Advertisement
ಇಶಾ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರ ನದಿಗಳನ್ನು ಉಳಿಸೋಣ ಎಂಬುದರ ಆಂದೋಲನದ ಪರಿಣಾಮ ವಾಗಿ ಕೊನೇಪಕ್ಷ ಎಲ್ಲ ರಾಜಕೀಯ ಇತ್ಯಾದಿ ವಿದ್ಯಮಾನಗಳ ಮಧ್ಯೆಯೂ ಕೆಲವೆಡೆ ನದಿಗಳ ಕುರಿತ ಚರ್ಚೆ ಆರಂಭವಾಗಿದೆ. ಕೆಲವು ಶಾಲೆಗಳಲ್ಲಿ ನದಿಗಳನ್ನು ಸೇರಿದಂತೆ ಪ್ರಕೃತಿ ಸಂಪನ್ಮೂಲಗಳ ಸಂರಕ್ಷಣೆ ಕುರಿತ ದೀಕ್ಷೆಯನ್ನು ತೊಡುತ್ತಿದ್ದಾರೆ. ಅರಿವಿನ ತೊರೆ ಸಣ್ಣದಾಗಿ ಆರಂಭಗೊಂಡಿದೆ ಎನ್ನಬಹುದೇನೋ?
Related Articles
ಖಂಡಿತ ನದಿ ಬರೀ ನದಿಯಲ್ಲ. ಒಂದು ನದಿಯ ಮೌಲ್ಯ ವೆಷ್ಟು ಎಂಬುದನ್ನು ಅಮೆರಿಕದ ಒಂದು ವಿಶ್ವವಿದ್ಯಾಲಯ (ಅರಿಝೋನಾ ರಾಜ್ಯ ವಿಶ್ವವಿದ್ಯಾಲಯ) ಲೆಕ್ಕ ಹಾಕಿದೆ. ಅಲ್ಲಿನ ಅಧ್ಯಯನಕಾರರು ಕೊಲಾರೆಡೊ ನದಿಯ ಮೌಲ್ಯವೆಷ್ಟಿರಬಹುದು ಎಂದು ತೂಗಿ ಅಳೆದಿದ್ದಾರೆ. ಇದೊಂದು ಬಗೆಯ ನದಿಯೊಂದರ ಆರ್ಥಿಕ ಅಧ್ಯಯನ ಎನ್ನಬಹುದು. ನದಿಯೊಂದರ ಆರ್ಥಿಕ ಆಯಾಮವೆನ್ನಲೂಬಹುದು. ಇಂಥದೊಂದು ಲೆಕ್ಕ ಹಾಕುವ ಚಿಂತನೆ ಯಾಕೆ ಬಂತೆಂದರೆ, ಅಲ್ಲೂ ಕೊಲರಡೊ ಸೊರಗತೊಡಗಿದ್ದಾಳೆ.
Advertisement
ಕೊಲಾರಡೊ ದೊಡ್ಡ ನದಿ. ಅಮೆರಿಕದ ಆರು ರಾಜ್ಯಗಳು ಮತ್ತು ಮೆಕ್ಸಿಕೋದಲ್ಲಿ ಹರಿದುಹೋಗುವಂಥವಳು. ಇಷ್ಟೂ ಭೌಗೋಳಿಕ ಪ್ರದೇಶಕ್ಕೆ ಜಲ ಪೂರೈಸುವವಳು ಇವಳೇ. ಕೇವಲ ನೀರು ಪೂರೈಸುತ್ತಿಲ್ಲ; ಬದಲಾಗಿ ಲಕ್ಷಾಂತರ ಉದ್ಯೋಗಗಳು ಇವಳನ್ನು ನಂಬಿಕೊಂಡಿವೆ. ನೂರಾರು ಶತಕೋಟಿ ಡಾಲರ್‌ಗಳ ಆರ್ಥಿಕ ವ್ಯವಹಾರ ಇವಳ ದೆಸೆಯಿಂದಲೇ ನಡೆಯುತ್ತಿದೆ ಎಂದರೆ ಅಚ್ಚರಿಯಾಗಬಹುದು.
ಚಿಂತನೆ ಆರಂಭವಾದದ್ದು ಹೇಗೆ?ನದಿಯೊಂದರ ಅಧ್ಯಯನಕ್ಕೆ ಹೊರಟಿದ್ದು ಅಂಥದ್ದೇ ಒಂದು ವಿಚಿತ್ರವಾದ ಪ್ರಶ್ನೆಯಿಂದಲೇ. ಈ ನೈರುತ್ಯ ಪ್ರದೇಶಗಳಲ್ಲಿ ಒಂದು ವರ್ಷ ಕೊಲಾರಡೊ ನದಿ ಹರಿಯದಿದ್ದರೆ ಏನಾಗಬಹುದು ಎಂಬುದು ಆ ಪ್ರಶ್ನೆಯಾಗಿತ್ತು. ಈ ರಾಜ್ಯಗಳ ಆರ್ಥಿಕ ಸ್ಥಿತಿಗೆ ಯಾವ ರೀತಿ ಪೆಟ್ಟು ಬೀಳಬಹುದು ಎಂದು ಉತ್ತರ ಹುಡುಕಹೊರಟಿ ದಾಗ ಸಿಕ್ಕಿದ್ದು ಏನೆಂದರೆ, ನೈರುತ್ಯ ಭಾಗದ ರಾಜ್ಯಗಳಲ್ಲಿ ಬರೀ ಕ್ಷಾಮ ಆವರಿಸುವುದಿಲ್ಲ. ಇಡೀ ಆರ್ಥಿಕ ಪರಿಸ್ಥಿತಿಯೇ ಹದ ಗೆಟ್ಟು ಹೋಗಬಹುದು. ಯಾಕೆಂದರೆ ಈ ಎಲ್ಲ ರಾಜ್ಯಗಳ ಆರ್ಥಿಕ ಶಕ್ತಿ-ಚಟುವಟಿಕೆಗಳಿಗೆ ಆಧಾರವಾಗಿರುವುದೇ ಈ ನದಿ. ಈ ಸಂಶೋಧನೆ ಮಾಡಿದ ಲೇಖಕ ಟಿಮ್ ಜೇಮ್ಸ್ ಪ್ರಕಾರ, ಸುಮಾರು 1.4 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಆರ್ಥಿಕ ಚಟುವಟಿಕೆ ಹಾಗೂ 16 ದಶಲಕ್ಷ ಉದ್ಯೋಗಗಳು ನಡೆಯುತ್ತಿರುವುದೇ ಈ ನದಿಯ ಉಪಕಾರದಿಂದ. ಈ ನದಿಯ ವ್ಯಾಪ್ತಿಯಲ್ಲಿ ಬರುವಂಥ ಪ್ರಮುಖ ಪ್ರದೇಶ ವೆಂದರೆ ನೇವಡಾ ಸಹ ಒಂದು. ಕೇವಲ ನೇವಡಾದ ಶೇ. 87ರಷ್ಟು ಜಿಎಸ್‌ಪಿ (ನಮ್ಮಲ್ಲಿ ಜಿಡಿಪಿ ಇದ್ದಂತೆ) ಬರುವುದು ಕೈಗಾರಿಕೆಗಳಿಂದ. ಆ ಕೈಗಾರಿಕೆಗಳೆಲ್ಲ ಬದುಕಿರುವುದೇ ಕೊಲಾರಡೊ ನದಿಯ ಕಾರಣದಿಂದ. ಅದರ ನೀರಿಲ್ಲದಿದ್ದರೆ ಮರುದಿನವೇ ಬಾಗಿಲು ಹಾಕಿಕೊಂಡು ಕುಳಿತುಕೊಳ್ಳಬೇಕು. ಒಂದುವೇಳೆ ಹಾಗೇನಾದರೂ ಆದರೆ ಸುಮಾರು 115 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಂತೆ. ಅಷ್ಟೇ ಅಲ್ಲ. ನೇವಡಾ ಒಂದರಲ್ಲೇ ಸುಮಾರು 1.4 ಮಿಲಿಯನ್ ಉದ್ಯೋಗಿಗಳು ನಿರುದ್ಯೋಗಿಗಳಾಗುತ್ತಾರೆ. ನಮ್ಮ ದುರ್ಬಳಕೆ ಮತ್ತು ಹವಾಮಾನ ಬದಲಾವಣೆ ಇತ್ಯಾದಿ ಕಾರಣಗಳಿಂದ ಪರಿಣಿತರು ಹೇಳುವ ಪ್ರಕಾರ, ಕೊಲಾರಡೊ ನದಿಯೂ ಸಹ ಸೊರಗತೊಡಗಿದ್ದಾಳೆ. ಒಂದು ಅಂದಾಜಿನ ಪ್ರಕಾರ ಅವಳ ಹರಿವಿನಲ್ಲಿ ಇಳಿಕೆ ಆರಂಭವಾಗಿದ್ದು, ಮುಂದಿನ ದಶಕಗಳಲ್ಲಿ ಶೇ. 30ರಷ್ಟು ಇಳಿಕೆಯಾಗಲಿದೆಯಂತೆ. ಹಾಗಾಗಿಯೇ ಸಂರಕ್ಷಣೆಯ ಜಪ ಆರಂಭವಾಗಿದೆ. ಹೇಗಾದರೂ ಮಾಡಿ ನದಿಯನ್ನು ಉಳಿಸಿಕೊಳ್ಳದಿದ್ದರೆ ನಾವು ಬದುಕುವುದೂ ಕಷ್ಟವಿದೆ ಎಂಬುದು ಸ್ಪಷ್ಟವಾಗಿ ಅರಿವಿಗೆ ಬಂದಿದೆ. ನಮ್ಮ ಕಥೆ ಹೇಗೆ?
ನಮ್ಮಲ್ಲೇನೂ ಪರಿಸ್ಥಿತಿ ಬಹಳ ಭಿನ್ನವಾಗಿಲ್ಲ. ನಾವು ನೋಡುವ ಕ್ರಮವನ್ನೇ ಬದಲಾಯಿಸಿಕೊಳ್ಳಬೇಕಾದ ತುರ್ತು ಸ್ಥಿತಿ ಇಂದಿನದು. ಇಲ್ಲವಾದರೆ ಕೊಲಾರಡೊ ನದಿಯ ಅಧ್ಯಯನಕ್ಕೆ ಹಾಕಿಕೊಂಡ ಪ್ರಶ್ನೆ ನಮ್ಮಲ್ಲಿ ವಾಸ್ತವಕ್ಕೆ ಬಂದೀತು. ಗಂಗೆಯನ್ನು ಮಲಿನಗೊಳಿಸಿದ್ದಾಯಿತು. ಈಗ ಶುದ್ಧಗೊಳಿಸಲು ಕೋಟಿ ಗಟ್ಟಲೆ ಹಣ ಸುರಿಯುತ್ತಿದ್ದೇವೆ. ಒಂದುವೇಳೆ ಅದರಿಂದ ಅನುಕೂಲವಾದರೆ ಒಳ್ಳೆಯದೇ. ಆಗದಿದ್ದರೆ ಸಂಕಷ್ಟಕ್ಕೆ ಸಿಲುಕುವುದಂತೂ ಖಚಿತ. ಆದರೆ ಈಗಲಾದರೂ ನಮ್ಮ ಕೆಲವು ಅಭ್ಯಾಸಗಳಿಂದ ಯೂ ಟರ್ನ್ ತೆಗೆದುಕೊಳ್ಳಲು ಸಾಧ್ಯವೇ ಎಂದು ಯೋಚಿಸುವುದು ಒಳಿತು. ಅದೃಷ್ಟವಶಾತ್ ದೇಶದಲ್ಲಿ ಇನ್ನೂ ಕೆಲವೆಡೆ ಬೆರಳೆಣಿಕೆ ಯಷ್ಟು ನದಿಗಳು, ಕೆರೆಗಳು ಉಳಿದುಕೊಂಡಿವೆ. ಅವುಗಳನ್ನಾದರೂ ಸಂರಕ್ಷಿಸುವತ್ತ ಗಮನಹರಿಸಬೇಕಿದೆ.
ನಮ್ಮ ಸ್ಥಳೀಯ ಸಂಸ್ಥೆಗಳು, ಸರಕಾರಗಳು ಇದರ ಬಗ್ಗೆ ಎಚ್ಚರ ವಹಿಸುವುದೂ ಆಗಬೇಕಾದ ಕೆಲಸ. ಆದರೆ, ನಮ್ಮ ಆಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಸರಕಾರಗಳಿಗೂ ಒಂದು ನದಿಯ ಅಥವಾ ಜಲಮೂಲದ ಆರ್ಥಿಕ ಆಯಾಮ ಇನ್ನೂ ತಿಳಿದೇ ಇಲ್ಲ. ಬಿಸಿಲು ಜಾಸ್ತಿಯಾದಾಗ ಫ್ರಿಜ್‌ನಿಂದ ಸೀಲ್ಡ್ ಚಿಲ್ಡ್ ಬಾಟಲಿ ನೀರನ್ನು ಕುಡಿದು ಬಾಟಲಿ ಎಸೆದಂತೆಯೇ ನದಿಗಳೂ, ಜಲಮೂಲಗಳೂ ಎಂದು ತಿಳಿದಿವೆ. ನಮ್ಮ ಕಾಳಜಿಯೂ ಅಷ್ಟೇ. ಅದಕ್ಕಾಗಿಯೇ ಒಂದು ನದಿ ಮಲಿನಗೊಂಡು ಉಸಿರುಗಟ್ಟಿದರೂ ನಮಗೇನೂ ಎನ್ನಿಸುವುದಿಲ್ಲ. ಎಲ್ಲಿದೆ ವೃಷಭಾವತಿ?
ಈ ಮಾತು ಸುಮ್ಮನೇ ಹೇಳುತ್ತಿಲ್ಲ. ಬೆಂಗಳೂರಿನ ವೃಷಭಾವತಿ ಎಲ್ಲಿದ್ದಾಳೆ? ಹುಡುಕಿಕೊಂಡು ಬನ್ನಿ. ಕೈಗಾರಿಕೆ ಸೇರಿದಂತೆ ಇತರ ತ್ಯಾಜ್ಯಗಳ ಕೊಂಪೆಯಾಗಿ ಹರಿಯುತ್ತಿದ್ದಾಳೆ. ಮುಂದೊಂದು ದಿನ ಬಿಡಿಎನವರೋ, ಮತಾöರೋ ಖಾಸಗಿಯವರು ದೊಡ್ಡದೊಂದು ಬಡಾವಣೆ ನಿರ್ಮಿಸಿ ಅದಕ್ಕೊಂದು ಹೆಸರಿಟ್ಟುಬಿಡುತ್ತಾರೆ. ಅಲ್ಲಿಗೆ ನಮ್ಮ ಸಾಧನೆ ಮುಗಿಯಿತು. ಇಂಥದ್ದೇ ಪರಿಸ್ಥಿತಿ ಎಲ್ಲ ನದಿಗಳಿಗೂ ಬಂದರೆ ಹೇಗಿರಬಹುದು ಎಂದು ಊಹಿಸಿಕೊಂಡಾದರೂ ಕ್ರಿಯಾಶೀಲವಾಗಬೇಡವೇ ಎಂಬುದು ಸದ್ಯದ ಪ್ರಶ್ನೆ. ಇದೆಲ್ಲವೂ ಪ್ರಕೃತಿ ಸಂಪನ್ಮೂಲಕ್ಕೂ ನಮ್ಮ ಆರ್ಥಿಕತೆಗೂ ಇರುವ ಸಂಬಂಧದ ಕಥೆಯಲ್ಲ; ವಾಸ್ತವ. ನದಿಯೂ ಸೇರಿದಂತೆ ಪ್ರಕೃತಿ ಸಂಪನ್ಮೂಲಗಳನ್ನು ದುಂದುವೆಚ್ಚ ಮಾಡಿಕೊಳುತ್ತಾ ಹೊರಟರೆ ಮುಂದಿನ ತಲೆಮಾರುಗಳು ಏನನ್ನು ಉಣ್ಣಬೇಕು? ಆ ತಲೆಮಾರುಗಳು ತಮ್ಮ ಹಿರಿಯರ ಮೇಲೆ ಇಡಬಹುದಾದ ಗೌರವವಾದರೂ ಏನು? ಎಂದೇ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಪ್ರಕೃತಿ ಸಂಪನ್ಮೂಲಗಳ ದುರ್ಬಳಕೆಯತ್ತ ಕಡಿವಾಣ ಹಾಕುವುದು ಎಷ್ಟು ಮುಖ್ಯವೋ ಅದರೊಂದಿಗೇ ಅವುಗಳನ್ನು ಕಲುಷಿತಗೊಳಿಸುವುದು, ಶಕ್ತಿ ಕುಂದಿಸುವುದೂ ಅಷ್ಟೇ ದೊಡ್ಡ ಅಪರಾಧ. ಆಡಳಿತಗಾರರು ಎರಡರ ಪರಿಣಾಮವನ್ನೂ ಸಾರ್ವ ಜನಿಕರಿಗೆ ಮನದಟ್ಟು ಮಾಡಿಕೊಡಲು ಪ್ರಯತ್ನಿಸಬೇಕು. ಪ್ರತಿ ಶಾಲೆಗಳಲ್ಲೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಅವೆಲ್ಲವೂ ಸಾಧ್ಯವಾಗದಿದ್ದರೆ ನಾವು ಬರೀ ಹೆಸರಿನಲ್ಲಿ, ನಕ್ಷೆಗಳಲ್ಲಿ ನದಿಗಳನ್ನು ಉಳಿಸಿಕೊಳ್ಳುತ್ತೇವೆ; ಬದುಕಲಿಕ್ಕಲ್ಲ ಮತ್ತು ಬದುಕಿಗೂ ಅಲ್ಲ ಎಂಬುದು ಖಚಿತ.