ಸುಸಂಸ್ಕೃತ ಹಿರಿಯರು ಹೊರಗಿನವರಲ್ಲಿ ಮಾತಾಡುವಾಗ ಪತ್ನಿಯ ಬಗ್ಗೆ “ನನ್ನ ಯಜಮಾನಿ¤’ ಎಂದು ಗೌರವವಾಗಿ ಹೇಳಿಕೊಳ್ತಾರೆ. ಮತ್ತೂ ಬೇಕಿದ್ದರೆ, “ಯಜಮಾನಿ¤ಯಲ್ಲಿ ಒಂದು ಮಾತು ಕೇಳಿ ತಿಳಿಸುತ್ತೇನೆ’, ಸಮಾರಂಭಗಳಿಗೆ ಪತಿ, ಪತ್ನಿ ಇಬ್ಬರನ್ನೂ ಒತ್ತಾಯಪೂರ್ವಕ ಆಹ್ವಾನಿಸಿದಾಗ, “ಯಜಮಾನಿ¤ಯ ಅನುಕೂಲ ತಿಳಿದು ಹೇಳುವೆ’ ಎಷ್ಟು ಘನಸ್ತಿಕೆಯ ಸಂಬೋಧನೆ ಜೀವನ ಸಂಗಾತಿಗೆ ಎಂದು ಹೆಮ್ಮೆಯಾಗಬೇಕು ಅವರ ಮಡದಿಗೆ. ಮನೆಯ ವಿಷಯವಾಗಲಿ ; ಹೊರಗಿನ ಸಂಗತಿಯೇ ಇರಲಿ ಪತ್ನಿಯ ಅಭಿಪ್ರಾಯಕ್ಕೆ ಮೊದಲ ಮನ್ನಣೆ ಅಂಥ ಮನೆಗಳಲ್ಲಿ.
ಸ್ನೇಹಿತೆಗೆ ಕಾರ್ಯಕ್ರಮ ನಿಮಿತ್ತ ಪರಸ್ಥಳಕ್ಕೆ ಹೋಗಲಿತ್ತು. ಜೊತೆಗೆ ಬಾ ಅಂತ ಕರೆದಿದ್ದಳು. ಫ್ರೀ ಇದ್ದ ಕಾರಣ ಹೋದೆ. ಆಕೆಯ ಅಮ್ಮ ಆ ಊರಲ್ಲಿರುವ ಅವರ ಅಕ್ಕನಿಗೆ ಕೊಡು ಅಂತ ಹೊಸ ಸೀರೆ ಕೊಟ್ಟಿದ್ದರು. ಹಿಂದಿರುಗುವಾಗ ಅವರ ಮನೆಗೆ ಭೇಟಿಕೊಟ್ಟೆವು. ಹಳ್ಳಿಯೂರು. ನಾವು ಮನೆಗೆ ಕಾಲಿಟ್ಟಾಗ ಹಿರಿಯರೊಬ್ಬರು ಹೊರಗಡೆ ಇದ್ದರು. ನಿಶ್ಶಬ್ದ ಮತ್ತೆಲ್ಲ. ಮನೆಯೊಳಗಿಂದ ಸದ್ದು ಕೇಳುತ್ತಿತ್ತು. ಅಲ್ಲಿ ಕೂತಾಗ ಯಜಮಾನರು ಕುಶಲ ವಿಚಾರಿಸಿದರು. ಅಮ್ಮ ಕೊಟ್ಟ ಸೀರೆ ಕೊಟ್ಟು ಹೋಗಲು ಬಂದೆವು ಅಂತ ತಿಳಿಸಿದಾಗ ಆತ ದನಿಯೆತ್ತಿ ಕರೆದರು. ಕೇಳಿರಲಿಕ್ಕಿಲ್ಲ. ಮರಳಿ ಕರೆದರು. “”ಏ ಬೆಪ್ಪೀ, ನೆಂಟರು ಬಂದಿದ್ದಾರೆ, ಎಂತ ಕಿವಿ ಕೆಪ್ಪಾ?” ಅಡುಗೆ ಮನೆ ಸಾಕಷ್ಟು ದೂರವಿತ್ತು. ಆಕೆಯ ಉತ್ತರವಿಲ್ಲ. ಈಗ ಯಜಮಾನರಿಗೆ ಅಸಹನೆ. “”ಏ ಹೆಣಾ, ಎಲ್ಲಿ ಸತ್ತೆ?”- ಆ ಸಂಬೋಧನೆ ಕೇಳಿದ ನಮಗೇ ಮುಖ ಬಿಳಿಚಿತ್ತು. ಆಕೆ ಹೊರಬಂದಾಗ ಮೋರೆ ನೋಡಿದರೆ ಪ್ರಸನ್ನವಾಗಿತ್ತು. ಗಂಡನ ಕರೆಯ ಬಗ್ಗೆ ಯಃಕಶ್ಚಿತ್ ಬೇಸರವೂ ಕಾಣಲಿಲ್ಲ. ಮುಜುಗರವಾಗಿದ್ದು ನಮಗೆ. ವೃದ್ಧಾಪ್ಯದಲ್ಲಿದ್ದ ಯಜಮಾನಿ ಅದಕ್ಕೆ ಬೆಲೆಯೇ ಕೊಡದ್ದು ಎದ್ದು ಕಾಣಿಸಿತು.
“ಯಾಕೆ ಹೀಗೆಲ್ಲ ಕರೀತಾರೆ ಆ ಜನ?’ ಅಂತ ನಾನು, ಸ್ನೇಹಿತೆ ಮಾತನಾಡಿಕೊಂಡೆವು. ಆತನಿಗೆ ದರ್ಪ. ಹೆಂಡತಿ ಅಂದರೆ ಕಾಲಕಸ. ಇದು ಲಾಗಾಯ್ತಿನಿಂದ ಬಂದ ಸಂಬೋಧನೆ. ಮೊದಮೊದಲು ಪತ್ನಿ ತಿದ್ದಲು ನೋಡಿದರು. ಆಗಲಿಲ್ಲ. ಅವರಪ್ಪನೂ ಹಾಗೇ ಕರೀತಿದ್ರಂತೆ. ಮತ್ತೆ ಅದಕ್ಕೆ ಬೆಲೆ ಕೊಡುವುದೇ ಬಿಟ್ಟರು. ಬೆಪ್ಪಿ , ಪೆದ್ದಿ, ದಡಿª , ಹೆಣಾ ಅಂತೆಲ್ಲ ಕರೆಯುವುದು ! ಮನೆ ಯಜಮಾನ ಅನ್ನುವ ಅಹಂಕಾರ.
ಮನೆ-ಮನೆಗಳಲ್ಲಿ ಹಿಂದೆ, ಇಂದು ಮಡದಿಯರನ್ನು ಹೇಗೆ ಕರೆಯುತ್ತಾರೆ ಎಂಬುದು ಗಮನಿಸಬೇಕಾದ ವಿಚಾರವೇ ಸೈ. ನಮ್ಮ ಸುತ್ತಮುತ್ತಲೇ ಧಾರಾಳವಾಗಿ ವಿಷಯ ಸಂಗ್ರಹ ಮಾಡಬಹುದು. ನಾವೇ ಕಂಡ ಹಾಗೆ ಹಲವಾರು ಸುಸಂಸ್ಕೃತ ಹಿರಿಯರು ಹೊರಗಿನವರಲ್ಲಿ ಮಾತಾಡುವಾಗ ಪತ್ನಿಯ ಬಗ್ಗೆ “ನನ್ನ ಯಜಮಾನಿ¤’ ಎಂದು ಗೌರವವಾಗಿ ಹೇಳಿಕೊಳ್ತಾರೆ. ಮತ್ತೂ ಬೇಕಿದ್ದರೆ, “ಯಜಮಾನಿ¤ಯಲ್ಲಿ ಒಂದು ಮಾತು ಕೇಳಿ ತಿಳಿಸುತ್ತೇನೆ’, ಸಮಾರಂಭಗಳಿಗೆ ಪತಿ, ಪತ್ನಿ ಇಬ್ಬರನ್ನೂ ಒತ್ತಾಯಪೂರ್ವಕ ಆಹ್ವಾನಿಸಿದಾಗ, “ಯಜಮಾನಿ¤ಯ ಅನುಕೂಲ ತಿಳಿದು ಹೇಳುವೆ’ ಎಷ್ಟು ಘನಸ್ತಿಕೆಯ ಸಂಬೋಧನೆ ಜೀವನ ಸಂಗಾತಿಗೆ ಎಂದು ಹೆಮ್ಮೆಯಾಗಬೇಕು ಅವರ ಮಡದಿಗೆ. ಮನೆಯ ವಿಷಯವಾಗಲಿ ; ಹೊರಗಿನ ಸಂಗತಿಯೇ ಇರಲಿ ಪತ್ನಿಯ ಅಭಿಪ್ರಾಯಕ್ಕೆ ಮೊದಲ ಮನ್ನಣೆ ಅಂಥ ಮನೆಗಳಲ್ಲಿ. ಇಂಥ ಮನೆಗಳಲ್ಲಿನ ಕಿರಿಯರೂ ಇದೇ ಮನ್ನಣೆಯನ್ನು ತಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳುತ್ತಾರೆ ಎನ್ನಬಹುದು. ಆಕೆ ಬರಿದೇ ಅಡುಗೆ ಮನೆಗೆ ಸೀಮಿತಳಲ್ಲ. ಮನೆಯ ಯಜಮಾನಿ¤.
ಅನೇಕ ಮನೆಗಳಲ್ಲಿ ಪತ್ನಿಯನ್ನು ಹೆಸರು ಹಿಡಿದು ಕೂಗುವುದೇ ಇಲ್ಲ. ಬಹುಶಃ ಆಕೆಗೆ ಕ್ರಮೇಣ ತನ್ನ ಹೆಸರೇ ಮರೆತು ಹೋಗಲೂಬಹುದು.”ಏ ಪೆದ್ದೀ, ಬೆಪ್ಪೀ, ಕೆಪ್ಪಿ, ಶೂರ್ಪಣಖೀ’ ಇತ್ಯಾದಿ ಪದಪುಂಜಗಳಲ್ಲಿ ಮಡದಿಯನ್ನು ಸಂಬೋಧಿಸುವ ಮಂದಿಯೂ ಇದ್ದಾರೆ. ಹಳ್ಳಿ, ದಿಲ್ಲಿ ಎನ್ನುವ ಭೇದ ಇಲ್ಲಿಲ್ಲ. ಹಳೆಯ ಕಾಲದಲ್ಲಿ ಇವೆಲ್ಲ ಸಹಜವಾಗಿತ್ತು ಎಂದರೆ ತಪ್ಪು. ಹಿರಿಯರಲ್ಲಿಯೂ ಪತ್ನಿಗೆ ಮನ್ನಣೆ ಕೊಡುವ, ಗೃಹಕೃತ್ಯಗಳಲ್ಲಿ ನೆರವಾಗುವ, ಜೀವನ ಸಂಗಾತಿಗಳಿದ್ದರು. ಬಂಗಾಲದಲ್ಲಿ ಮಕ್ಕಳ ಹೆಸರು ಹೇಳಿ ಅವರ ತಾಯಿ ಎಂದು ಕರೆಯುವ ಪದ್ಧತಿಯಿದೆ. ಅನೇಕ ಸಮುದಾಯಗಳಲ್ಲಿ ಪತಿಯನ್ನು ಪತ್ನಿ ಮತ್ತು ಪತ್ನಿಯನ್ನು ಪತಿ ಹೆಸರು ಹಿಡಿದು ಕರೆದರೆ ಅವರಿಗೆ ಅಲ್ಪಾಯಸ್ಸು ಎನ್ನುವ ಅಲಿಖೀತ ಸಂಪ್ರದಾಯವಿದೆ.ಇಂದಿನ ಜಮಾನಾದಲ್ಲಿ ಸಂಸಾರದಲ್ಲಿ ಇಬ್ಬರೂ ಸಮಾನರು. ಕುಟುಂಬ ಚಿಕ್ಕದು. ಹೆಚ್ಚಿನ ಕಡೆ ಮಡದಿಗೆ ಆದರ, ಮನ್ನಣೆ, ಗೌರವ ಸಲ್ಲುತ್ತದೆ.
ಮನೆಯ ಆಗುಹೋಗುಗಳಲ್ಲಿ ಆಕೆಯ ಮಾತಿಗೆ ಮನ್ನಣೆ ಇದೆ. ಬಾಗಿಲ ಹಿಂದೆ ನಿಂತು ಹೆದರಿ, ಅಳುಕಿ ಮಾತಾಡುವ ಕಾಲ ಹಿಂದಾಗಿದೆ. ಪತಿ ಮಡದಿಯನ್ನು ಆಕೆಯ ಹೆಸರು ಹಿಡಿದು ಅಥವಾ ಅದನ್ನೇ ಶಾರ್ಟಾಗಿ, ಸ್ವೀಟಾಗಿ ಕರೆಯುವ ಮನೆಗಳೇ ಹೆಚ್ಚು. ಮಡದಿ ತಾನೂ ಪತಿಯನ್ನು ಸ್ನೇಹಿತನ ಹಾಗೆ ಕಾಣುತ್ತ ಹೆಸರು ಹಿಡಿದೇ ಕರೆಯುವ ಉತ್ತಮ ಮೇಲ್ಪಂಕ್ತಿ ಹಾಕಿ ಇತರರಿಗೆ ಮಾದರಿಯಾಗಿದ್ದಾಳೆ. ತಪ್ಪೇನು? ಪತಿ, ಪತ್ನಿ ಎಂದರೆ ಒಂದೇ ಜೀವ; ಎರಡು ದೇಹ. ಇಲ್ಲಿ ಸಂಬೋಧನೆಯನ್ನು ಕೇಳಿ ಅವರ ಮಧ್ಯದ ಆಪ್ತತೆ, ಪ್ರೇಮ, ಪ್ರೀತಿ, ಅನುಕೂಲ ದಾಂಪತ್ಯ, ಪರಸ್ಪರ ಮನ್ನಣೆ, ಗೌರವ, ವಿಶ್ವಾಸವನ್ನು ಅರಿಯಬಹುದು. ಜೀವನಪೂರ್ತಿ ತನ್ನ ಜೊತೆ ಹೆಜ್ಜೆ ಹಾಕಲು ಬಂದ ಪತ್ನಿಯನ್ನು ಪ್ರೀತ್ಯಾದರಗಳಿಂದ ಕರೆದಲ್ಲಿ ಅದು ಸುಖ-ಸಂಸಾರದ ಸೂತ್ರಗಳಲ್ಲಿ ಮುಖ್ಯವಾದುದು ತಾನೆ?
– ಕೃಷ್ಣವೇಣಿ ಕಿದೂರು