Advertisement

ಇಂದೋರ್‌ ಟೆಸ್ಟ್‌: ಟೀಮ್‌ ಇಂಡಿಯಾಕ್ಕೆ ಸ್ಪಿನ್‌ ತಿರುಗುಬಾಣ

11:24 PM Mar 01, 2023 | Team Udayavani |

ಇಂದೋರ್‌: ಇಂದೋರ್‌ನ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ಟೀಮ್‌ ಇಂಡಿಯಾಕ್ಕೆ ತಾನೇ ತೋಡಿದ ಖೆಡ್ಡಕ್ಕೆ ಬಿದ್ದ ಅನುಭವ.

Advertisement

ಮೊದಲೆರಡು ಟೆಸ್ಟ್‌ಗಳಲ್ಲಿ ಪ್ರವಾಸಿ ಆಸ್ಟ್ರೇಲಿಯಕ್ಕೆ ಸ್ಪಿನ್‌ ರುಚಿ ತೋರಿಸಿ ಮೆರೆದಿದ್ದ ಭಾರತಕ್ಕೆ ಈಗ ಸ್ಪಿನ್‌ ದಾಳಿಯೇ ತಿರುಗುಬಾಣವಾಗಿ ಪರಿಣಮಿಸಿದೆ. ಪರಿಣಾಮ, ರೋಹಿತ್‌ ಪಡೆ 33 ಓವರ್‌ ಒಳಗೆ 109ಕ್ಕೆ ಕುಸಿದಿದೆ. ಜವಾಬಿತ್ತ ಆಸ್ಟ್ರೇಲಿಯ 4 ವಿಕೆಟಿಗೆ 156 ರನ್‌ ಮಾಡಿದ್ದು, 47 ರನ್‌ ಮುನ್ನಡೆ ಸಾಧಿಸಿದೆ. ಮೊದಲ ದಿನದ ಎಲ್ಲ 14 ವಿಕೆಟ್‌ ಸ್ಪಿನ್ನರ್‌ಗಳ ಬುಟ್ಟಿಗೆ ಬಿದ್ದಿರುವುದನ್ನು ಗಮನಿಸುವಾಗ ಈ ಪಂದ್ಯವೂ 3ನೇ ದಿನ ದಾಟುವುದು ಅನುಮಾನವೆನಿಸುತ್ತದೆ!

ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಆಯ್ದುಕೊಂಡು ಎಡವಟ್ಟಿಗೆ ಸಿಲುಕಿತು. ಎಡಗೈ ಸ್ಪಿನ್ನರ್‌ ಮ್ಯಾಥ್ಯೂ ಕನೇಮನ್‌, ಹಳೆ ಹುಲಿ ನಥನ್‌ ಲಿಯಾನ್‌ ಅವರ ಬೌಲಿಂಗ್‌ ದಾಳಿಗೆ ತತ್ತರಿಸಿತು. ಅತ್ತ ರನ್ನೂ ಗಳಿಸಲಾಗದೆ, ಇತ್ತ ವಿಕೆಟ್‌ ಕೂಡ ಉಳಿಸಿ ಕೊಳ್ಳಲಾಗದೆ ಪರಿತಪಿಸಿತು. ಹೊಸದಿಲ್ಲಿ ಯಲ್ಲಷ್ಟೇ ಟೆಸ್ಟ್‌ಕ್ಯಾಪ್‌ ಧರಿಸಿದ್ದ ಕನೇಮನ್‌ ಕೇವಲ 16 ರನ್ನಿಗೆ 5 ವಿಕೆಟ್‌ ಉಡಾಯಿಸಿ ಭಾರತವನ್ನು ಸಂಕಟಕ್ಕೆ ತಳ್ಳಿದರು. ಲಿಯಾನ್‌ 3 ವಿಕೆಟ್‌ ಕಿತ್ತರೆ, ಉಳಿದೊಂದು ವಿಕೆಟ್‌ ಟಾಡ್‌ ಮರ್ಫಿ ಪಾಲಾಯಿತು.

ಲಂಚ್‌ ಒಳಗಾಗಿ 7 ವಿಕೆಟ್‌ ಉದುರಿಸಿಕೊಂಡದ್ದು ಭಾರತ ಬ್ಯಾಟಿಂಗ್‌ ಸಂಕಟಕ್ಕೆ ಸಾಕ್ಷಿ. ಮೊದಲೆರಡು ಟೆಸ್ಟ್‌ಗಳಲ್ಲಿ ಪ್ರವಾಸಿ ಆಸ್ಟ್ರೇಲಿಯ ಕೂಡ ಇಂಥದೇ ಸ್ಥಿತಿಗೆ ಸಿಲುಕಿತ್ತು. ಬಳಿಕ ಮೂರೇ ದಿನದಲ್ಲಿ ಶರಣಾ ಗತಿ ಸಾರಿತ್ತು. ಭಾರತ ಇಂಥದೇ ಅಪಾಯಕ್ಕೆ ಸಿಲು ಕುವ ಸಾಧ್ಯತೆ ಇದೆ. ದ್ವಿತೀಯ ದಿನದ ಆಟದಲ್ಲಿ ನಮ್ಮ ಸ್ಪಿನ್ನರ್ ತಿರುಗಿ ಬಿದ್ದು ಮುನ್ನಡೆಯನ್ನು ನಿಯಂತ್ರಿಸಿದರೆ ಮಾತ್ರ ಟೀಮ್‌ ಇಂಡಿಯಾ ಕಂಟಕದಿಂದ ಪಾರಾದೀತು.

ಉರುಳಿದ ನಾಲ್ಕೂ ವಿಕೆಟ್‌ ರವೀಂದ್ರ ಜಡೇಜ ಪಾಲಾಗಿದೆ. ಅವರಿಗೆ ಇನ್ನೊಂದು ತುದಿಯಿಂದ ಸೂಕ್ತ ಬೆಂಬಲ ಲಭಿಸಿಲ್ಲ. ಏನೇ ಆದರೂ ಆಸೀಸ್‌ 150ರಷ್ಟು ಲೀಡ್‌ ಗಳಿಸಿದರೂ ಭಾರತಕ್ಕೆ ಅದು ಕಷ್ಟವೇ.

Advertisement

ಸ್ಟಂಪ್‌ನಿಂದ ರನೌಟ್‌ ತನಕ
ನಾಯಕ ರೋಹಿತ್‌ ಶರ್ಮ ಅವರ ಸ್ಟಂಪೌಟ್‌ನಿಂದ ಮೊದಲ್ಗೊಂಡ ಭಾರತದ ಕುಸಿತ ಮೊಹಮ್ಮದ್‌ ಸಿರಾಜ್‌ ಅವರ ರನೌಟ್‌ನೊಂದಿಗೆ ಅಂತ್ಯ ಕಂಡಿತು. ಯಾರೂ ಕ್ರೀಸ್‌ಗೆ ಅಂಟಿಕೊಂಡು ನಿಲ್ಲಲಿಲ್ಲ. ಯಾವ ಜೋಡಿಯಿಂದಲೂ ದೊಡ್ಡ ಜತೆಯಾಟ ಕಂಡುಬರಲಿಲ್ಲ. ನಾಗ್ಪುರ ಮತ್ತು ಹೊಸದಿಲ್ಲಿಯಲ್ಲಿ ಆಸ್ಟ್ರೇಲಿಯದ ಬ್ಯಾಟಿಂಗ್‌ ಹೇಗಿತ್ತೋ, ಹಾಗಿತ್ತು ಆತಿಥೇಯರ ಆಟ.

22 ರನ್‌ ಮಾಡಿದ ವಿರಾಟ್‌ ಕೊಹ್ಲಿ ಭಾರತದ ಟಾಪ್‌ ಸ್ಕೋರರ್‌. ಕೆ.ಎಲ್‌. ರಾಹುಲ್‌ ಬದಲು ಅವಕಾಶ ಪಡೆದ ಶುಭಮನ್‌ ಗಿಲ್‌ 21 ರನ್‌ ಮಾಡಿದರು. ರೋಹಿತ್‌-ಗಿಲ್‌ ಜೋಡಿ 6 ಓವರ್‌ ನಿಭಾಯಿಸಿ 27 ರನ್‌ ಗಳಿಸಿತು. ಇದಕ್ಕಿಂತ ದೊಡ್ಡ ಜತೆಯಾಟ ಭಾರತದ ಸರದಿಯಲ್ಲಿ ಕಂಡುಬರಲಿಲ್ಲ. ರೋಹಿತ್‌ ಗಳಿಕೆ 12 ರನ್‌.

ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ ಆಟ ಒಂದೇ ರನ್ನಿಗೆ ಮುಗಿಯಿತು. ಶ್ರೇಯಸ್‌ ಅಯ್ಯರ್‌ ಖಾತೆಯನ್ನೇ ತೆರೆಯಲಿಲ್ಲ. ಭಡ್ತಿ ಪಡೆದು ಬಂದ ರವೀಂದ್ರ ಜಡೇಜ ನಾಲ್ಕೇ ರನ್ನಿಗೆ ಔಟ್‌. ಕೀಪರ್‌ ಭರತ್‌ 17 ರನ್‌ ಮಾಡಿದರು. ಹಿಂದಿನೆರಡು ಟೆಸ್ಟ್‌ಗಳಲ್ಲಿ ಮಿಂಚಿದ್ದ ಅಕ್ಷರ್‌ ಪಟೇಲ್‌ಗೆ ಇಲ್ಲಿ ಬೆಂಬಲಿಗರೇ ಸಿಗಲಿಲ್ಲ. ಅವರು 12 ರನ್‌ ಮಾಡಿ ಅಜೇಯರಾಗಿ ಉಳಿಯಬೇಕಾಯಿತು. ಅಶ್ವಿ‌ನ್‌ ಮೂರರ ಗಡಿ ದಾಟಲಿಲ್ಲ.

ಮೊಹಮ್ಮದ್‌ ಶಮಿ ಬದಲು ಆಯ್ಕೆಯಾದ ಉಮೇಶ್‌ ಯಾದವ್‌ 13 ಎಸೆತಗಳಿಂದ 17 ರನ್‌ (1 ಬೌಂಡರಿ, 2 ಸಿಕ್ಸರ್‌) ಬಾರಿ ಸದೇ ಹೋದಲ್ಲಿ ಭಾರತದ ಮೊತ್ತ ನೂರರ ಗಡಿಯನ್ನೂ ತಲುಪುತ್ತಿರಲಿಲ್ಲ.

ಸ್ಪಿನ್ನರ್‌ಗಳ ಮ್ಯಾಜಿಕ್‌ ಆರಂಭವಾಗುವ ಮೊದಲೇ ನ್ಯೂಬಾಲ್‌ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಸ್ವಿಂಗ್‌ ಎಸೆತಗಳ ಮೂಲಕ ಟೀಮ್‌ ಇಂಡಿಯಾ ಕಪ್ತಾನನಿಗೆ ಅಪಾಯದ ಸೂಚನೆ ರವಾನಿಸಿದರು. ಮೊದಲ ಓವರ್‌ನಲ್ಲೇ ರೋಹಿತ್‌ 2 ಕಂಟಕದಿಂದ ಬಚಾವಾದರು. ಹೇಗೆಂದರೆ, ಆಸ್ಟ್ರೇಲಿಯ ಡಿಆರ್‌ಎಸ್‌ ತೆಗೆದುಕೊಳ್ಳಲಿಲ್ಲ.

6ನೇ ಓವರ್‌ ಮೂಲಕ ಸ್ಮಿತ್‌ ಸ್ಪಿನ್‌ ಆಕ್ರಮಣ ಜಾರಿಗೊಳಿಸಿದರು. ಬೌಲರ್‌ ಕನೇಮನ್‌. ಅಂತಿಮ ಎಸೆತದಲ್ಲಿ ಮುಂದೆ ಬಂದು ಹೊಡೆ ಯಲು ಹೋದ ರೋಹಿತ್‌ ಬೀಟನ್‌ ಆದರು. ಈ ಅವಕಾಶವನ್ನು ಕೀಪರ್‌ ಕ್ಯಾರಿ ಕೈಚೆಲ್ಲಲಿಲ್ಲ.

ಆಧರಿಸಿ ನಿಂತ ಖ್ವಾಜಾ
ಆಸ್ಟ್ರೇಲಿಯ ಹೆಡ್‌ (9) ಅವರನ್ನು ಬೇಗನೇ ಕಳೆದುಕೊಂಡಿ ತಾದರೂ ಉಸ್ಮಾನ್‌ ಖ್ವಾಜಾ ಅರ್ಧ ಶತಕ ಬಾರಿಸಿ ತಂಡ ವನ್ನು ಆಧರಿಸಿ ನಿಂತರು (147 ಎಸೆತ, 60 ರನ್‌). ಲಬುಶೇನ್‌ 91 ಎಸೆತಗಳಿಂದ 31 ರನ್‌, ಸ್ಮಿತ್‌ 38 ಎಸೆತಗಳಿಂದ 26 ರನ್‌ ಗಳಿಸಿದರು.

ಎರಡೂ ದೊಡ್ಡ ಗೆಲುವು
ಇಂದೋರ್‌ನ “ಹೋಳ್ಕರ್‌ ಕ್ರಿಕೆಟ್‌ ಸ್ಟೇಡಿಯಂ’ನಲ್ಲಿ ಈವರೆಗೆ ನಡೆದದ್ದು ಎರಡೇ ಟೆಸ್ಟ್‌. ಇವೆರಡನ್ನೂ ಭಾರತ ಬೃಹತ್‌ ಅಂತರದಿಂದ ಜಯಿಸಿದೆ.

ಮೊದಲ ಟೆಸ್ಟ್‌ ನಡೆದದ್ದು 2016ರಲ್ಲಿ, ನ್ಯೂಜಿಲ್ಯಾಂಡ್‌ ವಿರುದ್ಧ. ಭಾರತದ ಗೆಲುವಿನ ಅಂತರ 321 ರನ್‌. ಕೊನೆಯ ಟೆಸ್ಟ್‌ ಪಂದ್ಯವನ್ನು 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಆಡಲಾಯಿತು. ಇಲ್ಲಿ ಭಾರತ ಇನ್ನಿಂಗ್ಸ್‌ ಹಾಗೂ 130 ರನ್ನುಗಳಿಂದ ಗೆದ್ದು ಬಂದಿತು. ಎರಡೂ ಪಂದ್ಯಗಳಲ್ಲಿ ಭಾರತದ ಸ್ಪಿನ್‌ ದಾಳಿಯನ್ನು ಎದುರಾಳಿಗಳಿಗೆ ನಿಭಾಯಿಸಲಾಗಲಿಲ್ಲ.

ನ್ಯೂಜಿಲ್ಯಾಂಡ್‌ ವಿರುದ್ಧ ಆರ್‌. ಅಶ್ವಿ‌ನ್‌ ಕ್ರಮವಾಗಿ 81ಕ್ಕೆ 6 ಹಾಗೂ 59ಕ್ಕೆ 7 ವಿಕೆಟ್‌ ಉಡಾಯಿಸಿದರು. ಅಜಿಂಕ್ಯ ರಹಾನೆ (188) ಮತ್ತು ಪೂಜಾರ (101) ಶತಕದೊಂದಿಗೆ ಮಿಂಚಿದರು.

ಬಾಂಗ್ಲಾದೇಶ ವಿರುದ್ಧದ ಪಂದ್ಯ ಏಕಪಕ್ಷೀಯವಾಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾ 150ಕ್ಕೆ ಕುಸಿಯಿತು. ಶಮಿ 3, ಇಶಾಂತ್‌, ಉಮೇಶ್‌ ಮತ್ತು ಅಶ್ವಿ‌ನ್‌ ತಲಾ 2 ವಿಕೆಟ್‌ ಕೆಡವಿದರು. ಮಾಯಾಂಕ್‌ ಅಗ ರ್ವಾಲ್‌ ಒಬ್ಬರೇ 243 ರನ್‌ ಬಾರಿಸಿ ದರು. ದ್ವಿತೀಯ ಸರದಿಯಲ್ಲಿ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ ಕಂಡ ಬಾಂಗ್ಲಾ 213ಕ್ಕೆ ಆಲೌಟ್‌ ಆಯಿತು. ಶಮಿ 4, ಅಶ್ವಿ‌ನ್‌ 3, ಉಮೇಶ್‌ 2 ವಿಕೆಟ್‌ ಕಿತ್ತರು.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌
ರೋಹಿತ್‌ ಶರ್ಮ ಸ್ಟಂಪ್ಡ್ ಕ್ಯಾರಿ ಬಿ ಕನೇಮನ್‌ 12
ಶುಭಮನ್‌ ಗಿಲ್‌ ಸಿ ಸ್ಮಿತ್‌ ಬಿ ಕನೇಮನ್‌ 21
ಚೇತೇಶ್ವರ್‌ ಪೂಜಾರ ಬಿ ಲಿಯಾನ್‌ 1
ವಿರಾಟ್‌ ಕೊಹ್ಲಿ ಎಲ್‌ಬಿಡಬ್ಲ್ಯು ಮರ್ಫಿ 22
ರವೀಂದ್ರ ಜಡೇಜ ಸಿ ಕನೇಮನ್‌ ಬಿ ಲಿಯಾನ್‌ 4
ಶ್ರೇಯಸ್‌ ಅಯ್ಯರ್‌ ಬಿ ಕನೇಮನ್‌ 0
ಶ್ರೀಕರ್‌ ಭರತ್‌ ಎಲ್‌ಬಿಡಬ್ಲ್ಯು ಲಿಯಾನ್‌ 17
ಅಕ್ಷರ್‌ ಪಟೇಲ್‌ ಔಟಾಗದೆ 12
ಆರ್‌. ಅಶ್ವಿ‌ನ್‌ ಸಿ ಕ್ಯಾರಿ ಬಿ ಕನೇಮನ್‌ 3
ಉಮೇಶ್‌ ಯಾದವ್‌ ಎಲ್‌ಬಿಡಬ್ಲ್ಯು ಕನೇಮನ್‌ 17
ಮೊಹಮ್ಮದ್‌ ಸಿರಾಜ್‌ ರನೌಟ್‌ 0
ಇತರ 0
ಒಟ್ಟು (ಆಲೌಟ್‌) 109
ವಿಕೆಟ್‌ ಪತನ: 1-27, 2-34, 3-36, 4-44, 5-45, 6-70, 7-82, 8-88, 9-108.
ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌ 5-0-21-0
ಕ್ಯಾಮರಾನ್‌ ಗ್ರೀನ್‌ 2-0-14-0
ಮ್ಯಾಥ್ಯೂ ಕನೇಮನ್‌ 9-2-16-5
ನಥನ್‌ ಲಿಯಾನ್‌ 11.2-2-35-3
ಟಾಡ್‌ ಮರ್ಫಿ 6-1-23-1
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌
ಟ್ರ್ಯಾವಿಸ್‌ ಹೆಡ್‌ ಎಲ್‌ಬುಡಬ್ಲ್ಯು ಜಡೇಜ 9
ಉಸ್ಮಾನ್‌ ಖ್ವಾಜಾ ಸಿ ಗಿಲ್‌ ಬಿ ಜಡೇಜ 60
ಮಾರ್ನಸ್‌ ಲಬುಶೇನ್‌ ಬಿ ಜಡೇಜ 31
ಸ್ಟೀವನ್‌ ಸ್ಮಿತ್‌ ಸಿ ಭರತ್‌ ಬಿ ಜಡೇಜ 26
ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಬ್ಯಾಟಿಂಗ್‌ 7
ಕ್ಯಾಮರಾನ್‌ ಗ್ರೀನ್‌ ಬ್ಯಾಟಿಂಗ್‌ 6
ಇತರ 17
ಒಟ್ಟು (4 ವಿಕೆಟಿಗೆ) 156
ವಿಕೆಟ್‌ ಪತನ: 1-12, 2-108, 3-125, 4-146.
ಬೌಲಿಂಗ್‌: ಆರ್‌. ಅಶ್ವಿ‌ನ್‌ 16-2-40-0
ರವೀಂದ್ರ ಜಡೇಜ 24-6-63-4
ಅಕ್ಷರ್‌ ಪಟೇಲ್‌ 9-0-29-0
ಉಮೇಶ್‌ ಯಾದವ್‌ 2-0-4-0
ಮೊಹಮ್ಮದ್‌ ಸಿರಾಜ್‌ 3-0-7-0

 

Advertisement

Udayavani is now on Telegram. Click here to join our channel and stay updated with the latest news.

Next