Advertisement

MUDA Case: ಯಾವುದೇ ಕ್ಷಣ ಇ.ಡಿ. ದಾಳಿ?

07:34 AM Oct 02, 2024 | Team Udayavani |

ಬೆಂಗಳೂರು: ಜಮೀನಿನ ಬದಲಿಗೆ ನಿವೇಶನ ಹಂಚಿಕೆ ಮಾಡಿರುವುದು ನನ್ನ ಪ್ರಕಾರ ಹಣಕಾಸು ಅವ್ಯವಹಾರ (ಮನಿ ಲಾಂಡರಿಂಗ್‌) ಆಗುವುದಿಲ್ಲ. ಈ ಪ್ರಕರಣದಲ್ಲಿ ನನ್ನ ಪಾತ್ರವೇನು? ಇದಕ್ಕೆ ಹಣ ಅವ್ಯವಹಾರ ತಡೆ ಕಾಯ್ದೆ (ಪಿಎಂಎಲ್‌ಎ) ಅನ್ವಯಿಸುವುದು ಹೇಗೆ? ಇದರಲ್ಲಿ ಇ.ಡಿ. ಹೇಗೆ ಬಂತು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಪ್ರಕರಣಕ್ಕೂ ಹಾಗೂ ನನ್ನದಕ್ಕೂ ವ್ಯತ್ಯಾಸವಿದೆ. ಇದರಲ್ಲಿ ನನ್ನ ಪಾತ್ರವಿಲ್ಲ.

ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು. ನಾನು ಡಿನೋಟಿಫೈ ಮಾಡಿಲ್ಲ, ಮನಿ ಲಾಂಡರಿಂಗ್‌ ಮಾಡಿಲ್ಲ. ನಾನು ಅತ್ಮಸಾಕ್ಷಿಯಾಗಿ ಕೆಲಸ ಮಾಡುತ್ತೇನೆ, ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದರು.

ಪತ್ನಿ ಪತ್ರದ ಬಗ್ಗೆ ಮಾಹಿತಿ ಇಲ್ಲ:ನನ್ನ ಪತ್ನಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಪತ್ರ ಬರೆದಿರುವ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ನನ್ನೊಂದಿಗೆ ಚರ್ಚೆಯನ್ನೂ ಮಾಡಿಲ್ಲ. ಅವರ ಸಹೋದರ ಮಲ್ಲಿಕಾರ್ಜುನಸ್ವಾಮಿ ಜಮೀನಿನ ಮಾಲಕರಾಗಿದ್ದರು. ಉಡುಗೊರೆ ರೂಪದಲ್ಲಿ ನನ್ನ ಪತ್ನಿಗೆ 3.16 ಎಕರೆ ಜಮೀನು ನೀಡಿದ್ದರು. ಅದನ್ನು ಮುಡಾದವರು ಒತ್ತುವರಿ ಮಾಡಿಕೊಂಡು ನಿವೇಶನ ರಚಿಸಿ ಮಾರಾಟ ಮಾಡಿದ್ದರು. ಅದಕ್ಕೆ ಬದಲಿ ನಿವೇಶನ ಕೋರಿದ್ದು, ವಿಜಯನಗರದ 3 ಮತ್ತು 4ನೇ ಹಂತದಲ್ಲಿ ನಿವೇಶನ ಮಂಜೂರು ಮಾಡಲಾಗಿತ್ತು. ನನ್ನ ಪತ್ನಿ ವಿಜಯನಗರದಲ್ಲೇ ನೀಡುವಂತೆ ಕೇಳಿರಲಿಲ್ಲ. ಈಗ ಅದು ದೊಡ್ಡ ವಿವಾದವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮುಡಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಈ ಬಾರಿ ಬಚಾವಾಗುವ ಲಕ್ಷಣಗಳಿಲ್ಲ. ರಾಜೀನಾಮೆ ನೀಡದೆ ಗತ್ಯಂತರವಿಲ್ಲ. ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಇ.ಡಿ. ಇಸಿಐಆರ್‌ ದಾಖಲಿಸಿದೆ. ಹೀಗಾಗಿ ಅವರು ಯಾವುದೇ ಕ್ಷಣದಲ್ಲೂ ರಾಜೀನಾಮೆ ನೀಡಬಹುದು.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

ಯಾವುದೇ ಕ್ಷಣ ಇ.ಡಿ. ದಾಳಿ?
ಬೆಂಗಳೂರು: ಮುಡಾ ಹಗರಣದ ತನಿಖೆಗೆ ಜಾರಿ ನಿರ್ದೇಶ ನಾಲಯ (ಇ.ಡಿ.) ಕಾಲಿರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೀಘ್ರದಲ್ಲೇ ಆಘಾತ ನೀಡುವ ಎಲ್ಲ ಲಕ್ಷಣಗಳಿವೆ. ಯಾವುದೇ ಕ್ಷಣದಲ್ಲಾದರೂ ಸಿದ್ದರಾಮಯ್ಯ ಅವರ ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆ ಕಲೆಹಾಕುವ ಸಾಧ್ಯತೆಗಳಿವೆ.

ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಅವರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಈಗಾಗಲೇ ತನಿಖೆ ಪ್ರಾರಂಭಿಸಿರುವ ಲೋಕಾ ಯುಕ್ತ ಪೊಲೀಸರಿಂದ ಇ.ಡಿ. ಅಧಿಕಾರಿ ಗಳು ಪ್ರಕರಣದ ಪ್ರಾಥಮಿಕ ಮಾಹಿತಿ ಕೋರಿದ್ದಾರೆ ಎನ್ನಲಾಗಿದೆ. ಜತೆಗೆ ಮುಡಾ ಅಕ್ರಮ ನಡೆದಿದೆ ಎನ್ನಲಾದ ಅವಧಿಯಲ್ಲಿ ಅದರಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಿದೆ.

ಇ.ಡಿ. ಮುಂದಿನ ನಡೆಯೇನು?
ಯಾವುದೇ ಪ್ರಕರಣದಲ್ಲಾದರೂ ಇಸಿಐಆರ್‌ ದಾಖಲಾಗುತ್ತಿದ್ದಂತೆ ಮೊದಲಿಗೆ ದಾಖಲೆಗಳನ್ನು ಇ.ಡಿ. ಕಲೆಹಾಕುತ್ತದೆ. ಅನಂತರ ದಾಖಲೆ ಪರಿಶೀಲಿಸಿ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡುತ್ತದೆ. ಆರೋಪಿ ಗಳ ವಿರುದ್ಧ ಬಲವಾದ ಸಾಕ್ಷ್ಯಗಳಿದ್ದರೆ, ವಿಚಾರಣೆಗೆ ಆರೋಪಿಗಳು ಸಹಕರಿಸದಿದ್ದರೆ ಅಥವಾ ಸೂಕ್ತ ಮಾಹಿತಿ ನೀಡದಿದ್ದರೆ ತನಿಖಾಧಿಕಾರಿಗಳು ಆರೋಪಿಗಳನ್ನು ಬಂಧಿಸಬಹುದಾಗಿದೆ.

ಇ.ಡಿ. ಪ್ರವೇಶ ಏಕೆ?
-ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರಿನ ಮೇರೆಗೆ ಇ.ಡಿ.ಯಿಂದ ಎಫ್ಐಆರ್‌ ದಾಖಲು
-ಪಿಎಂಎಲ್‌ಎ ಕಾಯ್ದೆಯಡಿ ಇಸಿಐಆರ್‌ ದಾಖಲು
-ಮುಡಾ ಹಗರಣದಲ್ಲಿ ಬೇನಾಮಿ ಅವ್ಯವ ಹಾರ, ಅಕ್ರಮ ಹಣ ವರ್ಗಾವಣೆ ಕುರಿತು ಮಾಹಿತಿ ಸಂಗ್ರಹ ಆರಂಭ
-ಶ್ರೀರಂಗಪಟ್ಟಣ ಕ್ಷೇತ್ರದ ಅಭಿ  ವೃದ್ಧಿಗೆ ಕಾನೂನುಬಾಹಿರ ವಾಗಿ ಮುಡಾ ಹಣ ಬಳಸಿದ ಆರೋಪದ ಹಿನ್ನೆಲೆ ಯಲ್ಲೂ ಇ.ಡಿ. ಪ್ರವೇಶ

ಮುಡಾದಿಂದ ಪಡೆಯಲಾಗಿದ್ದ ನಿವೇಶನಗಳನ್ನು ಏಕಾಏಕಿ ಹಿಂದಿರುಗಿಸಲು ಹೇಳಿಕೊಟ್ಟವರು ಯಾರು? ಇಷ್ಟೆಲ್ಲ ಕಸರತ್ತು ಏಕೆ ಬೇಕಿತ್ತು? ಕಳ್ಳತನ ಮಾಡಿ ತಪ್ಪಾಯಿತು ಎಂದರೆ ಬಿಡಲು ಸಾಧ್ಯವೇ? ನನ್ನನ್ನು ಹಿಟ್‌ ಆ್ಯಂಡ್‌ ರನ್‌ ಎನ್ನುವ ನೀವು ಯೂಟರ್ನ್ ಸಿದ್ದರಾಮಯ್ಯನಾ?
-ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next