ಬೆಂಗಳೂರು: ರಾಜಕಾಲುವೆ ಹೂಳೆತ್ತುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸಲು ನಿಖರವಾಗಿ ಎಷ್ಟು ಸಮಯ ಬೇಕು ಎಂಬುದನ್ನು ಸ್ಪಷ್ಟಪಡಿಸುವಂತೆ ಬಿಬಿಎಂಪಿಗೆ ತಾಕೀತು ಮಾಡಿದೆ.
ರಾಜಕಾಲುವೆ ಒತ್ತುವರಿ ತೆರವು ಹಾಗೂ ಹೂಳೆತ್ತುವ ಸಂಬಂಧ ಸಿಟಿಜನ್ ಆ್ಯಕ್ಷನ್ ಫೋರಂ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಈ ಸೂಚನೆ ನೀಡಿತು.
ವಿಚಾರಣೆ ವೇಳೆ 400 ಕಿ.ಮೀ ಉದ್ದದ ರಾಜಕಾಲುವೆ ಹೂಳೆತ್ತುವ ಕಾಮಗಾರಿ ಬಾಕಿ ಉಳಿದುಕೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಬಿಬಿಎಂಪಿ ಪ್ರತಿಬಾರಿ ಕಾಮಗಾರಿ ಪ್ರಗತಿಯಲ್ಲಿದೆ ಎಂದೇ ತಿಳಿಸುತ್ತದೆ. ಆದರೆ, ಯಾವಾಗ ಕಾಮಗಾರಿ ಪೂರ್ಣಗೊಳಿಸುತ್ತೀರಿ ಎಂಬುದಕ್ಕೆ ಉತ್ತರವಿಲ್ಲ. ಇಡೀ ಕಾಮಗಾರಿ ಯೋಜನೆಗೆ ಎಷ್ಟು ಹಣ ವೆಚ್ಚವಾಗಲಿದೆ ಎಂಬುದೂ ಗೊತ್ತಿಲ್ಲ ಎಂದು ತರಾಟೆ ತೆಗೆದುಕೊಂಡಿತು.
ಒತ್ತುವರಿ ತೆರವು ಹಾಗೂ ಹೂಳೆತ್ತುವ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಏನಾಗುತ್ತಿದೆ ಎಂದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ನ್ಯಾಯಪೀಠ, ಧಾರಕಾರ ಮಳೆ ಬಂದು ರಾಜಕಾಲುವೆಗಳು ತುಂಬಿ ಹರಿದರೇ ಜನರ ಜೀವಗಳಿಗೆ ತೊಂದರೆಯಾಗಲಿದೆ.
ಅಲ್ಲದೆ ಹೊರ ದೇಶಗಳಲ್ಲಿ ರಾಜಕಾಲುವೆಗಳನ್ನು ಹೇಗೆ ಅಚ್ಚುಕಟ್ಟಾಗಿ ಇಟ್ಟುಕೊಂಡಿರುತ್ತಾರೆ ಎಂಬುದು ಗೊತ್ತಿದೆಯಾ? ಗೊತ್ತಿಲ್ಲದಿದ್ದರೆ ನಿಮ್ಮ ಆಯುಕ್ತರೂ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹೋಗಿ ಒಮ್ಮೆ ನೋಡಿಕೊಂಡು ಬರಲು ಹೇಳಿ ವಿನಾಕಾರಣ ವಿಳಂಬತೆ ತೋರಬೇಡಿ ಎಂದು ಆಕ್ರೋಶವ್ಯಕ್ತಪಡಿಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿದುಕೊಂಡಿರುವ ರಾಜಕಾಲುವೆ ಹೂಳೆತ್ತುವ ಕಾಮಗಾರಿಗೆ ತಗಲುವ ಅಂದಾಜು ವೆಚ್ಚ, ಕಾಮಗಾರಿ ಪೂರ್ಣಗೊಳಿಸಲು ಬೇಕಾಗುವ ಕಾಲಾವಕಾಶದ ಬಗ್ಗೆ ಸ್ಪಷ್ಟಪಡಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿ ಜನವರಿ 23ಕ್ಕೆ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜಕಾಲುವೆ ಹೂಳು ತೆಗೆಯುವ ಕಾಮಗಾರಿಯಲ್ಲಿ ಬಿಬಿಎಂಪಿ ವಿನಾಕಾರಣ ವಿಳಂಬ ಮಾಡುತ್ತಿದೆ ಎಂದು ನ್ಯಾಯಪೀಠದ ಮುಂದೆ ದೂರಿದರು.