Advertisement

ಅನುದಾನ ಬಂದಿದ್ದೆಷ್ಟು, ಬಳಸಿದ್ದೆಷ್ಟು?

07:32 AM Jul 02, 2019 | Suhan S |

ಧಾರವಾಡ: ಅಂತೂ ಇಂತು ಕುಂತಿ ಮಕ್ಕಳಿಗೆ ಕೊನೆಗೂ ಸಿಕ್ಕಿದ್ದೇನು? ವನವಾಸ,ಉಪವಾಸ ಮತ್ತು ಅಜ್ಞಾತವಾಸ ಎನ್ನುವ ಉಕ್ತಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಧಾರವಾಡ ಜಿಲ್ಲೆಗೆ ಸರಿಯಾಗಿ ಹೋಲಿಕೆಯಾಗಿದೆ. ಅಷ್ಟೇಯಲ್ಲ, ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತೆ ಸರ್ಕಾರದಿಂದ ಬಿಡುಗಡೆಯಾದ ಬಿಡಿ ಬಿಡಿ ಕಾಸನ್ನು ಸರಿಯಾಗಿ ಖರ್ಚು ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ.

Advertisement

ಹೌದು. ಸಾಂದರ್ಭಿಕ ಶಿಶು, ಅನಿವಾರ್ಯದ ಹೊಂದಾಣಿಕೆ ಮತ್ತು ಒಟ್ಟಾರೆ ಅಧಿಕಾರಕ್ಕಾಗಿ ಬಂದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ. ಇದ್ದರೂ ಅದನ್ನು ಸರಿಯಾಗಿ ಖರ್ಚು ಮಾಡುವಲ್ಲಿ ಆಡಳಿತ ಮೇಲೆ ಹಿಡಿತವಿಲ್ಲ ಎನ್ನುವುದು ಜಿಲ್ಲೆಯ ಪಾಲಿಗೆ ಅನ್ವಯವಾಗುವಂತಿದೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅಂದರೆ 2018ರ ಜೂನ್‌ನಿಂದ-2019ರ ಮೇ ತಿಂಗಳವರೆಗೂ ಧಾರವಾಡ ಜಿಲ್ಲೆಗೆ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ಎಲ್ಲಾ ಯೋಜನೆಗಳ ವತಿಯಿಂದ ಒಟ್ಟು 2013 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳ ಮೂಲಕ ಚಾಲ್ತಿಯಲ್ಲಿದ್ದ ಕಾಮಗಾರಿಗಳಿಗೆ ಒಟ್ಟು 1180 ಕೋಟಿ ರೂ.ಗಳು ಮಂಜೂರಾಗಿದೆ. ಈ ಪೈಕಿ 719 ಕೋಟಿ ರೂ.ಅನುದಾನ ಅಧಿಕೃತವಾಗಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಅನುದಾನದಲ್ಲಿ 627 ಕೋಟಿ ರೂ. ವೆಚ್ಚವಾಗಿದ್ದು 139 ಕೋಟಿ ರೂ. ಸರ್ಕಾರದಿಂದ ಇನ್ನೂ ಬರಬೇಕಿದೆ. ಈ ಪೈಕಿ 35 ಹೊಸ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗಿದೆ. ಇನ್ನುಳಿದ ಕಾಮಗಾರಿಗಳು ಹಳೆಯ ವರ್ಷದ ಲೆಕ್ಕದಲ್ಲಿಯೇ ಇದೆ.

ಆರೋಗ್ಯ ಇಲಾಖೆಗೆ 5 ಕಾಮಗಾರಿಗೆ 4109 ಲಕ್ಷ ರೂ. ಮಂಜೂರಾಗಿದ್ದು, ಬರೀ 17ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಶಿಕ್ಷಣ ಇಲಾಖೆಯ 10 ಕಾಮಗಾರಿಗಳಿಗೆ 1461.26 ಲಕ್ಷ ರೂ. ಮಂಜೂರಾಗಿದ್ದು, 923.635ಲಕ್ಷ ರೂ. ಬಿಡುಗಡೆಯಾಗಿದೆ. ಇನ್ನು 722.745 ಲಕ್ಷ ರೂ. ಬಾಕಿ ಇದೆ. ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಚೇರಿಯಲ್ಲಿ 2 ಕಾಮಗಾರಿಗಳು ನಡೆಯುತ್ತಿದ್ದು, 311.2ಲಕ್ಷ ರೂ. ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆಗೆ ಒಟ್ಟು 15250 ಲಕ್ಷ ರೂ.ಮಂಜೂರಾಗಿದ್ದು ಎಲ್ಲ ಕಾಮಗಾರಿಗಳು ಟೆಂಡರ್‌ ಪ್ರಕ್ರಿಯೆಯಲ್ಲಿಯೇ ಇವೆ.

Advertisement

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 20824.26 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಬರೀ 945.64ಲಕ್ಷ ರೂ. ಬಿಡುಗಡೆಯಾಗಿ ಇದರಲ್ಲಿ 518 ಲಕ್ಷ ರೂ. ಮಾತ್ರ ಬಳಕೆಯಾಗಿದೆ. ಇನ್ನು 1057.95 ಲಕ್ಷ ರೂ.ಬಿಡುಗಡೆಯಾಗಬೇಕಿದೆ. ಕೃಷಿ ಇಲಾಖೆಯ ವಿವಿಧ ಯೋಜನೆಗಳನ್ವಯ 41648.52 ಲಕ್ಷ ರೂ. ಮಂಜೂರಾಗಿದ್ದು, 1891.27 ಲಕ್ಷ ರೂ.ಬಿಡುಗಡೆಯಾಗಿದೆ.ಈ ಪೈಕಿ 1036.18 ಲಕ್ಷ ರೂ. ಬಳಕೆಯಾಗಿದ್ದು, ಸರ್ಕಾರದಿಂದ ಇನ್ನು 2115.89 ಲಕ್ಷ ರೂ. ಬರಬೇಕಿದೆ.

ಚಾಲ್ತಿಯಲ್ಲಿದ್ದ ಕಾಮಗಾರಿಗಳು: ನಗರಾಭಿವೃದ್ಧಿ ಇಲಾಖೆಯಲ್ಲಿ ಒಟ್ಟು 7 ಯೋಜನೆಗಳು ಜಾರಿಯಲ್ಲಿದ್ದು, 41,157 ಲಕ್ಷ ರೂ. ಅನುದಾನ ಮಂಜೂರಾಗಿದೆ. ಈ ಪೈಕಿ 32340 ಬಿಡುಗಡೆಯಾದರೆ, 26,417 ಲಕ್ಷ ರೂ. ವೆಚ್ಚವಾಗಿದ್ದು, ಇನ್ನು 5923 ಲಕ್ಷ ರೂ. ಬಾಕಿ ಹಣ ಬಂದಿಯೇ ಇಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 4001.1 ಲಕ್ಷ ರೂ.ಮಂಜೂರಾಗಿದ್ದು ಇನ್ನು 2325.59 ಲಕ್ಷ ರೂ. ಬಾಕಿ ಹಣ ಬಂದಿಲ್ಲ. ವಿಚಿತ್ರ ಎಂದರೆ ಈ ಇಲಾಖೆಯಲ್ಲಿ 3219 ಲಕ್ಷ ರೂ.ಬಿಡುಗಡೆಯಾಗಿದ್ದರೆ, 893 ಲಕ್ಷ ರೂ. ಮಾತ್ರ ಬಳಕೆಯಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ 339 ಲಕ್ಷ ರೂ. ಮಂಜೂರಾಗಿದ್ದು ಇಲ್ಲಿಯೂ ಇನ್ನು 240 ಲಕ್ಷ ರೂ. ಅನುದಾನ ಸರ್ಕಾರದಿಂದ ಬರಬೇಕಿದೆ. ಇನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಂಜೂರಾದ 21,163.66 ಲಕ್ಷ ರೂ.ಗಳಲ್ಲಿ 1797.94 ಲಕ್ಷ ರೂ.ಗಳು ಬಾಕಿ ಹಣ ಬರಬೇಕಿದೆ. ಅಂದರೆ ಶೇ.50ಅನುದಾನ ಇನ್ನೂ ಜಿಲ್ಲೆಗೆ ಬಂದಿಯೇ ಇಲ್ಲ. ಇನ್ನು ಲೋಕೋಪಯೋಗಿ ಬಂದರು, ಒಳನಾಡು, ಜಲಸಾರಿಗೆ ಇಲಾಖೆಯ 25225 ಲಕ್ಷ ರೂ.ಗಳು ಮಂಜೂರಾಗಿದ್ದು 16,892.15 ಲಕ್ಷ ರೂ.ಗಳು ಮಾತ್ರ ಬಿಡುಗಡೆಯಾಗಿದೆ. 1967ಲಕ್ಷ ರೂ. ಬಾಕಿ ಇದೆ.

ಪ್ರಸ್ತಾವನೆ:ಮನೆ ಮನೆಗೆ ಮಲಪ್ರಭಾ ನದಿ ನೀರು ಹರಿಸುವ 1200 ಕೋಟಿ ರೂ. ಮೊತ್ತದ ಯೋಜನೆ ಪ್ರಸ್ತಾವನೆಯಲ್ಲಿಯೇ ಉಳಿದಿದೆ. ಅದರಂತೆಯೇ ಹಾರೋ ಬೆಳವಡಿ ಸಮೀಪ ಸಾವಿರ ಎಕರೆಯಲ್ಲಿ ಕೆರೆ ನಿರ್ಮಾಣ, ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ 11ಕ್ಕೂ ಹೆಚ್ಚು ಯೋಜನೆಗಳ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ 30ಕ್ಕೂ ಹೆಚ್ಚು ಇಲಾಖೆಗಳ ಮೂಲಕ ಯೋಜನೆಗಳು ಜಿಲ್ಲೆಯಲ್ಲಿ ಜಾರಿಯಲ್ಲಿವೆ. ಧಾರವಾಡ ಜಿಲ್ಲೆಯ ಐದು ತಾಲೂಕಿನಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳಿಗೆ 80 ಲಕ್ಷ ರೂ.ಗಳನ್ನು ನಾನೇ ಖುದ್ದು ಏಪ್ರಿಲ್-ಮೇ ತಿಂಗಳಲ್ಲಿ ಬಿಡುಗಡೆ ಮಾಡಿಸಿದ್ದೇನೆ. ಜಿಲ್ಲೆಯ ಯಾವುದೇ ಅಭಿವೃದ್ಧಿ ಕಾರ್ಯಕ್ಕೂ ಹಣದ ಕೊರತೆ ಇಲ್ಲ.•ಆರ್‌.ವಿ. ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ

 

•ಬಸವರಾಜ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.

Next