Advertisement

ಯಕ್ಷಗಾನದ ವಾಚಿಕ ಹೇಗಿದ್ದರೆ ಚೆನ್ನ !

12:07 AM Jul 30, 2023 | Team Udayavani |

ಎಲ್ಲ ಲಲಿತ ಕಲೆಗಳಲ್ಲಿ ವಾಚಿಕದ ಅಭಿವ್ಯಕ್ತಿ ಯನ್ನು ಗದ್ಯ ಅಥವಾ ಪದ್ಯ ರೂಪದಲ್ಲಿ ವ್ಯಕ್ತ ಪಡಿಸುವುದು ವಾಡಿಕೆ. ಆದರೆ ಯಕ್ಷಗಾನದಲ್ಲಿ ಎರಡೂ ರೂಪದಲ್ಲಿ ವ್ಯಕ್ತಪಡಿಸಲಾಗುತ್ತದೆ. ಗೀತ (ಪದ್ಯ)ದಲ್ಲಿ ಹೇಳಿರುವುದನ್ನೇ ಅದರ ಭಾವಾರ್ಥ ವನ್ನು ವಾಚಿಕದಲ್ಲಿ ಅಭಿನಯ ಪೂರ್ವಕ ಹೇಳುವುದು ಲಾಗಾಯ್ತಿನಿಂದ ಅನುಸರಿಸಿ ಕೊಂಡು ಬಂದ ಕ್ರಮ. ಈ ವಾಚಿಕದ ಮಂಡನೆ ಗೀತದ ಸ್ಥಾಯಿ ಭಾವಕ್ಕನುಗುಣವಾಗಿರತಕ್ಕದ್ದು. ಇಷ್ಟ ಬಂದ ಹಾಗೆ ವಾಚಿಕದ ಪ್ರಸ್ತುತಿ ಸಲ್ಲದು. ವ್ಯಾಕರಣ ಶುದ್ಧ ಹಾಗೂ ಅಲಂಕಾರಯುಕ್ತವಾದ ವಾಚಿಕವನ್ನು ಪ್ರೇಕ್ಷಕರು ನಿರೀಕ್ಷಿಸುತ್ತಾರೆ ಎಂಬ ಎಚ್ಚರಬೇಕು.

Advertisement

ಸುಮಾರು 60-70ರ ದಶಕದಲ್ಲಿ ನಮ್ಮ ಬಯಲಾಟದ ಯಕ್ಷಗಾನ ಮೇಳಗಳಲ್ಲಿಯೂ ಕೆಲವೇ ಮಂದಿ ಒಳ್ಳೆ ಭಾಷಾಕಾರ ಕಲಾವಿದರು ಇದ್ದರು. ನಾನು ನೆನಪಿಸಿಕೊಳ್ಳುವಂತೆ ಶಿರಿಯಾರ ಮಂಜುನಾಯ್ಕರು, ವೀರಭದ್ರ ನಾಯ್ಕರು ಮುಂತಾದವರು. ಪದದಲ್ಲಿ ಕಾನನ ಎಂಬ ಶಬ್ದ ಪ್ರಯೋಗ ಇದ್ದರೆ ಕಾಡಿನ ವರ್ಣನೆ ವಾಚಿಕದಲ್ಲಿ ಮಾಡುತ್ತಿದ್ದರು. ಮಂಜು ನಾಯ್ಕರ ಕಾಡಿನ ವರ್ಣನೆ ಕೇಳುವಾಗ ನಮಗೆ ಘೋರ ಕಾಂತಾರದಲ್ಲಿ ನಿಂತ ಭಾಸವಾಗುತ್ತಿತ್ತು. ವೀರಭದ್ರ ನಾಯ್ಕರು “”ಬನ್ನಿರೈ ಸಂಸಾರ ಶರಧಿ..” ಎಂಬ ಪದಕ್ಕೆ ವಾಚಿಕ ಪ್ರಸ್ತುತ ಪಡಿಸುವಾಗ ಬಳಸುವ ಭಾಷೆ, ಆಧ್ಯಾತ್ಮ ಪ್ರೇರಕ ಶಬ್ದಗಳು ನಮ್ಮನ್ನೇ ಕೈ ಬೀಸಿ ಕರೆದಂತೆ ಭಾಸವಾಗುತ್ತಿತ್ತು. ಇಷ್ಟಾಗಿ ವಾಚಿಕ ತೀರಾ ವಿಸ್ತಾರವಾಗಿರದೆ, ಸಂವಾದಿ ಪಾತ್ರಗಳ ನಿರ್ವಹಣೆಗೆ ತೊಡಕಾಗದ ಹಾಗೆ ಕಥೆಯ ಮುಂದುವರಿಕೆಗೆ ಭಂಗವಾಗದ ಹಾಗೆ ಪ್ರದರ್ಶನ ಸಾಗುತ್ತಿರುವುದನ್ನು ನಮ್ಮ ಎಳವೆಯಲ್ಲಿ ಕಂಡು ಸಂತೋಷಪಟ್ಟಿರುವ ನೆನಪು ಸದಾ ಹಸುರು.

ಆಟದ ವಾಚಿಕ ಹಾಗೂ ಕೂಟದ ವಾಚಿಕೆ ಬೇರೆ ಬೇರೆ ಎಂಬುದು ಕಂಡು ಕೇಳಿದ ಅನುಭವ. ಈ ಬಗ್ಗೆ ಯಾವ ಲಿಖೀತ ನಿಯಮಾವಳಿಗಳಿಲ್ಲ. ಆಯಾ ಸಂದರ್ಭವೇ ದಿಕ್ಸೂಚಿ. ಕೂಟದ ವಾಚಿಕದಲ್ಲಿ ಪ್ರದರ್ಶನದ ಭಾವಾಭಿನಯ ಇರಬೇಕಾಗಿಲ್ಲ. ಅಲ್ಲಿ ಪದದ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಲು ಅವಕಾಶವಿದೆ. ಅರ್ಥ ಸರಳವೂ, ಶೈಲಿಭರಿತವೂ ಆಗಿದ್ದು ಪ್ರಜ್ಞಾವಂತ ಪ್ರೇಕ್ಷಕರಿಗೆ ರಸದೌತಣ ನೀಡಬಹುದಾಗಿದೆ. ಆದರೆ ಅನುಚಿತ ತರ್ಕ ಸಲ್ಲದು. ತರ್ಕಕ್ಕೆ ಎಡೆ ಮಾಡಿ ಕೊಡ ಬಹುದಾದ ಸಂದರ್ಭಗಳಲ್ಲಿ ಜಿಜ್ಞಾಸೆಯನ್ನು ಸ್ವಯಂ ಉಭಯತರೇ ಪರಿಹರಿಸಿಕೊಳ್ಳಲು ಅಗತ್ಯವುಳ್ಳ ಸಾಕಷ್ಟು ಮಾಹಿತಿ ಹಾಗೂ ಭಾಷೆ ಮೇಲಿನ ಹಿಡಿತ ಕೂಟದ ಅರ್ಥಧಾರಿಗಳಲ್ಲಿರಬೇಕೆಂಬುದು ಅಪೇಕ್ಷೆ.

ಪರಂತು, ಪ್ರದರ್ಶನ ಅಥವಾ ಆಟದಲ್ಲಿ ವಾಚಿಕ ಹಿತಮಿತನಾಗಿದ್ದರೆ ಉತ್ತಮ. ಆದರೂ ಪದದ ಸ್ಥಾಯೀಭಾವಕ್ಕೆ ಲೋಪ ಉಂಟಾಗ ಬಾರದು. ಅದು ಯಥಾವತ್ತಾಗಿ ಪ್ರಕಟವಾಗ ಬೇಕು. ಯಾಕೆಂದರೆ ಯಕ್ಷಗಾನ ಭಾವ ಪ್ರಧಾನ ವಾದ ಮಾಧ್ಯಮ. ಆಹಾರ್ಯಯುಕ್ತ ಪ್ರದರ್ಶನ ದಲ್ಲಿ ಭಾವವೇ ಪ್ರಧಾನ. ಗೀತ (ಪದ) ದಲ್ಲಿ ಅಡಕವಾದ ಸ್ಥಾಯೀ ಭಾವ ಪ್ರಕಟ ಪಡಿಸಲು ವಾದನ, ನರ್ತನ, ಆಹಾರ್ಯ ಹಾಗೂ ವಾಚಿಕಗಳೆಂಬ ಪರಿಕರಗಳಿವೆ. ಇದು ಸಮಷ್ಟಿಕಲೆ ಪ್ರಮಾಣ ಬದ್ಧವಾಗಿರತಕ್ಕದ್ದು. ಹಾಗಿ ದ್ದಲ್ಲಿ ಮಾತ್ರ ಪ್ರದರ್ಶನ ಯಥಾ ಪರಿಣಾಮ ಬೀರಲು ಶಕ್ತವಾದೀತು.

ಇಲ್ಲಿ ವಾಚಿಕ ಹಿತಮಿತವಾಗಿರುವುದು ಪ್ರೇಕ್ಷಕರ ಲಕ್ಷ್ಯವನ್ನು ಹಿಡಿದಿಟ್ಟುಕೊಳ್ಳಲು ಹಾಗೂ ಸದಭಿರುಚಿಯನ್ನು ಹೆಚ್ಚಿಸಲು ಸಹಕಾರಿಯಾಗಬಲ್ಲದು. ದೃಶ್ಯ ಮಾಧ್ಯಮದ ಉದ್ದೇಶವೇ ಪ್ರೇಕ್ಷಕರಲ್ಲಿ ಸದಭಿರುಚಿಯನ್ನು ಪ್ರೇರೇಪಿಸುವುದು. ಪ್ರೇಕ್ಷಕರಲ್ಲಿ ಸದಭಿರುಚಿ ಹೆಚ್ಚಿದಂತೆ ಲಕ್ಷ್ಯ ಪಲ್ಲಟವಾಗದೆ ಏಕಾಗ್ರತೆಯಿಂದ ಪ್ರದರ್ಶನ ವೀಕ್ಷಿಸುತ್ತಾರೆ. ಅಲ್ಲಿಗೆ ಪ್ರದರ್ಶನದ ಉದ್ದೇಶ ಸಫ‌ಲವಾಗುತ್ತದಲ್ಲವೇ!

Advertisement

ಇತ್ತೀಚೆಗೆ ಆಟ ಕೂಟಗಳೆರಡರಲ್ಲಿಯೂ ವಾಚಿಕದ ಅತಿರೇಕ ಹಾಗೂ ಅಸಂಬದ್ಧ ಹೆಚ್ಚಾ ಗಿದೆ. ಭಾಷೆ, ಪ್ರಾಸ, ಅಲಂಕಾರ ಇತ್ಯಾದಿಗಳ ಸ್ಥಳ ವನ್ನು ಅನುಚಿತ ತರ್ಕ ಆವರಿಸುತ್ತಿರುವುದನ್ನು ಕಾಣು ತ್ತೇವೆ. ಹಾಗೆಯೇ ಕಾಲಗಣನಾದೋಷ ಹೆಚ್ಚುತ್ತಿದೆ. ಅಲೌಕಿಕದಿಂದ ನೇರ ಲೌಕಿಕಕ್ಕೆ ಬರು ವುದು. ಇಂದ್ರನ ಸುಧರ್ಮ ಸಭೆಯ ವರ್ಣನೆ ಯನ್ನು ಆಧುನಿಕ ಯುಗದ ಸುಂದರ ಸ್ಥಳವನ್ನು ಸಮೀಕರಿಸುವುದು ಇತ್ಯಾದಿ. ಇದು ಔಚಿತ್ಯವನ್ನು ಕೆಡಿಸುತ್ತದೆ. ವಾಲಿ -ಸುಗ್ರೀವರ ಯುದ್ಧದ ಸನ್ನಿವೇಶ ಪ್ರದರ್ಶಿಸುವಾಗ ಪ್ರೇಕ್ಷಕರಿಗೆ ತಾವು ಕಿಷ್ಕಿಂಧೆಯಲ್ಲಿದ್ದ ಭಾಸವಾಗಬೇಕು. ಇಂಥ ಸನ್ನಿ ವೇಶ ಸೃಷ್ಟಿಗೆ ಹಿತಮಿತವಾದ ವಾಚಿಕ ಸಹಕಾರಿ.

ಬೇಳೂರು ರಾಘವ ಶೆಟ್ಟಿ

 

Advertisement

Udayavani is now on Telegram. Click here to join our channel and stay updated with the latest news.

Next