಚಾರಗಳಿಂದ ದೂರವಿರಬೇಕು 

– ಸಮಯ ಪಾಲನೆಗೆ ಗಮನ ನೀಡಿ. ಏನಾದರೂ ಬದಲಾವಣೆ ಇದ್ದರೆ ಮುಂಚಿತವಾಗಿ ತಿಳಿಸುವ ಸೌಜನ್ಯ ರೂಢಿಸಿಕೊಳ್ಳಿ 

ಇವೆಲ್ಲ ತೀರಾ ಸಾಮಾನ್ಯ ಮತ್ತು ಸರಳ ವಿಚಾರಗಳು. ಜನಪ್ರತಿನಿಧಿಯಾದವ ಇದನ್ನು ಪಾಲಿಸಿದರೆ ಆತನನ್ನು ಅನುಕರಿಸುವ ಜನರೂ ಪಾಲಿಸುತ್ತಾರೆ. ಹೀಗೆ ಜನಪ್ರತಿನಿಧಿಯಾದವ ತನ್ನ ಕ್ಷೇತ್ರದ ಜನರಿಗೆ ಮಾದರಿಯಾಗಬೇಕು. ಇದರಿಂದ ರಾಜ್ಯದ ಬೊಕ್ಕಸದ ಮೇಲೆ ಬೀಳುವ ಅನಗತ್ಯ ಹೊರೆಯೂ ಕಡಿಮೆ ಆಗುತ್ತದೆ. 

– ಕೆ. ಜಯಪ್ರಕಾಶ್‌ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next