Advertisement
ಅವಳು ಮಾತನಾಡುತ್ತಲೇ ಇದ್ದಳು. ಅವಳು ಹೇಳುತ್ತಿದ್ದ ಕಾರಣ ಯಾವುದೂ ನನಗೆ ಪ್ರಿಯವೆನಿಸಿರಲಿಲ್ಲ. ಅವಳ ಬದುಕು ಅವಳದು ಎಂದು ಸುಮ್ಮನಾದೆ. ಬೆಂಗಳೂರಿನಲ್ಲಿ ಕೆಲಸ ಸಿಗಬಹುದು! ಆದರೆ, ಮತ್ತದೇ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಾ?ತಂತ್ರಜ್ಞಾನ, ಜಾಗತೀಕರಣ ನಮ್ಮನ್ನು ವಿಚಾರಶೂನ್ಯರನ್ನಾಗಿ ಮಾಡಿದೆಯಾ? ಈ ಸಂಬಂಧಗಳು ಇಷ್ಟು ಸಡಿಲವಾಗುವುದಕ್ಕೆ ಮುಖ್ಯ ಕಾರಣವಾದರೂ ಏನು? ನಮ್ಮಲ್ಲಿನ ಸಂಸ್ಕಾರದ ಕೊರತೆಯಾ? ತಾಳ್ಮೆ ಇಲ್ಲದಿರುವಿಕೆಯ ಅಥವಾ ಅಹಂಕಾರನಾ? ತಣ್ಣೀರನ್ನಾದರೂ ತಣಿಸಿ ಕುಡಿಯಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ, ಇದಕ್ಕೆಲ್ಲ ನಮ್ಮ ಬಳಿ ಸಮಯವೆಲ್ಲಿದೆ? ಎಲ್ಲವೂ ಫಾಸ್ಟ್ ಆಗಿ ಆಗಬೇಕು ಎಂಬ ಹಪಾಹಪಿಗೆ ಬಿದ್ದಿದ್ದೇವೆ. ನಮ್ಮ ಬದುಕನ್ನು ಇನ್ಯಾರದೋ ಬದುಕಿಗೆ ಹೋಲಿಸಿಕೊಂಡು ಬಾಳುತ್ತೇವೆ. ಅರೆ! ಅವರೆಷ್ಟು ಚೆನ್ನಾಗಿದ್ದಾರೆ. ಮೊನ್ನೆಯಷ್ಟೆ ಲಂಡನ್ ಟ್ರಿಪ್‌ಗೆ ಹೋಗಿ ಬಂದಿದ್ದಾರೆ. ಅವಳ ಗಂಡ ಅವಳ ಹುಟ್ಟುಹಬ್ಬಕ್ಕೆ ನೆಕ್ಲೇಸ್ ಕೊಡಿಸಿದ್ದಾರೆ. ನೀವು ಇದ್ದೀರಿ ಮದುವೆಯಾಗಿ ಇಷ್ಟು ವರ್ಷ ಆದರೂ ಏನೂ ಕೊಡಿಸಿಲ್ಲ. ನನಗೂ ಸಾಕಾಗಿ ಹೋಗಿದೆ ಎಂದು ಚುಚ್ಚು ಮಾತುಗಳ ಮಳೆಗರೆಯುತ್ತೇವೆ. ಇನ್ಯಾರದ್ದೋ ಜೀವನದೊಂದಿಗೆ ನಮ್ಮ ಜೀವನವನ್ನು ಹೋಲಿಸಿಕೊಂಡಾಗಲೇ ಸಂಸಾರದಲ್ಲೊಂದು ಅಸಮಾಧಾನ ಮೆಲ್ಲಗೆ ಹೊಗೆಯಾಡುವುದಕ್ಕೆ ಶುರುವಾಗುತ್ತದೆ. ಹೊಗೆ ಬೆಂಕಿಯ ಜ್ವಾಲೆಯಾಗಿ ಮನಸ್ಸಿನ ನೆಮ್ಮದಿಯನ್ನು ಅಪೋಶನ ತೆಗೆದುಕೊಳ್ಳುತ್ತದೆ. ಆದರೂ ನಮ್ಮೊಳಗಿನ ಹೋಲಿಕೆ ಮಾಡುವ ಗುಣ ಮಾತ್ರ ಕಡಿಮೆಯಾಗಿಲ್ಲ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಮನಸ್ಸು ತುಡಿಯುತ್ತಲೇ ಇರುತ್ತದೆ.
ನಮ್ಮಲ್ಲಿ ಈಗ ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಹೊಂದಾಣಿಕೆ. “ನಾನ್ಯಾಕೆ ನೀ ಹೇಳಿದ್ದು ಕೇಳಬೇಕು’ ಎಂಬ ಭಾವ. ಇದೇ ಸಂಸಾರದ ಒಡಕಿಗೆ ಕಾರಣವಾಗುತ್ತದೆ. ಒಬ್ಬರ ಮಾತನ್ನು ಇನ್ನೊಬ್ಬರು ಗೌರವಿಸುವ ಗುಣ ಬೆಳೆಸಿಕೊಂಡರೆ ಬದುಕು ಸುಂದರಮಯವಾಗುತ್ತದೆ. ಕೈಯಲ್ಲಿರುವ ಎಲ್ಲ ಬೆರಳುಗಳು ಹೇಗೆ ಸಮನಾಗಿರುವುದಿಲ್ಲವೋ ಹಾಗೇ ಗಂಡ-ಹೆಂಡಿರ ಮಧ್ಯೆ ಎಲ್ಲ ಭಾವನೆಗಳು ಸಮನಾಗಿರುವುದಿಲ್ಲ. ಒಬ್ಬರು ಇನ್ನೊಬ್ಬರ ಭಾವನೆಯನ್ನು ಗೌರವಿಸುವ, ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕಿದೆ. ಪ್ರೀತಿ ಹಾಗೂ ಸರಸದ ಮಾತಿಗಿಂತ ಅಹಂಕಾರ ಹಾಗೂ ಚುಚ್ಚು ಮಾತುಗಳೇ ಸಂಸಾರದದಲ್ಲಿ ಹೆಚ್ಚಾದರೆ ನಮ್ಮ ಕೀಳು ಮಾತಿನಿಂದ ನಾವೇ ಬೆಲೆ ತೆರಬೇಕಾಗುತ್ತದೆ. ಕೆಲಸ ಮಾಡಿ ಬಂದಿರುವ ಗಂಡನಿಗೆ ನೂರೊಂದು ಒತ್ತಡವಿದ್ದಿರಬಹುದು. ಹೆಣ್ಣು ಸ್ವಲ್ಪ ಅರಿತು ಬಾಳಿದರೆ ಜೀವನ ಹೊಸದೊಂದು ತಿರುವು ತೆಗೆದುಕೊಳ್ಳುತ್ತದೆ. ಹಾಗೇ ಹೆಣ್ಣು ಮನೆಯಲ್ಲಿದ್ದಾಳೆ ಎಂದ ಮಾತ್ರಕ್ಕೆ ಅವಳದ್ದು ತಾತ್ಸಾರದ ಬದುಕಲ್ಲ. ಹೊತ್ತು ಹೊತ್ತಿಗೆ ತುತ್ತುಬೇಯಿಸಿ ಹಾಕಿ ಗಂಡ, ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಸುಲಭವೆಂದವರು ಯಾರು?
Related Articles
Advertisement
ಇನ್ನು ಗಂಡನಾಗಲಿ, ಹೆಂಡತಿಯಾಗಲಿ ಐದು ನಿಮಿಷ ಕುಳಿತು ಆ ದಿನದ ಆಗುಹೋಗುಗಳ ಕುರಿತು ಮಾತನಾಡುವಷ್ಟು ಸಮಯವನ್ನು ಹೊಂದಿಸಿಕೊಳ್ಳಬೇಕು. ಆಗ ಇಬ್ಬರ ಮನಸ್ಸಿಗೂ ಖುಷಿಯಾಗುತ್ತದೆ. ಒಬ್ಬರು ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳುವಷ್ಟು ತಾಳ್ಮೆ ಇರಬೇಕು.
ಹೆಂಡತಿಯ ತಪ್ಪನ್ನು ಗಂಡ ತನ್ನ ಮನೆಯವರ ಬಳಿ ಮಾತನಾಡುವುದು ಇನ್ನು ಗಂಡನ ತಪ್ಪನ್ನು ಹೆಂಡತಿ ತನ್ನ ತಾಯಿಯ ಬಳಿ ಹೇಳುವುದನ್ನು ಮಾಡಬಾರದು. ನಮ್ಮ ಬದುಕು ನಮ್ಮದು. ಇನ್ಯಾರೋ ಅಭಿಪ್ರಾಯ ನಮ್ಮೊಳಗಿನ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಗಂಡನ ಬಗ್ಗೆ ಅಥವಾ ಹೆಂಡತಿಯ ಬಗ್ಗೆಯಾಗಲಿ ಇನ್ನೊಬ್ಬರ ಬಳಿ ಚಾಡಿ ಹೇಳಬಾರದು. ಇದರಿಂದ ನಾವೇ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ನಮ್ಮ ಗಂಡ ಅಥವಾ ಹೆಂಡತಿಯ ಬಗ್ಗೆ ನಾವೇ ಇನ್ನೊಬ್ಬರಿಗೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟ ಹಾಗೇ ಆಗುತ್ತದೆ.
ವ್ಯಾಟ್ಸಾಪ್, ಮೊಬೈಲ್ ಡೀಪಿಯಲ್ಲಿ ಫೋಟೊ ಹಾಕಿ “ಮಿಸ್ ಯೂ’, “ಲವ್ ಯೂ’ ಅನ್ನುವುದಕ್ಕಿಂತ ನೇರಾನೇರವಾಗಿ ಹೇಳುವುದರಿಂದ ಸಂಬಂಧದ ಗಾಢತೆ, ಬಾಂಧವ್ಯ ಮತ್ತಷ್ಟು ಹೆಚ್ಚುತ್ತದೆ. ನಮ್ಮ ಸಂಬಂಧ ತೋರಿಕೆಯಾದರೆ ಅದು ಬೇಗ ಬೆಲೆ ಕಳೆದುಕೊಳ್ಳುತ್ತದೆ. ಇಬ್ಬರೂ ಕೆಲಸ ಮಾಡುತ್ತಿದ್ದರೆ, ಮನೆಕೆಲಸದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವ ಇಟ್ಟುಕೊಳ್ಳಬೇಕು. ಆಯಾಸವೆಂಬುದು ಹೆಣ್ಣಿಗೆ ಕಡಿಮೆ, ಗಂಡಿಗೆ ಜಾಸ್ತಿ ಎಂದು ಇಲ್ಲ.
ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದು ಕನಸು ಕಂಡು, ಮಾತಿಗೊಲಿಯದಮೃತ ಉಂಡು ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೆ ಎಂಬ ಕವಿತೆಯಂತೆ ಬದುಕು ಸುಂದರಮಯವಾಗಿರಲಿ.
ಪವಿತ್ರಾ ರಾಘವೇಂದ್ರ ಶೆಟ್ಟಿ