Advertisement

ಹೂಡಿಕೆ ಮೂಲಕ ಹಣ ಸಂಪಾದಿಸುವುದು ಹೇಗೆ ? ಇಲ್ಲಿವೆ ಹಲವು ಉಪಾಯ !

07:16 PM Apr 13, 2020 | udayavani editorial |

ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಎಲ್ಲಿ, ಹೇಗೆ, ಯಾವಾಗ ಹೂಡಿಕೆ ಮಾಡಬೇಕು ಎಂಬ ನಿಖರ ತಿಳಿವಳಿಕೆ ಅನೇಕರಿಗೆ ಇರುವುದಿಲ್ಲ; ಆದರೆ ಹನಿ ಹನಿಯಾಗಿ ಕೂಡಿಡುವ ಹಣವನ್ನು ಅತ್ಯಧಿಕ ಲಾಭ ತರುವ ಮಾಧ್ಯಮಗಳಲ್ಲಿ ಹೂಡುವುರಲ್ಲೇ ಬುದ್ಧಿವಂತಿಕೆ ಇರುತ್ತದೆ. 

Advertisement

ಅನೇಕರು ತಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲೇ ಹಣ ಇರಿಸುವುದನ್ನು ಅಥವಾ ಉಳಿಯ ಬಿಡುವುದನ್ನು ಹೂಡಿಕೆ ಎಂದು ಭಾವಿಸುತ್ತಾರೆ. ಇದಕ್ಕೆ ಕೇವಲ ಅಜ್ಞಾನವೊಂದೇ ಕಾರಣವಲ್ಲ; ನಮಗೆ ಬೇಕೆಂದಾಗ ಹಣ ನಮ್ಮ ಕೈಗೆ ಸಿಗುವಂತಿರಬೇಕು ಎಂಬುದೇ ಅವರ ವಾದವಾಗಿರುತ್ತದೆ. ಇದು ನಿಜವೂ ಹೌದು; ನಮ್ಮ ಕಷ್ಟಕ್ಕೆ ಒದಗಬೇಕಾದ ನಮ್ಮ ಹಣ ನಮಗೆ ಸಕಾಲದಲ್ಲಿ ಸಿಗದಿದ್ದರೆ ಏನು ಪುರುಷಾರ್ಥ ಸಾಧಿಸಿದಂತಾಯಿತು ಎಂಬುದೇ ಅನೇಕರ ಅಭಿಪ್ರಾಯ.

ಬ್ಯಾಂಕ್ ಉಳಿತಾಯ ಖಾತೆಯಲ್ಲಿ  (SB ಅಕೌಂಟ್) ಇರಿಸುವ ಅಥವಾ ಉಳಿಸುವ ಹಣಕ್ಕೆ ಹೆಚ್ಚೆಂದರೆ ಶೇ.4ರ ಬಡ್ಡಿ ಸಿಗುತ್ತದೆ. ಬಹುತೇಕ ಬ್ಯಾಂಕ್‌ ಗಳಲ್ಲಿ ಇದು ಏಕ ಪ್ರಕಾರವಾಗಿದೆ.

ಬ್ಯಾಂಕ್ ಉಳಿತಾಯ ಖಾತೆಯಲ್ಲಿ ನಮ್ಮ ಹಣಕ್ಕೆ ಸಿಗುವ ಶೇ.4ರ ಬಡ್ಡಿಯಿಂದ ನಿಜಕ್ಕಾದರೆ ನಮಗೆ ಯಾವ ಲಾಭವೂ ಇಲ್ಲ. ಏಕೆಂದರೆ ಹಣದುಬ್ಬರವೇ ನಮ್ಮ ಉಳಿತಾಯದ ಬಹುದೊಡ್ಡ ಶತ್ರುವಾಗಿದೆ. ಹಣದುಬ್ಬರದಿಂದ ರೂಪಾಯಿ ಖರೀದಿ ಮೌಲ್ಯ ಕೊರೆದು ಹೋಗುವುದು ಎಲ್ಲರಿಗೂ ತಿಳಿದಿರುವ ವಿಷಯ.

ವರ್ಷದ ಹಿಂದೆ ನಮ್ಮ ಬಳಿ ಇದ್ದ ಹಣದ ಖರೀದಿ ಸಾಮರ್ಥ್ಯ ಹಣದುಬ್ಬರದಿಂದಾಗಿ ಸಾಕಷ್ಟು ಕೊರೆದು ಹೋಗಿರುತ್ತದೆ. ರೂಪಾಯಿಯ ಖರೀದಿ ಬಲವನ್ನು ಹೀಗೆ ನಿರಸನ ಮಾಡುವ ಹಣದುಬ್ಬರದ ಹೊಡೆತದಿಂದ ತಪ್ಪಿಸಿಕೊಳ್ಳಲು ನಾವು ನಮ್ಮ ಕಷ್ಟದ ಗಳಿಕೆಯನ್ನು ಹೆಚ್ಚಿನ ಲಾಭಕ್ಕಾಗಿ ಯೋಗ್ಯ ಮಾಧ್ಯಮಗಳಲ್ಲಿ, ಆಕರ್ಷಕ ಇಳುವರಿಯಾಗಿ, ಆದರೆ ಸಾಕಷ್ಟು ಭದ್ರತೆ ಇರುವಲ್ಲಿ, ಹೂಡಿಕೆ ಮಾಡುವುದರಲ್ಲೇ ಬುದ್ಧಿವಂತಿಕೆ ಇರುತ್ತದೆ. ಆದುದರಿಂದ ನಮ್ಮ ಕೈಯಲ್ಲಿರುವ ಹಣ ನಮಗೆ ಒಡ್ಡುವ ಮುಖ್ಯ ಸವಾಲೆಂದರೆ ಅದರ ಮೌಲ್ಯವನ್ನು ಕಾಪಿಡುವ ಮತ್ತು ಹೆಚ್ಚಿಸುವ ರೀತಿಯಲ್ಲಿ ಅದರ ಹೂಡಿಕೆ ಮಾಡುವುದು !

Advertisement

ಬ್ಯಾಂಕ್ ನಿರಖು ಠೇವಣಿಗಳು ಅಥವಾ ಎಫ್ ಡಿ ಗಳು ಜನಸಾಮಾನ್ಯರಿಗೆ ಅತ್ಯುತ್ತಮ ಹೂಡಿಕೆ ಮಾಧ್ಯಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಏರುವ ಹಣದುಬ್ಬರವನ್ನು ಹತ್ತಿಕ್ಕುವ ಸಲುವಾಗಿ ಆರ್ಬಿಐ ಸಾಲದ ಮೇಲಿನ ಬಡ್ಡಿ ದರಗಳನ್ನು ಏರಿಸುವ ಠೇವಣಿ ಮೇಲಿನ ಬಡ್ಡಿ ದರವನ್ನೂ ಏರಿಸುತ್ತದೆ ಎಂಬುದು ಗಮನಾರ್ಹ. ಪ್ರಕೃತ 1ರಿಂದ 10 ವರ್ಷ ವರೆಗಿನ ಬ್ಯಾಂಕ್ ಎಫ್ ಡಿ ಮೇಲಿನ ಬಡ್ಡಿ ಶೇ.7.50 ವರೆಗೂ ಇದೆ. ಕೆಲವು ಖಾಸಗಿ ಬ್ಯಾಂಕುಗಳ ಇನ್ನೂ ಹೆಚ್ಚು ಬಡ್ಡಿ ನೀಡುತ್ತವೆ. ಒಂದು ಲಕ್ಷ ರೂ. ವರೆಗಿನ ಠೇವಣಿ ಮೇಲೆ ವಿಮೆಯೂ ಇರುತ್ತದೆ.

Sweep-in fixed deposits: ಇದಕ್ಕೆ ಮನಿ ಮಲ್ಟಿಪ್ಲಯರ್, 2-ಇನ್-ಒನ್ ಅಕೌಂಟ್ ಎಂಬ ಹೆಸರೂ ಇದೆ. ಬ್ಯಾಂಕ್ ಸೇವಿಂಗ್ಸ್ ಖಾತೆಗೆ ಹೋಲಿಸಿದರೆ ಈ ಬಗೆಯ ಠೇವಣಿಗೆ ಶೇ.6.5ರಿಂದ ಶೇ.7.5ರ ಬಡ್ಡಿ ಇರುತ್ತದೆ. ನಮ್ಮ ಉಳಿತಾಯ ಖಾತೆಯಲ್ಲಿನ ಮೊತ್ತ ಒಂದು ನಿರ್ದಿಷ್ಟ ಮೊತ್ತವನ್ನು ಮೀರಿದಾಗ ಆ ಹೆಚ್ಚುವರಿ ಮೊತ್ತವು ತನ್ನಿಂತಾನೇ ಎಫ್ ಡಿ ಆಗಿ ಪರಿವರ್ತಿತವಾಗುತ್ತದೆ. ಹಾಗೆಂದು ಅದು ಲಾಕ್ ಆಗುವುದಿಲ್ಲ; ನಗದೀಕರಣಕ್ಕೆ ಯಾವ ಅಡ್ಡಿಯೂ ಇರುವುದಿಲ್ಲ. ಆದರೆ ಹಿರಿಯ ನಾಗರಿಕರಿಗೆ ಮಾತ್ರ ಈ ಬಗೆಯ ಸ್ವೀಪ್ ಇನ್ ಎಫ್ ಡಿ ಯ ಹೆಚ್ಚುವರಿ ಬಡ್ಡಿ ಸಿಗುವುದಿಲ್ಲ !

ಡೆಟ್ ಮ್ಯೂಚುವಲ್ ಫಂಡ್ ಸ್ಕೀಮುಗಳು :  ಈ ಸ್ಕೀಮುಗಳ ನಿರ್ವಾಹಕರು ನಾವು ಹೂಡಿದ ಹಣವನ್ನು ಶೇರುಗಳಲ್ಲಿ ತೊಡಗಿಸುವುದಿಲ್ಲ; ಬದಲು ಅವುಗಳನ್ನು ನಿಖರ ಮತ್ತು ಖಚಿತ ಬಡ್ಡಿ ಆದಾಯ ಇರುವ ಕಾರ್ಪೊರೇಟ್ ಬಾಂಡ್, ಸರಕಾರಿ ಸೆಕ್ಯುರಿಟಿಗಳು, ಟ್ರೆಶರಿ ಬಿಲ್ಗಳು, ವಾಣಿಜ್ಯ ಭದ್ರತಾ ಪತ್ರಗಳು ಮತ್ತು ಇತರ ಬಗೆಯ ಹಣಕಾಸು ಭದ್ರತಾ ಪತ್ರಗಳ ಮೇಲೆ ಹೂಡುತ್ತಾರೆ. ಮೂರು ವರ್ಷಗಳ ಬಳಿಕ ಇವುಗಳು ಇಂಡೆಕ್ಸೇಶನ್ ಬೆನಿಫಿಟ್ ಗೆ ಅರ್ಹವಾಗುತ್ತವೆ ಮತ್ತು ಶೇ.20ರ ತೆರಿಗೆಗೆ ಒಳಪಡುತ್ತವೆ.

ಪ್ರಕೃತ ಮಧ್ಯಮಾವಧಿಯ ಬಾಂಡ್ ಫ‌ಂಡ್‌ ಗಳು  1, 3 ಮತ್ತು 5 ವರ್ಷದವುಗಳಾಗಿದ್ದು ಇವು ಅನುಕ್ರಮವಾಗಿ ಶೇ.7, ಶೇ.8.5 ಮತ್ತು ಶೇ.9ರ ಇಳುವರಿಯನ್ನು ಕೊಡುತ್ತವೆ.

ಶೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ರೂಪಿಸಿರುವ ಈಚಿನ ನಿಯಮಗಳ ಪ್ರಕಾರ 16 ವರ್ಗದ ಡೆಟ್ ಫಂಡ್ ಗಳು ಪ್ರಕೃತ ಮಾರುಕಟ್ಟೆಯಲ್ಲಿ ಇವೆ. ಹೂಡಿಕೆದಾರರು ತಮ್ಮ ಅನುಕೂಲಾನುಸಾರದ ಅವಧಿಯ ಸ್ಕೀಮನ್ನು ಆಯ್ದುಕೊಂಡು ಹೂಡಿಕೆಯನ್ನು ಮಾಡಬಹುದು.

ಈಕ್ವಿಟಿ ಮ್ಯೂಚುವಲ್ ಫ‌ಂಡ್‌ ಗ​​​​​​​ಳಲ್ಲಿ ಹೂಡಿಕೆ : ಈಕ್ವಿಟಿ ಮ್ಯೂಚುವಲ್ ಫ‌ಂಡ್‌ ಗ​​​​​​​ಳಲ್ಲಿ ಹಣ ತೊಡಗಿಸುವುದು ಅತ್ಯಾಕರ್ಷಕವಾಗಿರುತ್ತದೆ. ಏಕೆಂದರೆ ಇಲ್ಲಿ ಒಂದು, ಮೂರು ಮತ್ತು ಐದು ವರ್ಷಗಳ ಹೂಡಿಕೆಯ ಮೇಲೆ ಸಿಗುವ  ಇಳುವರಿಯು ಅನುಕ್ರಮವಾಗಿ  ಶೇ.9, ಶೇ 12, ಮತ್ತು  ಶೇ.15ರಷ್ಟು ಇರುತ್ತದೆ.

ಮಾರುಕಟ್ಟೆ ನಿಯಂತ್ರಕ ಸೆಬಿಯ ನಿಮಯಗಳ ಪ್ರಕಾರ ಈಕ್ವಿಟಿ ಮ್ಯೂಚುವಲ್ ಫಂಡ್ ಕಂಪೆನಿಗಳು ಈಕ್ವಿಟಿ ಶೇರುಗಳು ಮತ್ತು ತತ್ಸಂಬಂಧಿ ಹಣಕಾಸು ಭದ್ರತೆಗಳ ಮೇಲೆ ತಮ್ಮ ಶೇ.65ರಷ್ಟು ಬಂಡವಾಳವನ್ನು ತೊಡಗಿಸಬೇಕಾಗುತ್ತದೆ. ಹಾಗಾಗಿ ಮಾರುಕಟ್ಟೆಯ ಏರಿಳಿತಗಳ ಹೊರತಾಗಿಯೂ ಈಕ್ವಿಟಿ ಮ್ಯೂಚುವಲ್ ಫ‌ಂಡ್‌ ಗಳು ದೀರ್ಘಾವಧಿಯಲ್ಲಿ  ಗರಿಷ್ಠ ಲಾಭವನ್ನು ತರುತ್ತವೆ.

ಈಕ್ವಿಟಿ ಮ್ಯೂಚುವಲ್ ಫ‌ಂಡ್‌ ಗಳಿಗೆ ಹೋಲಿಸಿದರೆ, ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳು ಅಂದರೆ ಇಟಿಎಫ್ ಗಳು ಭಿನ್ನವಾಗಿ ಕಾರ್ಯ ನಿರ್ವಹಿಸುತ್ತವೆ. ಮ್ಯೂಚುವಲ್ ಫ‌ಂಡ್‌ ಗಳನ್ನು  ಮಾರುಕಟ್ಟೆ ಬಂಡವಳೀಕರಣದ ನೆಲೆಯಲ್ಲಿ ವರ್ಗೀಕರಿಸಲಾಗುತ್ತದೆ.

ಚಿನ್ನದ ಮೇಲೆ ಹೂಡಿಕೆ : ಚಿನ್ನದ ಮೇಲಿನ ಹೂಡಿಕೆಗಳು 1, 2 ಮತ್ತು 3 ವರ್ಷದ ನೆಲೆಯಲ್ಲಿ ಶೇ.10, ಶೇ.5 ಮತ್ತು ಶೇ.2.7ರ ಅನುಕ್ರಮ ಇಳುವರಿಯನ್ನು ಕೊಡುತ್ತವೆ. ಆಭರಣ ರೂಪದಲ್ಲಿ ಚಿನ್ನವನ್ನು ಹೊಂದುವುದು ಹೂಡಿಕೆಯ ದೃಷ್ಟಿಕೋನದಿಂದ ದುಬಾರಿಯೂ ತುಟ್ಟಿಯೂ ಆಗಿರುತ್ತದೆ.

ನಾಣ್ಯ, ಬಿಸ್ಕತ್ತು, ಬಾರ್ ರೂಪದಲ್ಲಿ ಚಿನ್ನವನ್ನು ಹೂಡಿಕೆಯಾಗಿ ಇರಿಸಿಕೊಂಡು ವರ್ಷದ ಅವಧಿಯೊಳಗೆ ಮಾರಿದರೆ ಶೇ.10ರ ಲಾಭ ಸಿಗುವುದುಂಟು. ಚಿನ್ನವನ್ನು ಗೋಲ್ಡ್ ಇಟಿಎಫ್ ಸ್ಕೀಮ್ ಮೂಲಕವೂ ಅಭೌತಿಕವಾಗಿ ಖರೀದಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next