Advertisement
ತೋಟದ ವಿಸ್ತೀರ್ಣಕ್ಕೆ ತಕ್ಕಂತೆ ಜೀವಸಾರ ಅಥವಾ ಬಯೋಡೈಜೆಸ್ಟರ್ ಗಾತ್ರವನ್ನೂ ನಿರ್ಮಿಸಿಕೊಳ್ಳಬಹುದು. ತೋಟದಲ್ಲಿಯೇ ತುಸು ಎತ್ತರ ಇರುವ ಜಾಗದಲ್ಲಿ ಇದನ್ನು ನಿರ್ಮಿಸುವುದು ಸೂಕ್ತ. ಇದರಿಂದ ಜೀವಸಾರ ಹಾಯಿಸುವಿಕೆಯೂ ಸರಾಗವಾಗಿರುತ್ತದೆ. ಎರಡು ಎಕರೆ ತೋಟವಿದ್ದರೆ 8 ಅಡಿ ಅಗಲ, ನಾಲ್ಕು ಅಡಿ, ಉದ್ದ, ಮೂರಡಿ ಆಳ ಇರುವ ತೊಟ್ಟಿ ನಿರ್ಮಿಸಿಕೊಂಡರೂ ಸಾಕು. ಮಾರುಕಟ್ಟೆಯಲ್ಲಿ ಸಿದ್ಧ ಮಾದರಿ ಬಯೋಡೈಜೆಸ್ಟರ್ ತೊಟ್ಟಿಗಳು ಸಿಗುತ್ತಿವೆ. ಕೃಷಿಕರಿಗೆ ಯಾವುದು ಅನುಕೂಲ ಎನ್ನಿಸುತ್ತದೆಯೋ ಅದರ ಬಳಕೆ ಮಾಡಬಹುದು.
ತೊಟ್ಟಿಯ ತಳದಲ್ಲಿ ಜಾಲರಿ ಇರುವ ರಂಧ್ರ ನಿರ್ಮಿಸಿದ್ದರೆ ಅದರ ಮೂಲಕ ಕಸ ಕಡ್ಡಿಯಿಲ್ಲದ ಸಾರವನ್ನು ಹೊರಬಿಡಬಹುದು. ಬೆಳೆಗಳಿಗೆ ಜೀವಸಾರವನ್ನು ನೇರವಾಗಿ ಹಾಯಿಸಬಾರದು. ಒಂದು ಲೀಟರ್ ಜೀವಸಾರಕ್ಕೆ 9 ಅಥವಾ 10 ಲೀಟರ್ ಪ್ರಮಾಣದಲ್ಲಿ ನೀರು ಬೆರೆಸಬೇಕು. ಇದನ್ನು ಚೆನ್ನಾಗಿ ಕದಡಿ, ಅಗತ್ಯವಿದ್ದರೆ ಮತ್ತೂಮ್ಮೆ ಸೋಸಿ, ಹನಿ ನೀರಾವರಿ ವ್ಯವಸ್ಥೆ ಮುಖಾಂತರ ಬೆಳೆಗಳಿಗೆ ನೀಡಬಹುದು. ಜೀವಸಾರ ಪೂರ್ಣವಾಗಿ ಬಳಸಿಕೊಂಡ ನಂತರ ತೊಟ್ಟಿಯ ತಳದಲ್ಲಿ ಉಳಿಯುವ ಕಸವನ್ನು ಕಾಂಪೋಸ್ಟ್ ಗುಂಡಿ ಅಥವಾ ಎರೆಗೊಬ್ಬರದ ತೊಟ್ಟಿಗೆ ಹಾಕಬಹುದು. – ಕುಮಾರ ರೈತ