ಚಿನ್ನದ ಮೇಲಿನ ಹೂಡಿಕೆಗೆ ಗೋಲ್ಡ್ ಇಟಿಎಫ್ ಅತ್ಯಂತ ಪ್ರಶಸ್ತ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಗೋಲ್ಡ್ ಇಟಿಎಫ್ ಸ್ಕೀಮುಗಳಲ್ಲಿ ಟಾಪ್ ಸ್ಕೀಮುಗಳು ಯಾವುವು ಎಂಬುದನ್ನು ನಾವು ತಿಳಿದಿರುವುದು ಒಳ್ಳೆಯದು.
ಈಕ್ವಿಟಿ ಶೇರು, ಮ್ಯೂಚುವಲ್ ಫಂಡ್, ಬ್ಯಾಂಕ್ ಡೆಪಾಸಿಟ್ ಗಳನ್ನು ನಾವು ಹೇಗೆ ಒಂದು ಲಾಭದಾಯಕ ಹೂಡಿಕೆ ಮಾಧ್ಯಮವನ್ನಾಗಿ ಪರಿಗಣಿಸುವವೋ ಹಾಗೆಯೇ ಚಿನ್ನವನ್ನು ಕೂಡ ಆನ್ಲೈನ್ ಟ್ರೇಡಿಂಗ್ ಮೂಲಕ, ಎಂದರೆ ಗೋಲ್ಡ್ ಇಟಿಎಫ್ ಮೂಲಕ, ಹೂಡಿಕೆ ಮಾಧ್ಯಮವನ್ನಾಗಿ ಪರಿಗಣಿಸುವುದು ಲಾಭದಾಯಕವೆಂದೇ ಹೇಳಬಹುದು.
ಆನ್ಲೈನ್ ಮೂಲಕ ಚಿನ್ನ ಹೂಡಿಕೆಗೆ ತೊಡಗಿದಾಗ ನಮಗೆ ಲಾಭ ನಗದೀಕರಣದ ಸೌಕರ್ಯ ಅತ್ಯಧಿಕವಿರುತ್ತದೆ. ನಾವು ಬಯಸಿದಷ್ಟು ಸಣ್ಣ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುವ, ಮಾರುವ ಸೌಕರ್ಯ ನಮಗಿರುತ್ತದೆ. ಸಿಸ್ಟಮ್ಯಾಟಿಕ್ ಪ್ಲಾನ್ ಮೂಲಕ ಚಿನ್ನದ ಹೂಡಿಕೆಗೆ ತೊಡಗಿದರೆ, ಹೂಡಿಕೆಯ ಶಿಸ್ತು ನಮಗೆ ಒದಗುತ್ತದೆ.
ಅದೇ ಭೌತಿಕ ರೂಪದಲ್ಲಿ ಚಿನ್ನವನ್ನು ಹೂಡಿಕೆ ಉದ್ದೇಶದಿಂದ ಖರೀದಿಸಿದಾಗ, ವಿಶೇಷವಾಗಿ ಚಿನ್ನಾಭರಣ ರೂಪದಲ್ಲಿ ಖರೀದಿಸಿದಾಗ ನಮಗೇ ತೇಮಾನು, ಮೇಕಿಂಗ್ ಚಾರ್ಜ್, ಭದ್ರತಾ ವೆಚ್ಚ, ಮಾರಾಟದಲ್ಲಿನ ಅಡಚಣೆ, ಲಾಭ ನಗದೀಕರಣಕ್ಕೆ ಎದುರಾಗುವ ಅಡೆತಡೆಗಳು ಮುಂತಾಗಿ ಹಲವು ವಿಧದ ಸಮಸ್ಯೆಗಳು ಕಾಡುತ್ತವೆ ಎನ್ನುವುದು ನಿರ್ವಿವಾದ.
ಹಾಗಿರುವಾಗ ಆನ್ಲೈನ್ ನಲ್ಲಿ ಚಿನ್ನವನ್ನು ಖರೀದಿಸುವ ಗೋಲ್ಡ್ ಇಟಿಎಫ್ ಸ್ಕೀಮಿಗೆ ಸೇರುವುದಕ್ಕೆ ಮತ್ತು ಅದರ ಪ್ರಕಾರ ವ್ಯವಹಾರದಲ್ಲಿ ತೊಡಗುವುದಕ್ಕೆ ನಾವೇನು ಮಾಡಬೇಕು ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಇದು ಬಹಳ ಸರಳವಾದ ವಿಷಯ.
ಮೂಲಭೂತವಾಗಿ ನಮಗೆ ಬೇಕಿರುವುದು ಒಂದು ಟ್ರೇಡಿಂಗ್ ಅಕೌಂಟ್, ಡಿ ಮ್ಯಾಟ್ ಅಕೌಂಟ್, ಇಂಟರ್ ನೆಟ್ ಸೌಕರ್ಯ. ಹಾಗಿದ್ದರೂ ನಾವು ಗೋಲ್ಡ್ ಇಟಿಎಫ್ ಸ್ಕೀಮ್ ಒದಗಿಸುವ ಉತ್ತಮ ಕಂಪೆನಿಗಳ ವಿವರಗಳನ್ನು ಕೂಡ ಪಡೆದಿರಬೇಕಾಗುತ್ತದೆ. ಅಂತೆಯೇ ನಾವಿಲ್ಲಿ ಟಾಪ್ ಗೋಲ್ಡ್ ಇಟಿಎಫ್ ಗಳು ಯಾವುವು ಎಂಬುದನ್ನು ಪರಿಶೀಲಿಸಬಹುದಾಗಿದೆ. ಅವುಗಳು ಹೀಗಿವೆ :
1. ಎಕ್ಸಿಸ್ ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್.
2. ಐಡಿಬಿಐ ಗೋಲ್ಡ್ ಇಟಿಎಫ್.
3. ಯುಟಿಎಫ್ ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್.
4. ಕೆನರಾ ರೊಬೆಕೋ ಗೋಲ್ಡ್ ಇಟಿಎಫ್
5. ಎಚ್ ಡಿ ಎಫ್ ಸಿ ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್.
6. ಆದಿತ್ಯ ಬಿರ್ಲಾ ಸನ್ ಲೈಫ್ ಗೋಲ್ಡ್ ಇಟಿಎಫ್
7. ರಿಲಯನ್ಸ್ ಇಟಿಎಫ್ ಗೋಲ್ಡ್ ಬೀ ಇಇಎಸ್
8. ಕ್ವಾಂಟಂ ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್.
ಗೋಲ್ಡ್ ಇಟಿಎಫ್ ಗಳಲ್ಲಿ ಹಣ ತೊಡಗಿಸುವ ಬಗೆ ಹೇಗೆ ಎಂಬುದನ್ನು ನಾವಿಲ್ಲಿ ಸಂಕ್ಷಿಪ್ತವಾಗಿ ಗಮನಿಸಬಹುದು :
1. ಗೋಲ್ಡ್ ಇಟಿಎಫ್ ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್ ನ ಕ್ಯಾಶ್ ಮಾರ್ಕೆಟ್ ನಲ್ಲಿ ವ್ಯವಹರಿಸಬಹುದಾಗಿರುತ್ತದೆ.
2. ಇದನ್ನು ಯಾವುದೇ ಕಂಪೆನಿಯ ಶೇರುಗಳನ್ನು ಆನ್ಲೈನ್ನಲ್ಲಿ ಖರೀದಿಸಿ, ಮಾರುವ ಹಾಗೆ ನಿರ್ವಹಿಸಬಹುದಾಗಿದೆ.
3. ನಮಗೆ ಬೇಕಿರುವ ಶೇರು ಬ್ರೋಕರ್ಗಳೊಂದಿಗಿನ ಒಂದು ಟ್ರೇಡಿಂಗ್ ಅಕೌಂಟ್ ಮತ್ತು ಒಂದು ಡಿಮ್ಯಾಟ್ ಅಕೌಂಟ್.
4. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಥವಾ ಸಿಪ್ ಮೂಲಕವೂ ಚಿನ್ನ ಖರೀದಿಯನ್ನು ಪ್ರತೀ ತಿಂಗಳಿಗೊಂದಾವರ್ತಿ ನಿಶ್ಚಿತ ಮತ್ತು ಪೂರ್ವ ನಿರ್ಧರಿತ ಕಂತಿನ ಮೊತ್ತಕ್ಕೆ ಸಮನಾಗಿ ಮಾಡಬಹುದಾಗಿರುತ್ತದೆ.
5. ಅತೀ ಸಣ್ಣ ಪ್ರಮಾಣವಾಗಿ 1 ಗ್ರಾಂ ಚಿನ್ನವನ್ನೂ ಖರೀದಿಸಬಹುದಾಗಿರುತ್ತದೆ.
ಗೋಲ್ಡ್ ಇಟಿಎಫ್ ನಡಿ ಚಿನ್ನ ಖರೀದಿಸುವ ಹೆಜ್ಜೆಗಳು ಈ ರೀತಿ ಇರುತ್ತವೆ :
ಹೆಜ್ಜೆ 1 : ಸ್ಟಾಕ್ ಬ್ರೋಕರ್ ಜತೆಗೆ ಒಂದು ಆನ್ಲೈನ್ ಮತ್ತು ಡಿಮ್ಯಾಂಟ್ ಅಕೌಂಟ್ ತೆರೆಯುವುದು.
ಹೆಜ್ಜೆ 2 : ನಮ್ಮ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಬಳಸಿಕೊಂಡು ಬ್ರೋಕರ್ ನ ಆನ್ಲೈನ್ ಟ್ರೇಡಿಂಗ್ ಪೋರ್ಟಲ್ (ವೆಬ್ ಸೈಟ್) ಗೆ ಲಾಗಾನ್ ಆಗುವುದು.
ಹೆಜ್ಜೆ 3 : ನಮಗೆ ಬೇಕಿರುವ ಗೋಲ್ಡ್ ಇಟಿಎಫ್ ಅನ್ನು ಹೂಡಿಕೆಗಾಗಿ ಆಯ್ಕೆ ಮಾಡುವುದು (ಮೇಲೆ ಹೆಸರಿಸಲಾಗಿರುವ 8 ಟಾಪ್ ಸ್ಕೀಮುಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಮುನ್ನಡೆಯುವುದು).
ಹೆಜ್ಜೆ 4 : ನಿರ್ದಿಷ್ಟ ಸಂಖ್ಯೆಯ ಗೋಲ್ಡ್ ಯೂನಿಟ್ಗಳ ಖರೀದಿಗೆ ಬೈ ಆರ್ಡರ್ (ಖರೀದಿ ಆದೇಶ) ಪ್ಲೇಸ್ ಮಾಡುವುದು.
ಹೆಜ್ಜೆ 5: ಟ್ರೇಡಿಂಗ್ ಅಕೌಂಟ್ ಜತೆಗೆ ಜೋಡಿಸಲ್ಪಟ್ಟಿರುವ ನಮ್ಮ ಉಳಿತಾಯ ಖಾತೆಯಿಂದ ಗೋಲ್ಡ್ ಇಟಿಎಫ್ ಯೂನಿಟ್ ಗಾಗಿ ಒದಗಿಸಲಾಗಿರುವ ಹಣವನ್ನು ವೆಬ್ ಸಿಸ್ಟಮ್ ತನ್ನಿಂತಾನೇ ಡೆಬಿಟ್ ಮಾಡುವುದನ್ನು ಗಮನಿಸಬಹುದಾಗಿರುತ್ತದೆ.
ನಮಗೆಲ್ಲ ತಿಳಿದಿರುವ ಹಾಗೆ ಭೌತಿಕ ರೂಪದಲ್ಲಿ ಚಿನ್ನವನ್ನು ಖರೀದಿಸುವಾಗ ಸಂಪತ್ತು ತೆರಿಗೆ ಅನ್ವಯವಾಗುತ್ತದೆ. ಆದರೆ ಗೋಲ್ಡ್ ಇಟಿಎಫ್ ನಲ್ಲಿ ಇದು ಅನ್ವಯವಾಗುವುದಿಲ್ಲ.
ಹಾಗಿದ್ದರೂ ಗೋಲ್ಡ್ ಇಟಿಎಫ್ ನಲ್ಲಿ ಚಿನ್ನವನ್ನು ಮೂರು ವರ್ಷ ಮೀರಿ ಹೊಂದಿದ ಸಂದರ್ಭದಲ್ಲಿ ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ವಯವಾಗುತ್ತದೆ. ಏಕೆಂದರೆ ಗೋಲ್ಡ್ ಇಟಿಎಫ್ ನ ಚಿನ್ನವನ್ನು ಶೇರುಗಳಂತೆ ಪರಿಗಣಿಸಲಾಗುತ್ತದೆ; ಅಂತೆಯೇ ಒಂದು ವರ್ಷ ಮೀರಿದ ಅವಧಿಗೆ ಅಭೌತಿಕ ಚಿನ್ನವನ್ನು ಹೊಂದಿ ಅದನ್ನು ಮಾರುವಾಗ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ವಯವಾಗುತ್ತದೆ.