ಕಳೆದ ವರ್ಷ ಹಾಲಿವುಡ್‌ನಲ್ಲಿ ಭಾರಿ ನಿರೀಕ್ಷೆಯ ಸರ್ರಿಯಲಿಸಂ ಸಿನಿಮಾ “ವಲೇರಿಯನ್ ಆ್ಯಂಡ್ ದಿ ಸಿಟಿ ಆಫ್ ಎ ಥೌಸಂಡ್ ಪ್ಲಾನೆಟ್ಸ್’ ಬಿಡುಗಡೆಯಾಗಿತ್ತು. ಸಿನಿಮಾ ಏನೂ ಕ್ಲಿಕ್ಕಾಗಿರಲಿಲ್ಲ. ಆದರೆ, ಅದರಲ್ಲಿದ್ದ ಒಂದು ದೃಶ್ಯ ಭಾರಿ ಕುತೂಹಲ ಕೆರಳಿಸಿತ್ತು. ಒಂದು ವರ್ಚುವಲ್ ರಿಯಾಲಿಟಿ ಗಿಯರ್ ತೊಟ್ಟ ಜನರು ಬೃಹತ್ ಮರುಭೂಮಿಯೊಂದಕ್ಕೆ ಹೋಗುತ್ತಾರೆ. ಅಲ್ಲಿ ಬಿಗ್ ಮಾರ್ಕೆಟ್ ಎಂಬ ಹೆಸರಿನ ಮಾರ್ಕೆಟ್ ಇರುತ್ತದೆ. ಎಲ್ಲವೂ ವರ್ಚುವಲ್. ವಾಸ್ತವದಲ್ಲಿ ಒಂದು ಉತ್ಪನ್ನವೂ ಇಲ್ಲ. ಆದರೆ, ವಿಆರ್ ಗಿಯರ್ ಹಾಕಿಕೊಂಡು ನೋಡಿದರೆ ನಿಮಗೆ ಬೇಕಾದ, ಬೇಡದ ಎಲ್ಲ ಸಾಮಗ್ರಿಗಳೂ ಅತ್ಯಾಕರ್ಷಕವಾಗಿ ಕಾಣಿಸುತ್ತಿವೆ. ಅವೆಲ್ಲವೂ ನೀವು ತನ್ನನ್ನು ಖರೀದಿಸಲಿ ಎಂಬ ಹಪಾಹಪಿ ಹೊಂದಿದಂತೆ ಕೂತಿವೆ. ಅದನ್ನು ಖರೀದಿಸಿ ಮನೆ ತಲುಪುವಷ್ಟರಲ್ಲಿ ಆ ಸಾಮಗ್ರಿಗಳೂ ನಿಮ್ಮ ಮನೆಗೆ ಬರುತ್ತವೆ. ಸಿನಿಮಾದಲ್ಲಿ ಇದೊಂದು ಕಲ್ಪನೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಇದು ವಾಸ್ತವ!
Advertisement
ಕಚೇರಿಯಲ್ಲಿ ನಮ್ಮ ಡೆಸ್ಕ್ನಲ್ಲೋ, ಮನೆಯ ಮೂಲೆಯಲ್ಲೋ ಕುಳಿತು ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಅಥವಾ ಟ್ವಿಟರ್‌ನಲ್ಲಿ ಒಂದು ಟ್ವೀಟ್ ಮಾಡುತ್ತೇವೆ. ನಮ್ಮ ಪ್ರಕಾರ ನಮ್ಮ ಸುತ್ತ ಯಾರೂ ಇಲ್ಲ. ನಾವೊಬ್ಬರೇ ಇದ್ದೇವೆ ಎನಿಸುತ್ತದೆ. ಆದರೆ, ವಾಸ್ತವ ಹಾಗಿಲ್ಲ. ಒಮ್ಮೆ ವರ್ಚುವಲ್ ರಿಯಾಲಿಟಿ ಗಿಯರ್ ಕಣ್ಣಿಗಿಟ್ಟು ನೋಡಿದರೆ, ನಮ್ಮ ಆತ್ಮೀಯರು, ಪರಿಚಿತರು, ನಮ್ಮನ್ನು ದೂರದಿಂದ ಬಲ್ಲವರು, ನಮ್ಮ ಹೆಸರು ಕೇಳಿ ಗೊತ್ತಿರುವವರು ನಮ್ಮ ಪ್ರತಿಯೊಂದು ಹೆಜ್ಜೆಯನ್ನೂ ನೋಡುತ್ತಿರುತ್ತಾರೆ. ಅಷ್ಟೇ ಅಲ್ಲ, ಲಕ್ಷಾಂತರ ಅಪರಿಚಿತರ ಕಣ್ಣೂ ನಮ್ಮ ಮೇಲೆ ಇರುತ್ತದೆ ಎಂಬುದು ತಿಳಿದೀತು.Related Articles
ತಕ್ಷಣದ ಪ್ರತಿಕ್ರಿಯೆ. ಸೂಪರ್‌ಮಾರ್ಕೆಟ್‌ನ ಒಳ ಹೊಕ್ಕ ಎರಡೂವರೆ ವರ್ಷದ ಮಗುವಿಗೆ ಕಾಣುವ ಆಕರ್ಷಕ ಚಾಕ್ಲೇಟುಗಳು, ಬಣ್ಣ ಬಣ್ಣದ ಆಟಿಕೆ ಸಾಮಗ್ರಿಗಳು ಕಣ್ಣಿಗೆ ಬೀಳುತ್ತವೆ. ಇದರ ಜೊತೆಗೆ ಮನೆಯಲ್ಲಿ ಆಟವಾಡುವುದನ್ನು ಕಲ್ಪಿಸಿಕೊಂಡು ಖರೀದಿಸಬೇಕೆಂದು ಮಕ್ಕಳು ಹಠ ಮಾಡುತ್ತವೆ. ಆದರೆ, ಮನೆಗೆ ಬಂದ ಮೇಲೆ ಅದು ಈಗಿರುವ ಆಟಿಕೆಗಳ ರಾಶಿಗೆ ಬಂದು ಬಿದ್ದಿರುತ್ತವಷ್ಟೇ! ಸಾಮಾಜಿಕ ಮಾಧ್ಯಮದಲ್ಲಿನ ತಕ್ಷಣದ ಪ್ರತಿಕ್ರಿಯೆಯಿಂದಾಗಿ ಮನಸಿನಲ್ಲಿ ಇಂಥ ಕಸಗಳ ರಾಶಿ ಬೆಳೆಯುತ್ತದೆ.
ಸಾಮಾನ್ಯವಾಗಿ ನಾವು ಆಫ್ಲೈನ್‌ನಲ್ಲಿ, ರಸ್ತೆಯಲ್ಲಿ ಸ್ನೇಹಿತರೊಂದಿಗೆ ನಿಂತು ಮಾತಾಡುವಾಗ ಸ್ನೇಹಿತ ಹೇಳಿದ ಯಾವುದಾದರೂ ವಿಷಯ ನಮಗೆ ಸರಿಬರಲಿಲ್ಲ ಎಂದಾಗ ಅಲ್ಲಿಯೇ, ಇದು ನನಗೆ ಇಷ್ಟವಿಲ್ಲ ಎಂದು ಹೇಳುತ್ತೇವೆ. ಇದು ಹಾಗಲ್ಲ, ಹೀಗೆ ಎಂದು ಹೇಳುತ್ತೇವೆ. ಕೂಗಾಡಬಹುದು, ಜಗಳವನ್ನೂ ಆಡಬಹುದು. ಆದರೆ, ಕೊನೆಗೆ ಒಂದಾಗುತ್ತೇವೆ. ವಿಷಯವೊಂದು ವಿಷಯವಾಗಿ, ವ್ಯಕ್ತಿಗಳಾಗಿಯೇ ಇರುತ್ತೇವೆ. ಅಕ್ಷರಗಳನ್ನು ಕೀಬೋರ್ಡ್‌ನಲ್ಲಿ ಒತ್ತುವಾಗ ನಮ್ಮ ಮನಸ್ಸಿನಲ್ಲಿರುವ, ಮಾತಿನಲ್ಲಿರುವ ಭಾವ ಕೈಗೆ ಇಳಿಯುವುದಿಲ್ಲ. ಶಬ್ದಗಳು ಬರೀ ಶಬ್ದಗಳಾಗಿರುತ್ತವೆ. ಅಷ್ಟೇ ಅಲ್ಲ, ನಿಮ್ಮ ಕೂಗಾಟ, ಅರಚಾಟದ ಆ ಶಬ್ದಗಳು ದಾಖಲಾಗುತ್ತವೆ. ಇವೆಲ್ಲವನ್ನೂ ನಿಮ್ಮ ಪರಿಚಯವೇ ಇಲ್ಲದ ಜಗತ್ತಿನ ಇನ್ನಾéವುದೋ ಮೂಲೆಯಲ್ಲಿರುವ ವ್ಯಕ್ತಿಯೂ ನೋಡಬಹುದು. ಅವುಗಳ ಸನ್ನಿವೇಶವನ್ನು ಅರಿತುಕೊಳ್ಳದೆಯೇ ನಿಮ್ಮ ವ್ಯಕ್ತಿತ್ವವನ್ನು ಆ ಒಂದು ಕಾಮೆಂಟ್ ಮೂಲಕ ಅಳೆದುಬಿಡಬಹುದು.
Advertisement
ಒಂದು ಕಾಮೆಂಟ್ ಮಾಡಿದ ತಕ್ಷಣ ಎಂಟರ್ ಒತ್ತಬೇಡಿ. ಒಂದು ಕ್ಷಣ ಯೋಚಿಸಿ. ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಕಟ್ಟು ಬೀಳಬೇಡಿ. ಚಿಂತನೆಗೆ ಸ್ವಾತಂತ್ರ್ಯ ನೀಡಿ.
ಅವರಿಗೆ ಏನಾದೀತು?ನಾನು ಒಂದು ಕಾಮೆಂಟ್ ಅಥವಾ ಪೋಸ್ಟ್ ಹಾಕಿದರೆ ನನಗೆ ಖುಷಿ ಸಿಗುತ್ತದೆಯೇನೋ ಸರಿ. ಆದರೆ, ಅದು ಇತರರ ಅಂಗಳದಲ್ಲಿ ಎಸೆದ ಚೆಂಡಿನಂತಾದೀತೇ ಎಂದೂ ಯೋಚಿಸಬೇಕು. ನಾನು ಎಸೆದ ಚೆಂಡನ್ನು ಆತ ಅದೇ ವೇಗದಲ್ಲಿ, ಅಥವಾ ಅದಕ್ಕೂ ತೀವ್ರ ವೇಗದಲ್ಲಿ ಎಸೆದುಬಿಡಬಹುದು. ಸಾಮಾನ್ಯವಾಗಿ, ಸಾಮಾಜಿಕ ಮಾಧ್ಯಮದಲ್ಲಿ ಸಂಸ್ಥೆ ಅಥವಾ ವ್ಯಕ್ತಿಗೆ ನಮ್ಮ ಮಾತಿಂದ ಪರಿಣಾಮ ಬೀರುತ್ತದೆ. ನಾವು ಕೆಲಸ ಮಾಡಿದ ಹಿಂದಿನ ಸಂಸ್ಥೆ, ನಮ್ಮ ಮಾಜಿ ಬಾಸ್, ಸದ್ಯದ ಬಾಸ್‌ಗೆ ಸೂಚಿಸಿ ಏನನ್ನೋ ಹೇಳುವುದು… ಇವೆಲ್ಲವೂ ನೇರ ಪರಿಣಾಮದ ಜೊತೆಗೆ ಹಲವು ಅಡ್ಡ ಪರಿಣಾಮಗಳನ್ನೂ ಒಳಗೊಂಡಿರುತ್ತವೆ. ಫೇಸ್‌ಬುಕ್‌ನಲ್ಲಿ ಹಾಕುವುದಕ್ಕೂ ಮುನ್ನ ನೇರವಾಗಿ ಹೇಳಿದರೆ ಅದರ ಪರಿಣಾಮ ಏನಿದ್ದೀತು, ನೇರವಾಗಿ ಹೇಳುವುದೇ ಸೂಕ್ತವೇ ಎಂದೂ ಯೋಚಿಸಿ. ಧ್ವನಿ ಸರಿಪಡಿಸಿಕೊಳ್ಳಿ…
ಸಾಮಾಜಿಕ ಮಾಧ್ಯಮದಲ್ಲಿ ಬರೆಯುತ್ತಿರುವ ಸಾಮಾನ್ಯ ವ್ಯಕ್ತಿ ಉದ್ದಾಮ ಪಂಡಿತನಾಗಿರುವುದಿಲ್ಲ. ಭಾಷಾ ವಿಜ್ಞಾನಿಯೂ ಅಲ್ಲ. ಆದರೆ, ಭಾವಗಳನ್ನು ಶಬ್ದವಾಗಿ ಇಳಿಸುವಾಗ ಧ್ವನಿ ಕರ್ಕಶವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಯಾವ ಧ್ವನಿಯನ್ನು ಸೂಚಿಸಬೇಕು ಎಂದು ಮೊದಲೇ ನಿರ್ಧರಿಸುವುದು ಒಳಿತು. ಇದು ಪಾಸಿಟಿವ್ ಆಗಿರಬೇಕೆ? ನೆಗೆಟಿವ್ ಆಗಿರಬೇಕೆ? ಅಥವಾ ನಿರ್ಲಿಪ್ತವಾಗಿರಬೇಕೆ? ಒಂದೊಮ್ಮೆ ನೆಗೆಟಿವ್ ಆಗಿದ್ದರೆ ಸಾವಿರ ಬಾರಿ ಚೆಕ್ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯ ಸರಿ ಇದೆಯೇ? ಇದು ಕೇವಲ ಅಭಿಪ್ರಾಯವೇ ಅಥವಾ ವಾಸ್ತವಾಂಶವೂ ಇದೆಯೇ? ನಿಮ್ಮ ಬಳಿ ಸಾಕ್ಷಿ ಇದೆಯೇ? ಇವೆಲ್ಲವೂ ಗಮನದಲ್ಲಿರಬೇಕು. ಓದಿ ಹೇಳಿ…
ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವವರು, ಟ್ವಿಟರ್‌ನಲ್ಲಿ ಟ್ವೀಟ್ ಮಾಡುವವರು ಹಾಗೂ ಲಿಂಕ್ಡ್ಇನ್‌ನಲ್ಲಿ ಪೋಸ್ಟ್ ಮಾಡುವವರ್ಯಾರೂ ಶಬ್ದ ಪರಿಣಿತರಲ್ಲ. ಕಾಗುಣಿತ ತಪ್ಪುಗಳಾಗುವುದು ಸಹಜ. ಹಾಗೆಯೇ ಸಾಮಾನ್ಯ ಪದಬಳಕೆಯಲ್ಲಿ ತಪ್ಪಾಗುವುದೂ ಸಹಜ. “ಬಲವಂತ’ದ ಬದಲಿಗೆ “ಬಲಾತ್ಕಾರ’ ಎಂದು ಬರೆದರೆ ಎಷ್ಟು ಆಭಾಸವಾದೀತು! ಇದಕ್ಕೆ ಸರಳ ಪರಿಹಾರವೆಂದರೆ ಬರೆದ ಕಾಮೆಂಟ್ ಅಥವಾ ಪೋಸ್ಟನ್ನು ಬಾಯಿಬಿಟ್ಟು ಓದಿಕೊಳ್ಳುವುದು. ಅದರಲ್ಲೂ ವಿಶೇಷವಾಗಿ ನೆಗೆಟಿವ್ ಟೋನ್‌ನ ಪೋಸ್ಟನ್ನು ದೊಡ್ಡದಾಗಿ ಓದಿಕೊಂಡರೆ ನಿಮಗೆ ಬೇಡದ ಧ್ವನಿಯೂ ಕೇಳಬಹುದು. ಯಾರೋ ಅದನ್ನು ನಿಮಗೇ ಹೇಳಿದಂತೆಯೂ ಕೇಳಿಸಬಹುದು. ಎಲ್ಲವೂ ವಿಪರೀತ…
ಕಳೆದ ಕೆಲವು ವರ್ಷಗಳಿಂದಂತೂ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲವೂ ವಿಪರೀತವೇ. ಧರ್ಮದ ಕುರಿತ ಚರ್ಚೆ, ಕೋಮುವಾದದ ಕುರಿತ ಚರ್ಚೆ, ರಾಜಕಾರಣದ ಕಾಲೆಳೆತಗಳೆಲ್ಲವೂ ವಿಪರೀತ ಪ್ರತಿಕ್ರಿಯೆ, ಪ್ರಚೋದನೆಗಳದ್ದೇ ಫಲಿತಗಳು. ಹೀಗೆ ಇನ್ನೊಂದು ಬಣವನ್ನು ಪ್ರಚೋದಿಸುವಂತೆ ಬರೆಯುವ ಮುನ್ನ ಅದಕ್ಕೆ ಬರಬಹುದಾದ ಪ್ರತಿಕ್ರಿಯೆಯನ್ನೂ ಗಮನಿಸಿ. ನೀವು ಹಾಗೆ ನಿರೀಕ್ಷಿಸದೇ ಪೋಸ್ಟ್ ಅಥವಾ ಕಾಮೆಂಟ್ ಮಾಡಿದರೆ ಅದಕ್ಕೆ ಬರುವ ಕಾಮೆಂಟ್‌ಗಳು ನಿಮ್ಮನ್ನು ಪ್ರಚೋದಿಸಬಹುದು. ಅದರಲ್ಲೂ ವಿಶೇಷವಾಗಿ ನೆಗೆಟಿವ್ ಟೋನ್‌ಗೆ ಇದು ಹೆಚ್ಚಾಗಿ ಅನ್ವಯಿಸುತ್ತದೆ. ಯಾರನ್ನೋ ತೆಗಳಿ ಬರೆಯುವ, ಕುಟುಕುವ ಕಾಮೆಂಟ್‌ಗಳು ಅಥವಾ ಅವಕ್ಕೆ ನಿಮ್ಮ ಪ್ರತಿಕ್ರಿಯೆ ಹಲವು ದಿಕ್ಕಿನಲ್ಲಿ ಪಲ್ಲಟಗಳನ್ನು ಸೃಷ್ಟಿಸೀತು. ಹೀಗಾಗಿ, ಸನ್ನಿವೇಶಕ್ಕೆ ತಕ್ಕ ಶಬ್ದಗಳನ್ನು ಪೋಣಿಸುವುದು ಅಗತ್ಯ. ದೃಷ್ಟಿ ವೈವಿಧ್ಯ…
ಒಬ್ಬನಿಗೆ ಒಂದು ಬಣ ಇಷ್ಟವಾದರೆ, ಇನ್ನೊಬ್ಬನಿಗೆ ಇನ್ನೊಂದು ಬಣದ ನೀತಿ ಇಷ್ಟ. ಹಾಗಂತ ಆ ಮನುಷ್ಯ ಆ ಬಣದ ಬಗ್ಗೆ ಸುದ್ದಿಯಾಗುವ ಎಲ್ಲ ವಿಪರೀತಗಳ ಗುಣವನ್ನೂ ಹೊಂದಿರುವುದಿಲ್ಲ. ಅದೆಲ್ಲದರ ಹೊರತಾಗಿಯೂ ಆತ ನಮ್ಮ ನಿಮ್ಮೆಲ್ಲರಂತೆಯೇ ಮನುಷ್ಯ. ಆದರೆ, ಸಾಮಾಜಿಕ ಜಾಲತಾಣ ಹಾಗಲ್ಲ. ಇದೊಂದು ಕೂಪ. ನಿಮಗೆ ತೀರಾ ಅಪರಿಚಿತರಾಗಿರುವವರು ನಿಮ್ಮ ಒಂದು ಕಾಮೆಂಟ್ ನೋಡಿ ನಿಮ್ಮನ್ನು ಆ ಮನುಷ್ಯ ಹಾಗೆಯೇ ಎಂದು ಭಾವಿಸಿಬಿಡುತ್ತಾರೆ. ಯಾಕೆಂದರೆ, ನಮ್ಮ ಪೋಸ್ಟ್‌ಗಳೇ ನಮ್ಮ ಜಾಹೀರಾತು. ಇವು ನಮ್ಮನ್ನು ಅತ್ಯಂತ ರಂಜಿತವಾಗಿ ವ್ಯಾಖ್ಯಾನಿಸುತ್ತವೆ. ಪೋಸ್ಟ್‌ಗಳು ಪೇಲವವಾಗಿದ್ದರೆ ನಾವೂ ಪೇಲವ! ಬೇಸ್ತು ಬೀಳಬೇಡಿ…
ಇತ್ತೀಚಿನ ದಿನಗಳಲ್ಲಂತೂ ನಮ್ಮ ಕಾಮನ್ ಸೆನ್ಸ್ ಟೆಸ್ಟ್ ಮಾಡುವ ಸುದ್ದಿಗಳು ಯಥೇತ್ಛವಾಗಿ ಓಡಾಡುತ್ತವೆ. ನಿಜವೋ ಸುಳ್ಳೋ ಎಂದು ನಮ್ಮ ಒಳಮನಸಿಗೆ ಭಾಸವಾದರೂ ಅದನ್ನು ನಾವು ಮರೆತು ನಿಜವೆಂದು ನಂಬಿಬಿಡುತ್ತೇವೆ. ನಮ್ಮ ತಲೆಯೊಳಗೊಂದು ಎಚ್ಚರಿಕೆಯ ಗಂಟೆ ಸದಾ ಢಣಗುಡುತ್ತಲೇ ಇರಬೇಕು. ಒಂದು ಸುದ್ದಿ ಓದಿದರೆ, ಅದು ನಿಜವೇ ಎಂದು ಎರಡು ಬಾರಿ ಚೆಕ್ ಮಾಡಿಕೊಳ್ಳಬೇಕು. ಎಲ್ಲವಕ್ಕೂ ಗೂಗಲ್ ಉತ್ತರ ಹುಡುಕಿಟ್ಟಿದೆ. ಆ ಉತ್ತರ ಎಲ್ಲಿದೆ ಎಂದು ಹುಡುಕುವುದಷ್ಟೇ ನಮ್ಮ ಕೆಲಸ. ಹೀಗಾಗಿ ಯಾವುದನ್ನೂ ನಂಬಬೇಡಿ, ಎಲ್ಲವನ್ನೂ ಪ್ರಶ್ನಿಸಿ! – ಕೃಷ್ಣಭಟ್