ಪ್ಯಾರಿಸ್: ಒಲಿಂಪಿಕ್ಸ್ ಇತಿಹಾಸದಲ್ಲೇ ಅತ್ಯಂತ ರೋಮಾಂಚಕಕಾರಿ ಜಿದ್ದಾಜಿದ್ದಿಯ 100 ಮೀ. ಓಟಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಸಾಕ್ಷಿಯಾಯಿತು. ಸೋಮವಾರ ನಡೆದ ಪುರುಷರ 100 ಮೀ. ಓಟದ ಫಲಿತಾಂಶ ನಿರ್ಧರಿಸುವುದೇ ದೊಡ್ಡ ಸವಾಲಾಯಿತು.
ಅಮೆರಿಕನ್ ಸ್ಟ್ರಿಂಟರ್ ನೋವ ಲೈಲ್ಸ್ ಕೇವಲ 0.005 ಸೆಕೆಂಡ್, ಅಂದರೆ ಒಂದು ಸೆಕೆಂಡನ್ನು 5 ಸಾವಿರ ಭಾಗ ಮಾಡಿದರೆ, ಅದರಲ್ಲಿ ಒಂದು ಭಾಗದಷ್ಟು ಅಂತರದಲ್ಲಿ ಗೆದ್ದು ಚಿನ್ನದ ಪದಕ ಗೆದ್ದುಕೊಂಡರು.
10 ಮೀ. ಓಟದ ಬಳಿಕ ಲೈಲ್ಸ್ 7ನೇ ಸ್ಥಾನದಲ್ಲಿದ್ದರೆ, 40 ಮೀ. ಬಳಿಕ 8ನೇ ಸ್ಥಾನಕ್ಕೆ ಕುಸಿದಿದ್ದರು. ಇದಾದ ಬಳಿಕ ಓಟದ ವೇಗ ಹೆಚ್ಚಿಸಿಕೊಂಡು 9.79 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅಲ್ಲದೇ ಈ ಸ್ಪರ್ಧೆಯ ವೇಳೆ ಎಂಟೂ ಲೇನ್‌ಗಳ ಓಟಗಾರರು 10 ಸೆಕೆಂಡ್‌ಗಳ ಒಳಗೆ ಗುರಿ ತಲಿಪಿದ್ದು ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಸಾಧನೆಯೆನಿಸಿತು.
ಫೈನಲ್‌ನಲ್ಲಿ ಅಮೆರಿಕದ ಲೈಲ್ಸ್ ಮತ್ತು ಜಮೈಕಾದ ಕಿಶೇನ್ ಥಾಮ್ಸನ್ ಇಬ್ಬರೂ 9.79 ಸೆಕೆಂಡ್‌ನಲ್ಲಿ ಓಟ ಮುಗಿಸಿದ್ದ ಕಾರಣ ಚಿನ್ನ ದ ಪದಕ ನಿಧರಿಸಲು 1000 ಮಿಲಿ ಸೆಕೆಂಡ್ ಆಧಾರದಲ್ಲಿ ಪರಿಶೀಲಿಸಿದಾಗ, ಫೋಟೋ ಫಿನಿಶ್ (ಚೆಸ್ಟ್ ಫಿನಿಶ್) ಆಧಾರದಲ್ಲಿ ಲೈಲ್ಸ್ ಕಾಲಾವಧಿ 784 ಮಿಲಿ ಸೆಕೆಂಡ್ ತೋರಿಸುತ್ತಿದ್ದರೆ, ಥಾಮ್ಸನ್ ಕಾಲಾವಧಿ 789 ಮಿಲಿ ಸೆಕೆಂಡ್ ತೋರಿಸುತ್ತಿತ್ತು. ಹೀಗಾಗಿ ಥಾಮ್ಸನ್ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಈ ವಿಭಾಗದಲ್ಲಿ ಕಂಚಿನ ಪದಕ ಅಮೆರಿಕದ ಫ್ರೆಡ್ ಕೆರ್ಲಿ (9.81 ಸೆ.) ಪಾಲಾಗಿದೆ.
ಅಸ್ತಮಾ ಇದ್ದೂ ಬಂಗಾರ ಬೇಟೆ!
27 ವರ್ಷದ ನೋವ ಲೈಲ್ಸ್‌ಗೆ ಅಸ್ತಮಾ, ಡಿಪ್ರಶನ್ ಜತೆಗೆ ಡಿಸ್ಲೆಕ್ಸಿಯಾ (ಕಲಿಕೆಯ ಸಮಸ್ಯೆ) ಖಾಯಿಲೆಯಿದೆ. ಹಾಗಿದ್ದೂ ಅವರು ಒಲಿಂಪಿಕ್ಸ್ ಚಿನ್ನ ಗೆದ್ದು ವಿಶ್ವದ ವೇಗ ಓಟಗಾರನಾಗಿ ದಾಖಲೆ ಮಾಡಿದರು.