ಬಂಟಿಗೆ ಹಬ್ಬದ ರಜೆ ಬಂದಿದ್ದಕ್ಕೆ ತುಂಬಾ ಖುಷಿ. ಲೇಟಾಗಿ ಏಳ್ಳೋದು, ಒಂದಷ್ಟು ತಿನ್ನೋದು, ಆಮೇಲೆ ಅಪ್ಪ-ಅಮ್ಮನ ಕೂಗಾಟಕ್ಕೆ ಓದು- ಬರೆದ ಶಾಸ್ತ್ರ ಮಾಡಿ ಟಿ.ವಿ ಮುಂದೆ ಕುಳಿತರೆ ಆಯ್ತು. ಅಕಸ್ಮಾತ್ ಅದೂ ಬೇಸರ ಆದ್ರೆ ವಿಡಿಯೋ ಗೇಮ್ಸ್ ಆಡೋದು! ಒಟ್ಟಿನಲ್ಲಿ ರಜಾ ಅಂದ್ರೆ ಅವನಿಗೆ ಮಜಾ!!
ಆ ದಿನ ಶನಿವಾರ. ಬೆಳಿಗ್ಗೆ ಏಳುವಾಗಲೇ 9 ಗಂಟೆ. ಟಿ.ವಿ ಮುಂದೆ ಕುಳಿತವನಿಗೆ ತಿಂಡಿ ಬೇಡವೆನಿಸಿತು. ಅಮ್ಮ ಒತ್ತಾಯ ಮಾಡಿದಕ್ಕೆ ನೆಪಕ್ಕೆ ತಿಂದು “ಉಪ್ಪಿಟ್ಟು ಕೆಟ್ಟದಾಗಿದೆ; ಹೇಗೆ ತಿನ್ನೋದು?’ಎಂದು ರೇಗಿದ. ಪಾಪ, ಅಮ್ಮ ಅವರೆಕಾಳು, ಈರುಳ್ಳಿ, ತುಪ್ಪ ಎಲ್ಲಾ ಹಾಕಿ ಪ್ರೀತಿಯಿ ಂದ ಮಾಡಿದ್ದ ಉಪ್ಪಿಟ್ಟದು. ಅಮ್ಮನ ಮುಖ ಸಣ್ಣಗಾಗಿತ್ತು. ಮಧ್ಯಾಹ್ನ ಊಟದ ಹೊತ್ತಿಗೆ ಬಂಟಿಯದು ಮತ್ತೆ ಅದೇ ರಾಗ. “ಈ ತರಕಾರಿ ಸಾಂಬಾರು ಸರಿಯಿಲ್ಲ. ನನಗೆ ಸೊಪ್ಪಿನ ಪಲ್ಯ ಸೇರಲ್ಲ. ಈ ತರ ಇದ್ರೆ ಯಾರು ಊಟ ಮಾಡ್ತಾರೆ?’ ಅಂತ ಅಪ್ಪ-ಅಮ್ಮನನ್ನೇ ಜೋರು ಮಾಡಿದ! ಅವರಿಗೆ ಬೇಸರವಾದರೂ ಇದು ಅವನ ನಿತ್ಯದ ಕತೆಯಾಗಿದ್ದರಿಂದ ಸುಮ್ಮನಾಗಿದ್ದರು. ಆದರೆ ಹಬ್ಬಕ್ಕೆ ಊರಿಂದ ಬಂದಿದ್ದ ಅಜ್ಜನಿಗೆ ಮಾತ್ರ ಚೋಟುದ್ದ ಮೊಮ್ಮಗನ ಕಾರುಬಾರು ಕಂಡು ಸಿಕ್ಕಾಪಟ್ಟೆ ಆಶ್ಚರ್ಯಮಾತು.
ಮಧ್ಯಾಹ್ನವಿಡೀ ಟಿ.ವಿ ನೋಡುತ್ತಿದ್ದ ಬಂಟಿಯನ್ನು ಸಂಜೆ ಅಜ್ಜ “ಬಾರೋ, ಊರಿಂದ ಒಂದಷ್ಟು ಹೂವಿನ ಬೀಜ ತಂದಿದ್ದೇನೆ. ಹೊಸ ಪಾಟ್‌ನಲ್ಲಿ ಹಾಕೋಣ’ ಎಂದು ಕರೆದರು. ಬಂಟಿ “ಗಲೀಜಾದರೆ ಅಪ್ಪ- ಅಮ್ಮ ಬೈತಾರೆ; ಬೇಡಜ್ಜ’ ಎಂದು ಹಿಂಜರಿದ. ಅಂತೂ ಅಜ್ಜ ಮೊಮ್ಮಗ ಇಬ್ಬರೂ ಪಾಟುಗಳನ್ನು ತಂದು ಅದಕ್ಕೆ ಮಣ್ಣು ತುಂಬಿದರು. ನೀರು ಹಾಕಿ ಮಣ್ಣು ಹಸಿ ಮಾಡಿದರು. ಬೀಜಗಳನ್ನು ಮಣ್ಣೊಳಗೆ ಬಿತ್ತಿದರು. ಅಷ್ಟರಲ್ಲಿ ಅಜ್ಜ ಪುಟ್ಟ ಕೈತೋಟದಲ್ಲಿ ಅಲ್ಲಲ್ಲಿ ಬೆಳೆದಿದ್ದ ಕಳೆ ನೋಡಿದರು. ಸರಿ, ಜತೆಯಾಗಿ ಅದನ್ನೂ ಎಳೆದು ಕಿತ್ತರು. ಆಮೇಲೆ ಕಸವನ್ನೆಲ್ಲಾ ಗುಡಿಸಿದರು. ಅಜ್ಜ, ಅಡ್ಡಾದಿಡ್ಡಿ ಬೆಳೆದಿದ್ದ ಗಿಡಗಳ ರೆಂಬೆ-ಕೊಂಬೆಗಳನ್ನು ಸರಿಯಾಗಿ ಕತ್ತರಿಸುವುದನ್ನು ಬಂಟಿಗೆ ತೋರಿಸಿ ಕೊಟ್ಟರು. ಮಣ್ಣಿನಲ್ಲಿ ಕೆಲಸ ಮಾಡಿ ಇಬ್ಬರ ಮೈಕೈ ಎಲ್ಲಾ ಕೊಳೆಯಾಗಿತ್ತು. ಇಬ್ಬರೂ ಬಿಸಿ ನೀರಲ್ಲಿ ಸ್ನಾನ ಮಾಡಿದರು.
ಯಾವಾಗಲೂ ಅಮ್ಮ ಎಷ್ಟು ಸಲ ಕೂಗಿದರೂ ಹಸಿವಿಲ್ಲ ಎಂದು ಹಟ ಹಿಡಿಯುತ್ತಿದ್ದವನಿಗೆ ಅಂದು ಎಲ್ಲಿಲ್ಲದ ಹಸಿವೆ! ಅಮ್ಮನಿಂದ ತಟ್ಟೆಗೆ ಮಧ್ಯಾಹ್ನದ ಊಟವನ್ನೇ ಬಡಿಸಿಕೊಂಡ. ಸಾಂಬಾರು ಅನ್ನ ತುಂಬಾ ರುಚಿಯೆನಿಸಿತು. ಆಹಾ! ಸೊಪ್ಪಿನ ಪಲ್ಯವಂತೂ ಸೂಪರ್! ತಡೆಯಲಾರದೇ ಬಂಟಿ “ಅಮ್ಮಾ ಸಾಂಬಾರು ತುಂಬಾ ರುಚಿಯಾಗಿದೆ?’ ಎಂದಾಗ ಅಮ್ಮ ತಬ್ಬಿಬ್ಬು. ಪಕ್ಕದಲ್ಲಿದ್ದ ಅಜ್ಜ ನಗುತ್ತಾ ಹೇಳಿದ್ರು “ಬಂಟಿ, ಇದು ಮಧ್ಯಾಹ್ನ ನೀನು ಚೆನ್ನಾಗಿಲ್ಲ ಎಂದು ಬೈದ ಸಾಂಬಾರು-ಪಲ್ಯಾನೇ! ಹೊಟ್ಟೆ ಹಸಿದರೆ ಬರೀ ಅನ್ನವೂ ಅಮೃತವೇ. ಇಡೀ ದಿನ ಕೆಲಸವಿಲ್ಲದೆ ಒಂದೆಡೆ ಕುಳಿತರೆ ಹಸಿವಾಗುವುದೂ ಇಲ್ಲ, ಆಹಾರ ರುಚಿಸುವುದೂ ಇಲ್ಲ’ ಎಂದರು. ಅಪ್ಪ ಅಮ್ಮಂದಿರಿಗೆ ತಮ್ಮ ತಪ್ಪಿನ ಅರಿವಾಯಿತು. ಬಂಟಿಗೆ ಹೊಟ್ಟೆ ತುಂಬಿದ್ದರಿಂದ ನಿದ್ದೆ ಬರುತ್ತಿತ್ತು. ನಿದ್ದೆ ಮಾಡಲು ಒಳಕ್ಕೋಡಿದ.
ಡಾ.ಕೆ.ಎಸ್.ಚೈತ್ರಾ