Advertisement

ಪ್ರೊ.ನಾರಾಯಣ ಆಚಾರ್ಯ ಸರ್ ಹೇಗಿದ್ದೀರಿ?ಭಂಡಾರ್ ಕಾರ್ಸ್ ನ ಹಳೇ ನೆನಪಿನ ಬುತ್ತಿ ಬಿಚ್ಚಿಟ್ಟರು

10:51 AM Apr 08, 2020 | Nagendra Trasi |

ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜು ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದೇ ಪ್ರಾಂಶುಪಾಲರಾದ ಪ್ರೊ.ನಾರಾಯಣ ಆಚಾರ್ಯ ಅವರದ್ದು. ಹೌದು 1968ರಿಂದ 1996ರವರೆಗೆ ಆ ಕಾಲೇಜನ್ನು ಅವರು ಅಕ್ಷರಶಃ ಆಳಿದ್ದರು…ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಿದ್ದರು. ಖಡಕ್ ಶಿಸ್ತಿನ ಸಿಪಾಯಿ ಆಗಿದ್ದರು…ಯಾವುದೇ ದಂಡು, ದಾಳಿಗೆ ಜಗ್ಗದ ಅಪರೂಪದ ಪಾರದರ್ಶಕ ವ್ಯಕ್ತಿತ್ವ ಅವರದ್ದಾಗಿತ್ತು..ಆ ಕಾಲದ ವಿದ್ಯಾರ್ಥಿಗಳು ಅಂದು ಅವರ ಶಿಸ್ತನ್ನು, ಡಿಬಾರ್ ಮಾಡಿದ್ದನ್ನು ಖಂಡಿಸಿ ಹೀಯಾಳಿಸಿರಬಹುದು…ಅಸಮಾಧಾನದಿಂದ ಜಿದ್ದು ಸಾಧಿಸಿರಬಹುದು..ಆದರೆ ಇಂದು ಅವರ ಬಗ್ಗೆ ಅಭಿಪ್ರಾಯ ಹೇಳಿ ಎಂದಾಗ..ಎಲ್ಲರೂ ಅವರ ಶಿಸ್ತನ್ನು, ಅವರ ವ್ಯಕ್ತಿತ್ವದ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ..

Advertisement

ಸುಮಾರು 27 ವರ್ಷಗಳ ಕಾಲ ಅವರು ಕುಂದಾಪುರದ ಪ್ರತಿಷ್ಠಿತ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದ ಅವರು ಆ ದಿನಗಳಲ್ಲಿ ಅವರು ಎದುರಿಸಿದ ಸಮಸ್ಯೆಗಳು… ಗ್ಯಾಂಗ್ ವಾರ್, ಬಂದ್ ಸೇರಿದಂತೆ ಪ್ರತಿಯೊಂದನ್ನು ಎದುರಿಸಿ ವಿದ್ಯಾರ್ಥಿಗಳನ್ನು ಹತೋಟಿಯಲ್ಲಿಟ್ಟಿದ್ದ ಕಮಾಂಡರ್ ಅವರಾಗಿದ್ದರು ಎಂದರೆ ಅತೀಶಯೋಕ್ತಿಲಾಗಲಾರದು!

ಪ್ರೊ.ನಾರಾಯಣ ಆಚಾರ್ಯ ಅವರೊಬ್ಬ ಅಪ್ರತಿಮ ಗಣಿತ ತಜ್ಞ, ಆಧುನಿಕ ಆಲ್ ಜಿಬ್ರಾ, ಟಪೋಲಜಿಯಂತಹ ಕಠಿಣ ಪಾಠವನ್ನು ಸರಳವಾಗಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರು. “ಕೆ” ಥಿಯರಿ ಬಗ್ಗೆ ಜರ್ಮನಿಯಲ್ಲಿ ಪ್ರಬಂಧ ಮಂಡಿಸಿದ್ದ ಕೀರ್ತಿ ಅವರದ್ದು. ಬಿಎಸ್ಸಿ ವಿದ್ಯಾರ್ಥಿಗಳಿಗೆ ಎಷ್ಟು ಪ್ರೀತಿ ಪಾತ್ರರಾಗಿದ್ದರೋ ಬಿಕಾಂ, ಬಿಎ ವಿದ್ಯಾರ್ಥಿಗಳಿಗೆ ಅವರೊಬ್ಬ ಸಿಂಹಸ್ವಪ್ನರಾಗಿದ್ದರು. ಅಂದು ಕಾಲೇಜಿಗೆ ಬರುತ್ತಿದ್ದವರು ತೀರಾ ಕುಗ್ರಾಮ ಪ್ರದೇಶದವರಾಗಿದ್ದರು. ಈಗಿನ ಕಾಲದಂತೆ ಮೊಬೈಲು, ಆಧುನಿಕ ತಂತ್ರಜ್ಞಾನ ಬೆಳೆಯದ ಕಾಲವದು..ಎಲ್ಲವೂ ಪುಂಡಾಟಿಕೆಯೇ ವಿದ್ಯಾರ್ಥಿಗಳ ದಿನಚರಿಯಾಗಿತ್ತು..ಕಾಲೇಜು ಚುನಾವಣೆ, ಹಾಸ್ಟೆಲ್ ಗಳ ರಾದ್ಧಾಂತ, ಕಾಲೇಜಿನ ಟಾಯ್ಲೆಟ್ ಗಳಲ್ಲಿ ಆಟಂ ಬಾಂಬ್ ನಂತಹ ಪಟಾಕಿ ಸಿಡಿಸಿ ಕಿಡಿಗೇಡಿತನ ಮೆರೆಯುತ್ತಿದ್ದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುತ್ತಿದ್ದ ಅವರ ಕಾರ್ಯ ವೈಖರಿಯನ್ನು ಇಂದಿಗೂ ಎಲ್ಲರ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿದೆ.

1960ರಲ್ಲಿ ಎಂಎಸ್ಸಿ ತೇರ್ಗಡೆ ಹೊಂದಿದ್ದ ಪ್ರೊ.ನಾರಾಯಣ ಆಚಾರ್ಯ ಅವರು ಮೊದಲು ಉಪನ್ಯಾಸಕರಾಗಿ ಸೇವೆ ಆರಂಭಿಸಿದ್ದು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ. ನಂತರ ಎಂಐಟಿಯಲ್ಲಿ, 1968ರಲ್ಲಿ ಭಂಡಾರ್ ಕಾರ್ಸ್ ಕಾಲೇಜಿಗೆ ಪ್ರವೇಶ, 1986-87ರವರೆಗೆ ಕಾರ್ಕಳ ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ನಂತರ ಮತ್ತೆ ಭಂಡಾರ್ ಕಾರ್ಸ್ ಕಾಲೇಜಿಗೆ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡಿದ್ದರು. 1996ರಲ್ಲಿ ನಿವೃತ್ತಿಯಾದ ಮೇಲೆ ಮಣಿಪಾಲದ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ 1999ರವರೆಗೆ ಸೇವೆ ಸಲ್ಲಿಸಿ, ನಂತರ ಎರಡು ವರ್ಷ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರು.

ಇಂದಿಗೂ ಅವರ ನೆನಪಿನ ಶಕ್ತಿಗೊಂದು ಸಲಾಂ:
ಇದೀಗ ತಮ್ಮ ನಿವಾಸದಲ್ಲಿ ವಿಶ್ರಾಂತ ಜೀವನದಲ್ಲಿರುವ ಪ್ರೊ.ನಾರಾಯಣ ಆಚಾರ್ಯ ಅವರನ್ನು ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಮಾತನಾಡಿಸಿದಾಗ…ನಮಗೆ ಅಚ್ಚರಿ, ನಾಚಿಕೆಯಾಗುವಷ್ಟರ ಮಟ್ಟಿಗೆ ನೆನಪಿನ ಬುತ್ತಿಯನ್ನು ನಮ್ಮೆದುರು ಬಿಚ್ಚಿಟ್ಟಿದ್ದರು. ಕಾಲೇಜಿಗೆ ಚಿನ್ನದ ಪದಕ ತಂದು ಕೊಟ್ಟ ವಿದ್ಯಾರ್ಥಿಗಳ ಬಗ್ಗೆ, ಅಂದು ನಡೆದ ಕಹಿ ಘಟನೆ ಸೇರಿದಂತೆ ಪ್ರತಿಯೊಂದನ್ನು ಮೆಲುಕು ಹಾಕಿದ್ದರು. ಅಂದಿನ ಸಿಡ್ನಿ ಸಗಾರಿಯಾ ಡಿಸಿಲ್ವಾ, ರವೀಂದ್ರನಾಥ ಐತಾಳ, ವಿಶು ಕುಮಾರ್, ಗಣೇಶ್ ನಾಯಕ್(ಬಾಂಬೆ ಯೂನಿರ್ವಸಿಟಿ ಪ್ರೊಫೆಸರ್ ಅಂತ ನೆನಪು) ಹೆಸರನ್ನು ನೆನಪಿಸಿಕೊಂಡಿದ್ದರು. ರಾಮಚಂದ್ರ ಶಾಸ್ತ್ರಿ ಎಂಬ ವಿದ್ಯಾರ್ಥಿಯನ್ನು ಮರೆಯಲು ಸಾಧ್ಯವಿಲ್ಲ…ಅವರು ಲಂಡನ್ ನಲ್ಲಿನ ಏಕೈಕ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಆಗಿದ್ದರು ಎಂಬುದು ನೆನಪು ಎಂಬುದಾಗಿ ತಮ್ಮ ಪ್ರೀತಿಯ ಶಿಷ್ಯನನ್ನು ನೆನಪಿಸಿಕೊಂಡರು. ಅಪರೂಪಕ್ಕೊಮ್ಮೆ ಬಿಎ ತರಗತಿಗೆ ಪಾಠ ಮಾಡಲು ಹೋಗುತ್ತಿದ್ದ ತನಗೆ ಪ್ರಭಾಕರ್ ಶೆಟ್ಟಿ ಅವರ ಹೆಸರನ್ನು ಮರೆಯಲು ಸಾಧ್ಯವಿಲ್ಲ ಎಂದರು.

Advertisement

ಅಷ್ಟೇ ಅಲ್ಲ ವಿವಿ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಅಂದು ನಡೆದ ಗಲಾಟೆಯ ಬಗ್ಗೆ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದರು. ತಾನು ಕೊನೆಗೂ ಅದಕ್ಕೆ ಅವಕಾಶ ನೀಡಿಲ್ಲ. ಇಂದಿಗೂ ಕಾಲೇಜಿನಲ್ಲಿ ಚುನಾವಣೆ ನಡೆಯೋದು ನಿಂತು ಹೋಗಿದೆ ಎಂದರು.

ತನಗೆ ಹಿಂದಿನಿಂದ ನಾರಾಯಣ….ಏಯ್ ನಾರಾಯಣ ಎಂದು ವಿದ್ಯಾರ್ಥಿಗಳು ಕೂಗುತ್ತಿದ್ದದನ್ನು ನೆನಪಿಸಿಕೊಂಡು ನಕ್ಕರು! ತಾನು ಅದಕ್ಕೆಲ್ಲಾ ಅಂಜುತ್ತಿರಲಿಲ್ಲ..ಒಮ್ಮೆ ಕಾಲೇಜಿನಲ್ಲಿ ನಡೆದ ಗಲಾಟೆಯಲ್ಲಿ ಒಬ್ಬ ವಿದ್ಯಾರ್ಥಿಯ ಕೈಯನ್ನು ತಲವಾರ್ ನಿಂದ ಕಡಿದಿದ್ದರು. ನನಗೆ ವಿಷಯ ತಿಳಿದ ಕೂಡಲೇ ಕ್ಯಾಂಟೀನ್ ಗೆ ಹೋಗಿ ಆ ವಿದ್ಯಾರ್ಥಿಯ ಕೈಗೆ ಬಟ್ಟೆ ಕಟ್ಟಿ ಆಸ್ಪತ್ರೆಗೆ ಕರೆದೊಯ್ದಿದ್ದೆ. ಬಳಿಕ ಕಾಲೇಜಿಗೆ ಬಂದಾಗ ಕೈ ಕಡಿದ ವಿದ್ಯಾರ್ಥಿಯನ್ನು ಹೊರಗೆ ಬಿಡಿ ಆತನನ್ನು ಕೊಲ್ಲುತ್ತೇವೆ ಎಂದು ಗುಂಪೊಂದು ಬಂದಿತ್ತು. ಆದರೆ ನಾನು ಅದಕ್ಕೆ ಅವಕಾಶ ಕೊಡದೇ ನನ್ನ ಕೊಂದು ಒಳಗೆ ಹೋಗಿ ಎಂದಿದ್ದೆ..ಎಂಬುದಾಗಿ ಅಂದಿನ ಘಟನೆಯನ್ನು ಮೆಲುಕು ಹಾಕಿದ್ದರು…ಅಂದಿನ ಶಿಸ್ತಿನ ಸಿಪಾಯಿ, ಖಡಕ್ ವ್ಯಕ್ತಿತ್ವದ ಪ್ರೊ.ನಾರಾಯಣ ಆಚಾರ್ಯ ಅವರು ಇಂದು ಹಳೆಯ ನೆನಪನ್ನು ಮೆಲುಕು ಹಾಕುತ್ತಿದ್ದಾರೆ..ಆದರೂ ಅವರೊಳಗೆ ಅದೇ ಪ್ರೀತಿ, ಅಭಿಮಾನ ಉಳಿದುಕೊಂಡಿದೆ.. ನಿಮಗಿದೋ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶುಭಕಾಮನೆಗಳು ಸರ್.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next