Advertisement

ಮಾರುಕಟ್ಟೆಯಲ್ಲಿ ಶೇರಿಗೆ ಬೆಲೆ ಬರುವುದು ಹೇಗೆ?

01:27 PM Nov 27, 2017 | |

ಶೇರು ಎಂದರೆ ಒಂದು ಕಂಪೆನಿಯ ಬಂಡವಾಳದ ಒಂದು ಪಾಲು. ಒಂದು ಕಂಪೆನಿಯ ಎಲ್ಲಾ ಶೇರುಗಳೂ ಸಮಾನ ಮುಖ ಬೆಲೆ ಅಥವ ಫೇಸ್‌ ವಾಲ್ಯು ನದ್ದಾಗಿರುತ್ತವೆ. ಈ ಮುಖಬೆಲೆ ಒಂದು ಶೇರು ಬಿಡುಗಡೆಯಾದ ಸಮಯದ ಬೆಲೆಯಾಗಿರುತ್ತದೆ. ಇವು ರೂ 10, 5, 2, 1 ಹೀಗೆಲ್ಲಾ ಆಗಿರಬಹುದು- ಕಂಪೆನಿ ನಿರ್ಧರಿಸಿದಂತೆ.

Advertisement

ಆದರೆ, ಶೇರುಗಳ ಬಿಕರಿ ಮಾರುಕಟ್ಟೆಯಲ್ಲಿ ಬೇರೆಯೇ ಬೆಲೆಗೆ ನಡೆಯುತ್ತದೆ. ಮುಖ ಬೆಲೆಗೆ ಭಿನ್ನವಾಗಿ ಮಾರುಕಟ್ಟೆಯಲ್ಲಿ ಶೇರುಗಳಿಗೆ ಒಂದು ಮಾರುಕಟ್ಟೆ ಬೆಲೆ ಬರುತ್ತವೆ. ಈ ಬೆಲೆ ಮುಖ್ಯವಾಗಿ ಎರಡು ಕಾರಣಗಳಿಂದ ಬರುತ್ತದೆ ಎನ್ನಬಹುದು:

1.    ಫ‌ಂಡಮೆಂಟಲ್ಸ್- ಇದು ಶೇರಿನ ಬಿಸಿನೆಸ್‌ ಸಾಧನೆ 
2.    ಟೆಕ್ನಿಕಲ್ಸ್- ಇದು ಮಾರುಕಟ್ಟೆಯ ತಾಂತ್ರಿಕತೆ
ಪ್ರಸ್ತುತ ಈ ಲೇಖನದಲ್ಲಿ ಫ‌ಂಡಮೆಂಟಲ್ಸ್ ಬಗ್ಗೆ ತುಸು ವಿವರವಾಗಿ ತಿಳಿದುಕೊಳ್ಳೋಣ: 

ಫ‌ಂಡಮೆಂಟಲ್ಸ್‌
ಫ‌ಂಡಮೆಂಟಲ್ಸ್ ಎನ್ನುವುದು ಒಂದು ಶೇರಿನ ಮೂಲಭೂತ ಬ್ಯುಸಿನೆಸ್‌ ಸಾಧನೆ.  ಒಂದು ಕಂಪೆನಿಯ ಶೇರು ಮುಖಬೆಲೆಗೆ ಇಶ್ಯೂ ಆದ ಮೇಲೆ ಆ ಕಂಪೆನಿಯ ಬ್ಯುಸಿನೆಸ್‌ ಸಾಧನೆ ಹೊಂದಿಕೊಂಡು ಆ ಕಂಪೆನಿಗೆ ಲಾಭ ಅಥವಾ ನಷ್ಟ ಉಂಟಾಗುತ್ತದೆ. ಅದು ಮಾರುಕಟ್ಟೆಯಲ್ಲಿ ಶೇರುಬೆಲೆಯನ್ನು ನಿರ್ಧರಿಸುತ್ತದೆ. ಇನ್ನೂ ಒಂದು ಹೆಜ್ಜೆ ಆಳಕ್ಕೆ ಹೋದರೆ, ಈ ಲಾಭದ ಲೆಕ್ಕ ಹೇಗೆ? ಅದು ನಮಗೆ ಹೇಗೆ ತಿಳಿಯುತ್ತದೆ? ಅದನ್ನು ಅರ್ಥೈಸಿಕೊಳ್ಳುವುದು ಹೇಗೆ? ಇತ್ಯಾದಿ ಪೂರಕ ಪ್ರಶ್ನೆಗಳು ಏಳುತ್ತವೆ.

ಸರಿ. ಮಾರುಕಟ್ಟೆ ನಿಯಂತ್ರಕ ಸರಕಾರಿ ಸೆಬಿಯ ನೂರಾರು ಕಾನೂನುಗಳ ಪೈಕಿ ಮುಖ್ಯವಾದ ಒಂದು ಕಾನೂನು ಏನೆಂದರೆ ಪ್ರತಿ ತ್ತೈಮಾಸಿಕವೂ ಶೇರು ಹೊಂದಿರುವ ಕಂಪೆನಿಗಳು ತಮ್ಮ ಲಾಭ-ನಷ್ಟದ ಲೆಕ್ಕವನ್ನು ಜನತೆಗೆ ಪ್ರಕಟಿಸಬೇಕೆಂಬುದು. ತ್ತೈಮಾಸಿಕ ಎಂದರೆ ಜೂನ್‌ 30, ಸೆಪ್ಟೆಂಬರ್‌ 30, ಡಿಸೆಂಬರ್‌ 31, ಮಾರ್ಚ್‌ 31 ರಂದು ಕೊನೆಗೊಳ್ಳುವ ತ್ತೈಮಾಸಿಕಗಳು. ಇವುಗಳನ್ನು ಕ್ರಮವಾಗಿ 1ನೇ, 2ನೇ, 3ನೇ ಹಾಗೂ 4ನೇ ಕ್ವಾರ್ಟರ… ಅಥವ ತ್ತೈಮಾಸಿಕವೆಂದು ಕರೆಯುತ್ತಾರೆ. ಆಯಾ ತ್ತೈಮಾಸಿಕ ಮುಗಿದು 10-15 ದಿನಗಳಲ್ಲೇ ಪೇಪರುಗಳಲ್ಲೆಲ್ಲಾ ಬೇರೆ ಬೇರೆ ಕಂಪೆನಿಗಳ ಲಾಭ-ನಷ್ಟದ ಲೆಕ್ಕಾಚಾರ ಪ್ರಕಟವಾಗತೊಡಗುತ್ತವೆ. ಅದನ್ನು ಇಡೀ ಮಾರುಕಟ್ಟೆ ರಿಸಲ್ಟ್ ಸೀಸನ್‌ ಎಂದು ಅತಿ ಸಂಭ್ರಮದಿಂದ ಎದುರು ನೋಡುತ್ತದೆ. ರಿಸಲ್ಟ್ ಹೊಂದಿಕೊಂಡು ಹಲವು ಶೇರುಗಳು ಹಾವು-ಏಣಿ ರೀತಿಯಲ್ಲಿ ಮೇಲೆ ಕೆಳಗೆ ಹರಿದಾಡುತ್ತವೆ. 

Advertisement

ಯಾವುದೇ ಕಂಪೆನಿಯ ಪ್ರಕಟಿತ ರಿಸಲ್ಟ್ ಅನ್ನು  ಗಮನಿಸಿ. ಅವುಗಳು ಇನ್ನೂ ಆಡಿಟ್ ಆಗಿರದಕಾರಣ ಅನ್‌ಆಡಿಟೆಡ… ರಿಸಲ್ಟ್ ಎಂದು ಪ್ರಕಟಿಸುತ್ತಾರೆ. ಅದರಲ್ಲಿ ಈ ಕೆಳಗಿನ ಅಂಶಗಳು ಮುಖ್ಯವಾಗಿರುತ್ತವೆ:
1.    ನೆಟ್ ಸೇಲ್ಸ್ ಅಥವ ಆಪರೇಟಿಂಗ್‌ ಇನ್‌ಕಂ: 
2.    (+) ಇತರ ಆಪರೇಟಿಂಗ್‌ ಇನ್‌ಕಂ
3.    (=) ಟೋಟಲ್ ಇನ್‌ಕಂ:
4.    (-) ಎಕ್ಸೆಫೆಡಿಚರ್‌ ಅಥವಾ ಖರ್ಚು: ಇದರಲ್ಲಿ ಕಚ್ಚಾವಸ್ತು, ವೇತನ, ಸವಕಳಿ (ಡೆಪ್ರಿಸಿಯೇಶನ್‌) ಮತ್ತು ಇತರ ಖರ್ಚುಗಳ ವಿವರಗಳನ್ನು ಕಾಣಬಹುದು.
5.    (=) ಲಾಭ (ಬಡ್ಡಿ, ಅಸಾಮಾನ್ಯ ಐಟಂ ಮತ್ತು ಇತರ ಆದಾಯಗಳ ಮೊದಲು) 
6.    (+) ಇತರ ಆದಾಯ: ಕಂಪೆನಿಯ ಮುಖ್ಯ ಬಿಸಿನೆಸ… ಅಲ್ಲದ ಇತರ ಚಟುವಟಿಕೆಗಳಿಂದ ಬಂದ ಆದಾಯವನ್ನು ಕೂಡಿಸಬೇಕು. ಈ ಐಟಂ ಅತಿಮುಖ್ಯವಾದದ್ದು ಯಾಕೆಂದರೆ ಇಲ್ಲಿ ಬಂದ ಆದಾಯ ಯಾವತ್ತೂ ಬರುವಂಥದ್ದಲ್ಲ.
7.    (=) ಲಾಭ (ಬಡ್ಡಿ ಹಾಗೂ ಅಸಾಮಾನ್ಯ ಐಟಂಗಳ ಮೊದಲು)
8.    (-) ಬಡ್ಡಿ ವೆಚ್ಚವನ್ನು ಕಳೆಯುತ್ತಾರೆ.
9.    (=) ಲಾಭ (ಅಸಾಮಾನ್ಯ ಐಟಂಗಳ ಮೊದಲು)
10.    (-) ಅಸಾಮಾನ್ಯ ಐಟಂಗಳನ್ನು ಕಳೆಯುತ್ತಾರೆ. ಯಾವಾಗಲೋ ಒಮ್ಮೊಮ್ಮೆ ಬರುವಂತಹ ಛಿxcಛಿಟಠಿಜಿಟnಚl ಜಿಠಿಛಿಞs ಗಳು ಇವು. ಇವೂ ಕೂಡಾ ಇತರ ಆದಾಯದಂತೆ ಗಮನಿಸಲೇ ಬೇಕಾದ ಅಂಶ.
11.    (=) ಲಾಭ (ಟ್ಯಾಕ್ಸ್‌ನ ಮೊದಲು) ಅಂದರೆ, ಪ್ರಾಫಿಟ… ಬಿಫೋರ್‌ ಟ್ಯಾಕ್ಸ್‌. ಇದೂ ಕೂಡಾ ಮುಖ್ಯ ಅಂಕಿ.
12.    (-) ಟ್ಯಾಕ್ಸ್‌
13.    (=) ನೆಟ್‌ ಪ್ರಾಫಿಟ… ಅಥವಾ ನಿವ್ವಳ ಲಾಭ. ಇದು ಅಂತಿಮ ಅಂಕಿ.
14.    ಶೇರು ಕ್ಯಾಪಿಟಲ್ 
15.    ಇ.ಪಿ.ಎಸ್‌ (ಅರ್ನಿಂಗ್ಸ್‌ ಪರ್‌ ಶೇರ್‌)

ಇವೆಲ್ಲ ಅಂಕಿ ಅಂಶಗಳನ್ನು ಪ್ರಸ್ತುತ ತ್ತೈಮಾಸಿಕಕ್ಕೂ ಮತ್ತು ಕಳೆದ ವರ್ಷ ಇದೇ ತ್ತೈಮಾಸಿಕಕ್ಕೂ, ಪ್ರಸ್ತುತ ವರ್ಷದಲ್ಲಿ ಈವರೆಗೂ, ಕಳೆದವರ್ಷ ಈವರೆಗೂ ಅಲ್ಲದೆ ಕಳೆದ ಒಂದು ಪೂರ್ಣ ವರ್ಷಕ್ಕೂ ನೀಡಿರುತ್ತಾರೆ. ಆ ಮೂಲಕ ಬ್ಯೂಸಿನೆಸ್‌ ಟ್ರೆಂಡ್‌ ಅನ್ನು ತಿಳಿದುಕೊಳ್ಳಬಹುದು.  ಇನ್ನೂ ಕೆಳಕ್ಕೆ ಹೋದಂತೆ ಪ್ರಮೋಟರ್ಸ್‌ ಮತ್ತು ಪಬ್ಲಿಕ್‌ಗಳ ಶೇರು ಎಷ್ಟೆಷ್ಟು ಇವೆ ಎಂಬ ವಿವರಗಳು ದೊರಕುತ್ತವೆ. ಅಲ್ಲದೆ, ಬದಿಯ ಕಾಲಮ್ಮಿನಲ್ಲಿ ಕಂಪೆನಿಯ ಬೇರೆ ಬೇರೆ ಡಿವಿಶನ್‌ಗಳ ಬಿಸಿನೆಸ್‌ ಸಾಧನೆಯ ಚಿತ್ರ ಸಂಕ್ಷಿಪ್ತವಾಗಿ ದೊರಕುತ್ತವೆ.

ಇನ್ನೂ ಕೆಳಕ್ಕೆ ಕಣ್ಣು ಹಾಯಿಸಿದರೆ ಅಲ್ಲಿ ನೋಟ್ಸ್ ಎಂಬುದಾಗಿ ಕಂಪನಿಯ ಮುಖ್ಯಸ್ಥರು ಫ‌ಲಿತಾಂಶದ ಬಗ್ಗೆ ನೀಡುವ ಕೆಲವು ಅತಿಮುಖ್ಯ ಟಿಪ್ಪಣಿಗಳು ಇರುತ್ತವೆ. ಇದೂ ಕೂಡಾ ಮುಖ್ಯ ಅಂಶ ಮತ್ತು ಅದನ್ನು ನಾವುಗಳು ಗಮನಿಸಬೇಕು. ಇದರಲ್ಲಿ ಕಂಪನಿಯ ಲಾಭ-ನಷ್ಟಗಳ ಬಗ್ಗೆ ಹಲವಾರು ಮುಖ್ಯ ಮಾಹಿತಿ ಲಭಿಸಬಹುದು. ಈ ರೀತಿ ಕಂಪನಿಯ ಸಾಧನೆ, ಲಾಭ-ನಷ್ಟಗಳ ಬಗ್ಗೆ ಪ್ರತೀ ತ್ತೈಮಾಸಿಕವೂ ಓದಿ ತಿಳಿದುಕೊಳ್ಳಬಹುದು. ಮೊದಲೆರಡು ಬಾರಿ ಸ್ವಲ್ಪ ತೊಡಕಾಗಬಹುದು. ಕ್ರಮೇಣ ಸುಲಭವಾದೀತು. 
ಸೈಕಲ್‌ ಕಲಿತಂತೆ ! ಬಿಸಿನೆಸ್‌ನಲ್ಲಿ ಬಂದ ಲಾಭವನ್ನು ಅರ್ನಿಂಗ್ಸ್‌ì ಎನ್ನುತ್ತಾರೆ ಮತ್ತು ಅದನ್ನು ಒಟ್ಟು ಶೇರಿನ ಸಂಖ್ಯೆಯಿಂದ ಭಾಗಿಸಿದರೆ ಪ್ರತಿ ಶೇರಿನ ಲಾಭ ಅಥವ ಅರ್ನಿಂಗ್ಸ್‌ ಪರ್‌ಶೇರ್‌ ಅಥವಾ ಚಿಕ್ಕದಾಗಿ ಹೇಳುವುದಾದರೆ,ಉ.ಕ.ಖ ಸಿಗುತ್ತದೆ. ಇದು ಒಂದು ಶೇರಿನ ಲಾಭವನ್ನು ಅಳೆಯುವ ಮುಖ್ಯ ಮಾಪನಗಳಲ್ಲಿ ಒಂದು.

ಲಾಭ ಅಥವಾ ಅರ್ನಿಂಗ್ಸ್‌ ಬಂದಾಗ ಅದರ ಸ್ವಲ್ಪ ಭಾಗವನ್ನು ಹೂಡಿಕೆದಾರರಿಗೆ ಹೂಡಿಕೆಯ ಪ್ರತಿಫ‌ಲದ ರೂಪದಲ್ಲಿ ಕೊಡುವುದು ಪದ್ಧತಿ. ಇದನ್ನು ಡಿವಿಡೆಂಡ್‌ ಎಂದು ಕರೆಯುತ್ತಾರೆ. ಡಿವಿಡೆಂಡ್‌ ಅನ್ನು ಯಾವತ್ತೂ ಪ್ರತಿ ಶೇರಿನ ಮುಖಬೆಲೆಯ (ಮಾರುಕಟ್ಟೆ ಬೆಲೆಯ, ಅಲ್ಲ. ಗಮನಿಸಿ) ಶೇ. ಲೆಕ್ಕದಲ್ಲಿ ಘೋಷಿಸಲಾಗುತ್ತದೆ.  ಮುಖ ಬೆಲೆಯ 10%, 20%, ಹೀಗೆಲ್ಲಾ. ಒಂದು ವಿತ್ತೀಯ ವರ್ಷದ ಮಧ್ಯ ಭಾಗದಲ್ಲಿ ಘೋಷಿಸುವ ಡಿವಿಡೆಂಡನ್ನು ಇಂಟರಿಮ… ಡಿವಿಡೆಂಡ… ಎಂದೂ ವರ್ಷಾಂತ್ಯದಲ್ಲಿ ಅಂತಿಮವಾಗಿ ಘೋಷಿಸುವ ಡಿವಿಡೆಂಡನ್ನು ಫೈನಲ… ಡಿವಿಡೆಂಡ್‌ ಎಂದೂ ಕರೆಯುತ್ತಾರೆ. ಇವೆರಡನ್ನೂ ಒಟ್ಟು ಸೇರಿಸಿದರೆ ಆ ಶೇರಿನ ವಾರ್ಷಿಕ ಡಿವಿಡೆಂಡ್‌ ಸಿಗುತ್ತದೆ.

ಹೀಗೆ ಡಿವಿಡೆಂಡ್‌ ಆಗಿ ಹಂಚಿ ಉಳಿದ ಲಾಭಾಂಶವನ್ನು ಮೂಲ ಹೂಡಿಕೆಗೆ ರಿಟೈನ್ಸ್ ಅರ್ನಿಂಗ್ಸ್‌ ಅಥವಾ ರಿಸರ್ವ್‌ ಐನ್ಸ್ ಸಪ್ಲìಸ್‌ ಎಂಬ ಹೆಸರಿನಲ್ಲಿ ಸೇರಿಸುತ್ತಾರೆ. ಇದು ಹಂಚದೆ ಬ್ಯೂಸಿನೆಸ್‌ನಲ್ಲಿಯೇ ಮರುಹೂಡಿಕೆಯಾಗಿ ಉಳಿಯುವ ಲಾಭಾಂಶದ ಮೊತ್ತ. ಈ ಲಾಭಾಂಶದೊಂದಿಗೆ ಮೂಲಧನ (ಶೇರ್‌ ಕ್ಯಾಪಿಟಲ್) ಅಷ್ಟರ ಮಟ್ಟಿಗೆ ವೃದ್ಧಿಗೊಳ್ಳುತ್ತದೆ ಅಥವಾ ನಷ್ಟವಾದರೆ, ಅಷ್ಟರ ಮಟ್ಟಿಗೆ ಕುಗ್ಗುತ್ತದೆ. ಈ ರೀತಿ ಲಾಭ ನಷ್ಟದೊಂದಿಗೆ ಪರಿಷ್ಕರಿಸ್ಪಲ್ಪಟ್ಟು ಸಿಗುವ ಹೊಸ ಧನರಾಶಿಗೆ ಆ ಕಂಪೆನಿಯ ನೆಟ್ ವರ್ಥ್ (ನಿವ್ವಳ ಮೌಲ್ಯ ಎನ್ನಬಹುದು) ಎಂದು ಹೆಸರು. ಒಟ್ಟು ನೆಟ್ ವರ್ಥ್ ಅನ್ನು ಶೇರುಗಳ ಸಂಖ್ಯೆಯಿಂದ ಭಾಗಿಸಿದರೆ ಬುಕ್‌ ವಾಲ್ಯು ದೊರೆಯುತ್ತದೆ. ಅಂದರೆ ಅಕೌಂಟ್ ಬುಕ್ಸ್ ಪ್ರಕಾರ ಆ ಶೇರಿನ ಮೌಲ್ಯ. ಇದು ಯಾವತ್ತೂ ಬದಲಾಗುತ್ತಲೇ ಇರುತ್ತದೆ.

ಇವಿಷ್ಟು ಒಂದು ಕಂಪೆನಿಯ ಮೂಲಭೂತ ಲೆಕ್ಕಾಚಾರಗಳು. ಇವುಗಳನ್ನೆಲ್ಲ ಒಟ್ಟಾಗಿ ಒಂದು ಕಂಪೆನಿಯ ಫ‌ಂಡಮೆಂಟಲ್ಸ್ ಎಂದು ಕರೆಯುತ್ತಾರೆ.

ಈ ರೀತಿ ಒಂದು ಕಂಪೆನಿಯ ಲಾಭ ನಷ್ಟಗಳನ್ನು ಅನುಸರಿಸಿ ಅದರ B,V,E,P,S ಗಳನ್ನು ಆಧರಿಸಿ, ಆ ಶೇರುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರುತ್ತದೆ. ಅಂತಹ ಬೇಡಿಕೆ ಮತ್ತು ಪೂರೈಕೆಗಳ (ಡಿಮ್ಯಾಂಡ್‌-ಸಪ್ಲೆ„) ನೆಲೆಯಲ್ಲಿ ಅದಕ್ಕೆ ಒಂದು ಮಾರುಕಟ್ಟೆ ಬೆಲೆ ಅಥವಾ ಮಾರ್ಕೆಟ್‌ ಪ್ರೈಸ್‌ ನಿರ್ಣಯವಾಗುತ್ತದೆ. ಇದು ಮುಖಬೆಲೆಗಿಂತಲೂ ಬುಕ್‌ ವ್ಯಾಲ್ಯೂಗಿಂತಲೂ ಭಿನ್ನವಾಗಿರುತ್ತದೆ. ಈ ಬೆಲೆಯಲ್ಲಿ ಕಂಪೆನಿಯ ಸದ್ಯದ ಮೌಲ್ಯ, ಆದಾಯ (ಫ‌ಂಡಮೆಂಟಲ್ಸ್) ಗಳಲ್ಲದೆ ಭವಿಷ್ಯದ ಆದಾಯಗಳ ನಿರೀಕ್ಷೆಗಳೂ, ಭರವಸೆಗಳೂ (ಸೆಂಟಿಮೆಂಟ್ಸ್‌) ಕೂಡಾ ಮಿಳಿತವಾಗಿರುತ್ತವೆ. ಒಂದು ಬೌದ್ಧಿಕವಾದರೆ  ಇನ್ನೊಂದು ಭಾವನಾತ್ಮಕ. ಈ ಎರಡು ಶಕ್ತಿಗಳೂ ಒಟ್ಟು ಸೇರಿಯೇ ಬೆಲೆ ನಿರ್ಣಯವಾಗುತ್ತದೆ. ಮತ್ತು, ಹೊಸ ಸುದ್ದಿ ಬಂದಂತೆ ಕ್ಷಣ ಕ್ಷಣಕ್ಕೂ ಮಾರ್ಕೆಟಿನಲ್ಲಿ ಬೆಲೆ ಏರಿಳಿತ ಆಗುತ್ತಲೇ ಇರುತ್ತದೆ.

ಹೀಗಾಗಿ ಸೆಂಟಿಮೆಂಟ್ ಕಾರಣಗಳಿಂದ ಒಂದು ಶೇರಿನ ಮಾರುಕಟ್ಟೆ ಬೆಲೆ ಅದರ ಫ‌ಂಡಮೆಂಟಲ…ಗಳು ಸೂಚಿಸುವ ಬುಕ್‌ ವ್ಯಾಲ್ಯೂ, ಅರ್ನಿಂಗ್ಸ್‌ ಪರ್‌ ಶೇರ್‌ಗಳಿಗಿಂತ ಹೆಚ್ಚಾಗಿರುತ್ತದೆ ಅಥವ ಕಡಿಮೆಯಾಗಿರುತ್ತವೆ. ಹೀಗೆ ಮಾರುಕಟ್ಟೆ ಬೆಲೆ ವಾರ್ಷಿಕ ಅರ್ನಿಂಗ್ಸ್‌ ಗಿಂತ ಎಷ್ಟು ಪಟ್ಟು ಜಾಸ್ತಿಗೆ (ಅಥವ ಕಡಿಮೆಯಲ್ಲಿ) ಬಿಕರಿಯಾಗುತ್ತದೆ ಎಂಬ ಮಾಪನವನ್ನು ಪ್ರೈಸ್‌-ಅರ್ನಿಂಗ್ಸ್‌ ರೇಶಿಯೋ ಎನ್ನುತ್ತಾರೆ. ಇದು ಒಂದು ಶೇರಿನ ಬೇಡಿಕೆಯ ಪ್ರತೀಕ. ಸ್ಥೂಲವಾಗಿ ಹೇಳುವುದಾದರೆ, ಜಾಸ್ತಿ ಇದ್ದಷ್ಟೂ ಬೇಡಿಕೆ ಜಾಸ್ತಿ ಕಡಿಮೆಯಿದ್ದಷ್ಟು ಬೇಡಿಕೆ ಕಡಿಮೆ ಎನ್ನಬಹುದು. ಈ ಕ/ಉ ಒಂದು ಕಂಪೆನಿ, ಉದ್ಯಮ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಹೊಂದಿಕೊಂಡು ಬೇರೆ ಬೇರೆಯಾಗಿರುತ್ತದೆ.

ಒಬ್ಟಾತ ಒಂದು ಕಂಪೆನಿಯ ಶೇರು ಕೊಂಡಾಗ ಆತನಿಗೆ ಸಿಗುವ ಡಿವಿಡೆಂಡನ್ನು (ಡಿವಿಡೆಂಡ್‌ ಪರ್‌ ಶೇರ್‌) ಕೊಟ್ಟ ಮಾರುಕಟ್ಟೆ ಬೆಲೆಯಿಂದ ಭಾಗಿಸಿದರೆ ಆ ಹೂಡಿಕೆಯ  ಡಿವಿಡೆಂಡ್‌ ಯೀಲ್ಡ… ಸಿಗುತ್ತದೆ. ಅರ್ನಿಂಗ್ಸ್‌ ಅನ್ನು ಮಾರುಕಟ್ಟೆ ಬೆಲೆಯಿಂದ ಭಾಗಿಸಿದರೆ ಅರ್ನಿಂಗ್ಸ್‌ ಯೀಲ್ಡ… ದೊರೆಯುತ್ತದೆ. 

ಈಗ ಒಂದು ಉದಾಹರಣೆ ತೆಗೆದುಕೊಳ್ಳೋಣ
ಗೂಳಿತ್ತಾಯರೂ, ಭಲ್ಲೂಕರಾಯರೂ ಸೇರಿಕೊಂಡು ನಟ್-ಬೋಲ್ಟ ತಯಾರಿಸು Nutsz and Boltz’ ಎಂಬ ಒಂದು ಹೊಸ ಕಂಪೆನಿಯನ್ನು ಪ್ರೋಮೋಟ… ಮಾಡುತ್ತಾರೆ. ಅದರ ಶೇರ್‌ ಕ್ಯಾಪಿಟಲ್‌ ಅಥವಾ ಮೂಲಧನ 1 ಕೋಟಿ ರುಪಾಯಿಗಳು. ಪ್ರಮೋಟರ್ಸ್‌ ಆದ ಗೂಳಿತ್ತಾಯರು ಮತ್ತು ಭಲ್ಲೂಕರಾಯರು ಒಟ್ಟು ಸೇರಿ ರೂ 10 ಮುಖ ಬೆಲೆಯ 5 ಲಕ್ಷ ಶೇರುಗಳನ್ನು ಪ್ರಮೋಟರ್ಸ್‌ ಆಗಿ ಖರೀದಿಸಿರುತ್ತಾರೆ. ಉಳಿದ 5 ಲಕ್ಷ ಶೇರುಗಳನ್ನು ರೂ 10 ರಂತೆ ಐ.ಕ.O ಮೂಲಕ ನಮ್ಮ ನಿಮ್ಮಂತ ಸಾರ್ವಜನಿಕರಿಗೆ ನೀಡುತ್ತಾರೆ. ಹಾಗಾಗಿ ಒಟ್ಟು ಬಂಡವಾಳ ರೂ 10 ಮುಖ ಬೆಲೆಯ 10 ಲಕ್ಷ$ ಶೇರುಗಳು ಅಂದರೆ 1 ಕೋಟಿ ರುಪಾಯಿಗಳು. ಶೇರನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕಾಗಿ ಲಿಸ್ಟ್‌ ಮಾಡುತ್ತಾರೆ.

ಒಂದು ವರ್ಷದ ಬ್ಯೂಸಿನೆಸ್‌ ನಂತರ ಆ ಕಂಪೆನಿಯು 8 ಲಕ್ಷ ರುಪಾಯಿಗಳ ಲಾಭ ಮಾಡುತ್ತದೆ. ಹಾಗೂ ಅದರಲ್ಲಿ 2 ಲಕ್ಷಗಳಷ್ಟು ಮೊತ್ತವನ್ನು ಡಿವಿಡೆಂಡ… ರೂಪದಲ್ಲಿ ಶೇರುದಾರರಿಗೆ ಹಿಂತಿರುಗಿಸಿ ಉಳಿದ 6 ಲಕ್ಷವನ್ನು (ರಿಸರ್ವ್ಸ್) ಉದ್ಯಮದಲ್ಲಿ ಮರುಹೂಡಿಕೆ ಮಾಡುತ್ತದೆ.

ಈಗ, 
ಮುಖ ಬೆಲೆ(ಫೇಸ… ವಾಲ್ಯೂ)  ರೂ 10  
ಶೇರು ಸಂಖ್ಯೆ               10 ಲಕ್ಷ
ಶೇರ್‌ ಕ್ಯಾಪಿಟಲ್       ರೂ 1 ಕೋಟಿ
ವಾರ್ಷಿಕ ಲಾಭ        ರೂ    8 ಲಕ್ಷ
ರಿಸರ್ವ್ಸ್ ಐನ್ಸ್ ಸಪ್ಲಸ…  ರೂ 6 ಲಕ್ಷ
ಡಿವಿಡೆಂಡ…      ರೂ 2  ಲಕ್ಷ

ಹಾಗಾಗಿ, 
ಅರ್ನಿಂಗ್ಸ್‌ ಪರ್‌ ಶೇರ್‌  = ಲಾಭ/ಶೇರು ಸಂಖ್ಯೆ= 8/10 = ರೂ 0.8
ಡಿವಿಡೆಂಡ್‌ ಪರ್‌ ಶೇರ್‌      =  ಡಿವಿಡೆಂಡ್‌/ಶೇರು ಸಂಖ್ಯೆ= 2/10= ರೂ 0.2
ಡಿವಿಡೆಂಡ್‌ ಶೇಖಡಾ (%)    = (0.2/10)*100= 2%
ನೆಟ್ ವರ್ಥ್  = ಶೇರ್‌ ಕ್ಯಾಪಿಟಲ್+ ಮರುಹೂಡಿಕೆ = ರೂ 1 ಕೋಟಿ+ 6 ಲಕ್ಷ = ರೂ 1.06 ಕೋಟಿ (106 ಲಕ್ಷ)
ಬುಕ್ಸ್ ವಾಲ್ಯು  = ನೆಟ್ ವರ್ಥ್/ಶೇರು ಸಂಖ್ಯೆ= ರೂ 106/10= ರೂ 10.6
ಈ ಸಾಧನೆಯನ್ನೂ, ಕಂಪೆನಿಯ ಭವಿಷ್ಯವನ್ನೂ ಗಮನಿಸಿ ಕಂಪೆನಿಯ ಶೇರು ರೂ 12 ಗೆ ಮಾರುಕಟ್ಟೆಯಲ್ಲಿ ಬಿಕರಿಯಾಗತೊಡಗುತ್ತದೆ

ಆವಾಗ, 
P/E ರೇಶಿಯೋ = ಮಾರುಕಟ್ಟೆ ಬೆಲೆ/E.P.S = 12/0.8= 15.
ಡಿವಿಡೆಂಡ್‌ಯೀಲ್ಡ= ಡಿವಿಡೆಂಡ್‌ ಪರ್‌ ಶೇರ್‌/ಮಾರುಕಟ್ಟೆ ಬೆಲೆ= 0.2/12= 1.66%
ಅರ್ನಿಂಗ್ಸ್‌ ಯೀಲ್ಡ= ಅರ್ನಿಂಗ್ಸ್‌ ಪರ್‌ ಶೇರ…/ಮಾರುಕಟ್ಟೆ ಬೆಲೆ= 0.8/12= 6.66%

ಈ ರೀತಿ ವಿವಿಧ ರೀತಿಯಲ್ಲಿ ಒಂದು ಕಂಪೆನಿಯ ಸಾಧನೆಯನ್ನು ಅಳೆಯಲಾಗುತ್ತದೆ. ಇವಲ್ಲದೆ PEG, Debt-Equity ratio, Return on Equity (ROE) ಇತ್ಯಾದಿ ಮಾಪನಗಳನ್ನೂ ಕೂಡಾ ಫ‌ಂಡಮೆಂಟಲ್ ಅನಾಲಿಸಿಸ್‌ ರೂಪದಲ್ಲಿ ವಿಶ್ಲೇಷಿಸಲಾಗುತ್ತದೆ.

ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next