Advertisement

ಯುದ್ಧ ಕೈದಿಗಳನ್ನು ಹೇಗೆ ನೋಡಿಕೊಳ್ಳಬೇಕು?

12:30 AM Mar 01, 2019 | Team Udayavani |

ಐಎಎಫ್ ನ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ರನ್ನು ಪಾಕಿಸ್ಥಾನ ಸೆರೆಹಿಡಿದಾಗ ಅವರನ್ನು ಜಿನೀವಾದಲ್ಲಿ  1949ರಲ್ಲಿ ಸಹಿ ಹಾಕಲಾಗಿರುವ ಯುದ್ಧ ಕೈದಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಒಪ್ಪಂದವನ್ನು ಪಾಲಿಸುತ್ತದೆಯೋ ಎಂಬ ಆತಂಕ ಇತ್ತು. 1999ರಲ್ಲಿ ಕಾರ್ಗಿಲ್‌ ದಾಳಿಯ ವೇಳೆ ಬಂಧನಕ್ಕೆ ಒಳಗಾಗಿದ್ದ ಗ್ರೂಪ್‌ ಕ್ಯಾಪ್ಟನ್‌ ಕಂಬಂಪತಿ ನಚಿಕೇತ ಅವರನ್ನು ಎಂಟು ದಿನಗಳಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಭಾರತ ಸರಕಾರದ ಪ್ರಬಲ ನಿಲುವಿಗೆ ಸೋತ ಪಾಕಿಸ್ಥಾನ ಅಭಿನಂದನ್‌ರನ್ನು ಬಿಡುಗಡೆ ಮಾಡಲು ಒಪ್ಪಿದೆ. ಈ ಒಪ್ಪಂದದ ಬಗ್ಗೆ ವಿವರಣೆ ಇಲ್ಲಿದೆ.

Advertisement

– ರಾಷ್ಟ್ರಗಳ ನಡುವೆ ಯುದ್ಧ ನಡೆದಾಗ ಬಂಧನಕ್ಕೊಳಗಾದ ಯುದ್ಧ ಕೈದಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ 1949ರಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳು ಒಪ್ಪಿಕೊಂಡು ಸಹಿ ಹಾಕಿರುವ ಒಪ್ಪಂದವಿದು.  ಅದರಲ್ಲಿ ನಾಲ್ಕು ವಿಭಾಗಗಳಿವೆ ಮತ್ತು ಮೂರು ಶಿಷ್ಟಾಚಾರ (ಪ್ರೊಟೋಕಾಲ್‌) ಭಾಗಗಳಿವೆ. 

– ಮೂರನೇ ಭಾಗದಲ್ಲಿ ಯುದ್ಧ ಕೈದಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಪ್ರಸ್ತಾಪವಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ಥಾನಗಳು ಯುದ್ಧ ಎಂಬ ಪದ ಬಳಕೆ ಮಾಡಿಯೇ ಇಲ್ಲ. ಭಾರತ ಐಎಎಫ್ ದಾಳಿಯನ್ನು ಮಿಲಿಟರಿಯೇತರ ಕ್ರಮ ಎಂದೇ ಬಣ್ಣಿಸಿದೆ. ಹೀಗಾಗಿ 2 ರಾಷ್ಟ್ರಗಳೂ ಕೂಡ ಜಿನೀವಾ ಒಪ್ಪಂದಕ್ಕೆ ಬದ್ಧವಾಗಿಯೇ ಇವೆ.

– ಸೈನಿಕರನ್ನು ಬಂಧಿಸಿದ ರಾಷ್ಟ್ರವು ಅವರನ್ನು ಗೌರವಯುತವಾಗಿ, ಮಾನವೀಯತೆಯಿಂದ ನಡೆಸಿಕೊಳ್ಳಬೇಕು. ಅದು ಅದರ ಹೊಣೆಯೂ ಆಗಿರುತ್ತದೆ. 

– ಯುದ್ಧ ಕೈದಿಗಳಿಂದ ಬಲವಂತವಾಗಿ ಯಾವುದೇ ಮಾಹಿತಿ ಪಡೆಯಬಾರದು.

Advertisement

– ಅವರಿಗೆ ಮಾನಸಿಕವಾಗಿ ಅಥವಾ ದೈಹಿಕ ಹಿಂಸೆ ನೀಡಬಾರದು.

– ಯುದ್ಧ ಕೈದಿಗಳನ್ನು ಮುಂದಿಟ್ಟುಕೊಂಡು ಯಾವುದೇ ರೀತಿಯ ಕ್ರಮ ಕೈಗೊಳ್ಳಬಾರದು (ಗುರುವಾರ ಒಂದು ಹಂತದಲ್ಲಿ ಪಾಕ್‌ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಭಾರತ ಮಾತುಕತೆಗೆ ಸಿದ್ಧಗೊಂಡರೆ ಅಭಿನಂದನ್‌ ಬಿಡುಗಡೆ ಎಂದಿದ್ದರು. ಭಾರತ ಸರಕಾರದ ಕಟು ಎಚ್ಚರಿಕೆ ಬಳಿಕ ಎಲ್ಲವೂ ತಣ್ಣಗಾಯಿತು)

– ಅವರನ್ನು ಯಾವುದೇ ರೀತಿಯ ಹಿಂಸೆಯಿಂದ ರಕ್ಷಿಸಬೇಕು ಮತ್ತು ಸಾರ್ವಜನಿಕರಿಂದ ಅವಮಾನಕ್ಕೆ ಒಳಪಡಿಸಬಾರದು.ಅವರಿಗೆ ಸೂಕ್ತ ರೀತಿಯಲ್ಲಿ ಆರೋಗ್ಯ ತಪಾಸಣೆ, ಪ್ರಾರ್ಥನೆ ಸಲ್ಲಿಸುವುದಕ್ಕೆ ತಡೆಯೊಡ್ಡಬಾರದು.

– ಯುದ್ಧ ಕೈದಿ ಗಾಯಗೊಂಡಿದ್ದಲ್ಲಿ ಆತನಿಗೆ ಸೂಕ್ತ ರೀತಿಯ ವೈದ್ಯಕೀಯ ಸೌಲಭ್ಯ ನೀಡಬೇಕು. ಆತನಿಗೆ ಪ್ರಯಾಣಿಸಲು ಸಾಧ್ಯವಿದೆ ಎಂದು ದೃಢಪಟ್ಟಾಗ ಸ್ವದೇಶಕ್ಕೆ ಕಳುಹಿಸಿಕೊಡಬೇಕು.

– ಬಂಧಿಸಿರುವ ರಾಷ್ಟ್ರ ಯುದ್ಧ ಕೈದಿಗೆ ಆತನ ಕುಟುಂಬ ಸದಸ್ಯರ ಜತೆಗೆ ಮಾತನಾಡಲು ಅಥವಾ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಡಬೇಕು.

– 1999ರಲ್ಲಿ ನಡೆದಿದ್ದ ಕಾರ್ಗಿಲ್‌ ಕಾರ್ಯಾಚರಣೆಯಲ್ಲಿ ಗ್ರೂಪ್‌ ಕ್ಯಾಪ್ಟನ್‌ ಕಂಬಂಪತಿ ನಚಿಕೇತ ಅವರನ್ನು ಪಾಕಿಸ್ಥಾನ ಬಂಧಿಸಿತ್ತು. ಇದು ಪಾಕಿಸ್ಥಾನದಲ್ಲಿ ಯುದ್ಧ ಕೈದಿಯಾಗಿದ್ದ ಇತ್ತೀಚಿನ ಭಾರತೀಯ. ಅವರನ್ನು ಎಂಟು ದಿನಗಳ ಒಳಗಾಗಿ ಬಿಡುಗಡೆ ಮಾಡಲಾಗಿತ್ತು.

– 1971ರಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಯುದ್ಧ ಸಂಭವಿಸಿದಾಗ 54 ಮಂದಿ ಸೈನಿಕರನ್ನು,ಪೈಲಟ್‌ಗಳನ್ನು, ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಅವರ ವಿವರಗಳನ್ನು ಭಾರತ ಸರಕಾರ ಪದೇ ಪದೆ ನೀಡಿದ್ದರೂ, ನೆರೆಯ ರಾಷ್ಟ್ರ ಮಾತ್ರ ಅವರು ಯುದ್ಧ ಕೈದಿಗಳಾಗಿಲ್ಲವೆಂದು ಮಾಹಿತಿ ನೀಡಲು ತಿರಸ್ಕರಿಸಿತ್ತು. 

– 1972ರಲ್ಲಿ “ಟೈಮ್‌’ ನಿಯತಕಾಲಿಕ ಪಾಕಿಸ್ಥಾನ ಜೈಲಲ್ಲಿ ಬಂದಿಯಾಗಿದ್ದ ವ್ಯಕ್ತಿಯ ಫೋಟೋ ಪ್ರಕಟಿಸಿತ್ತು. ಅವರ ಕುಟುಂಬ ವ್ಯಕ್ತಿಯನ್ನು ಗುರುತಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next