Advertisement

ಒಲಿಂಪಿಕ್ಸ್‌ ನಡೆಸುವುದಾದರೆ ಹೇಗೆ?

10:01 AM Mar 28, 2020 | Sriram |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ಕೂಟವನ್ನು ನಿಗದಿಯಂತೆ ನಡೆಸಲು ಅಸಾಧ್ಯ ಎಂಬಂಥ ವಾತಾವರಣ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕೂಟವನ್ನು ಮುಂದೂಡುವುದೋ, ಒಂದೆರಡು ವರ್ಷ ಬಿಟ್ಟು ನಡೆಸುವುದೋ ಅಥವಾ ಸಣ್ಣ ಮಟ್ಟದಲ್ಲಿ ನಡೆಸುವುದೋ ಎಂಬುದು ಗೊತ್ತಾಗದೆ ಸಂಘಟಕರು ಪರದಾಡುತ್ತಿದ್ದಾರೆ. ಪರ್ಯಾಯ ದಾರಿ ಏನು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ), ಟೋಕಿಯೊ ಒಲಿಂಪಿಕ್ಸ್‌ ಸಂಘಟನಾ ಸಮಿತಿ, ಜಪಾನ್‌ ಸರಕಾರ ಪರ್ಯಾಲೋಚನೆ ಮಾಡುತ್ತಿವೆ. ಈ ವಾರ ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ತೀರ್ಮಾನವಾಗುವ ಸಾಧ್ಯತೆಯಿದೆ.

Advertisement

ಸಮಸ್ಯೆಗಳ ಸರಮಾಲೆ…
ಕೂಟವನ್ನು ಮುಂದೂಡಲು ಐಒಸಿಗಾಗಲಿ, ಜಪಾನ್‌ ಸರಕಾರಕ್ಕಾಗಲಿ, ಸಂಘಟನಾ ಸಮಿತಿಗಾಗಲಿ ಇಷ್ಟವಿಲ್ಲ. ಈಗಾಗಲೇ ಸಿದ್ಧತೆಗಾಗಿ 93 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. 22,686 ಕೋಟಿ ರೂ. ಪ್ರಾಯೋಜಕತ್ವದ ಹಣ ಬಂದಿದೆ. ಟೊಯೊಟಾ ಮೋಟಾರ್‌ ಕಾರ್ಪ್‌, ಪ್ಯಾನಾಸೊನಿಕ್‌ನಂತಹ 60ಕ್ಕೂ ಹೆಚ್ಚು ಜಾಹೀರಾತುದಾರರು ಅತಂತ್ರರಾಗಿದ್ದಾರೆ.

ಕೂಟ ನಡೆದೇ ತೀರುತ್ತದೆ ಎಂದಾದರೆ, ಅದಕ್ಕೆ ಆ್ಯತ್ಲೀಟ್‌ಗಳು ಅಂತಿಮ ಸಿದ್ಧತೆ ಮಾಡಿ ಕೊಳ್ಳಬೇಕು. ಅದಕ್ಕೆ ಪೂರಕ ವಾತಾವರಣ ಎಲ್ಲೂ ಇಲ್ಲ. ಇದಕ್ಕೂ ಮಿಗಿಲಾಗಿ ಶೇ. 43ರಷ್ಟು ಆ್ಯತ್ಲೀಟ್‌ಗಳಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಇನ್ನೂ ಅರ್ಹತೆಯೇ ಸಿಕ್ಕಿಲ್ಲ. ಅರ್ಹತಾ ಕೂಟಗಳೇ ರದ್ದಾಗಿರುವುದು ಇದಕ್ಕೆ ಕಾರಣ.

ಪರ್ಯಾಯ ದಾರಿಗಳೇನು?
ಕೂಟವನ್ನು ಒಂದೆರಡು ತಿಂಗಳು ಮುಂದೂಡು ವುದು ಈಗಿರುವ ಅವಕಾಶ. ಆದರೆ ಇದು “ಪರಿಸ್ಥಿತಿ ತಿಳಿಯಾಗುತ್ತದೆ’ ಎಂಬ ಆಶಾವಾದ ಮಾತ್ರ.

ಕೂಟವನ್ನು ಮುಂದಿನ ವರ್ಷ ಹಮ್ಮಿಕೊಳ್ಳುವುದು ಸಂಘಟನಾ ಸಮಿತಿಯ ಲೆಕ್ಕಾಚಾರ. ಆದರೆ ಮುಂದಿನ ವರ್ಷಗಳಲ್ಲಿ ಬೇರೆ ಕ್ರೀಡಾಕೂಟಗಳು ನಡೆಯಬೇಕಿವೆ. 2022ರಲ್ಲಿ ವಿಶ್ವಕಪ್‌ ಫ‌ುಟ್‌ಬಾಲ್‌, ಚಳಿಗಾಲದ ಒಲಿಂಪಿಕ್ಸ್‌ ಕೂಡ ಇದೆ. ಆದ್ದರಿಂದ ಆಗ ಒಲಿಂಪಿಕ್ಸ್‌ ನಡೆಸುವುದು ಹೇಳಿಕೊಳ್ಳುವಷ್ಟು ಸುಲಭವಲ್ಲ. ಅಲ್ಲದೇ ಒಲಿಂಪಿಕ್ಸ್‌ ಈವರೆಗೆ “4 ವರ್ಷಗಳ ಅವಧಿ’ಯನ್ನು ಮೀರಿದ್ದಿಲ್ಲ.

Advertisement

ಮಿನಿ ಒಲಿಂಪಿಕ್ಸ್‌
ಈ ಬಾರಿಯೇ ದಿನಾಂಕದಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ, ಕೂಟವನ್ನು ಸಣ್ಣದಾಗಿ ನಡೆಸುವುದು ಸಂಘಟಕರ ಮುಂದಿರುವ ಆಯ್ಕೆ. ಆಗ ಹಲವು ಕ್ರೀಡೆಗಳು ರದ್ದಾಗುತ್ತವೆ. ಇದರಿಂದ ವರ್ಷಾನುಗಟ್ಟಲೆ ಅಭ್ಯಾಸ ನಡೆಸಿದ ಸ್ಪರ್ಧಿಗಳಿಗೆ ತೀವ್ರ ನಿರಾಸೆಯಾಗುತ್ತದೆ.

ಪ್ರೇಕ್ಷಕರಿಲ್ಲದೆ ಆಯೋಜನೆ
ಕೂಟವನ್ನು ಪ್ರೇಕ್ಷಕರಿಲ್ಲದೆ ನಡೆಸುವುದು ಈಗಿನ ಚಿಂತನೆಗಳಲ್ಲೊಂದು. ಸ್ಪರ್ಧಿಗಳಿಗೆ ಮಾತ್ರ ಒಳಗೆ ಪ್ರವೇಶ ನೀಡಿ, ವೀಕ್ಷಕರಿಗೆ ಟಿವಿಯಲ್ಲಿ ನೋಡಿಕೊಳ್ಳಿ ಎಂದು ಮನವಿ ಮಾಡುವುದು. ಆದರೆ ಇದು ಹೇಳಿಕೊಳ್ಳುವಷ್ಟು ಆಕರ್ಷಕವಲ್ಲ. ಒಲಿಂಪಿಕ್ಸ್‌ ಎನ್ನುವುದು ಕ್ರೀಡಾಕೂಟಕ್ಕಿಂತ ಮುಖ್ಯವಾಗಿ ಪ್ರವಾಸಿ ಕೇಂದ್ರವಾಗಿಯೇ ಜನಪ್ರಿಯ. ಹಾಗಿದ್ದಾಗ ಜನರಿಗೇ ಪ್ರವೇಶವಿಲ್ಲವೆಂದರೆ, ಅವರು ಟೀವಿಯಲ್ಲೂ ನೋಡಲಾರರು.

ಪ್ರವಾಸೋದ್ಯಮಕ್ಕೆ ಹೊಡೆತ
ಜಪಾನ್‌ ಸರಕಾರ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ, ಅದನ್ನು ವಿವಿಧ ರೂಪದಲ್ಲಿ ಹಿಂದಿರುಗಿ ಪಡೆಯುವ ಯೋಜನೆ ಹಾಕಿದೆ. ಮುಖ್ಯವಾಗಿ ಪ್ರವಾಸೋದ್ಯಮದ ಮೂಲಕ ಕನಿಷ್ಠ 20,000 ಕೋಟಿ ರೂ. ಗಳಿಸುವುದು, ಜನರಲ್ಲಿ ಖರೀದಿಯ ಆಸಕ್ತಿಯನ್ನು ಹುಟ್ಟು ಹಾಕಿ ಅಲ್ಲಿಂದಲೂ ಹಣ ಪಡೆಯುವುದು ಯೋಜನೆ. ಒಂದು ವೇಳೆ ಒಲಿಂಪಿಕ್ಸ್‌ ರದ್ದಾದರೆ ಸುಮಾರು ಒಂದು ಲಕ್ಷ ಕೋಟಿ ರೂ. ಕೈಬಿಟ್ಟು ಹೋಗುತ್ತದೆ!

Advertisement

Udayavani is now on Telegram. Click here to join our channel and stay updated with the latest news.

Next