ನೀವು ಕೊಠಡಿಯೊಳಗೆ ಬಂದಿದ್ದೀರಿ, ಎಲ್ಲೋ ಹೊರಗೆ ಹೋಗಲು ಹೊರಟವರು ಪಿಳಪಿಳನೆ ಕಣ್ಣು ಮಿಟುಕಿಸುತ್ತ ಕಾರಿನ ಕೀ ಅಥವಾ ಕನ್ನಡಕ ಎಲ್ಲಿದೆ ಎಂದು ಹುಡುಕಾಡುತ್ತೀರಿ; ಹಲವು ವರ್ಷಗಳಿಂದ ಪರಿಚಿತರಾದ ಒಬ್ಬರ ಬಳಿ ಮಾತನಾಡುತ್ತಿದ್ದೀರಿ, ಆದರೆ ಅವರ ಹೆಸರು ಮಾತ್ರ ನಿಮಗೆ ಎಷ್ಟು ಒದ್ದಾಡಿದರೂ ನೆನಪಾಗುತ್ತಿಲ್ಲ; ನಿಮಗೆ ಅತ್ಯಂತ ಪ್ರಿಯವಾದ ಸಿನೆಮಾದ ಹೆಸರು ಇತ್ತೀಚೆಗೆ ಮರೆತು ಹೋಗಿದೆ…
ಇಂತಹ ಕೆಲವು ಸಂದರ್ಭಗಳು ಸ್ಮರಣಶಕ್ತಿ ನಷ್ಟದಂತಹ ಗಂಭೀರ ಸಮಸ್ಯೆಯತ್ತ ನಾವು ಸಾಗುತ್ತಿದ್ದೇವೆಯೇನೋ ಎಂಬ ಕಳವಳವನ್ನು ಹುಟ್ಟಿಸುತ್ತವೆ. ಆಗಾಗ ಕೆಲವೊಮ್ಮೆ ಹೀಗೆ ಮರೆಯುವುದು ವಯಸ್ಸಾಗುವಿಕೆಯ ಸಂದರ್ಭದಲ್ಲಿ ಒಂದು ಸಹಜ ಪ್ರಕ್ರಿಯೆ. ಸ್ಮರಣೆ ಮತ್ತು ಕಲಿಕೆಯ ಕ್ಷೇತ್ರದಲ್ಲಿ ನಡೆದಿರುವ ಅಧ್ಯಯನಗಳ ಪ್ರಕಾರ, ಹೊಸತನ್ನು ಕಲಿಯುವ, ನೆನಪು ಮಾಡಿಕೊಳ್ಳುವ ಅಥವಾ ಆಗಾಗ ಮರೆತು ಹೋಗುವ ವಿದ್ಯಮಾನ ವಯಸ್ಸಾಗುತ್ತಿರುವ ಸಂದರ್ಭದಲ್ಲಿ ಸಹಜ.
ಮರೆಗುಳಿತನ ಅಥವಾ ಸ್ಮರಣಶಕ್ತಿ ನಷ್ಟದ ತಪ್ಪಭಿಪ್ರಾಯವನ್ನು ನೀಡುವ ಮರೆತುಹೋಗುವ ಕೆಲವು ಸಾಮಾನ್ಯ ಕಾರಣಗಳು ಹೀಗಿವೆ:
- ಒತ್ತಡ, ಆತಂಕ ಮತ್ತು ಖನ್ನತೆ
- ಮದ್ಯಪಾನ ಅಥವಾ ಇತರ ಮಾದಕ ದ್ರವ್ಯಗಳ ಪ್ರಭಾವ
- ಥೈರಾಯ್ಡ್ ಸಮಸ್ಯೆಯಂತಹ ಹಾರ್ಮೋನ್ ತೊಂದರೆಗಳು
- ವಿಟಮಿನ್ ಕೊರತೆ
- ನಿರ್ಜಲೀಕರಣ
- ನಿದ್ದೆಯ ತೊಂದರೆಗಳು
- ವೈದ್ಯರು ಶಿಫಾರಸು ಮಾಡಿರುವ ಕೆಲವು ಔಷಧಗಳ ಅಡ್ಡ ಪರಿಣಾಮ
- ದೀರ್ಘಕಾಲಿಕ ನೋವು
- ಶ್ರವಣ ಅಥವಾ ದೃಷ್ಟಿ ವೈಕಲ್ಯ
ಆದರೆ ಈ ಮರೆವು ನಮ್ಮ ದೈನಿಕ ಬದುಕಿಗೆ ಅಡಚಣೆ ಉಂಟು ಮಾಡುತ್ತಿದ್ದರೆ ಅಥವಾ ಪದೇ ಪದೆ ಸಂಭವಿಸುತ್ತಿದ್ದರೆ, ನಿಮ್ಮ ಸ್ವಯಂ ಆರೈಕೆ, ಕೆಲಸ ಕಾರ್ಯಗಳಲ್ಲಿ ತೊಡಕು ಉಂಟು ಮಾಡುತ್ತಿದ್ದರೆ, ಇತರರ ಜತೆಗೆ ಸಂಭಾಷಣೆಗೆ ಅಡ್ಡಿಯಾಗುವಂತಿದ್ದರೆ, ತೀರಾ ಪರಿಚಿತ ಸ್ಥಳಗಳಲ್ಲಿಯೂ ನೀವು ಕಳೆದುಹೋಗುತ್ತಿದ್ದರೆ, ಪದೇ ಪದೆ ಅದೇ ಅದೇ ಸಂಗತಿಯನ್ನು ಪುನರಪಿ ಮಾತನಾಡುತ್ತಿದ್ದರೆ, ದಿನಾಂಕ, ಸಮಯಗಳ ಅರಿವು ಕಳೆದುಕೊಳ್ಳುತ್ತಿದ್ದರೆ, ನಿಮ್ಮ ನಿರ್ಧಾರ ತಗೆದುಕೊಳ್ಳುವ ಸಾಮರ್ಥ್ಯದಲ್ಲಿ ಈ ಮರೆವು ತೊಂದರೆ ನೀಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ವೈದ್ಯಕೀಯ ಸಮಾಲೋಚನೆ, ತಪಾಸಣೆ ಅಗತ್ಯ. ಇದು ಡಿಮೆನ್ಶಿಯಾದ ಸಂಭಾವ್ಯ ಆರಂಭಿಕ ಬಿಂದುವಾಗಿರಲೂ ಬಹುದು. ಜನರಲ್ಲಿ ಇರುವ ಒಂದು ಸಾಮಾನ್ಯ ತಪ್ಪು ಕಲ್ಪನೆ ಎಂದರೆ, ಡಿಮೆನ್ಶಿಯಾವು ವಯಸ್ಸಾಗುವಿಕೆಯ ಒಂದು ಸಹಜ ಭಾಗ. ಹೀಗಾಗಿ ತೊಂದರೆದಾಯಕವಾದ ಮರೆವನ್ನು ಜನರು ನಿರ್ಲಕ್ಷಿಸುತ್ತಾರೆ. ಆದರೆ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚದೆ ಇದ್ದರೆ ಡಿಮೆನ್ಶಿಯಾದ ಕೆಲವು ಸರಿಪಡಿಸಬಹುದಾದ ಕಾರಣಗಳನ್ನು ಸರಿಪಡಿಸುವ ಅಥವಾ ಕೆಲವು ವೇಗವಾಗಿ ಪ್ರಗತಿ ಹೊಂದುವ ಡಿಮೆನ್ಶಿಯಾ ಪ್ರಕರಣಗಳಲ್ಲಿ ಅದನ್ನು ತಡೆಯುವ ಅವಕಾಶವನ್ನು ಕಳೆದುಕೊಳ್ಳಬಹುದು ಎಂಬುದನ್ನು ಮರೆಯಬಾರದು.
65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಡಿಮೆನ್ಶಿಯಾ ಉಂಟಾಗಲು ಒಂದು ಸಾಮಾನ್ಯ ಕಾರಣ ಎಂದರೆ ಅಲ್ಝೀಮರ್ಸ್ ಡಿಮೆನ್ಶಿಯಾ ಮತ್ತು ವಾಸ್ಕಾಲಾರ್ ಡಿಮೆನ್ಶಿಯಾ. ಅಲ್ಝೀಮರ್ಸ್ ಡಿಮೆನ್ಶಿಯಾವು ಮಿದುಳಿಗೆ ಸಂಬಂಧಿಸಿದ ಒಂದು ಅನಾರೋಗ್ಯವಾಗಿದ್ದು, ಮಿದುಳಿನಲ್ಲಿ ವಯೋಸಹಜವಾಗಿ ಉಂಟಾಗುವ ಬದಲಾವಣೆಗಳು ಮತ್ತು ವಂಶವಾಹಿ, ಪಾರಿಸರಿಕ ಮತ್ತು ಜೀವನಶೈಲಿಗೆ ಸಂಬಂಧಿಸಿದ ಕಾರಣಗಳ ಸಂಯೋಜನೆಯಿಂದ ಉಂಟಾಗುತ್ತದೆ. ವಾಸ್ಕಾಲಾರ್ ಡಿಮೆನ್ಶಿಯಾವು ಅನಿಯಂತ್ರಿತ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ಮಧುಮೇಹ ಮತ್ತು ಧೂಮಪಾನಗಳಿಂದಾಗಿ ಮಿದುಳಿನ ರಕ್ತನಾಳಗಳಿಗೆ ಉಂಟಾಗುವ ಹಾನಿಯಿಂದ ತಲೆದೋರುತ್ತದೆ. ಡಿಮೆನ್ಶಿಯಾ ಪ್ರಕ್ರಿಯೆಯು ಒಮ್ಮೆ ಆರಂಭವಾಗಿ, ಮಿದುಳಿಗೆ ಹಾನಿ ಆರಂಭವಾದ ಮೇಲೆ ಮರಳಿ ಹಿಂದಿನ ಸ್ಥಿತಿಗೆ ತರುವುದು ಕಷ್ಟ. ಆದರೆ ಆರೋಗ್ಯಯುತ ಜೀವನಶೈಲಿಯನ್ನು ಕಾಯ್ದುಕೊಳ್ಳುವುದರಿಂದ ಕಾಯಿಲೆಯು ಪ್ರಗತಿ ಹೊಂದುವುದನ್ನು ನಿಧಾನಗೊಳಿಸಬಹುದು ಮತ್ತು ವ್ಯಕ್ತಿಯ ಸುರಕ್ಷೆಯನ್ನು ಕಾಪಾಡಿಕೊಳ್ಳುವುದು ಪ್ರಾಥಮಿಕ ಆದ್ಯತೆಯಾಗಿರುತ್ತದೆ.
ಸ್ಮರಣ ಶಕ್ತಿ ನಷ್ಟ ಅಥವಾ ಮರೆವಿನ ತೊಂದರೆಯನ್ನು ಹೊಂದಿರುವವರು ಅದನ್ನು ನಿಭಾಯಿಸಲು ವಿವಿದ ಸ್ಮರಣೆಯ ಕೌಶಲಗಳನ್ನು ಅಥವಾ ತಂತ್ರಗಳನ್ನು ಅನುಸರಿಸಬಹುದು. ಈ ಬಗ್ಗೆ ಕೆಲವು ಸಲಹೆಗಳು ಹೀಗಿವೆ:
- ದಿನಂಪ್ರತಿ ಒಂದು ಅಚ್ಚುಕಟ್ಟಾದ ದಿನಚರಿಯನ್ನು ರೂಢಿಸಿಕೊಳ್ಳಿ
- ಯಾವುದೇ ಕೆಲಸ ಮಾಡುವ ಮುನ್ನ ಯೋಜನೆ ರೂಪಿಸಿಕೊಳ್ಳಿ, ಚೆಕ್‌ಲಿಸ್ಟ್ ಒಂದನ್ನು ತಯಾರಿಸಿಕೊಳ್ಳಿ
- ಆಗಬೇಕಾದ್ದನ್ನು ನೆನಪಿಸುವ ರಿಮೈಂಡರ್, ಕ್ಯಾಲೆಂಡರ್, ಸ್ಟಿಕ್ ನೋಟ್ಸ್ ಇತ್ಯಾದಿ ತಾಂತ್ರಿಕ ಸಾಧನಗಳನ್ನು ಉಪಯೋಗಿಸಿ
- ಪರ್ಸ್, ಕೀಲಿಕೈಗಳು, ಫೋನ್, ಕನ್ನಡಕ ಇತ್ಯಾದಿಗಳನ್ನು ಯಾವಾಗಲೂ ಒಂದು ನಿರ್ದಿಷ್ಟ ಸ್ಥಳದಲ್ಲಿಯೇ ಇರಿಸಿ
- ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಚಟುವಟಿಕೆಯಿಂದ ಇರಿ ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ಸಮತೋಲಿತ ಆರೋಗ್ಯಪೂರ್ಣ ಆಹಾರ ಶೈಲಿಯನ್ನು ಅನುಸರಿಸಿ
- ಗೆಳೆಯ-ಗೆಳತಿಯರು, ಕುಟುಂಬಸ್ಥರ ಜತೆಗೆ ಸದಾ ಸಂಪರ್ಕದಲ್ಲಿರಿ ಅಥವಾ ಕೆಲವು ಸ್ವಯಂಸೇವಕ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ
- ಗ್ರಹಣೇಂದ್ರಿಯಗಳನ್ನು ಚುರುಕುಗೊಳಿಸುವ ಸಕ್ರಿಯ ಚಟುವಟಿಕೆಗಳಾದ ಹೊಸ ಕೌಶಲಗಳನ್ನು ಕಲಿಯುವುದು, ಒಗಟು, ಪದಬಂಧ, ಸುಡೊಕು ಬಿಡಿಸುವುದು, ಓದುವುದು, ಆಟ ಆಡುವುದು ಇತ್ಯಾದಿಗಳಲ್ಲಿ ಪಾಲ್ಗೊಳ್ಳಿ. ಇವು ಕಠಿನವಾಗಿದ್ದಷ್ಟು ಒಳ್ಳೆಯದು
- ಸಾಕಷ್ಟು ಸಮಯ ಗುಣಮಟ್ಟದ ನಿದ್ದೆ ಮಾಡಿ
- ಮದ್ಯಪಾನ, ಧೂಮಪಾನ ಅಥವಾ ಇತರ ಮಾದಕದ್ರವ್ಯ ಬಳಕೆಯಂತಹ ಅನಾರೋಗ್ಯಕರ ಚಟಗಳಿಂದ ದೂರವಿರಿ. ಮಿತಿಯನ್ನು ಮೀರಿದ ಮೊಬೈಲ್ ಫೋನ್ ಅಥವಾ ಸಾಮಾಜಿಕ ಜಾಲತಾಣಗಳ ವ್ಯಸನವು ಕೂಡ ಮಿದುಳಿಗೆ ಹಾನಿಕರ ಎಂಬುದನ್ನು ಮರೆಯಬೇಡಿ
- ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರಿ: ರಕ್ತದ ಒತ್ತಡ, ಸಕ್ಕರೆಯ ಮಟ್ಟ, ಕೊಲೆಸ್ಟರಾಲ್, ಹೃದಯದ ಆರೋಗ್ಯದ ಮೇಲೆ ನಿಯಂತ್ರಣ ಹೊಂದಿರಿ
- ಅನೇಕ ವಾರಗಳಿಂದ ಒತ್ತಡ ಮತ್ತು ಮಾನಸಿಕ ಕಿರಿಕಿರಿಗೆ ಒಳಗಾಗಿದ್ದರೆ ವೃತ್ತಿಪರರ ಸಹಾಯ ಪಡೆಯಿರಿ
ನೀವು ಅಥವಾ ನಿಮ್ಮ ಆಪ್ತರಲ್ಲಿ ಯಾರಾದರೂ ಸ್ಮರಣೆಗೆ ಸಂಬಂಧಿಸಿದ ತೊಂದರೆಯಿಂದ ಬಳಲುತ್ತಿದ್ದರೆ ಆದಷ್ಟು ಬೇಗನೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಿ. ನಿಮ್ಮ ವೈದ್ಯರು ನಿಮಗಿರುವ ತೊಂದರೆಯನ್ನು ಪತ್ತೆಹಚ್ಚಿ ಸಂಬಂಧಪಟ್ಟ ಪರಿಣತ ವೈದ್ಯರಲ್ಲಿಗೆ ಶಿಫಾರಸು ಮಾಡಬಹುದು; ಪರಿಣತ ವೈದ್ಯರು ನಿಮ್ಮ ಮರೆವಿನ ತೊಂದರೆಯನ್ನು ನಿಭಾಯಿಸಲು ಸಹಾಯ ಮಾಡಬಲ್ಲರು.
ಡಾ| ಕೃತಿಶ್ರೀ ಸೋಮಣ್ಣ, ಸೈಕಿಯಾಟ್ರಿಸ್ಟ್, ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)