Advertisement

ಕಾರ್‌ ಹಾರ್ನ್ ಕೆಟ್ಟು ಹೋಗಿದೆಯೇ ರಿಪೇರಿ ಹೇಗೆ ?

09:54 PM Dec 26, 2019 | mahesh |

ಭಾರತದಂತಹ ದೇಶಗಳಲ್ಲಿ ಹಾರ್ನ್ ಇಲ್ಲದೆ ರಸ್ತೆಯಲ್ಲಿ ಚಲಿಸುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ರಸ್ತೆ ನಿಯಮಗಳ ಬಗ್ಗೆ ಹೆಚ್ಚಾಗಿ ಅರಿವು ಇಲ್ಲದೇ ಇರುವುದರಿಂದ ಎಚ್ಚರಿಸುವ ಉದ್ದೇಶದಿಂದ ನಮ್ಮಲ್ಲಿ ಕಾರಿನ ಹಾರ್ನ್ ಬಳಕೆಯೂ ಅತಿ ಹೆಚ್ಚು. ಕಾರಿನ ಹಾರ್ನ್ ಹಾಳಾಗಿದ್ದರೆ ರಸ್ತೆಯಲ್ಲಿ ಸುಲಭವಾಗಿ ಚಲಾಯಿಸುವುದು ತುಸು ಕಷ್ಟವಾಗಬಹುದು. ಹಾರ್ನ್ ಕೆಟ್ಟು ಹೋದರೆ ಅದನ್ನು ನಾವೇ ಪರೀಕ್ಷಿಸಿ ರಿಪೇರಿ ಮಾಡುವುದು ಸಾಧ್ಯವಿದೆ.

Advertisement

ಫ್ಯೂಸ್‌ ಪರೀಕ್ಷೆ
ಆರಂಭದಲ್ಲಿ ಕಾರಿನ ಯೂಸರ್‌ ಮ್ಯಾನ್‌ವಲ್‌ (ಬಳಕೆದಾರರ ಕೈಪಿಡಿ) ಅನ್ನು ಕೈಯಲ್ಲಿ ಇಟ್ಟುಕೊಳ್ಳಿ. ನಿಮ್ಮ ಕಾರಿನ ಫ್ಯೂಸ್‌ ಬಾಕ್ಸ್‌ ಸಾಧಾರಣವಾಗಿ ಡ್ರೈವರ್‌ ಬದಿ ಡ್ಯಾಶ್‌ಬೋರ್ಡ್‌ನ ಕೆಳಭಾಗದಲ್ಲಿರುತ್ತದೆ. ಅದನ್ನು ತೆಗೆದು ಕಾರಿನ ಹಾರ್ನ್ಗೆ ಸಂಬಂಧಿಸಿದ ಫ್ಯೂಸ್‌ ಯಾವುದು ಎಂಬುದನ್ನು ಮ್ಯಾನುವಲ್‌ ಮೂಲಕ ತಿಳಿದುಕೊಂಡು ಅದನ್ನು ತೆಗೆಯಿರಿ. ಬೆಳಕಿಗೆ ಹಿಡಿದು ಫ್ಯೂಸ್‌ ಬರ್ನ್ ಆಗಿದೆಯೇ ಎಂದು ಪರೀಕ್ಷಿಸಿ. ಇದು ಅತಿ ಸಣ್ಣ ಗಾತ್ರದಲ್ಲಿರುವುದರಿಂದ ಟಾರ್ಚ್‌ನ ಆವಶ್ಯಕತೆ ಬೇಕಾಗಬಹುದು. ಒಂದು ವೇಳೆ ಅದರಲ್ಲೇನೂ ಸಮಸ್ಯೆ ಇಲ್ಲ ಅಂದರೆ ಮೊದಲ ಇದ್ದ ಜಾಗದಲ್ಲೇ ಅದನ್ನು ಮರುಸ್ಥಾಪಿಸಿ. ಸಮಸ್ಯೆ ಇದ್ದರೆ ಅಂತಹುದೇ ಫ್ಯೂಸ್‌ ಖರೀದಿಸಿ ಯಥಾ ಸ್ಥಾನದಲ್ಲಿ ಅದನ್ನು ಅಳವಡಿಸಿ. ಈಗ ಹಾರ್ನ್ ಮಾಡಲು ಸಾಧ್ಯವಾಗುತ್ತಿದೆಯೇ ಪರೀಕ್ಷಿಸಿ.

ರಿಲೇ ಪರೀಕ್ಷೆ
ಒಂದು ವೇಳೆ ಫ್ಯೂಸ್‌ ಚೆನ್ನಾಗಿದೆ. ಆದರೆ ಹಾರ್ನ್ ಆಗುತ್ತಿಲ್ಲ ಎಂದಾದರೆ ಸಮಸ್ಯೆ ರಿಲೇಯದ್ದಾಗಿರಬಹುದು. ರಿಲೇ ಅಂದರೆ ಎಲೆಕ್ಟ್ರಾನಿಕ್‌ ಸಾಧನಗಳ ಸುರಕ್ಷತೆಗೆ ಇರುವ ಉಪಕರಣ. ಇದು ಸರ್ಕ್ನೂಟ್‌ಗಳನ್ನು ಮುಚ್ಚುವ ತೆರೆಯುವ ಕೆಲಸಗಳನ್ನು ಎಲೆಕ್ಟ್ರಾನಿಕ್‌ ವ್ಯವಸ್ಥೆಯ ಮೂಲಕ ಮಾಡುತ್ತದೆ. ರಿಲೇ ಪರೀಕ್ಷೆ ನಡೆಸಬೇಕಾದರೆ ಕಾರಿನ ಬಾನೆಟ್‌ ತೆರೆದು ರಿಲೇ ಇರುವ ಜಾಗವನ್ನು ಹುಡುಕಬೇಕು. ಇದರಲ್ಲಿ ಹಾರ್ನ್ ರಿಲೇ ಪ್ರತ್ಯೇಕವಾಗಿರುತ್ತದೆ. ರಿಲೇ ತೆಗೆದು ಹೊಸ ರಿಲೇ ಹಾಕಿದಾಗ ಸಮಸ್ಯೆ ಇದ್ದರೆ ತಿಳಿಯುತ್ತದೆ. ರಿಲೇ ಸರಿಯಾಗಿದ್ದರೆ ಸಮಸ್ಯೆಯಿರಲಾರದು. ರಿಲೇ ಸರಿಯಿದೆಯೇ ಎಂದು ತಿಳಿಯಬೇಕಾದರೆ ಮಲ್ಟಿಮೀಟರ್‌ ಮೂಲಕ ಪರೀಕ್ಷೆ ನಡೆಸಬೇಕಾಗುತ್ತದೆ.

ರಿಲೇ ಸ್ವಿಚ್‌
ರಿಲೇ ಸಮಸ್ಯೆ ಇಲ್ಲದಿದ್ದರೆ ಸ್ಟೀರಿಂಗ್‌ ತಳಭಾಗದಲ್ಲಿರುವ ರಿಲೇ ಸ್ವಿಚ್‌ ಸಮಸ್ಯೆಯಿರುವ ಸಾಧ್ಯತೆಯೂ ಇದೆ. ಸ್ಟೀರಿಂಗ್‌ ತಳಭಾಗದಲ್ಲಿರುವ ಫೈಬರ್‌ ಪ್ಯಾನೆಲ್‌ ಅನ್ನು ತೆಗೆದು ಇದರ ಪರೀಕ್ಷೆ ನಡೆಸಬೇಕು. ರಿಲೇ ಸ್ವಿಚ್‌ ಬಿಟ್ಟಿದ್ದರೆ, ಸಮಸ್ಯೆಯಿದ್ದರೆ ಹಾರ್ನ್ ಆಗುವುದಿಲ್ಲ.

ಹಾರ್ನ್ ಪರೀಕ್ಷೆ
ಮೇಲಿನ ಎಲ್ಲ ಉಪಕರಣಗಳೂ ಸರಿ ಇವೆ ಎಂದಾದರೆ ಈಗ ಪರೀಕ್ಷೆ ನಡೆಸಬೇಕಾಗಿರುವುದು ಹಾರ್ನ್ ಬಗ್ಗೆ. ಹಾರ್ನ್ ಕಾರಿನ ರೇಡಿಯೇಟರ್‌ ಮುಂಭಾಗದ ಕ್ಲಾಂಪ್‌ನಲ್ಲಿರುತ್ತವೆ. ಅದರ ವಯರ್‌ ಸಂಪರ್ಕ ತಪ್ಪಿಸಿ ನಿಧಾನಕ್ಕೆ ತೆಗೆಯಿರಿ. ಬಳಿಕ ಹಾರ್ನ್ ರಿಪೇರಿ ಮಾಡುವವರ ಬಳಿ ಅದನ್ನು ಪರೀಕ್ಷಿಸಲು ಹೇಳಿ. ಸಣ್ಣ ಪುಟ್ಟದಾದರೆ ರಿಪೇರಿ ಮಾಡಿಕೊಡುತ್ತಾರೆ. ಒಂದು ವೇಳೆ ಸಂಪೂರ್ಣ ಕೆಟ್ಟುಹೋದರೆ ಹೊಸದನ್ನು ಹಾಕಿ.

Advertisement

– ಈಶ

Advertisement

Udayavani is now on Telegram. Click here to join our channel and stay updated with the latest news.

Next