Advertisement

ಸಂದರ್ಶನಕ್ಕೆ ತಯಾರಿ ಹೇಗಿರಬೇಕು?

01:24 AM Dec 02, 2019 | Team Udayavani |

ಉದ್ಯೋಗವೊಂದರ ಸಂದರ್ಶನಕ್ಕೆ ತಯಾರಿ ನಡೆಸುವಾಗ, ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ, ಉದ್ಯೋಗದಾತ ಕಂಪೆನಿಯ ಬಗ್ಗೆ ಹಲವು ಅಂಶಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕಂಪೆನಿಯ ಅಥವಾ ಸಂಸ್ಥೆಯ ಹಿನ್ನೆಲೆ ಮತ್ತು ಮಾಹಿತಿ, ನೀವು ಅಪೇಕ್ಷಿಸುವ ಉದ್ಯೋಗದ ಬಗ್ಗೆ ತಿಳಿದುಕೊಂಡಿದ್ದರೆ ನಿಮಗೆ ಸಂದರ್ಶನ ಸುಲಭವಾಗಿರಲಿದೆ.

Advertisement

ಕೆಲಸದ ಕುರಿತು ಅರಿವಿರಲಿ
ಸಂಸ್ಥೆ ನೀಡಿದ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಂಡಿರಬೇಕು. ಉದ್ಯೋಗಕ್ಕೆ ಸಂಬಂಧಪಟ್ಟಂತೆ ಅರ್ಹತೆ, ವಿದ್ಯಾರ್ಹತೆ, ಹಿನ್ನೆಲೆ, ಅನುಭವಗಳು ಹೇಗಿರಬೇಕು ಎಂಬುದನ್ನು ಉಲ್ಲೇಖೀಸಿರುತ್ತಾರೆ. ಅವುಗಳನ್ನು ಮೂಲವಾಗಿಟ್ಟುಕೊಂಡೇ ಸಂದರ್ಶನದಲ್ಲಿ ಪ್ರಶ್ನೆ ಕೇಳಲಾಗುತ್ತದೆ. ಕಂಪೆನಿಯ ಸೇವೆ, ಉತ್ಪನ್ನಗಳ ಬಗ್ಗೆ, ನೀವು ಬಯಸುತ್ತಿರುವ ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು. ಅದಕ್ಕೆ ಪೂರಕವಾದ ಅರ್ಹತೆಗಳು, ಕೌಶಲಗಳನ್ನು ನೀವು ಹೊಂದಿರಬೇಕಾಗುತ್ತದೆ.

ಧ್ವನಿ ಮತ್ತು ದೇಹ ಭಾಷೆ
ಸಂದರ್ಶಕರಲ್ಲಿ ನಿಮ್ಮ ಬಗ್ಗೆ ಸಕಾರಾತ್ಮಕ ಭಾವನೆ ಮತ್ತು ನಂಬಿಕೆಯನ್ನು ನಿಮ್ಮ ಉತ್ತರದ ಮೂಲಕ ತುಂಬಬೇಕು. ಅದಕ್ಕಾಗಿ ಧೈರ್ಯದಿಂದ ಮತ್ತು ವಿಶ್ವಾಸದಿಂದ ಮಾತನಾಡಬೇಕು. ನಿಮ್ಮ ಧ್ವನಿ, ಸ್ವಾಭಾವಿಕ ನಗು, ದೇಹಭಾಷೆಯನ್ನು ಉತ್ತಮವಾಗಿ ಅಭ್ಯಾಸ ಮಾಡಿಕೊಳ್ಳಬೇಕು. ತುಂಬಾ ಚುರುಕಿನಿಂದ ಇದ್ದು ಉಲ್ಲಾಸದಿಂದ ಉತ್ತರಿಸುತ್ತ ಸಂದರ್ಶನ ಎದುರಿಸಲು ಪ್ರಯತ್ನಿಸಿ.

ಹಿಂದಿನ ಸಂದರ್ಶನಗಳ ಪಾಠ
ಸಾರ್ವಜನಿಕವಾಗಿ ಮಾತನಾಡುವಂತೆ, ಸಂದರ್ಶನಗಳನ್ನು ಸಹ ಅಭ್ಯಾಸ ಮಾಡುವುದು ಉತ್ತಮ. ಇದರಿಂದ ನಿಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ನಮ್ಮಲ್ಲಿ “ಸ್ಟೇಜ್‌ ಫಿಯರ್‌’ ಎಂಬ ಮಾತಿನಂತೆ ಬಹುತೇಕರಿಗೆ ಸಂದರ್ಶನವನ್ನು ಎದುರಿಸಲು ಭಯವಾಗುತ್ತದೆ. ಇದನ್ನು ಅಭ್ಯಾಸಗಳ ಮೂಲಕ ಬಗೆಹರಿಸಿಕೊಳ್ಳಬಹುದು. ಈ ಹಿಂದೆ ಎದುರಿಸಿದ ಸಂದರ್ಶನವನ್ನು ಮತ್ತೆ ನೆನಪಿಸಿ ಅದರಲ್ಲಿ ನೀವು ಮಾಡಿದ ತಪ್ಪು ಪುನರಾವರ್ತನೆ ಆಗದಂತೆ ನೋಡಿಕೊಳ್ಳಿ.

ರೆಸ್ಯೂಮ್‌ ಅಪ್‌ಡೇಟ್‌ ಆಗಿರಲಿ
ರೆಸ್ಯೂಮ್‌ನಲ್ಲಿ ನೀಡಲಾದ ನಿಮ್ಮ ವಿದ್ಯಾರ್ಹತೆ, ಕೌಶಲಗಳು, ನಿಮ್ಮ ಸಾಮರ್ಥ್ಯ ಏನು ಎಂಬ ಪ್ರತಿಯೊಂದು ಮಾಹಿತಿಯೂ ಅರಿವಿನಲ್ಲಿರಲಿ. ಕೆಲವೊಮ್ಮೆ ರೆಸ್ಯೂಮ್‌ನಲ್ಲಿರುವ ಅಂಶಗಳನ್ನೇ ಸಂದರ್ಶಕರು ನಿಮಗೆ ಕೇಳುತ್ತಾರೆ. ಈ ಸಂದರ್ಭದಲ್ಲಿ ನೀವು ತೊದಲುವ ಹಾಗಿಲ್ಲ. ಆನ್‌ಲೈನ್‌ ಮೂಲಕ ಅಪ್ಲಿಕೇಶನ್‌ ಹಾಕಿದ್ದರೂ ಸಂದರ್ಶನಕ್ಕೆ ಕನಿಷ್ಠ 2-4 ಪ್ರತಿ ರೆಸ್ಯೂಮ್‌ ಪ್ರಿಂಟ್‌ ತೆಗೆದುಕೊಂಡು ಹೋಗುವುದು ಒಳಿತು. ಸಂದರ್ಶಕರು ನಿಮ್ಮ ಸಾಫ್ಟ್ ಕಾಪಿ ರೆಸ್ಯೂಮ್‌ ಸ್ವೀಕರಿಸಿದ್ದರೂ, ಅವರು ಹಾರ್ಡ್‌ ಕಾಪಿ ಕೇಳುವ ಸಾಧ್ಯತೆಯೂ ಇರುತ್ತದೆ.

Advertisement

ಸರಳ ಉಡುಗೆ
ನಮ್ಮ ರೆಸ್ಯೂಮ್‌ನಷ್ಟೇ ಮೌಲ್ಯಯುತವಾಗಿ ನಮ್ಮನ್ನು ನಾವು ಸಂದರ್ಶಕರಿಗೆ ಅಭಿವ್ಯಕ್ತಪಡಿಸಿಕೊಳ್ಳುವುದು ತೀರಾ ಆವಶ್ಯಕ. ನಮ್ಮ ಬಟ್ಟೆಗಳು ಹೆಚ್ಚು ಸರಳವಾಗಿರಬೇಕು. ಆದಷ್ಟು “ಪ್ರೊಫೆಶನಲ್‌’ ಆಗಿರುವ ಬಟ್ಟೆಯಲ್ಲಿ ಸಂದರ್ಶನ ಎದುರಿಸಬೇಕು. ನಮ್ಮ ರೆಸ್ಯೂಮ್‌ ಎಷ್ಟೇ ತೂಕ ಹೊಂದಿದ್ದರೂ ನಮ್ಮ ವ್ಯಕ್ತಿತ್ವವನ್ನು ತೋರ್ಪಡಿಸದೇ ಇದ್ದರೆ ಕಷ್ಟ. ಶಿಸ್ತು ನಮ್ಮ ವಸ್ತ್ರದಲ್ಲಿ ಪರಿಚಯವಾಗುವಂತೆ ಇರಬೇಕು.

Advertisement

Udayavani is now on Telegram. Click here to join our channel and stay updated with the latest news.

Next