Advertisement

ಆಸಕ್ತಿ ಇಲ್ದೆ ಓದೂದ್‌ ಹ್ಯಾಂಗ?

10:17 AM Jan 02, 2020 | mahesh |

ಬಿ.ಇ. ಓದಬೇಕು, ಎಂಬಿಬಿಎಸ್‌ ಮಾಡ್ಬೇಕು ಅಂತ ಆಸೆಯೇನೋ ಇತ್ತು. ಆದರೆ, ಅನುಕೂಲಗಳಿರಲಿಲ್ಲ. ನಮ್ಮ ಆಸೇನ ನೀವಾದ್ರೂ ಈಡೇರಿಸಿ ಎಂದು ಪೋಷಕರು ಮಕ್ಕಳಿಗೆ ಹೇಳುವುದುಂಟು. ಹೀಗೆ ಹೇಳುವ ಮೊದಲು ಮಕ್ಕಳ ಮನಸ್ಸನ್ನೂ ತಿಳಿಯಬೇಕಲ್ಲವೇ?

Advertisement

ಬಸ್ಸಿನಲ್ಲಿ ನನ್ನ ಮುಂದೆ ಕುಳಿತ ಇಬ್ಬರು ವಿದ್ಯಾರ್ಥಿನಿಯರು ಮಾತನಾಡುವುದು ಕಿವಿಗೆ ಬಿತ್ತು. ಒಬ್ಟಾಕೆ ಹೇಳುತ್ತಿದ್ದಳು: “ಏನ್ಲಪ್ಪಾ, ಈ ಸೆಕೆಂಡ್‌ ಪಿಯೂಸಿ ರಿಸಲ್ಟ್ ಬಂದಾಗಿಂದ್‌ ಮನ್ಯಾಗ್‌ ಬೈಸ್ಕೊಂಡು ಬೈಸ್ಕೊಂಡು ಸಾಕಾಗೇತ್ಲೆ. ಎಲ್ರೂ ನನ್ನ ಪರ್ಸೆಂಟೇಜ್‌ ಕೇಳ್ತಾರೆ, ಮತ್ತ್ ಇದು ನಿನ್ನ ಪರ್ಸೆಂಟೇನಾ, ಇಷ್ಟ್ ಯಾಕ್‌ ಕಡಿಮಿ ತಗದಿ? ನಮ್ಮ ಪಕ್ಕದ ಮನ್ಯಾಕಿ ಹುಡುಗಿ ನೈಂಟಿ ಮಾಡ್ಯಾಳ, ನಮ್ಮ ರಿಲೇಟಿವ್‌ ಹುಡುಗಾ ನೈಂಟಿಥ್ರಿ ಮಾಡ್ಯಾನಾ ಅಂತಾ ಕೊರೀಲಿಕ್‌ ಸುರು ಹಚ್ಕೋತಾರಲೇ. ಯಾರಿಗಾದ್ರೂ ಮಾರೀ ತೋರ್ಸಾಕ್‌ ಒಂದು ನಮೂನಿ ಆಗ್ತಾದ್ಲೇ. ಎಲ್ರುನ್ನೂ ಒಂದಾ ತಕ್ಕಡಿಯಾಗ್‌ ತೂಗಿದ್ರೆ ಹ್ಯಾಂಗ್‌ ಲೇ? ಇನ್ನೂ ಸಿಇಟಿ, ಕಾಮೆಡ್‌ಕೆ ಬರೂ ಹೊತ್ತಿಗ್‌ ಉತ್ತರಾ ಹೇಳಿ ಹೇಳಿ ಸಾಕಾಗ್ತದ. ಸುಮ್ಮಾ, ಹಳ್ಳಿಗ್‌ ಅಜ್ಜಾನೂರಿಗ್‌ ಹೋಗಿಬಿಡ್ತೀನಿ, ಯಾರ ಕಾಟನೂ ಇಲ್ದಂಗ್‌ ಆರಾಮಾಗಿರೊದು…

ನಮ್ಮವ್ವ ಅಪ್ಪಂಗೂ, ಮೊದ್ಲೆ ನನ್ನ ರಿಸಲ್ಟ್ ಬಂದಾಗಿಂದ ಸಿಟ್ಟು ನೆತ್ತಿಗೇರೇತಿ. ಜೊತೀಗ್‌, ಈ ಮಂದೀ ಏನಾದ್ರೂ ಹಿಂಗ ಹೇಳ್ತಿದ್ದಂಗ, ನೋಡು, ಮಂದೀ ಮುಂದೆ ನಮ್ಮ ಮರ್ಯಾದಿ ತೆಗೆದುಬಿಟ್ಟಿ ಅಂತಾ ಹರಿಹಾಯ್ತಾರೆಲ. ನಾ ಮೊಬೈಲು ಹಿಡಿದು ಕುಂತ್ರ, ಈ ಮೊಬೈಲಿಂದಾನಾ ನೀನು ಹಾಳಾಗಿದ್ದು. ಅದಕ್ಕಾ ಕಮ್ಮಿ ಮಾರ್ಕ್ಸ್ ಬಂದಿರೋದು ಅಂತಾರಾ. ಸುಮ್ನೆ ಕುಂತೇ ಅಂದ್ರ, ಹೀಂಗ ಸುಮ್ನೆ ಕುಂತು ಕುಂತೇ ಮಾರ್ಕ್ಸ್ ಕಮ್ಮಿ ತಗಿದೀ ನೋಡು ಅನ್ನೂ ರಾಗಾ. ಮಕ್ಕೊಂಡೇ ಅಂದ್ರ, ಹೀಂಗ್‌ ಮಕ್ಕೊಂಡು ಮಕ್ಕೊಂಡು ಟೈಮ್‌ ವೇಸ್ಟ್‌ ಮಾಡಿ ಮಾರ್ಕ್ಸ್ ಕಮ್ಮಿ ಬಂದಾವಾ ಅಂತಾರೆಲ! ಏನ್‌ ಮಾಡ್ಬೇಕು ಅಂತಾನೇ ಗೊತ್ತಾಗವಲ್ಲದು ನೋಡು…

ನಾ ಶಾಣೆ ಇರಬಾರದಿತ್ಲೆ, ಎಸ್ಸೆಲ್ಸಿನಾಗ 98% ಮಾಡಿದ್ದೇ ತಪ್ಪಾತು ನೋಡು. ಪಿಯೂಸಿನಾಗೂ ಅಷ್ಟಾ ಬರ್ಬೇಕು ಅಂತಾ ಎಕ್ಸ್‌ಪೆಕ್ಟ್ ಮಾಡ್ತಾರ. ಅದಾ ಬ್ಯಾರೆ, ಇದಾ ಬ್ಯಾರೆ ಅನ್ನೂ ಹಕೀಕತ್ತು ಇವ್ರಿಗೆಲ್ಲಿ ಗೊತ್ತಾಗ್ಬೇಕು? ನನಗಂತೂ ಸೈನ್ಸ್‌ ಮಾಡೋಕ ಇಷ್ಟಾ ಇಲ್ಲಾ, ನಾ ಇಂಗ್ಲಿಷ್‌ ಲಿಟರೇಚರ್‌ ಮಾಡ್ಬೇಕೂ ಅಂತಾ ಎಷ್ಟು ಹೇಳಿದ್ರೂ, ಎಂಜಿನಿಯರ್‌, ಡಾಕ್ಟ್ರೇ ಆಗ್ಬೇಕಂತಾರೆಲ್ರ. ಅದಕ್ಕ ಎಷ್ಟು ರೊಕ್ಕಾ ಖರ್ಚಾದ್ರೂ ಸೈತ ಕೊಡಾಕ್‌ ರೆಡಿಯಾಗ್ಯಾರೆಲ್ರ. ನನಗ ಇಂಟ್ರಸ್ಟ್‌ ಇಲ್ಲದ ಸಬ್ಜೆಕ್ಟ್ ಓದೂದಾದ್ರೂ ಹ್ಯಾಂಗ್‌ ಹೇಳು? ಓದಿ ಓದಿ ಬ್ಯಾಸ್ರ ಆದಾಗ ಯಾವುದಾದ್ರೂ ಸಾಹಿತ್ಯದ ಪುಸ್ತಕಾ ಹಿಡಿದ್ರೂ ಸಹಸ್ರಾರ್ಚನೆ ಮಾಡೋಕ್‌ ಸುರುವಾಗ್ತಿತ್ತು. ಹಾಳಾ, ಮೂಳೂ ಆಮ್ಯಾಗ್‌ ಓದೂವಂತಿ ಈಗ ಚಂದಾಗ ಕಾಲೇಜು ಪುಸ್ತಕ ಓದೂದ್‌ ಕಲೀ ಅಂತಾ! ಡ್ಯಾನ್ಸ್‌ ಕ್ಲಾಸ್‌, ಮ್ಯೂಸಿಕ್‌, ನ್ಪೋರ್ಟ್ಸ್ ಎಲ್ಲದಕ್ಕೂ ಎರಡು ವರ್ಷ ಎಳ್ಳು ನೀರು ಬಿಟ್ಟಿದ್ದಾತು… ಕಿವಿಗೆ ಅಪ್ಪಳಿಸುತ್ತಲೇ ಇದ್ದ ಆ ಹುಡುಗಿಯ ವಾಸ್ತವಿಕ ಮಾತುಗಳು ಇನ್ನೂ ಮುಂದುವರೆಯುತ್ತಿರುವಾಗಲೇ ನನ್ನ ನಿಲ್ದಾಣ ಬಂದಿತ್ತು.

ಮನೆ ತಲುಪಿದ ಮೇಲೂ ಸಹ, ಯಾಕೋ ತಲೆಯಲ್ಲಿ ಆ ಹುಡುಗಿ ಆಡಿದ ಮಾತುಗಳು ಗುಂಗಿ ಹುಳುವಿನ ಹಾಗೆ ಗುಯ್‌ಗಾಡುತ್ತಲೇ ಇದ್ದವು. ಮಕ್ಕಳ ಮನಸ್ಸನ್ನು ಪೋಷಕರು ಸ್ವಲ್ಪ ಅರ್ಥ ಮಾಡಿಕೊಂಡರೆ ಒಳಿತು ಎನಿಸಿತು. ಎಷ್ಟೋ ಮನೆಗಳಲ್ಲಿ, ನಮಗಂತೂ ಡಾಕ್ಟರ್‌/ಇಂಜಿನಿಯರ್‌/ಐಎಎಸ್‌(ಮತ್ತೂಂದಿಷ್ಟು ದೊಡ್ಡ ದೊಡ್ಡ ಡಿಗ್ರಿಗಳು)ಮಾಡೋಕೆ ಆಗ್ಲಿಲ್ಲ, ಅನುಕೂಲ ಇರ್ಲಿಲ್ಲ, ನೀವಾದರೂ ನಮ್ಮಾಸೆ ಪೂರೈಸಿ ಎಂದು ಮಕ್ಕಳಿಗೆ ಗಂಟು ಬೀಳುವುದೇ ಹೆಚ್ಚು. ಹೀಗೆ ಹೇಳುವ ಮುನ್ನ, ಜೀವನದಲ್ಲಿ ಮಕ್ಕಳ ಆಸೆ, ಆಕಾಂಕ್ಷೆಗಳೇನು, ಅವರಿಗೆ ಏನು ಓದಲು ಮನಸ್ಸಿದೆ? ಏನಾಗಬೇಕೆಂದು ಬಯಸಿದ್ದಾರೆ ಎಂಬುದರ ಬಗ್ಗೆ ಮಕ್ಕಳ ಬಳಿ ಸಮಾಲೋಚನೆ ಮಾಡಿದರೆ ಒಳ್ಳೆಯದು. ನಮ್ಮಿಷ್ಟಗಳನ್ನು ಮಕ್ಕಳ ಮೇಲೆ ಹೇರದೆ, ಅವರಿಷ್ಟಗಳನ್ನು ಆಲಿಸಿ ಪೂರೈಸುವ ಕಡೆ ಗಮನ ಕೊಟ್ಟರೆ, ಜೀವನದಲ್ಲಿ ತಮ್ಮಿಷ್ಟದ ಗುರಿಯೆಡೆಗೆ ಲಕ್ಷ್ಯಗೊಟ್ಟು ಮುನ್ನಡೆದು ಯಶಸ್ವಿಯಾಗುವುದು ಖಂಡಿತ.

Advertisement

-ನಳಿನಿ ಟಿ. ಭೀಮಪ್ಪ

Advertisement

Udayavani is now on Telegram. Click here to join our channel and stay updated with the latest news.

Next