ಸಾಧಾರಣವಾಗಿ ಭಾರತೀಯ ಅಡುಗೆಗಳಲ್ಲಿ ಬಳಸುವ ಆಹಾರ ಪದಾರ್ಥಗಳಲ್ಲಿ ಮೆಂತೆಯೂ ಒಂದು. ಕಹಿ ರುಚಿಯನ್ನು ಹೊಂದಿರುವ ಮೆಂತೆಯಿಂದ ದೇಹಕ್ಕೆ ಹಲವಾರು ಲಾಭ ಇದೆ ಎಂದು ತಿಳಿದವರು ವಿರಳ. ಹೆಚ್ಚು ತಂಪಾಗಿರುವ ಈ ಧಾನ್ಯದಿಂದ ಹಲವು ಆಹಾರಗಳನ್ನು ತಯಾರಿಸುತ್ತಾರೆ. ಇದರಿಂದ ದೇಹಾರೋಗ್ಯ ಹೆಚ್ಚುತ್ತದೆ. ಡಯಾಬಿಟೀಸ್ ಇತ್ತೀಚೆಗೆ ಎಲ್ಲರನ್ನು ಕಾಡುವ ರೋಗಗಳಲ್ಲಿ ಒಂದು. ಒಮ್ಮೆ ಆ ರೋಗ ಕಾಣಿಸಿಕೊಂಡರೆ ಅದನ್ನು ಮತ್ತೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅಸಾಧ್ಯವಾಗಿದೆ. ಆದರೆ ಅದು ಹೆಚ್ಚದಂತೆ ತಡೆಗಟ್ಟಬಹುದು. ಡಯಾಬಿಟೀಸ್ ರೋಗ ಹೆಚ್ಚುತ್ತಾ ಹೋದಂತೆ ಅದು ಇತರ ರೋಗಗಳಿಗೆ ಆಹ್ವಾನ ನೀಡುತ್ತಾ ಹೋಗುತ್ತದೆ. ಆದ್ದರಿಂದ ಡಯಾಬಿಟೀಸ್ ಹೆಚ್ಚದಂತೆ ತಡೆಯಬೇಕು. ಅದಕ್ಕೆ ಮೆಂತೆ ಕಾಳು ಕೂಡ ಸಹಕಾರಿ.
ಮೆಂತೆ ಕಾಳಿನಲ್ಲಿ ಸೊಲ್ಯುಬರ್ ಫೈಬರ್ ಅಂಶವು ಅಧಿಕವಾಗಿದ್ದು ಇದು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಸಹಕಾರಿ. ಕಾರ್ಬೋಹೈಡ್ರೇಟ್ಸ್ ನ ಪ್ರಮಾಣವನ್ನು ನಿಯಂತ್ರಿಸಲು ಇದು ಸಹಕಾರಿ. ಮೆಂತೆ ಕಾಳು ಟೈಪ್ 1 ಹಾಗೂ ಟೈಪ್ 2 ಮಧುಮೇಹ ನಿಯಂತ್ರಣಕ್ಕೆ ಸಹಕಾರಿ. ಇದು ರಕ್ತದಲ್ಲಿರುವ ಗ್ಲುಕೋಸ್‌ನ ಅಂಶವನ್ನು ಕಡಿಮೆಗೊಳಿಸುತ್ತದೆ.
ಪ್ರತಿನಿತ್ಯ 15 ಗ್ರಾಂ. ನಷ್ಟು ಮೆಂತೆಕಾಳಿನ ಹುಡಿಯನ್ನು ಆಹಾರದ ಜತೆ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಇದನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಅದರ ನೀರು ಕುಡಿಯುವುದು ಅಥವಾ ಮೆಂತೆಯನ್ನು ಬೆಲ್ಲ ಸೇರಿಸಿ ಅರೆದು ತಿನ್ನವುದರಿಂದ ಡಯಾಬಿಟೀಸ್ ಕಡಿಮೆಯಾಗುತ್ತದೆ.
ಮೆಂತೆ ಕಾಳಿನ ಕಷಾಯ
ಒಂದು ಹಿಡಿ ಮೆಂತೆ ಕಾಳನ್ನು ಹುರಿದು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದಲೂ ಮಧುಮೇಹಕ್ಕೆ ಔಷಧವಾಗಿ ಬಳಸಬಹುದು. ಮೆಂತೆ ಕಾಳು ಕೇವಲ ಮಧುಮೇಹ ನಿಯಂತ್ರಣಕ್ಕೆ ಮಾತ್ರವಲ್ಲ ಇತರ ಕಾಯಿಲೆಗಳಿಗೂ ಔಷಧವಾಗಿ ಬಳಸಲ್ಪಡುತ್ತದೆ.