ಡಿಸೆಂಬರ್ ಎರಡು. ಸುಮಾರು ಸಂಜೆ 6 ಗಂಟೆ. ಮೊಬೈಲ್ ರಿಂಗ್ ಆಯಿತು. ಕರೆ ಮಾಡಿದವರು ನನ್ನ ಹೈಸ್ಕೂಲ್ ಹೆಡ್ ಮಾಸ್ಟರ್, ಮೂರು ವರ್ಷಗಳ ಕಾಲ ಪ್ರೋತ್ಸಾಹಿಸಿ ನನ್ನನ್ನು ಬೆಳೆಸಿದ ಮಂಜುನಾಥ್ ಸಾರ್. ಅವರು “ನಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ಗೆಸ್ಟ್ ಆಗಿ ಬರಬಹುದಾ?’ ಎಂದು ಕೇಳಿದಾಗ ನನ್ನ ಸಂತೋಷಕ್ಕೆ ಕೊನೆ ಇರಲಿಲ್ಲ. ನಾನು ಕಲಿತ ಶಾಲೆಗೆ ಗೆಸ್ಟ್ ಆಗಿ ಹೋಗುತ್ತಿರುವ ಸಂತೋಷ ಒಂದು ಕಡೆಯಾದರೆ, ಎಸ್‌ಎಸ್‌ಎಲ…ಸಿ ಮುಗಿಸಿ ಕೇವಲ ಮೂರು ವರ್ಷಗಳಲ್ಲೇ ಗೆಸ್ಟ್ ಆದೆ ಎಂಬ ಸಂತಸ ಇನ್ನೊಂದು ಕಡೆ. ಮರು ಮಾತಿಲ್ಲದೆ, “ಬರ್ತೀನಿ ಸಾರ್’ ಅಂದೆ.
ನಾನು ಹೈಸ್ಕೂಲ್ ವ್ಯಾಸಂಗ ಮಾಡಿದ್ದು ಕುಂಜಿಬೆಟ್ಟು ಟಿ. ಎ. ಪೈ. ಆಂಗ್ಲ ಮಾಧ್ಯಮ ಶಾಲೆ (ಇಎಂಎಚ್‌ಎಸ್). ಮಗು ತಾಯಿಯ ಮಡಿಲಿನಲ್ಲಿ ಇರುವಾಗ ತಾಯಿಗೆ ತುಳಿದು ನಾನಾ ತೊಂದರೆ ಕೊಡುತ್ತದೆ. ಆದರೆ, ತಾಯಿಯಿಂದ ದೂರವಾದಾಗ ಅವಳ ಬೆಲೆಯನ್ನು ತಿಳಿದುಕೊಳ್ಳುತ್ತದೆ. ವಿದ್ಯಾರ್ಥಿಗಳ ವಿಚಾರದಲ್ಲಿಯೂ ಹಾಗೆಯೇ. ಶಾಲೆಯಲ್ಲಿರುವಾಗ ಶಾಲೆಯನ್ನು ನಾನಾ ಬಾರಿ ಶಪಿಸಿಸುತ್ತಾರೆ. ಯಾವಾಗ ಬಿಟ್ಟು ಹೋಗುವುದು- ಎಂದು ಗೋಗರೆಯುತ್ತಾರೆ. ಆದರೆ, ಶಾಲೆಯಿಂದ ದೂರವಾದಾಗ ಮಾತ್ರ ಆ ಶಾಲೆಯ ಮಹತ್ವ, ಅದು ಕಲಿಸಿದ ಪಾಠದ ಅರಿವಾಗುತ್ತದೆ.
ಅದು ನನ್ನ ಎಂಟನೆಯ ತರಗತಿಯ ಮೊದಲ ಪರೀಕ್ಷೆ. ಹೇಗಾದರೂ ಓದಿ ಒಳ್ಳೆಯ ಮಾರ್ಕ್ ಪಡೆಯಬೇಕೆಂಬ ಆಸೆ. ಆದರೆ, ಇಂಗ್ಲಿಶ್ ಕೈಗೆ ಸಿಗದ ಬೆಟ್ಟದ ಹೂವಾಗಿತ್ತು. ಕಷ್ಟಪಟ್ಟು ಓದಿದೆ. ಪರೀಕ್ಷೆ ಬರೆದೆ. ಆದರೆ, ಅಂಕ ಬರಲೇ ಇಲ್ಲ. ಪೇಪರ್ ಇಡೀ ಕೆಂಪು ಪೆನ್ನಿಂದ ಅಂಡರ್‌ಲೈನ್ ಹಾಕಿದ ನಮ್ಮ ಆಂಗ್ಲ ಭಾಷಾ ಶಿಕ್ಷಕಿಗೆ ಶಪಿಸಿದೆ. ಮುಂದಿನ ವರ್ಷವಂತೂ ಅವರು ಬರೋದೇ ಬೇಡ ಎಂದು ದೇವರಿಗೆ ದಿನ ಬೇಡಿಕೊಂಡೆ. ದೇವರಿಗೆ ನನ್ನ ಮೊರೆ ಕೇಳಿದಂತೆ ತೋರಲಿಲ್ಲ. ಒಂಬತ್ತನೆಯ ತರಗತಿಯಲ್ಲಿ ಇಂಗ್ಲಿಷ್‌ಗೆ ಅವರೇ ಬಂದರು. ಹತ್ತನೆಯ ತರಗತಿಯಾದರೂ ಅವರ ಅಂಡರ್‌ಲೈನ್ ಮಿಸ್ ಆಗಬಹುದು ಅಂದರೆ ಅಲ್ಲಿಯೂ ಅವರೇ. ಆದರೆ, ಈ ಮೂರು ವರ್ಷಗಳ ಬಳಿಕ ಗಮನಿಸಿದ ವಿಷಯ ಏನೆಂದರೆ ಪೇಪರ್‌ನಲ್ಲಿ ಅಂಡರ್‌ಲೈನ್ ಇರಲಿಲ್ಲ. ಎಂಟನೆಯ ತರಗತಿಯ ಇಂಗ್ಲಿಷ್ ಪೇಪರ್‌ನಲ್ಲಿ ಎದ್ದು ಕಾಣುತ್ತಿದ್ದ ಕೆಂಪು ಗೆರೆಗಳು ಹತ್ತನೆಯ ತರಗತಿಗೆ ಬಂದಾಗ ಕಾಣೆಯಾಗಿತ್ತು. ಇವತ್ತು ನಾನು ಇಂಗ್ಲಿಷ್‌ನಲ್ಲಿ ತಪ್ಪಿಲ್ಲದೆ ಬರೆಯಬಹುದು, ಮಾತಾಡಬಹುದು ಅಂದರೆ ಅದಕ್ಕೆ ಅವರೇ ಕಾರಣ. “ಪೆಟ್ಟು ತಿಂದು ಶಿಲೆ ಶಿಲ್ಪವಾಯಿತು’ ಎನ್ನುತ್ತೇವೆ. ಆದರೆ, ಆ ಸೃಜನಶೀಲ ಪೆಟ್ಟುಗಳ ಹಿಂದೆ ಇರುವ ಕೈಗಳನ್ನು ಮರೆತುಬಿಡುತ್ತೇವೆ. ಹೇಗೆ ಶಿಲೆ ಶಿಲ್ಪವಾಗಲು ಶಿಲ್ಪಿಯ ಶ್ರಮ ಇರುತ್ತದೋ ಅದೇ ರೀತಿ ವಿದ್ಯಾರ್ಥಿಯ ಬೆಳವಣಿಗೆ ಶಿಕ್ಷಕರ ಶ್ರಮ ಇರುತ್ತದೆ. ಆ ನಿಟ್ಟಿನಲ್ಲಿ ನನಗೆ ಟಿ.ಎ.ಪೈ. ಆಂಗ್ಲ ಮಾಧ್ಯಮ ಶಾಲೆಯ ಪ್ರತಿಯೊಬ್ಬ ಶಿಕ್ಷಕರು ಆ ಸೃಜನಾತ್ಮಕ ಶಿಲ್ಪಿಗಳಂತೆ.
ಶಾಲೆ ಬಿಟ್ಟು ಹೊರಗೆ ಬರುವ ಸಮಯದಲ್ಲಿ ಆ ಶಾಲೆಯನ್ನು ಕೆಲವರು ಹೊಗಳಿದರೆ, ಇನ್ನು ಕೆಲವರು ಅದನ್ನು ತೆಗಳುತ್ತಾರೆ. ಅದು ಸಾಮಾನ್ಯ. ಆದರೆ, ಯೋಚಿಸಬೇಕಾದ ಅಂಶ ಏನೆಂದರೆ, ಎಲ್ಲವೂ ಇದ್ದರೂ ಹೊಗಳಿಕೆ-ತೆಗಳಿಕೆ ಇದ್ದೇ ಇರುತ್ತದೆ. ಕಾರಣ ಇಷ್ಟೇ. ಯಾವ ವಿಚಾರವೇ ಆಗಲಿ, ನಾವು ಎಷ್ಟು ಅದರಲ್ಲಿ ತೊಡಗಿಸಿಕೊಳ್ಳುತ್ತೇವೋ ಅಷ್ಟು ಅದು ನಮಗೆ ಹತ್ತಿರವಾಗುತ್ತದೆ. ಶಾಲಾ ಚಟುವಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡ ವಿದ್ಯಾರ್ಥಿಗೆ ಒಂದು ಬೋರಿಂಗ್ ಕ್ಲಾಸ್ ಕೂಡ ಉತ್ಸಾಹಭರಿತವಾಗಿ ಕಂಡರೆ, ಏನೂ ಬೇಡ ಎಂದು ಕೂತ ಹುಡುಗನಿಗೆ ಶಾಲಾ ಪಿಕ್‌ನಿಕ್ ಕೂಡಾ ಬೋರ್ ಅನಿಸುತ್ತದೆ. ಇವೆಲ್ಲ ಅವರವರ ಮನಸ್ಥಿತಿಗೆ ಬಿಟ್ಟದ್ದು.
ಪಾಠದ ಜತೆಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ರುಚಿ ಬೆಳೆಸಿದ ಶಾಲೆ ನನ್ನದು. ಹಾಗೆಯೇ ಸ್ಪರ್ಧೆ ನಮ್ಮೊಳಗೆ ಆಗಬೇಕೇ ಹೊರತು ಬೇರೆಯವರ ಜೊತೆಗೆ ಅಲ್ಲ ಎಂದು ಪ್ರತಿಯೊಬ್ಬ ವಿದ್ಯಾರ್ಥಿಗೂ ಪಾಠಕಲಿಸಿದ ಶಿಕ್ಷಣ ಕಾಶಿಯೂ ಹೌದು. ಇವೆಲ್ಲದರ ನಡುವೆ ಶಾಲೆಯಲ್ಲಿ ನಮ್ಮ ಮೋಜು-ಮಸ್ತಿಗೆ ಯಾವ ಕೊರತೆ ಇರಲಿಲ್ಲ. ನನಗೆ ಈಗಲೂ ನೆನಪಿದೆ- ಗಣಿತದ ಹೋಂವರ್ಕ್ ಮಾಡಿಲ್ಲ ಎಂದು ನೆಲದಲ್ಲಿ ಕೂತು ಬರೆದದ್ದು , ಸಿಟ್ಟಿನಲ್ಲಿ ಶಾಲೆಯ ಬಲ್ಬ್ ಹೊಡೆದದ್ದು, ಎಸ್‌ಪಿಎಲ್ ಆಗಿಯೂ ಕ್ಲಾಸ್‌ನಿಂದ ಹೊರಗೆ ನಿಂತದ್ದು ಇನ್ನೂ ಮನಸಿನಲ್ಲಿ ಹಸಿ ಹಸಿಯಾಗಿ ಉಳಿದಿದೆ.
ಹೈಸ್ಕೂಲ್ ಜೀವನ ಮತ್ತೆ ಬರಬೇಕು ಅನಿಸಿದರೂ ಅದು ಸಾಧ್ಯವಿಲ್ಲ. ವಾರಕ್ಕೆ ನಾಲ್ಕು ಬಾರಿ ಸಿಗುತ್ತಿದ್ದ ಪಿ.ಟಿ. ಪೀರಿಯಡ್, ಎಲ್ಲರೂ ಹಂಚಿ ತಿನ್ನುತ್ತಿದ್ದ ಟಿಫಿನ್ ಬಾಕ್ಸ್, ಕುತ್ತಿಗೆಗೆ ಸರಪಳಿಯಂತೆ ಕಟ್ಟುತ್ತಿದ್ದ ಟೈ. ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ತುಳಿಯುತ್ತಿದ್ದ ಗೇರ್ ಸೈಕಲ್, ಸ್ಕೂಲ್ ಡೇ, ಪಿಕ್‌ನಿಕ್ ಹಾಗೂ ಸ್ಫೋರ್ಟ್ಸ್ ಡೇ- ಇವೆಲ್ಲ ಈಗ ನೆನಪುಗಳು ಮಾತ್ರ. ಇಂಥ ಸವಿನೆನಪನ್ನು ನೀಡಿದ ನನ್ನ ಶಾಲೆಗೊಂದು ಸಲಾಂ.
ಶ್ರೇಯಸ್ ಕೋಟ್ಯಾನ್
ದ್ವಿತೀಯ ಬಿ. ಎ., ಪತ್ರಿಕೋದ್ಯಮ, ಎಂ.ಜಿ. ಎಂ. ಕಾಲೇಜು ಉಡುಪಿ.