2018ರಲ್ಲಿ ಪಂಚ ಭಾಷೆಗಳಲ್ಲಿ ತೆರೆಕಂಡಿದ್ದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್-1 ಸಿನಿಮಾ ಇಡೀ ದೇಶದ ಚಿತ್ರರಂಗವೇ ರಾಕಿಂಗ್ ಸ್ಟಾರ್ ಯಶ್ ಅವರತ್ತ ತಿರುಗಿನೋಡುವಂತೆ ಮಾಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕುತೂಹಲಕಾರಿ ವಿಷಯ ಏನೆಂದರೆ ಕೆಜಿಎಫ್ ಚಿತ್ರದಲ್ಲಿ ಯಶ್ ಜತೆ ವಿಲನ್ ಪಾತ್ರಕ್ಕೆ ಜೀವ ತುಂಬಿದ್ದ ರಾಮಚಂದ್ರರಾಜು ಅಲಿಯಾಸ್ ಗರುಡ ರಾಮ್…ಎಲ್ಲರ ಎದೆ ಝಲ್ಲೆನ್ನಿಸುವ ಮೂಲಕ ಗಮನ ಸೆಳೆದುಬಿಟ್ಟಿದ್ದು ಮಾತ್ರವಲ್ಲ ಕನ್ನಡ, ತಮಿಳು ಸಿನಿಮಾದಲ್ಲಿ ಬಹು ಬೇಡಿಕೆಯ ನಟನಾಗಲು ನಾಂದಿ ಹಾಡಿತ್ತು.
ಕೆಜಿಎಫ್ ಚಿನ್ನದ ಮಾಫಿಯಾದ ದೊರೆ ಸೂರ್ಯವರ್ಧನ್ ಹಿರಿಯ ಪುತ್ರ ಗರುಡ. ಇಡೀ ಗೋಲ್ಡ್ ಫೀಲ್ಡ್ ಅನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ವಿಲನ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ರಾಮ್ ಅಲಿಯಾಸ್ ಗರುಡ ರಾಮ್ ಎಲ್ಲರ ಮನಸ್ಸನ್ನು ಅತೀ ಕಡಿಮೆ ಅವಧಿಯಲ್ಲಿ ಗೆದ್ದುಬಿಟ್ಟಿರುವುದು ದೊಡ್ಡ ಸಾಧನೆ.
2016ರಲ್ಲಿ ಬೆಂಗಳೂರಿನ ತಿಪ್ಪಗೊಂಡನಹಳ್ಳಿ ಪ್ರದೇಶದಲ್ಲಿ ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಸಿನಿಮಾದ ಸ್ಟಂಟ್ ಚಿತ್ರೀಕರಣದ ವೇಳೆ ಕನ್ನಡ ಚಿತ್ರರಂಗದ ಭರವಸೆಯ ವಿಲನ್ ಪಾತ್ರಧಾರಿಗಳಾಗಿದ್ದ ಅನಿಲ್ ಮತ್ತು ಉದಯ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇದರಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿತ್ತು. ಆ ಸ್ಥಾನವನ್ನು ಇದೀಗ ಕೆಜಿಎಫ್ ನ ಗರುಡರಾಮ್ ಅಲಿಯಾಸ್ ರಾಮ್ ತುಂಬಿಸಿದ್ದಾರೆ.
ಯಶ್ ಬಾಡಿಗಾರ್ಡ್ ಆಗಿದ್ದ ರಾಮ್!
ರಾಮಚಂದ್ರ ರಾಜು ನಟರಾಗಿದ್ದವರಲ್ಲ, ಆರಂಭಿಕವಾಗಿ ನಟನಾಗಬೇಕೆಂಬ ಕನಸನ್ನು ಕಂಡವರಲ್ಲ. ಆದರೆ ರಾಮ್ ಯಶ್ ಕಾರಿನ ಡ್ರೈವರಾಗಿ, ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಜತೆ 12 ವರ್ಷಗಳ ಕಾಲ ರಾಮಚಂದ್ರರಾಜು ಅವರು ಕೆಲಸ ಮಾಡಿದ್ದರು.
ಹೀಗೆ ಯಶ್ ಅವರನ್ನು ಎಲ್ಲೆಡೆ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಮನದಾಳದ ಮೂಲೆಯಲ್ಲಿ ನಟನಾಗಬೇಕೆಂಬ ಕನಸು ಚಿಗುರೊಡೆದಿತ್ತು. ಆದರೆ ಆ ಕನಸು ನನಸಾಗಿದ್ದು ಪ್ರಶಾಂತ್ ನೀಲ್ ಅವರ ಕೆಜಿಎಫ್ ಸ್ಕ್ರಿಫ್ಟ್ ಚರ್ಚೆಯ ಸಂದರ್ಭದಲ್ಲಿ. ಕೆಜಿಎಫ್ ಚಾಪ್ಟರ್-1ರಲ್ಲಿ ಯಶ್ ಗೆ ಎದುರಾಳಿಯಾಗಿ ವಿಭಿನ್ನ ಲುಕ್ ನ ವಿಲನ್ ಅಗತ್ಯವಿತ್ತು. ಆಗ ಪ್ರಶಾಂತ್ ನೀಲ್ ದಿಢೀರ್ ಆಗಿ ಆಯ್ಕೆ ಮಾಡಿದ್ದು, ರಾಮಚಂದ್ರ ರಾಜು ಅವರನ್ನು. ಅದಕ್ಕಾಗಿ ಒಂದು ವರ್ಷಗಳ ಕಾಲ ತರಬೇತಿ, ನೀಡಿ, ಜಿಮ್ ಗೆ ಕಳುಹಿಸಿ ಗರುಡನ ಪಾತ್ರಕ್ಕೆ ಸಿದ್ದಪಡಿಸಿದ್ದರು!
ಮಾಸ್ಟರ್ ಪೀಸ್ ಸ್ಟಾರ್ ಜತೆ ನಟಿಸುವ ನಿಟ್ಟಿನಲ್ಲಿ ರಾಮಚಂದ್ರ ರಾಜು ಅವರು ತಮ್ಮ ಪಾರ್ಟ್ ಟೈಮ್ ಕಟ್ಟಡ ನಿರ್ಮಾಣ ಕೆಲಸವನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಆ ನಂತರದ ಇತಿಹಾಸ ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ!
ಕೊನೆಗೂ ಶ್ರಮಕ್ಕೆ ತಕ್ಕ ಪ್ರತಿಫಲ:
ಯಶ್ ಕಾರಿನ ಚಾಲಕರಾಗಿ, ಅಂಗರಕ್ಷರಾಗಿ ದುಡಿದಿದ್ದ ರಾಮಚಂದ್ರನ್ ಗೆ ಗರುಡ ಪಾತ್ರ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತ್ತು. ಚಿತ್ರದಲ್ಲಿನ ಗರುಡ ಪಾತ್ರಕ್ಕೆ ಎಲ್ಲರೂ ಬಹುಪರಾಕ್ ಹೇಳಿದ್ದರು. ಹೀಗೆ ರಾಮಚಂದ್ರ ರಾಜು ಅವರ ಶ್ರಮಕ್ಕೆ ಇಡೀ ಕರ್ನಾಟಕ ಸೇರಿದಂತೆ ಚಿತ್ರರಂಗವೇ ಗುರುತಿಸುವಂತಾಗಿದ್ದು, ರಾಮಚಂದ್ರನ್ ಬದುಕಿನ ಟರ್ನಿಂಗ್ ಪಾಯಿಂಟ್ ಆಗಿತ್ತು. ಇದರ ಮುಂದುವರಿದ ಭಾಗವಾಗಿ ಸ್ಯಾಂಡಲ್ ವುಡ್ ಮಾತ್ರವಲ್ಲ, ಕಾರ್ತಿಯ ಸುಲ್ತಾನ್ ಸೇರಿದಂತೆ ತಮಿಳು, ತೆಲುಗು ಸಿನಿಮಾಗಳಿಂದ ಭರಪೂರ ಆಫರ್ ಗಳು ಬರತೊಡಗಿದೆ. ಇದೀಗ ಗರುಡ ಬಿಡುವಿಲ್ಲದ ವಿಲನ್ ಆಗಿಬಿಟ್ಟಿದ್ದಾರೆ!
ಕೆಜಿಎಫ್ ಚಾಪ್ಟರ್-2, ತಮಿಳಿನ ವೇಟ್ರಿ ಗುರು ರಾಮಾನುಜಂ, ಜನಗಣ ಮನ, ಸುಲ್ತಾನ್, ಎಸ್ ಕೆ 17, ಕನ್ನಡದ ಬಂಪರ್ ಸಿನಿಮಾಗಳಲ್ಲಿ ಗರುಡಾ ನಟಿಸಿದ್ದಾರೆ. ಅಷ್ಟೇ ಅಲ್ಲ ಬಿ.ಉನ್ನಿಕೃಷ್ಣನ್ ನಿರ್ದೇಶನದ “ಆರಾಟ್ಟು” ಸಿನಿಮಾದಲ್ಲಿ ಖ್ಯಾತ ನಟ ಮೋಹನ್ ಲಾಲ್ ಜತೆ ರಾಮ್ ಬಣ್ಣಹಚ್ಚುತ್ತಿದ್ದಾರೆ.
ಕನ್ನಡ ಬ್ಲ್ಯಾಂಕ್ ಸಿನಿಮಾಕ್ಕೆ ಕೆಜಿಎಫ್ ಗರುಡ ಧ್ವನಿ ನೀಡಿದ್ದರು. ಈ ಸಿನಿಮಾವನ್ನು ಯುವ ನಿರ್ದೇಶಕ ಸುಹಾಸ್ ನಿರ್ದೇಶಿಸಿದ್ದರು. ಹಲವು ಕನಸುಗಳನ್ನು ಹೊತ್ತಿರುವ ರಾಮಚಂದ್ರ ರಾಜು ಅಲಿಯಾಸ್ ಗರುಡ ಅವರಿಂದ ಬೆಳ್ಳಿತೆರೆಯಲ್ಲಿ ಇನ್ನಷ್ಟು ಉತ್ತಮ ಪಾತ್ರಗಳು ಮೂಡಿಬರಲಿ.