Advertisement
ನಗರಕ್ಕೆ ನೀರಿನ ಸಮಸ್ಯೆ ಎದುರಾಗುವ ಕಾರಣ ಶಂಭೂರಿನ ಎಎಂಆರ್ ಮತ್ತು ತುಂಬೆ ಅಣೆಕಟ್ಟಿನಿಂದ ಕೈಗಾರಿಕೆ ಉದ್ದೇಶಕ್ಕೆ ನೀರು ಸರಬರಾಜನ್ನು ಅರ್ಧಕ್ಕಿಳಿಸುವುದಾಗಿ ಜಿಲ್ಲಾಡಳಿತ ಮಾರ್ಚ್‌ನಲ್ಲಿ ಹೇಳಿತ್ತು. ಎಂಆರ್‌ಪಿಎಲ್ ಮತ್ತು ಎಂಎಸ್‌ಇಝಡ್ ಸೇರಿದಂತೆ ಕೈಗಾರಿಕೆಗಳಿಗೆ ನೀಡುವ ನೀರನ್ನು ಎ. 15ರ ವೇಳೆಗೆ 18ರಿಂದ 10 ಎಂಜಿಡಿ (ಮಿಲಿಯನ್ ಗ್ಯಾಲನ್ ಪರ್ ಡೇ)ಗೆ ಇಳಿಸಲು ಸೂಚಿಸಲಾಗಿತ್ತು. ಇದೆಷ್ಟು ಅನುಷ್ಠಾನವಾಗಿದೆ ಎಂಬುದು ಗೊತ್ತಿಲ್ಲವಾದರೂ ಸದ್ಯ ಎಎಂಆರ್ ಡ್ಯಾಂನಲ್ಲಿ ನೀರೇ ಇಲ್ಲದ್ದರಿಂದ ಆ ಭಾಗದ ಕೈಗಾರಿಕೆಗಳಿಗೆ ನೀರು ಸರಬರಾಜಾಗುತ್ತಿಲ್ಲ.
ಜಿಲ್ಲಾಡಳಿತವು ತುಂಬೆ ಡ್ಯಾಂ ವ್ಯಾಪ್ತಿಯಿಂದ ಮುಡಿಪು ವಿಶೇಷ ಆರ್ಥಿಕ ವಲಯದ ಕೈಗಾರಿಕೆಗಳಿಗೆ ಸರಬರಾಜಾಗುವ ನೀರಿನ ಇನ್ನೂ ನಿಗಾ ವಹಿಸಿಲ್ಲ. ತುಂಬೆ ಜಲಾಶಯ ವ್ಯಾಪ್ತಿಯಲ್ಲೇ ಬರುವ ಬಂಟ್ವಾಳ ತಾಲೂಕಿನ ಕಂದೂರು ಪ್ರದೇಶದಿಂದ ಪ್ರತಿದಿನ ಮುಡಿಪು ಇನ್ಫೋಸಿಸ್ ಸಹಿತ ಎಸ್‌ಇಝಡ್‌ಗೆ ರೇಷನಿಂಗ್ ಇಲ್ಲದೆ ನೀರು ಸರಬರಾಜಾಗುತ್ತಿದೆ. ಇನ್ಫೋಸಿಸ್ ಮತ್ತು ಮಂಗಳೂರು ವಿ.ವಿ.ಗೆ ನೀರು ಸರಬರಾಜಿಗಾಗಿ ತಲಾ 1 ಮತ್ತು ಏತ ನೀರಾವರಿಯ 2 ಪಂಪ್‌ಹೌಸ್‌ಗಳಿವೆ. ಏತ ನೀರಾವರಿ ಪಂಪ್‌ಹೌಸ್ ಈಗ ಸ್ಥಗಿತವಾಗಿದ್ದರೂ ವಿ.ವಿ. ಮತ್ತು ಮುಡಿಪು ಆರ್ಥಿಕ ವಲಯಕ್ಕೆ ಸರಬರಾಜು ಮಾಡುವ ಪಂಪ್‌ಹೌಸ್‌ಗಳಿಂದ ಹಿಂದಿನಷ್ಟೇ ನೀರು ಲಿಫ್ಟ್ ಆಗುತ್ತಿದೆ. ಈ ಪಂಪ್‌ಹೌಸ್‌ಗಳಿಂದ ನಿತ್ಯ ಸುಮಾರು 25 ಲಕ್ಷಕ್ಕೂ ಹೆಚ್ಚು ಲೀ. ನೀರು ಸರಬರಾಜಾಗುತ್ತಿದೆ. ಇದರಲ್ಲಿ 20 ಲಕ್ಷ ಲೀ. ಕಂಪೆನಿಗಳಿಗಾದರೆ 5 ಲಕ್ಷ ಲೀ. ವಿ.ವಿ.ಗೆ ಪೂರೈಕೆಯಾಗುತ್ತಿದೆ. ಮುಡಿಪು ಎಸ್‌ಇಝಡ್‌ಗೆ ನೀರು ಪೂರೈಕೆಗೆ 125 ಎಚ್‌ಪಿ ಸಾಮರ್ಥ್ಯದ ಪಂಪ್ ಪ್ರತಿದಿನ 10ರಿಂದ 11 ತಾಸು ಚಾಲನೆಯಾಗುತ್ತಿದೆ. ಕುರ್ನಾಡಿನ ಮಿತ್ತಕೋಡಿ ಸಂಪ್‌ಗೆ 20 ಲಕ್ಷ ಲೀ. ನೀರು ಹರಿಯುತ್ತಿದೆ.
Related Articles
ನಿತ್ಯ 20 ಲಕ್ಷ ಲೀ. ನೀರು ಸರಬರಾಜು ಆಗುತ್ತಿರುವುದು ನಿಜ ಎಂದು ಕೆಐಎಡಿಬಿ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ಅವರ ಪ್ರಕಾರ ಪ್ರತಿದಿನ ಸರಾಸರಿ 18 ಲಕ್ಷ ಲೀ. ನೀರು ಮಿತ್ತಕೋಡಿ ಸಂಗ್ರಹಾಗಾರಕ್ಕೆ ಹೋಗುತ್ತಿದ್ದು, ಅಲ್ಲಿಂದ ಸುಮಾರು 17 ಲಕ್ಷ ಲೀ. ಇನ್ಫೋಸಿಸ್‌ಗೆ, 40 ಸಾವಿರ ಲೀ. ನವೋದಯ ವಿದ್ಯಾಸಂಸ್ಥೆಗೆ ಮತ್ತು ಫ್ಲೈವುಡ್ ಕಂಪೆನಿಯೊಂದಕ್ಕೆ 25 ಸಾವಿರ ಲೀ. ಸರಬರಾಜಾಗುತ್ತಿದೆ. ಫ್ಲೈವುಡ್ ಕೈಗಾರಿಕೆಗೆ ನೀಡುವುದಕ್ಕೆ ಅವಕಾಶವಿಲ್ಲವಾದರೂ ಎಸ್‌ಇಝಡ್‌ನಲ್ಲಿ ಬೇರೆ ಕೈಗಾರಿಕೆಗಳು ಬಂದಿಲ್ಲ ಎಂದು ಕೊಡಲಾಗುತ್ತಿದೆ. ಇನ್ಫೋಸಿಸ್‌ನಂಥ ಕಂಪೆನಿಗೆ ಕುಡಿಯಲೆಂದು ನೀರು ನೀಡುತ್ತಿದ್ದರೂ ಅದರ ಬಳಕೆಯ ಬಗ್ಗೆ ಗೊತ್ತಿಲ್ಲ ಎಂದು ಆ ಅಧಿಕಾರಿ ತಿಳಿಸಿದ್ದಾರೆ.
Advertisement
ಕೆಐಎಡಿಬಿ ಉಸ್ತುವಾರಿಲಿಫ್ಟ್ ಆಗುವ ನೀರಿನ ಉಸ್ತುವಾರಿ-ನಿರ್ವಹಣೆಯ ಜವಾಬ್ದಾರಿ ಕೆಐಎಡಿಬಿಯದು. ನೀರಿನ ಸಮಸ್ಯೆ ಗಂಭೀರ ಸ್ವರೂಪದಲ್ಲಿರುವ ಕಾರಣ ಇಲ್ಲಿಂದ ಲಿಫ್ಟ್ ಮಾಡುವ ನೀರಿನ ಪ್ರಮಾಣದ ಮೇಲೆ ನಿಗಾ ವಹಿಸುವ ಜತೆಗೆ ಯಾವೆಲ್ಲ ಕಂಪೆನಿಗಳಿಗೆ ಹೋಗುತ್ತಿದೆ ಎನ್ನುವುದನ್ನು ಪರಿಶೀಲಿಸುವ ಅಗತ್ಯವಿದೆ. ಕುಡಿಯುವ ನೀರು ನೆವದಲ್ಲಿ ಅನ್ಯ ಉದ್ದೇಶ, ಕೈಗಾರಿಕೆಗಳಿಗೂ ಸರಬರಾಜಾಗುತ್ತಿದೆ ಎಂಬ ಆರೋಪವಿರುವುದು ಇದಕ್ಕೆ ಕಾರಣ. ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಕೆಐಎಡಿಬಿ ಅಧಿಕಾರಿ ಜನಾರ್ದನ ನಾೖಕ್, ಈ ಹಿಂದಿನ ಒಪ್ಪಂದದಂತೆ ಮುಡಿಪು ವಿಶೇಷ ಆರ್ಥಿಕ ವಲಯಕ್ಕೆ 1ಎಂಜಿ ನೀರು ಸರಬರಾಜಿಗೆ ಅವಕಾಶವಿದೆ. ಆದರೆ ಈಗ ಕೇವಲ 10 ಲಕ್ಷ ಲೀ. ಲಿಫ್ಟ್ ಮಾಡುತ್ತಿದ್ದೇವೆ. ವಾರದಲ್ಲಿ 3 ದಿನ ಪಂಪ್ ಚಾಲನೆಯಾಗುತ್ತಿದ್ದು, ಹೆಚ್ಚಿನ ನೀರು ಇನ್ಫೋಸಿಸ್‌ಗೆ
ಸರಬರಾಜಾಗುತ್ತಿದೆ. ಇದು ಕುಡಿಯುವ ಉದ್ದೇಶಕ್ಕೆ ಎಂದು ಸ್ಪಷ್ಟಪಡಿಸಿದ್ದಾರೆ. ಪರಿಶೀಲಿಸಿ
ಸೂಕ್ತ ಕ್ರಮ: ಡಿಸಿ
ಮಂಗಳೂರು ವಿ.ವಿ. ಮತ್ತು ಇನ್ಫೋಸಿಸ್‌ನಂಥ ಕಂಪೆನಿಗಳಿಗೆ ಕುಡಿಯುವ ಉದ್ದೇಶಕ್ಕಾಗಿ 20 ಲಕ್ಷ ಲೀ. ನೀರು ಸರಬರಾಜು ಆಗುತ್ತಿದೆ. ಅದನ್ನು ಸದ್ಯದ ಪರಿಸ್ಥಿತಿಯಲ್ಲಿ ಕಡಿತಗೊಳಿಸಲು ಸಾಧ್ಯವಿಲ್ಲ. ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದರೆ ಪರಿಶೀಲಿಸಿ ನಿರ್ಬಂಧ ವಿಧಿಸಲಾಗುವುದು. ಕಂದೂರಿನಿಂದ ಬೇರೆ ಕೈಗಾರಿಕೆಗಳಿಗೆ ಅಥವಾ ಬೇರೆ ಉದ್ದೇಶಕ್ಕೆ ನೀರು ಸರಬರಾಜು ಆಗುತ್ತಿದ್ದರೆ ಆ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ಶಶಿಕಾಂತ ಸೆಂಥಿಲ್, ದ.ಕ. ಜಿಲ್ಲಾಧಿಕಾರಿ -ಸುರೇಶ್ ಪುದುವೆಟ್ಟು