ಬೆಂಗಳೂರು: ಎಬಿ ಡಿ’ವಿಲಿಯರ್ ಸಿಡಿಸುತ್ತಿರುವ ವೇಳೆ ಯಾವುದೇ ಬೌಲಿಂಗ್ ದಾಳಿ ಅವರನ್ನು ತಡೆಯುವ ಸಾಧ್ಯತೆಯಿಲ್ಲ. ಶನಿವಾರದ ಪಂದ್ಯದಲ್ಲಿ ಡಿ’ವಿಲಿಯರ್ ಅವರ ಪ್ರಚಂಡ ಆಟದಿಂದಾಗಿ ಬೆಂಗಳೂರು ತಂಡವು ಡೆಲ್ಲಿ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಲು ಯಶಸ್ವಿಯಾಗಿತ್ತು. ಸುಂಟರಗಾಳಿಯಂತೆ ಬ್ಯಾಟ್ ಬೀಸಿದ ಡಿ’ವಿಲಿಯರ್ ಏಕಾಂಗಿಯಾಗಿ ಹೋರಾಡಿ ಬೆಂಗಳೂರಿಗೆ ಗೆಲುವು ತಂದುಕೊಟ್ಟಿದ್ದರು.
ಕೇವಲ 39 ಎಸೆತಗಳಿಂದ 90 ರನ್ ಸಿಡಿಸುವ ಮೂಲಕ ಡಿ’ವಿಲಿಯರ್ ಇನ್ನೂ ಎರಡು ಓವರ್ ಬಾಕಿ ಇರುತ್ತಲೇ ಆರ್‌ಸಿಬಿ ಗೆಲುವಿನ ಗುರಿ ತಲುಪಿತ್ತು. ತನ್ನ ಅಜೇಯ ಇನ್ನಿಂಗ್ಸ್ ವೇಳೆ ಡಿ’ವಿಲಿಯರ್ 10 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿದ್ದರು. ಡಿ’ವಿಲಿಯರ್ ಅವರ ಆಟಕ್ಕೆ ಸಾಮಾಜಿಕ ಜಾಲತಾಣದಲಿ ಮೆಚ್ಚುಗೆ ವ್ಯಕ್ತವಾಗಿದ್ದರೆ ಬೆನ್ ಸ್ಟೋಕ್ಸ್ ಅವರ ಟ್ವೀಟ್ ಗಮನ ಸೆಳೆಯಿತು.
ಹೌ ಟು ಸ್ಟಾಪ್ ಎಬಿ ಡಿ’ವಿಲಿಯರ್ 17 ಎಂದು ಸ್ಟೋಕ್ಸ್ ಟ್ವೀಟ್ ಮಾಡಿದ್ದರು.ಇದೇ ವೇಳೆ ಸ್ಟೋಕ್ಸ್ ಕ್ರಿಕೆಟ್ ಇತಿಹಾಸದ ಒಂದು ಅಪರೂಪದ ಕ್ಷಣವನ್ನು ಸ್ಮರಸಿಕೊಂಡರು. ಅದೇನೆಂದರೆ ಆಸ್ಟ್ರೇಲಿಯದ ಟ್ರೆವರ್ ಚಾಪೆಲ್ ಅವರು ನ್ಯೂಜಿಲ್ಯಾಂಡಿನ ಬ್ರಿಯಾನ್ ಮೆಕೆಂಝಿಗೆ ಅಂಡರ್ ಆರ್ಮ್ ಬೌಲಿಂಗ್ ಮಾಡಿರುವುದು ಆಗಿದೆ. ನ್ಯೂಜಿಲ್ಯಾಂಡ್ ತಂಡ ಪಂದ್ಯವೊಂದನ್ನು ಗೆಲ್ಲಲು ಅಂತಿಮ ಎಸೆತದಲ್ಲಿ ಆರು ರನ್ ಗಳಿಸಬೇಕಾಗಿತ್ತು. ಆಗ ಬ್ಯಾಟ್ಸ್‌ಮನ್ ಸಿಕ್ಸರ್ ಬಾರಿಸುವುದನ್ನು ತಪ್ಪಿಸಲು ಚಾಪೆಲ್ ಅಂಡರ್ ಆರ್ಮ್ ಬೌಲಿಂಗ್ ಮಾಡಿದ್ದರು.
ಉತ್ತಮವಾಗಿ ಆಡುತ್ತಿರುವ ಡಿ’ವಿಲಿಯರ್ ನಾಯಕ ವಿರಾಟ್ ಕೊಹ್ಲಿ ಜತೆ 63 ಮತ್ತು ಕೋರಿ ಆ್ಯಂಡರ್ಸನ್ ಜತೆ 56 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಆರ್‌ಸಿಬಿಗೆ ಸ್ಮರಣೀಯ ಜಯ ತಂದುಕೊಟ್ಟರು. ಒಟ್ಟಾರೆ ಈ ಕೂಟದಲ್ಲಿ 212 ರನ್ ಪೇರಿಸಿರುವ ಅವರು ಗರಿಷ್ಠ ರನ್ ಗಳಿಸದವರಲ್ಲಿ ಐದನೇ ಸ್ಥಾನದಲ್ಲಿದ್ದಾರೆ.