ಬೆಂಗಳೂರು:ವ್ಯವಸ್ಥೆಯನ್ನು ಕೂಡಲೇ ಬದಲಾಯಿಸಲು ಆಗಲ್ಲ, ಒಂದು ವೇಳೆ ನಾನು ವರ್ಗಾವಣೆ ದಂಧೆ ನಿಲ್ಲಿಸಲು ಮುಂದಾದರೆ ನನ್ನನ್ನು 2 ನಿಮಿಷ ಮುಖ್ಯಮಂತ್ರಿ ಆಗಿರಲು ಬಿಡಲ್ಲ. ಈ ವ್ಯವಸ್ಥೆ ಎಲ್ಲಿಂದ ಸರಿ ಮಾಡೋದು ಎಂಬ ಭಯ ಶುರುವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳ ಭ್ರಷ್ಟಾಚಾರದ ಕರಾಳ ಮುಖವನ್ನು ಬಯಲು ಮಾಡಿದ್ದಾರೆ.
ಸೋಮವಾರ ಗಾಂಧಿಭವನದಲ್ಲಿ ಮಾತನಾಡಿದ ಅವರು, ನನಗೆ ದುಡ್ಡು ಮಾಡಬೇಕಾಗಿಲ್ಲ. ಕೈಲಾದಷ್ಟು ಭ್ರಷ್ಟಾಚಾರ ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ. ಒಂದು ವರ್ಗಾವಣೆ ಮಾಡಲು 5ರಿಂದ 10 ಲಕ್ಷ ರೂ. ಪಡೆಯಲಾಗುತ್ತದೆ ಎಂದರು.
ಅಧಿಕಾರಿಗಳ ವರ್ಗಾವಣೆ ಮೂಲಕ ಭ್ರಷ್ಟಾಚಾರ ಶುರುವಾಗೋದು. ಅಧಿಕಾರಿಗಳ ಹಣದ ದಾಹದಿಂದ ಭ್ರಷ್ಟಾಚಾರ ಮಿತಿ ಮೀರಿದೆ. ವಿಧಾನಸೌಧದ ಕಾರಿಡಾರ್ ನಿಂದಲೇ ಮಧ್ಯವರ್ತಿಗಳಿದ್ದಾರೆ. ಇನ್ನು ಮುಂದಾದ್ರು ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಲಿ ಎಂದು ಮನವಿ ಮಾಡಿಕೊಂಡರು.
ನನಗೆ ಎರಡು ಬಾರಿ ಹೃದಯದ ಶಸ್ತ್ರಚಿಕಿತ್ಸೆ ಆಗಿದೆ. ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ಆದರೆ ಪ್ರಾಮಾಣಿಕತೆಯ ಆಡಳಿತ ನೀಡಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ 5 ವರ್ಷ ನಡೆಯೋದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ನಮ್ಮ ಸರ್ಕಾರ ಐದು ವರ್ಷ ಪೂರೈಸಲಿದೆ. ಇದರಲ್ಲಿ ಯಾವ ಅನುಮಾನವು ಬೇಡ ಎಂದು ವಿಶ್ವಾಸವ್ಯಕ್ತಪಡಿಸಿದರು.