Advertisement

ಮಳೆಯ ಸಂದರ್ಭ ಸಿಡಿಲಿನ ಸಾಧ್ಯತೆ: ರಕ್ಷಣೆ ಹೇಗೆ? ಇಲ್ಲಿದೆ ಸರಳ ಮಾರ್ಗ

11:37 PM Apr 27, 2023 | Team Udayavani |

ಉಡುಪಿ: ಬೇಸಗೆ ಮಳೆಯ ಸಂದರ್ಭ ಸಿಡಿಲಿನ ಅಪಾಯದ ಸಾಧ್ಯತೆಯೂ ಇರುವ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರವು ಸಿಡಿಲಿನಿಂದ ರಕ್ಷಣೆ ಪಡೆಯಬಹುದಾದ ಸರಳ ಮಾರ್ಗಗಳನ್ನು ಸೂಚಿಸಿದೆ.

Advertisement

ಸಿಡಿಲು- ಮೊಬೈಲ್‌ ಆ್ಯಪ್‌ನಲ್ಲಿ ಸಿಡಿಲಿನ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದುಕೊಳ್ಳಬಹುದು. ಸಿಡಿಲಿನ ಸಂಭವನೀಯತೆ ಇದ್ದಲ್ಲಿ ಹೊರಗಿನ ಕೆಲಸಗಳನ್ನು ಮುಂದೂಡಿ, ಆದಷ್ಟು ಮನೆಯಲ್ಲಿಯೇ ಇರುವುದು ಸೂಕ್ತ. ಮನೆಯ ಸುತ್ತಲಿನಲ್ಲಿರುವ ಕೊಳೆತ ಹಾಗೂ ಒಣಗಿದ ಮರಗಳನ್ನು ತೆರವುಗೊಳಿಸಬೇಕು. ಮನೆಯ ಒಳಗಿರುವಾಗ ಸಿಡಿಲು ಬಂದಾಗ ಕಿಟಕಿಯಿಂದ ದೂರವಿರಬೇಕು. ಅಲ್ಲದೆ ದೂರವಾಣಿ, ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಸಬಾರದು.

ಗೃಹೋಪಯೋಗಿ ಉಪಕರಣಗಳ ಫ್ಲಗ್‌ಗಳನ್ನು ತೆಗೆದಿಡಬೇಕು. ಗೋಡೆಯಿಂದ ದೂರವಿರುವುದು ಉತ್ತಮ. ಒಣಮರದ ಪೀಠೊಪಕರಣಗಳು ಸುರಕ್ಷಿತವಾಗಿದ್ದು, ವಿದ್ಯುದೀಕರಣದ ಅಪಾಯ ಇರುವುದರಿಂದ ಸಿಡಿಲಿನ ಸಂದರ್ಭ ಸ್ನಾನ ಮತ್ತು ಪಾತ್ರೆ ಹಾಗೂ ಇತರ ನೀರಿನೊಂದಿಗಿನ ಕೆಲಸವನ್ನು ಮಾಡಬಾರದು. ಹೊರಾಂಗಣದಲ್ಲಿದ್ದಾಗ ಸಿಡಿಲು ಬರುವ ಲಕ್ಷಣಗಳಿದ್ದಲ್ಲಿ ತತ್‌ಕ್ಷಣ ಸುರಕ್ಷಿತ ಕಟ್ಟಡಗಳ ಒಳಗೆ ಸೇರಿಕೊಳ್ಳಬೇಕು. ಎತ್ತರ ಪ್ರದೇಶದಲ್ಲಿ ಸಿಡಿಲಿನ ಪ್ರಭಾವ ಅಧಿಕವಾಗಿರುವುದರಿಂದ ತಗ್ಗು ಪ್ರದೇಶಗಳಿಗೆ ತೆರಳಬೇಕು.

ಸಿಡಿಲಿನ ಸಂದರ್ಭ ಕೊಡೆಯನ್ನು ಬಳಸಬಾರದು, ಮಕ್ಕಳು ಗಾಳಿಪಟ ಹಾರಿಸಬಾರದು. ವಾಹನ ಚಲಿಸುವಾಗ ಸಿಡಿಲು ಬಂದಾಗ ಮರ ಹಾಗೂ ತಂತಿ ಕಂಬಗಳಿಂದ ವಾಹನವನ್ನು ದೂರ ನಿಲ್ಲಿಸಿ, ವಾಹನದೊಳಗೆ ಇರುವುದು ಉತ್ತಮ. ಬಸ್‌ಗಳಲ್ಲಿ ಪ್ರಯಾಣಿಸುವಾಗ ಕಿಟಕಿಗಳ ಗಾಜನ್ನು ಮುಚ್ಚಬೇಕು. ಕಾಡಿನಲ್ಲಿದ್ದ ಸಂದರ್ಭ ಕಡಿಮೆ ಮರಗಳಿರುವ ಪ್ರದೇಶದಲ್ಲಿ ಸಣ್ಣ ಮರದ ಕೆಳಗೆ ಆಶ್ರಯ ಪಡೆಯುಬೇಕು. ಗುಂಪಿನಲ್ಲಿದ್ದಾಗ ಜನರಿಂದ ಪರಸ್ಪರ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next