Advertisement

ಬದುಕಿನ ಬಂಡಿ ಕಟ್ಟಲು ಇನ್ನೆಷ್ಟು ವರ್ಷ?

10:21 AM Aug 10, 2019 | Suhan S |

ಬೆಳಗಾವಿ: ಮನಿ ಕಳ್ಕೊಂಡಾಗ ಇರಾಕ ಅಂತ ಜಾಗಾ ಕೊಟ್ಟಾರ. ಮೊದಲ ದಿನಕ್ಕ ಭಾಳ ಛಂದ ನೋಡ್ಕೊಂಡ್ರ. ಮುಖ್ಯಮಂತ್ರಿ ಯಡಿಯೂರಪ್ಪ ಸಾಹೇಬ್ರ ಬರಾತಾರ ಅಂತ ಅನ್ನಾ ಸಾರದ ಜೊತಿಗಿ ಉಪ್ಪಿನಕಾಯಿ ಅಂತ ಸ್ಪೇಷಲ್ ಕೊಟ್ರ. ಆದರ ನಾಕ ದಿನದಿಂದ ನೋರಗ ಸಾರ, ಕುದಿಲಾರದ ಅನ್ನಾ ಕೊಟ್ಟ ಉಪಕಾರ ಮಾಡಾಕತ್ತಾರ.

Advertisement

ಧೋ ಧೋ ಸುರಿಯುತ್ತಿರುವ ಮಳೆಯಲ್ಲಿಮುಳುಗಡೆಯಾದ ಮನೆಗಳನ್ನು ಬಿಟ್ಟು ಬೀದಿಗೆ ಬಿದ್ದ ಈ ಸಂತ್ರಸ್ತರ ಪಾಡು ಹೇಳತೀರದು. ಜಿಲ್ಲಾಡಳಿತ ತೆರೆದ ಗಂಜಿ ಕೇಂದ್ರದಲ್ಲಿ ಸರಿಯಾದ ಊಟದ ವ್ಯವಸ್ಥೆ ಇಲ್ಲದೇ ಪರದಾಡುತ್ತಿರುವ ಬೆಳಗಾವಿ ನಗರದ ವಡಗಾಂವಿಯ ಸಾಯಿ ಭವನದಲ್ಲಿ ವಾಸ್ತವ್ಯ ಹೂಡಿರುವ ಜನರ ಗೋಳು ಯಾರಿಗೂ ಕೇಳಿಸುತ್ತಿಲ್ಲ.

ಈ ಗಂಜಿ ಕೇಂದ್ರದಲ್ಲಿ ಈ ಭಾಗದ 82 ಕುಟುಂಬಗಳ 235 ಜನರು ವಾಸವಾಗಿದ್ದಾರೆ. ಮೊದಲಿ ವಡಗಾಂವಿಯ ಮಲ್ಲಿಕಾರ್ಜುನ ದೇವಸ್ಥಾನದ ಕಾರ್ಯಾಲಯದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಲ್ಲಿಂದ ಈಗ ಸಾಯಿ ಭವನಕ್ಕೆ ಸ್ಥಳಾಂತರಗೊಳಿಸಲಾಗಿದೆ.

ಸಂತ್ರಸ್ತರ ಆಕ್ರೋಶ: ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ವಡಗಾಂವಿ, ಖಾಸಬಾಗ, ಶಹಾಪುರ ಭಾಗದಲ್ಲಿ ಭಾರೀ ಮಳೆ ನೀರು ನುಗ್ಗಿ ಅನೇಕ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳ ಕರೆದುಕೊಂಡು ಸರ್ಕಾರದ ಗಂಜಿ ಕೇಂದ್ರಗಳಲ್ಲಿ ವಾಸ್ತವ್ಯ ಮಾಡಿದ್ದಾರೆ. ಆದರೆ ಜಿಲ್ಲಾಡಳಿತದಿಂದ ಪೂರೈಕೆ ಆಗುತ್ತಿರುವ ಎರಡು ಹೊತ್ತಿನ ಊಟ ಹಾಗೂ ಬೆಳಗಿನ ಉಪಹಾರ ಗುಣಮಟ್ಟದಿಂದ ಕೂಡಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೂರು ದಿನಗಳ ಕಾಲ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಗರದ ಈ ಗಂಜಿ ಕೇಂದ್ರಕ್ಕೂ ಆಗಮಿಸಿದ್ದರು. ಅಂದು ಅನ್ನ, ಸಾರಿನ ಜತೆಗೆ ಉಪ್ಪಿನಕಾಯಿ ಕೊಡಲಾಗಿತ್ತು. ಈಗ ಮೂರ್ನಾಲ್ಕು ದಿನಗಳಿಂದ ಸರಿಯಾದ ಆಹಾರ ನೀಡುತ್ತಿಲ್ಲ. ಅನೇಕ ಸಲ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅವ್ಯವಸ್ಥೆಯ ಆಗರಕ್ಕೆ ಇಲ್ಲಿಯ ಸಂತ್ರಸ್ತರು ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಸೌಕರ್ಯ ಇಲ್ಲದೇ ಪರದಾಟ: ನೇಕಾರ ಕುಟುಂಬದವರಾದ ಇಲ್ಲಿಯ ಸಂತ್ರಸ್ತರಿಗೆ ಮಳೆ ನಿಂತರೂ ಮುಂದಿನ ಬದುಕು ಕಟ್ಟಿಕೊಳ್ಳುವುದೇ ಕಷ್ಟಕರವಾಗಿದೆ. ಮನೆ ಜತೆಗೆ ಇವರ ಬದುಕಿಗೆ ಆಸರೆಯಾದ ಮಗ್ಗಗಳೂ ಮುಳುಗಿವೆ. ಬದುಕು ಕಟ್ಟಿಕೊಳ್ಳಲು ಎಷೋr ವರ್ಷಗಳೇ ಬೇಕಾಗುತ್ತವೆ. ಕಡು ಬಡತನದ ಈ ನೇಕಾರ ಕುಟುಂಬಗಳು ಮಳೆ ನಿಲ್ಲುವವರೆಗೆ ಆಶ್ರಯ ಪಡೆದಿರುವ ಗಂಜಿ ಕೇಂದ್ರಗಳಲ್ಲೂ ಸರಿಯಾದ ಸೌಕರ್ಯಗಳಿಲ್ಲ. ಹೀಗಾದರೆ ಮುಂದಿನ ಜೀವನ ಹೇಗೆ ಎಂಬ ಚಿಂತೆ ಇವರನ್ನು ಕಾಡುತ್ತಿದೆ.

ಇಲ್ಲಿ ಸರಿಯಾದ ನೀರಿನ ವ್ಯವಸ್ಥೆಯೂ ಇಲ್ಲ. ಗಾಳಿ, ಮಳೆಯೊಂದಿಗೆ ಚಳಿಯೂ ಇದೆ. ಬಿಸಿ ನೀರು ಇಲ್ಲದ್ದಕ್ಕೆ ವೃದ್ಧರು, ಮಕ್ಕಳು ತಣೀ¡ರಿನ ಸ್ನಾನ ಮಾಡುತ್ತಿದ್ದಾರೆ. ಚಿಕ್ಕ ಮಕ್ಕಳಿಗೆ ಕುಡಿಸಲು ಬಿಸಿ ನೀರು ಕೊಡುತ್ತಿಲ್ಲ. ಹೀಗಾಗಿ ಆಗಾಗ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಲ್ಲಿಂದ ಎದ್ದು ಹೋಗೋಣವೆಂದರೆ ಹೋಗೋದಾದರೆ ಎಲ್ಲಿ ಎಂಬ ಪ್ರಶ್ನೆ ಕಾಡುತ್ತಿದೆ. ತಾತ್ಕಾಲಿಕ ವ್ಯವಸ್ಥೆಯೇ ಹೀಗಿರುವಾಗ ಶಾಶ್ವತ ಪರಿಹಾರ ಎಂಬುದು ಗಗನಕುಸುಮ ಎನ್ನುತ್ತಾರೆ ಸಂತ್ರಸ್ತೆ ಧಾಮಣೆ ರಸ್ತೆಯ ಸಾಯಿ ನಗರದ ವಿದ್ಯಾರಾಣಿ ಮಕಾಟಿ.

ವೃದ್ಧೆಯ ಅಳಲು: ಮನೆ ಕಳೆದುಕೊಂಡು ಮಾನಸಿಕವಾಗಿ ಜರ್ಜರಿತಗೊಂಡ ಧಾಮಣೆ ರಸ್ತೆಯ ಸಾಯಿ ನಗರದ ಕಸ್ತೂರಿ ಬುಚಡಿ ಎಂಬ ವೃದ್ಧೆ 2-3 ದಿನಗಳಿಂದ ಹಾಸಿಗೆ ಹಿಡಿದು ಮಲಗಿದ್ದಾರೆ. ಇದ್ದ ಮನೆಯೂ ನೆಲಸಮಗೊಂಡಿದ್ದಕ್ಕೆ ಜೀವನವೇ ಸಾಕಾಗಿದೆ ಎಂಬ ನೋವಿನ ಮಾತುಗಳನ್ನಾಡಿದರು. ಬದುಕಿನ ಬಂಡಿ ಕಟ್ಟಿಕೊಳ್ಳಲು ಇನ್ನೆಷ್ಟು ದಿನ ಬೇಕು ಎಂಬುದನ್ನು ವೃದ್ಧೆ ಕಸ್ತೂರಿ ಮರು ಪ್ರಶ್ನೆ ಹಾಕಿದರು.

ಪ್ರವಾಹ ಪೀಡಿತರ ನೋವು ಕಂಡು ಅನೇಕರು ಸಹಾಯ ಹಸ್ತ ಚಾಚುತ್ತಿದ್ದಾರೆ. ಸಂಘ-ಸಂಸ್ಥೆಗಳು, ಯುವಕ ಮಂಡಳಿಗಳು, ಸಮಾಜ ಸೇವಕರು, ಕಾಲೇಜು ವಿದ್ಯಾರ್ಥಿಗಳು ಕ್ಯೂನಲ್ಲಿ ನಿಂತಿದ್ದಾರೆ. ಊಟ, ಉಪಹಾರ, ದಿನ ನಿತ್ಯದ ವಸ್ತುಗಳನ್ನು ತರುತ್ತಿದ್ದಾರೆ. ಆದರೆ ಹೊರಗಡೆಯಿಂದ ಬರುವ ಆಹಾರವನ್ನು ಸಂತ್ರಸ್ತರಿಗೆ ಅಲ್ಲಿ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳು ಕೊಡುತ್ತಿಲ್ಲ. ಹೊರಗಿನ ಆಹಾರಕ್ಕೆ ಬ್ರೇಕ್‌ ಹಾಕಿದ್ದರಿಂದ ದಾನಿಗಳು ನೀಡುವ ಸಹಾಯ ಇವರಿಗಿಲ್ಲವಾಗಿದೆ.

ಹೊರಗಿನಿಂದ ಜನರು ಕೊಡುವ ಆಹಾರ ಬೇಡ ಎನ್ನುವುದಾದರೆ ಜಿಲ್ಲಾಡಳಿತ ಹಾಗೂ ಪಾಲಿಕೆಯವರಾದರೂ ಉತ್ತಮ ಅಹಾರ ಪೂರೈಸಬೇಕಲ್ಲವೇ. ಅಕ್ಷರ ದಾಸೋಹದಿಂದ ನೀಡುವ ಎರಡು ಹೊತ್ತಿನ ಊಟ ಮಾಡಿ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಡವರು ಏನೇನೋ ತಿನ್ನುತ್ತಾರೆಂದು ಕೊಟ್ಟರೆ ಹೇಗೆ ಎಂಬ ಅಲ್ಲಿಯ ಮಹಿಳೆಯರು ನೋವಿನಿಂದ ನುಡಿದರು.

ಬೆಳಗಾವಿ ನಗರದ ಗಂಜಿ ಕೇಂದ್ರಗಳಿಗೆ ಸಮೃದ್ಧಿ ಸೇವಾ ಸಂಸ್ಥೆಯಿಂದ ಹಾಗೂ ಗ್ರಾಮೀಣ ಗಂಜಿ ಕೇಂದ್ರಕ್ಕೆ ಬಿಸಿಯೂಟದವರು ಆಹಾರ ಪೂರೈಸುತ್ತಿದ್ದಾರೆ. ಪ್ರವಾಹ ಪೀಡಿತ ಸಂತ್ರಸ್ತರಿಗೆ ಅನ್ನ, ಸಾರು ನೀಡಲಾಗುತ್ತಿದೆ. ಗುಣಮಟ್ಟದ ಆಹಾರ ಕೊಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.•ಆರ್‌.ಸಿ. ಮುದಕನಗೌಡರ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ

ರಪಾ ರಪಾ ಬಿದ್ದ ಮಳಿಗಿ ಪೂರ್ತಿ ಮನಿಗೋಳ ಬಿದ್ದಾವ. ಮುಂದ ಹೆಂಗ ಅನ್ನೋ ಚಿಂತಿ ಕಾಡಾಕತೈ್ತತಿ. ಜೀವನಕ್ಕ ಆಸರಿ ಆಗಿದ್ದ ಮಗ್ಗಗಳೂ ಮುಳಗ್ಯಾವ. ಮಗ್ಗಾ ರಿಪೇರಿ ಮಾಡಿ ನಡಸೋದಂದ್ರ ಹೊಸಾದ್ದ ಖರೀದಿ ಮಾಡಿದಂಗ ಆಗತೈತಿ. ಸರ್ಕಾರ ನೇಕಾರರ ಸಾಲ ಮನ್ನಾ ಮಾಡೈತಿ. ಸೊಸೈಟಿಯಿಂದ ಲೋನ್‌ ಹೆಂಗ್‌ ತುಂಬೋದು?. ಅದನ್ನೂ ಮನ್ನಾ ಮಾಡಿದ್ರ ನಮ್ಮ ಬಾಳೇ ಆಗತಿ.•ಮಡಿವಾಳಪ್ಪ ಇಂಚಲ, ಸಂತ್ರಸ್ತ

 

•ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next