Advertisement
ದಾಸನಾಗು, ವಿಶೇಷನಾಗು ಎಂಬುದು ದಾಸರ ಪದ್ಯದ ಒಂದು ಸಾಲು. ದೇವರು ಕಷ್ಟಕ್ಕೆ ಬೇಕೋ ಸುಖಕ್ಕೇ ಬೇಕೋ? ಎಂದು ಕೇಳಿಕೊಂಡರೆ ನಾವು ಬಯಸುವುದು ಸಂಕಟ ಬಂದಾಗ ವೆಂಕಟರಮಣ. ಆದರೆ, ಆತ ಎಲ್ಲಾ ಕಾಲದಲ್ಲಿಯೂ ಎಲ್ಲೆಲ್ಲಿಯೂ ಇದ್ದಾನಾದ್ದರಿಂದ ಕಷ್ಟಕ್ಕೂ, ಸುಖಕ್ಕೂ ಎರಡಕ್ಕೂ ಆತ ಬೇಕು. ಸರ್ವಾಂತರ್ಯಾಮಿಯಾದ ದೇವನ ಮೇಲೆ ಎಲ್ಲರಿಗೂ ವಿಶ್ವಾಸ. ಬಂದುದೆಲ್ಲಾ ಬರಲಿ, ಶ್ರೀಹರಿಯ ದಯೆಯೊಂದಿರಲಿ ಎಂಬ ಮಾತಿನಂತೆ ಕಾಯುವವನ ಅಭಯ ಹಸ್ತ ಸದಾ ನಮ್ಮ ಮೇಲಿರಲಿ ಎಂಬುದು ಎಲ್ಲರ ಆಶಯ, ಇದ್ದೇ ಇದೆ ಎಂಬುದು ನಂಬಿಕೆ. ಅದೇ ಗೆಲುವು. ದೇವರು ಎಂದರೆ ಮನುಷ್ಯನ ಸಂತೃಪ್ತಸ್ಥಿತಿಯ ಅದೃಶ್ಯರೂಪ. ಏನೇ ಅಂದರೂ ಮನುಷ್ಯನೊಳಗೆ ಸರ್ವಾಂತರ್ಯಾಮಿ ಆದ ದೇವರು ಇದ್ದಾನೆಯೇ ಹೊರತು, ಮನುಷ್ಯ ದೇವರಾಗಲಾರ. ದೇವರ ಒಲವಿಗಾಗಿ ಪರಿಪರಿಯಾಗಿ ಪೂಜಿಸುವ ನಾವು ಬಯಸುವುದು ಆತನ ಅನುಗ್ರಹ ಮತ್ತು ಅದರಿಂದ ದೊರೆಯುವ ಸಂತೃಪ್ತ ಜೀವನವನ್ನು ಮಾತ್ರ.
ಪ್ರಿಯತೇಮಲಯಾ ಭಕ್ತಯ ಹರಿರನ್ಯದ್ ವಿಡಂಬನಮ… ||
Related Articles
Advertisement
ಅಂದರೆ, ಭಕ್ತಿಯೇ ದೇವರು ಮತ್ತು ಭಕ್ತಿಯಿಂದಲೇ ದೇವರು. ವ್ಯಕ್ತಿಯಲ್ಲಿ ಭಕ್ತಿಯೇ ಇಲ್ಲವಾದರೆ, ಪೂಜೆ, ಯಜ್ಞ, ತಪಸ್ಸು, ವ್ರತ ಎಲ್ಲವನ್ನೂ ಮಾಡಿದರೂ ನಿಷ್ಪ್ರಯೋಜಕ ಎಂಬುದು ಇದರ ಮತಿತಾರ್ಥ. ಆಡಂಬರವಿಲ್ಲದ, ಶುದ್ದವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞಮಾಡಿಯೇ ದೇವರನ್ನು ಸಂಪ್ರೀತಿಗೊಳಿಸುತ್ತೇನೆ ಎಂಬುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ ಅರ್ಪಿಸುವ ಹವಿಸ್ಸು ದೇವರ ಪಾದವನ್ನು ಸೇರಲು ನಮ್ಮೊಳಗೆ ಆಳವಾದ ಭಕ್ತಿ ಇರಲೇಬೇಕು. ಏಕಾಗ್ರತೆಯನ್ನು ಹೊಂದಿದ ಭಕ್ತಿಯೇ ಯಜ್ಞ, ತಪಸ್ಸು, ವ್ರತ ಮೊದಲಾದ ಪೂಜಾವಿಧಾನಗಳಿಗೆ ಮೂಲ. ಜ್ಞಾನವಿಲ್ಲದವನು ಕತ್ತಲನ್ನು ಓಡಿಸಲಾರ; ಬೆಳಕನ್ನು ಅನುಭವಿಸಲಾರ. ಹಾಗೆಯೇ, ಭಕ್ತಿಯೇ ಇಲ್ಲದವನು ಸಂಪತ್ತನ್ನು ದೇವರ ಪಾದಕ್ಕೆ ಸುರಿದರೂ ದೇವರು ಮೆಚ್ಚಲಾರ. ಸಂಪತ್ತಿಗೆ ಸೋಲುವ ಸ್ವಭಾವ ಮನುಷ್ಯನದ್ದು; ದೇವರದ್ದಲ್ಲ. ಆತ ಆನಂದಗೊಳ್ಳುವುದು ನಿಜಭಕ್ತಿಗೆ. ನಿರ್ಮಲವಾದ ಭಕ್ತಿಗೆ ಮನಸ್ಸು ಪರಿಶುದ್ಧವಾಗಬೇಕು, ಇಂದ್ರಿಯ ಲಾಲಸೆಗಳನ್ನು ನಿಗ್ರಹಿಸುವ, ಏಕಾಗ್ರತೆಯನ್ನು ಸಾಧಿಸುವ ಛಲ ಇರಬೇಕು. ಭಕ್ತಿ ಎಂಬುದು ನಿಷ್ಕಲ್ಮಶವಾದ ಪ್ರೀತಿ ಮತ್ತು ದೃಢವಾದ ನಂಬಿಕೆ. ಈ ಭಕ್ತಿ ದೇವರ ಅರಿವು; ನಿಜ ಬದುಕಿನ ಅರಿವು ಕೂಡ.
ವಿಷ್ಣು ಭಟ್ ಹೊಸ್ಮನೆ