ಬಾಲ್ಯದ ನೆನಪುಗಳು ಎಷ್ಟು ಚಂದವಲ್ಲವೇ, ಎಲ್ಲರಿಗೂ ತಮ್ಮ ಶಾಲಾಜೀವನದಲ್ಲಿ ಸಾಕಷ್ಟು ಸವಿನೆನಪುಗಳು ಬಂದುಹೋಗುತ್ತವೆ. ಒಮ್ಮೆಯಾದರೂ ಟೀಚರ್ ಆಗಬೇಕೆಂಬ ಯೋಚನೆ ಬರುವುದು, ಅಮ್ಮನ ಸೀರೆಯೋ, ಅಕ್ಕನ ಶಾಲಾನ್ನೋ ಹಾಕಿಕೊಂಡು ತಮ್ಮ ಮೆಚ್ಚಿನ ಟೀಚರನ್ನು ಅನುಕರಣೆ ಮಾಡುವುದು- ಹೀಗೆ.
ಮೊನ್ನೆ ನೆಂಟರೊಬ್ಬರು ಮನೆಗೆ ಬಂದಾಗ ಚಹಾ ಮಾಡಿಕೊಟ್ಟೆ. ಅವರು, “ಆಹಾ! ಎಷ್ಟು ಚೆನ್ನಾಗಿ ಚಹಾ ಮಾಡುತ್ತೀಯಾ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆ ಕ್ಷಣ ನನ್ನ ಬಾಲ್ಯದ ನೆನಪನ್ನು ಮೆಲುಕು ಹಾಕುವಂತೆ ಮಾಡಿತು.
ನಾನು ಚಹಾ ಮಾಡಲು ಕಲಿತದ್ದು 5ನೇ ತರಗತಿಯಲ್ಲಿ. ಒಮ್ಮೆ ಇಂಗ್ಲಿಷ್ ಪಾಠದಲ್ಲಿ ಹೌ ಟು ಮೇಕ್ ಟೀ ಎಂಬ ಚಟುವಟಿಕೆ ಇತ್ತು. ಆಗ ನಮ್ಮ ಟೀಚರ್, “ಇವತ್ತಿನಿಂದ ಪ್ರತಿಯೊಬ್ಬರೂ ತಾವೇ ಮನೆಯಲ್ಲಿ ಚಹಾ ತಯಾರಿ ಮಾಡಬೇಕು. ನಾನು ಯಾವತ್ತಾದರೂ ನಿಮ್ಮ ಮನೆಗೆ ಬಂದರೆ ನೀವೇ ಮಾಡಿದ ಚಹಾವನ್ನು ಕುಡಿದು ಹೇಗೆ ಇದೆ ರುಚಿ ಎಂದು ಹೇಳುತ್ತೇನೆ’ ಎಂದರು. ಅಂದೇ ಮನೆಗೆ ಓಡಿದವಳು, “ಅಮ್ಮಾ ಇವತ್ತು ನಾನೇ ಚಹಾ ಮಾಡುತ್ತೇನೆ ನಮ್ಮ ಟೀಚರ್ ಬರುತ್ತಾರೆ’ ಎಂದು ಹೇಳಿ ಚಹಾ ಮಾಡಲು ಕಲಿತೆ. ಟೀಚರ್ ಬರುವುದನ್ನು ಕಾಯುತ್ತ ಆವತ್ತಿನ ಚಹಾವನ್ನು ನಾನೇ ಕುಡಿದುಬಿಟ್ಟೆ. ಟೀಚರ್ ಒಂದು ದಿನವೂ ನಾನು ಮಾಡಿದ ಚಹಾದ ರುಚಿ ನೋಡಲು ಬರಲಿಲ್ಲ.
ಆದರೆ, ಅಂದಿನಿಂದ ಈವತ್ತಿನವರೆಗೂ ಚಹಾ ಮಾಡುವ ಕೆಲಸ ಮಾತ್ರ ನನಗೆ ಖಾಯಂ ಆಗಿಬಿಟ್ಟಿದೆ.
ದೀಪಶ್ರೀ
ದ್ವಿತೀಯ ಎಂ.ಎಸ್ಸಿ. ಮಣಿಪಾಲ ಅಕಾಡೆಮಿ ಆಫ್ ಹೈಯರ್
ಎಜುಕೇಶನ್, ಮಣಿಪಾಲ