ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅಥವಾ ಸರಕಾರಿ ಭವಿಷ್ಯ ನಿಧಿ (ಜಿಪಿಎಫ್) ಖಾತೆಗಳಿಗೆ ವಾರ್ಷಿಕ ವಾಗಿ ಜಮೆಯಾಗುವ 2.5 ಲಕ್ಷ ರೂ. ಗಳಿಗಿಂತ ಹೆಚ್ಚು ಮೊತ್ತದ ಬಡ್ಡಿಯ ಮೇಲೆ ಪರೋಕ್ಷವಾಗಿ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಸರಕಾರಿ ಮೂಲಗಳು ಸ್ಪಷ್ಟಪಡಿಸಿವೆ.
ಇದನ್ನೂ ಓದಿ:ಕೆಂಪುಕೋಟೆ ಗಲಭೆ ಪ್ರಕರಣ: ನಟ ದೀಪ್ ಸಿಧು ಬಂಧಿಸಿದ ದಿಲ್ಲಿ ಪೊಲೀಸರು
ದೇಣಿಗೆ, ಠೇವಣಿ ಮತ್ತು ಹಿಂಪಡೆಯುವಿಕೆ – ಹೀಗೆ ಮೂರೂ ಹಂತಗಳಲ್ಲಿ ತೆರಿಗೆಯಿಂದ ವಿನಾಯಿತಿ ಹೊಂದಿರುವ (ಇಇಇ) ಏಕಮಾತ್ರ ಉಳಿತಾಯ ಮಾರ್ಗ ಪಿಎಫ್ ಆಗಿದೆ. ಕೇಂದ್ರ ಬಜೆಟ್ ಮಂಡನೆಯಾದ ಬಳಿಕ ಪಿಎಫ್ ಬಡ್ಡಿಗೂ ತೆರಿಗೆ ವಿಧಿಸುವ ವಿಚಾರ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡಿತ್ತು. ಇದರಿಂದ ಪಿಎಫ್ ಮೇಲಿನ ಬಡ್ಡಿದರವೇ ಪ್ರಮುಖ ಜೀವನೋಪಾಯವಾಗಿರುವ ಅನೇಕ ಹಿರಿಯರು ಚಿಂತೆಗೊಳಗಾಗಿದ್ದರು.ಆದರೆ ಈ ಬಗ್ಗೆ ಕೇಂದ್ರ ಸರಕಾರವೇ ಸ್ಪಷ್ಟನೆ ನೀಡಿದೆ.
ಪಿಎಫ್ ಬಡ್ಡಿಗೆ ತೆರಿಗೆ ವಿಧಿಸುವ ಪ್ರಸ್ತಾವ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಸರಕಾರಿ ಮೂಲಗಳು ಈ ಬಗ್ಗೆ ವಿವರ ಣೆಯನ್ನೂ ನೀಡಿವೆ. ಯಾವುದೇ ಒಂದು ಖಾತೆಗೆ ವಾರ್ಷಿಕವಾಗಿ 2.5 ಲಕ್ಷ ರೂ. ಗಳಿಗಿಂತ ಹೆಚ್ಚು ಪಿಎಫ್ ಅಥವಾ ಜಿಪಿಎಫ್ ಪಾವತಿ ಹರಿದುಬಂದರೆ 2.5 ಲಕ್ಷ ರೂ.ಗಳಿಗಿಂತ ಹೆಚ್ಚಿನದಾದ ಮೊತ್ತವನ್ನು ಪ್ರತ್ಯೇಕ ಉಪ ಖಾತೆಗೆ ವರ್ಗಾಯಿಸಲಾಗುತ್ತದೆ. 2021ರ ಮಾ. 31ರಂತೆ ಆಯಾ ಖಾತೆದಾರನ ಹಿಂದಿನ ಬ್ಯಾಲೆನ್ಸ್ ಮತ್ತು ಪ್ರಾಥಮಿಕ ಖಾತೆ ತೆರಿಗೆಯಿಂದ ವಿನಾಯಿತಿ ಹೊಂದಿರುತ್ತದೆ. ಬಡ್ಡಿಯನ್ನೂ ಐಟಿ ರಿಟರ್ನ್ಸ್ ನಲ್ಲಿ ಉಲ್ಲೇಖಿಸಬೇಕಿಲ್ಲ.
ಆದರೆ ವಾರ್ಷಿಕ 2.5 ಲಕ್ಷ ರೂ.ಗಳಿಗಿಂತ ಹೆಚ್ಚುವರಿ ಜಮೆಯಾಗುವ ಮತ್ತು ಉಪ ಖಾತೆಗೆ ವರ್ಗಾವಣೆಯಾಗುವ ಮೊತ್ತವು ಮಾತ್ರ ತೆರಿಗೆಗೆ ಅರ್ಹವಾಗಿರುತ್ತದೆ ಎಂದು ಸರಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಪಿಎಫ್ ಮತ್ತು ಜಿಪಿಎಫ್ ಖಾತೆದಾರರ ಪೈಕಿ ಇಂತಹ ತೆರಿಗೆಗೆ ಅರ್ಹರಾಗುವವರು ಸುಮಾರು 1.22 ಲಕ್ಷ ಮಂದಿ ಇರುವ ನಿರೀಕ್ಷೆ ಇದ್ದು, ಇದು ಒಟ್ಟು ಖಾತೆದಾರರ 0.25 ಎಂದು ಸರಕಾರಿ ಮೂಲಗಳು ತಿಳಿಸಿವೆ.