Advertisement

ಪ್ರಯೋಗಾಲಯದಲ್ಲಿ ರಕ್ತದ ಮಾದರಿಯ ಪ್ರಯಾಣ: ರಕ್ತ ಪರೀಕ್ಷೆ ಹೇಗೆ ನಡೆಯುತ್ತದೆ

12:59 PM Mar 21, 2021 | Team Udayavani |

ವೈದ್ಯರು ರೋಗಿಯನ್ನು ಭಾದಿಸುತ್ತಿರುವ ಕಾಯಿಲೆಯ ಇತಿಹಾಸ, ವಿವರಗಳನ್ನು ಸಂಗ್ರಹಿಸಿ, ದೈಹಿಕ ಪರೀಕ್ಷೆಗಳನ್ನು ನಡೆಸಿದ ಬಳಿಕ ರೋಗ ನಿರ್ಣಯಕ್ಕೆ ಬರುವುದಕ್ಕಾಗಿ ಸೂಕ್ತವಾದ ರಕ್ತ ಪರೀಕ್ಷೆಯನ್ನು ನಡೆಸುವುದಕ್ಕೆ ಹೇಳುತ್ತಾರೆ. ಪ್ರಯೋಗಾಲಯದಲ್ಲಿ ಸಂಗ್ರಹಿಸಲಾದ ರಕ್ತದ ಮಾದರಿಯು ಮೂರು ಹಂತಗಳನ್ನು ದಾಟಿ ಬರುತ್ತದೆ. ಅವುಗಳೆಂದರೆ, ವಿಶ್ಲೇಷಣಪೂರ್ವ (ಪ್ರಿಅನಾಲಿಟಿಕ್‌), ವಿಶ್ಲೇಷಣಾತ್ಮಕ (ಅನಾಲಿಟಿಕ್‌) ಮತ್ತು ವಿಶ್ಲೇಷಣೋತ್ತರ (ಪೋಸ್ಟ್‌ ಅನಾಲಿಟಿಕ್‌) ಹಂತಗಳು.

Advertisement

ವಿಶ್ಲೇಷಣಪೂರ್ವ ಹಂತ: ಹೆಸರೇ ಹೇಳುವಂತೆ, ಇದು ರಕ್ತದ ವಿಶ್ಲೇಷಣೆ ಅಥವಾ ರಕ್ತದ ಪರೀಕ್ಷೆಗಿಂತ ಮುಂಚಿನ ಹಂತ.

ಈ ಹಂತದಲ್ಲಿ: ಬಿಲ್ಲಿಂಗ್‌ ಮತ್ತು ನೋಂದಣಿ

ವೈದ್ಯರು ಶಿಫಾರಸು ಮಾಡಿರುವ ರಕ್ತದ ಪರೀಕ್ಷೆಯ ಶುಲ್ಕ ಸಂಗ್ರಹಕ್ಕಾಗಿ ಬಿಲ್ಲಿಂಗ್‌ ಕೌಂಟರ್‌ನಲ್ಲಿ ಬಿಲ್ಲಿಂಗ್‌ ನಡೆಯುತ್ತದೆ; ರಕ್ತದ ಮಾದರಿ ಸಂಗ್ರಹ ಸಮಯದಲ್ಲಿ ಸಂಗ್ರಹಿಸಲಾದ ರಕ್ತಕ್ಕೆ ಯುನೀಕ್‌ ಐಡೆಂಟಿಫಿಕೇಶನ್‌ ನಂಬರ್‌ (ಬಾರ್‌ಕೋಡ್‌) ನೀಡಲಾಗುತ್ತದೆ.

ರಕ್ತದ ಮಾದರಿ ಸಂಗ್ರಹ

Advertisement

ರಕ್ತದ ಮಾದರಿಗಳನ್ನು ಫ್ಲೆಬೊಟೊಮಿಸ್ಟ್‌ (ರಕ್ತದ ಮಾದರಿ ಸಂಗ್ರಹಿಸುವವರು) ಪ್ರಮಾಣೀಕೃತ ಕಾರ್ಯವಿಧಾನ (ಎಸ್‌ಒಪಿ) ಗಳ ಮೂಲಕ ಸರಿಯಾದ ವ್ಯಾಕುಟೈನರ್‌ಗಳಲ್ಲಿ ಅಸೆಪ್ಟಿಕ್‌ ಮುನ್ನೆಚ್ಚರಿಕೆಗಳನ್ನು ಪಾಲಿಸಿ ಸಂಗ್ರಹಿಸುತ್ತಾರೆ. ವಿಭಿನ್ನ ಬಗೆಯ ಪರೀಕ್ಷೆಗಳಿಗಾಗಿ ರಕ್ತದ ಮಾದರಿ ಸಂಗ್ರಹಕ್ಕೆ ಭಿನ್ನ ಬಣ್ಣದ ವ್ಯಾಕುಟೈನರ್‌ಗಳ ಅಗತ್ಯ ಇರುತ್ತದೆ. ಹೀಗೆ ಸಂಗ್ರಹಿಸಿದ ಮಾದರಿಗಳನ್ನು ವರ್ಗೀಕರಿಸಿ ಅಗತ್ಯವಾದ ಪರೀಕ್ಷೆಗಳಿಗೆ ಅನುಗುಣವಾಗಿ ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗುತ್ತದೆ.

ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡುವುದು

ಪ್ರಯೋಗಾಲಯದಲ್ಲಿ ರಕ್ತದ ಮಾದರಿ ಮತ್ತು ಪರೀಕ್ಷೆಗಾಗಿ ವಿನಂತಿ ಪತ್ರಗಳು ನ್ಯುಮಾಟಿಕ್‌ ಚೂಟ್‌ ಸಿಸ್ಟಂ ಅಥವಾ ಮ್ಯಾನ್ಯುವಲೀ ಆಗಿ ಕೊರಿಯರ್‌ ಮುಖಾಂತರ ಸ್ವೀಕರಿಸಲಾಗುತ್ತದೆ ಮತ್ತು ಅವುಗಳನ್ನು ರೋಗಿಯ ಗುರುತು, ನಿರ್ದಿಷ್ಟ ಕಲರ್‌ ಕೋಡ್‌ಯುಕ್ತ ವ್ಯಾಕುಟೈನರ್‌ ಮತ್ತು ಸಂಗ್ರಹಿಸಲಾದ ರಕ್ತದ ಪ್ರಮಾಣ ಹಾಗೂ ಆ್ಯಂಟಿಕೊಆ್ಯಗ್ಯುಲಂಟ್‌/ ಅಡಿಟಿವ್ಸ್‌ ಅನುಪಾತಗಳಿಗೆ ಹೋಲಿಸಲಾಗುತ್ತದೆ.

ಸೆಂಟ್ರಿಫ‌ುಗೇಶನ್‌ ಮತ್ತು ವರ್ಗೀಕರಣ

ಪ್ರಯೋಗಾಲಯದಲ್ಲಿ ಮಾದರಿಗಳನ್ನು ಸ್ವೀಕರಿಸಿದ ಬಳಿಕ ಅವುಗಳನ್ನು ಪುನರ್‌ಪರಿಶೀಲಿಸಿ ಸರಿಯಾಗಿ ಹೆಪ್ಪುಗಟ್ಟಲು ಮತ್ತು ಸೀರಂ ಪ್ರತ್ಯೇಕಗೊಳ್ಳುವುದಕ್ಕಾಗಿ 30 ನಿಮಿಷಗಳ ಕಾಲ ಕಾದಿರಿಸಲಾಗುತ್ತದೆ. ಆ ಬಳಿಕ ಸೀರಂ/ಪ್ಲಾಸ್ಮಾ ಸರಿಯಾಗಿ ಪ್ರತ್ಯೇಕಗೊಳ್ಳುವುದಕ್ಕಾಗಿ ಮಾದರಿಗಳನ್ನು 10 ನಿಮಿಷಗಳ ಕಾಲ ಸೆಂಟ್ರಿಫ್ಯೂಜ್‌ ಮಾಡಲಾಗುತ್ತದೆ.

ಮಾದರಿಗಳ ವರ್ಗೀಕರಣ

ರಕ್ತದ ಮಾದರಿಗಳ ವರ್ಗೀಕರಣ ಯಂತ್ರವು ಬಾರ್‌ಕೋಡ್‌ ಓದಿ, ವ್ಯಾಕ್ಯುಟೈನರ್‌ಗಳ ಮುಚ್ಚಳ ತೆರೆದು, ಮಾದರಿಯ ಸಮಗ್ರತೆಯನ್ನು ಪರಿಶೀಲಿಸಿದ ಬಳಿಕವಷ್ಟೇ ಸಮರ್ಪಕ ಯಂತ್ರದಲ್ಲಿ ಪರೀಕ್ಷೆಗಾಗಿ ಕಳುಹಿಸಲು ಕಳುಹಿಸಿಕೊಡುತ್ತದೆ.

ವಿಶ್ಲೇಷಣಾತ್ಮಕ ಹಂತ

ಇದು ಎರಡನೆಯ ಹಂತವಾಗಿದ್ದು, ಇಲ್ಲಿ ರಕ್ತದ ಮಾದರಿಗಳನ್ನು ಸೂಕ್ತವಾದ ರೀಜೆಂಟ್‌ಗಳ ಬಳಕೆಯೊಂದಿಗೆ ಆಟೊ ಅನಾಲೈಸರ್‌ಗಳಲ್ಲಿ ಅಥವಾ ಮ್ಯಾನ್ಯುವಲ್‌ ವಿಧಾನಗಳಿಂದ ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಬಳಕೆಯಾಗುವ ಎಲ್ಲ ಯಂತ್ರಗಳನ್ನು ಪ್ರತಿದಿನವೂ ನಿರ್ವಹಿಸಲಾಗುತ್ತದೆ ಮತ್ತು ಗುಣಮಟ್ಟ ಪರೀಕ್ಷೆಗೆ ಒಳಪಡಿಸಿ ಮಾದರಿಗಳ ವಿಶ್ಲೇಷಣೆಗೆ ಸನ್ನದ್ಧಗೊಳಿಸಿ ಇರಿಸಲಾಗುತ್ತದೆ.

ಅಗತ್ಯವಾಗಿರುವ ಪರೀಕ್ಷೆಯನ್ನು ಆಧರಿಸಿ ಆಟೊ ಅನಾಲೈಸರ್‌ಗಳಿಗೆ ಪ್ರತೀ ಮಾದರಿಯನ್ನು ವಿಶ್ಲೇಷಿಸಲು 20ರಿಂದ 45 ನಿಮಿಷಗಳು ಬೇಕಾಗುತ್ತವೆ.

(ನಮ್ಮ ಯಂತ್ರಗಳು ಒಂದು ಬಾರಿಗೆ ಪ್ರತೀ ತಾಸಿಗೆ 600ರಿಂದ 800 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಬಲ್ಲವು. ಆದರೆ ಪೀಕ್‌ ಅವಧಿಗಳಲ್ಲಿ ಸ್ಯಾಂಪಲ್‌ ಓವರ್‌ಲೋಡ್‌ನಿಂದಾಗಿ ಸ್ವಲ್ಪ ವಿಳಂಬವಾಗುತ್ತದೆ.)

ಮ್ಯಾನ್ಯುವಲ್‌ ವಿಧಾನಗಳು: ಮ್ಯಾನ್ಯುವಲ್‌ ಪರೀಕ್ಷಾ ಪ್ರಕ್ರಿಯೆಗಳು 3ರಿಂದ 6 ತಾಸುಗಳನ್ನು ತೆಗೆದುಕೊಳ್ಳುತ್ತವೆ. ಕೆಲವು ವಿಶೇಷ ಪರೀಕ್ಷೆಗಳನ್ನು ಬಂದಿರುವ ಮಾದರಿಗಳ ಸಂಖ್ಯೆ ಮತ್ತು ತರಬೇತಾದ ತಂತ್ರಜ್ಞರ ಲಭ್ಯತೆಯನ್ನು ಆಧರಿಸಿ ಬ್ಯಾಚ್‌ಗಳಲ್ಲಿ, ವಾರದಲ್ಲಿ 2-3 ಬಾರಿ ನಡೆಸಲಾಗುತ್ತದೆ.

ಲೈವ್‌ ಟರ್ನ್ ಅರೌಂಡ್‌ ಟೈಮ್‌ (ಟಿಎಟಿ)  ಮೇಲೆ ನಿಗಾ ಇರಿಸುವುದು

ಕಸ್ತೂರ್ಬಾ ಹಾಸ್ಪಿಟಲ್‌ ಲ್ಯಾಬೊರೇಟರಿ ಸರ್ವೀಸಸ್‌ (ಕೆಎಚ್‌ಎಲ್‌ಎಸ್‌) ರೋಗಿಗಳ ಆರೈಕೆ ಮತ್ತು ಗುಣಮಟ್ಟಗಳಿಗೆ ಬದ್ಧವಾಗಿದೆ. ಜತೆಗೆ, ಟಿಎಟಿ (ಮಾದರಿ ಸಂಗ್ರಹದಿಂದ ತೊಡಗಿ ರಿಪೋರ್ಟ್‌ ಬಿಡುಗಡೆಯ ವರೆಗೆ)ಯ ಮೇಲೆ ಸತತ ನಿಗಾ ಇರಿಸುತ್ತದೆ. ಇದರಿಂದ ಮಾದರಿಗಳ ಸಂಸ್ಕರಣೆ, ವಿಶ್ಲೇಷಣೆಯಲ್ಲಿ ಯಾವುದೇ ವಿಳಂಬ ಉಂಟಾದರೂ ತುರ್ತು ಕ್ರಮ ತೆಗೆದುಕೊಳ್ಳಲು ಇದರಿಂದ ಸಹಾಯವಾಗುತ್ತದೆ.

ವಿಶ್ಲೇಷಣೋತ್ತರ ಹಂತ

ಸ್ವೀಕರಿಸಿದ ಮಾದರಿಯ ಎಲ್ಲ ಪರೀಕ್ಷೆಗಳು ಪೂರೈಸಿದ ಬಳಿಕ ನಡೆಯುವ ಚಟುವಟಿಕೆಗಳನ್ನು ಈ ಹಂತ ಪ್ರತಿನಿಧಿಸುತ್ತದೆ. ಬಹುತೇಕ ಎಲ್ಲ ಪರೀಕ್ಷಾ ಮೌಲ್ಯಗಳು ಕಂಪ್ಯೂಟರ್‌ನಲ್ಲಿ ರಿಪೋರ್ಟಿಂಗ್‌ ಫಾಮ್ಯಾìಟ್‌ಗೆ ಸ್ವಯಂಚಾಲಿತವಾಗಿ ರವಾನೆಯಾಗುತ್ತವೆ. ಇದರಿಂದ ವಿಳಂಬ ಮತ್ತು ಬೆರಳಚ್ಚು ತಪ್ಪುಗಳು ತಪ್ಪುತ್ತವೆ (ಲೆಕ್ಕಾಚಾರಗಳು ಅಗತ್ಯವಾಗಿರುವ ಕೆಲವು ವರದಿಗಳನ್ನು ಮ್ಯಾನ್ಯುವಲೀ ಆಗಿ ಕಂಪ್ಯೂಟರ್‌ಗೆ ಉಣಿಸಲಾಗುತ್ತದೆ). ವರದಿಗಳ ಸಮಗ್ರತೆ (ಸಂಪೂರ್ಣತೆ ಮತ್ತು ಸರಿಯಾಗಿರುವುದನ್ನು ಪರೀಕ್ಷಿಸುವುದು)ಯ ತಪಾಸಣೆಯು ಎರಡು ಹಂತಗಳನ್ನು ಒಳಗೊಂಡಿರುತ್ತದೆ: 1) ಪ್ರಯೋಗಾಲಯ ತಂತ್ರಜ್ಞರಿಂದ ತಪಾಸಣೆ; 2) ಅಧಿಕೃತ ಅಧಿಕಾರಿಯಿಂದ ಪ್ರಮಾಣೀಕರಣ (ಸರಿಯಾಗಿರುವಿಕೆ ಮತ್ತು ಕ್ಲಿನಿಕಲ್‌ ಕೊರಿಲೇಶನ್‌). ವೇರಿಫಿಕೇಶನ್‌ ಬಳಿಕ ತಾತ್ಕಾಲಿಕ ವರದಿಯು ಚಿಕಿತ್ಸೆ ನೀಡುವ ವೈದ್ಯರ ಕಂಪ್ಯೂಟರ್‌ನಲ್ಲಿ ವೀಕ್ಷಣೆಗೆ ಲಭ್ಯವಿರುತ್ತದೆ. ಅಂತಿಮ ವರದಿಯನ್ನು ಪ್ರಮಾಣೀಕರಣದ ಬಳಿಕ ರೋಗಿಯ ನೋಂದಾಯಿತ ಮೊಬೈಲ್‌ ನಂಬರ್‌ಗೆ ಕಳುಹಿಸಿಕೊಡಲಾಗುತ್ತದೆ. ನಿರ್ಣಾಯಕ ವರದಿಗಳನ್ನು ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಎಸ್‌ಎಂಸ್‌ ರೂಪದಲ್ಲಿ ಕಳುಹಿಸಲಾಗುತ್ತದೆ.

ಮಾದರಿ ದಾಸ್ತಾನು (ಆಕೈವಿಂಗ್‌)

ಮಾದರಿಗಳ ಪರೀಕ್ಷೆ, ತಪಾಸಣೆಗಳ ಬಳಿಕ ಅವುಗಳನ್ನು 24 ತಾಸುಗಳ ಕಾಲ ಸುರಕ್ಷಿತವಾಗಿ ಕಾಯ್ದಿಡುವುದು ಮಾದರಿ ಆಕೈìವಿಂಗ್‌. ಈ ಮಾದರಿ ಗಳನ್ನು ವೈದ್ಯರ ಬೇಡಿಕೆಯನ್ನು ಆಧರಿಸಿ ಅಗತ್ಯಬಿದ್ದಾಗ ಕೆಲವೊಮ್ಮೆ ಹೆಚ್ಚುವರಿ ಪರೀಕ್ಷೆ ನಡೆಸಲು/ ಪುನರಾವರ್ತಿಸಲು ಉಪಯೋಗಿಸಲಾಗುತ್ತದೆ. ಸ್ಯಾಂಪಲ್‌ ಸಾರ್ಟಿಂಗ್‌ ಯಂತ್ರವು ಯಾವುದೇ ಮಾದರಿಯಿರುವ ಸ್ಥಳವನ್ನು 10 ನಿಮಿಷಗಳಲ್ಲಿ ಹುಡುಕಿಕೊಡುವ ಮೂಲಕ ಈ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ.

ಬಯೋಮೆಡಿಕಲ್‌ ತ್ಯಾಜ್ಯ ವಿಲೇವಾರಿ

ಪರೀಕ್ಷೆ, ತಪಾಸಣೆಗೆ ಒಳಪಡಿಸಲಾದ ಎಲ್ಲ ಮಾದರಿಗಳನ್ನು 24 ತಾಸುಗಳ ಬಳಿಕ ವಿಲೇವಾರಿ ಮಾಡಬೇಕಾಗುತ್ತದೆ. ಇವು ಜೀವವೈದ್ಯಕೀಯ ಅಪಾಯಗಳನ್ನು ಉಂಟುಮಾಡಬಹುದಾಗಿದ್ದು, ಜನಸಾಮಾನ್ಯರು ಮತ್ತು ಪರಿಸರಕ್ಕೆ ಅಪಾಯ ಒಡ್ಡಬಹುದಾದ್ದರಿಂದ ವಿಲೇವಾರಿ ಸರಿಯಾಗಿ ನಡೆಯಬೇಕಿರುತ್ತದೆ. ಈ ಮಾದರಿಗಳನ್ನು ಹರಿದುಹೋಗದ ಎರಡು ಪದರಗಳ ಚೀಲದಲ್ಲಿ ಭದ್ರವಾಗಿ ಪ್ಯಾಕ್‌ ಮಾಡಿ ಮುಂದಿನ ಸಂಸ್ಕರಣೆಗಾಗಿ ಸ್ಯಾಂಪಲ್‌ ಡಿನ್ಪೋಸಲ್‌ ಘಟಕಕ್ಕೆ ಕಳುಹಿಸಿಕೊಡಲಾಗುತ್ತದೆ.

 

ಡಾ| ವಿಜೇತಾ ಶೆಣೈ ಬೆಳ್ಳೆ

ಅಸೋಸಿಯೇಟ್‌ ಪ್ರೊಫೆಸರ್‌, ಬಯೋಕೆಮೆಸ್ಟ್ರಿ ವಿಭಾಗ

ಕೆಎಂಸಿ ಮಣಿಪಾಲ, ಮಾಹೆ, ಮತ್ತು ಇನ್‌ಚಾರ್ಜ್‌, ಕ್ಲಿನಿಕಲ್‌ ಬಯೋಕೆಮೆಸ್ಟ್ರಿ ಲ್ಯಾಬ್‌, ಕೆಎಂಸಿ, ಮಣಿಪಾಲ

ಡಾ| ರವೀಂದ್ರ ಮರಡಿ

ಅಸೋಸಿಯೇಟ್‌ ಪ್ರೊಫೆಸರ್‌, ಬಯೋಕೆಮೆಸ್ಟ್ರಿ ವಿಭಾಗ

ಕೆಎಂಸಿ ಮಣಿಪಾಲ ,  ಮತ್ತು

ಲ್ಯಾಬ್‌ ಡಿರೆಕ್ಟರ್‌, ಕಸ್ತೂರ್ಬಾ ಹಾಸ್ಪಿಟಲ್‌ ಲ್ಯಾಬೊರೇಟರಿ ಸರ್ವೀಸಸ್‌, ಮಣಿಪಾಲ

 

Advertisement

Udayavani is now on Telegram. Click here to join our channel and stay updated with the latest news.

Next