ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಿದ್ದಾಗ ನಡೆದ “ಮೊದಲ ಆಪರೇಷನ್ ಕಮಲ’ದಲ್ಲಿ ಸ್ವತಃ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಸಿದ್ದರಾಮಯ್ಯ ಎಷ್ಟು ಹಣ ಪಡೆದರು? ಆ ಹಣವನ್ನು ಯಾರಿಂದ ತರಿಸಿಕೊಂಡರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರಥಮ ಆಪರೇಷನ್ ಕಮಲ ನಡೆದ ಸಂದರ್ಭದಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ವೇಳೆ ಇದೇ ಸಿದ್ದರಾಮಯ್ಯ ತಾವಿದ್ದ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸಲು, ಬಿಜೆಪಿ ಅಭ್ಯರ್ಥಿ ಗಳನ್ನು ಗೆಲ್ಲಿಸಲು ಯಡಿಯೂರಪ್ಪ ಅವರಿಂದ ಎಷ್ಟು ಹಣ ತೆಗೆದು ಕೊಂಡರು ಎಂಬ ಬಗ್ಗೆ ಇವತ್ತಿಗೂ ಉತ್ತರ ಬಂದಿಲ್ಲ ಎಂದು ಹೇಳಿದರು.
ಆ ಹಣ ತಂದ ವ್ಯಕ್ತಿಯೇ ಸ್ವತಃ ನನ್ನ ಬಳಿ ಯಡಿಯೂರಪ್ಪ ಅವರಿಂದ ಎಷ್ಟು ಹಣ ತೆಗೆದುಕೊಂಡು ಬಂದೆ ಎಂದು ಹೇಳಿದ್ದಾರೆ. ಪ್ರತಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ತೆಗೆಯುವ ಹುನ್ನಾರ ನಡೆಸಿದ ವ್ಯಕ್ತಿ ಕೂಡ ಇದೇ ಸಿದ್ದರಾಮಯ್ಯ ಎನ್ನುವುದು ನನಗೆ ಗೊತ್ತಿದೆ ತೀವ್ರ ವಾಗ್ಧಾಳಿ ನಡೆಸಿದರು.
ನಮಗೂ ಕೆಲವರು ಅರ್ಜಿ ಹಾಕಿದ್ದಾರೆ: ನಮ್ಮ ಪಕ್ಷಕ್ಕೂ ಕೆಲವರು ಅರ್ಜಿ ಹಾಕಿಕೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್‌ನಿಂದಲೂ ನಮ್ಮಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ. ನಮ್ಮ ಬಳಿ ಬರುವವರು ಸಣ್ಣಪುಟ್ಟ ಮುಖಂಡರು. ಅನೇಕ ಹೊಸಬರು ಜೆಡಿಎಸ್‌ಗೆ ಬರಲು ತಯಾರಿದ್ದಾರೆ ಎಂದು ಅವರು ಹೇಳಿದರು.
“ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿ ಇಲ್ಲ. ನಮ್ಮದು ಸಣ್ಣ ಪಕ್ಷ. ಚುನಾವಣೆಗೆ ಇನ್ನೂ ಒಂದು ವರ್ಷ ವಿದೆ. ಯಾವಾಗ ಯಾರು ಬರ್ತಾರೋ ಗೊತ್ತಿಲ್ಲ. ಆ ಸಮಯ ಬಂದಾಗ ಅದರ ಬಗ್ಗೆ ಮಾತನಾಡೋಣ’ ಎಂದು ಅವರು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ, ಮಾಜಿ ಸದಸ್ಯ ಟಿ.ಎ. ಶರವಣ, ಜೆಡಿ ಎಸ್ ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್ ಇದ್ದರು.
ಜೆಡಿಎಸ್ ಶಕ್ತಿ ಗೊತ್ತಾಗಲಿದೆ
“2023ರ ಚುನಾವಣೆಯಲ್ಲಿ ಜೆಡಿಎಸ್‌ಶಕ್ತಿ ಏನು ಎಂಬುದು ಗೊತ್ತಾಗಲಿದೆ. 2013ರಲ್ಲಿ ನಾವು ಹೋರಾಟ ಮಾಡಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಯಿತು. ಐದು ವರ್ಷ ಅಧಿಕಾರ ಮಾಡಿದ ಕಾಂಗ್ರೆಸ್ ಅಭಿವೃದ್ಧಿ ಮಾಡಿದ್ದರೆ ಏಕಾಏಕಿ 78 ಸ್ಥಾನಗಳಿಗೆ ಯಾಕೆ ಕುಸಿಯುವಂತಾಯಿತು’ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಬಿಜೆಪಿ ನಾಯಕರಿಗೂ ಜೆಡಿಎಸ್ ಬಗ್ಗೆ ನೀವು ಮಾತನಾಡಬೇಡಿ. 2023ಕ್ಕೆ ಜೆಡಿಎಸ್ ಬಿಟ್ಟು ಏನೂ ಮಾಡಲಾಗಲ್ಲ ಎಂದು
ಸೂಚ್ಯವಾಗಿ ಹೇಳಿದರು.