Advertisement

ಬೇರೆ ಚಿತ್ರಗಳ ಶೂಟಿಂಗ್‌ನಲ್ಲಿದ್ದಾಗ ಪ್ರಮೋಶನ್‌ಗೆ ಹೇಗೆ ಬರಲಿ?

11:25 AM Apr 08, 2018 | |

ನಿಕ್ಕಿ ಗಾಲ್ರಾನಿ ಸಿನಿಮಾ ಪ್ರಮೋಶನ್‌ಗೆ ಬರುತ್ತಿಲ್ಲ, ಆಕೆಗೆ ಕನ್ನಡ ಸಿನಿಮಾಗಳ ಮೇಲೆ ಆಸಕ್ತಿಯಿಲ್ಲ, ಚಿತ್ರತಂಡದವರು ಎಷ್ಟೇ ಗೋಳಾಡಿದರೂ ಬೇರೆ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ … ಹೀಗೆ ನಿಕ್ಕಿ ಗಾಲ್ರಾನಿ ಮೇಲೆ ಇತ್ತೀಚೆಗೆ ಈ ತರಹದ ಸಾಕಷ್ಟು ಆರೋಪಗಳು ಕೇಳಿಬರುತ್ತಲೇ ಇತ್ತು.

Advertisement

ಅದರಲ್ಲೂ ಕಳೆದ ತಿಂಗಳು ಬಿಡುಗಡೆಯಾದ “ಓ ಪ್ರೇಮವೇ’ ಚಿತ್ರದ ಪ್ರಮೋಶನ್‌ನಿಂದ ದೂರ ಉಳಿದ ನಿಕ್ಕಿ ಮೇಲೆ ಆ ಚಿತ್ರತಂಡ ಗರಂ ಆಗಿತ್ತು. ಸದ್ಯ ನಿಕ್ಕಿ ಕನ್ನಡ ಸಿನಿಮಾಗಳಿಂತ ಬೇರೆ ಭಾಷೆಯ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಬಿಝಿಯ ನಡುವೆಯೇ ತಮ್ಮ ಮೇಲಿನ ಆರೋಪಗಳಿಗೆ ನಿಕ್ಕಿ “ಚಿಟ್‌ಚಾಟ್‌’ನಲ್ಲಿ ಉತ್ತರಿಸಿದ್ದಾರೆ …. 

1. ಹೇಗಿದೆ ನಿಮ್ಮ ಸಿನಿಪಯಣ?
ಖುಷಿಯಾಗಿದ್ದೇನೆ. ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಬೇರೆ ಬೇರೆ ಭಾಷೆಗಳಿಂದ ಆಫ‌ರ್‌ಗಳು ಸಿಗುತ್ತಿವೆ. ಇಲ್ಲಿವರೆಗೆ 28 ಸಿನಿಮಾ ಮಾಡಿದ್ದೇನೆ. ಪ್ರತಿ ಸಿನಿಮಾದಲ್ಲೂ ನನ್ನ ಪಾತ್ರ ವಿಭಿನ್ನವಾಗಿದೆ. ನನಗೆ ಬರುತ್ತಿರುವ ಅವಕಾಶಗಳ ಬಗ್ಗೆ ಖುಷಿ ಇದೆ.

2. ಸದ್ಯ ಎಷ್ಟು ಸಿನಿಮಾಗಳು ನಿಮ್ಮ ಕೈಯಲ್ಲಿವೆ?
ತಮಿಳಿನ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಪ್ರಭುದೇವ ಅವರ ಜೊತೆ “ಚಾರ್ಲಿ ಚಾಪ್ಲಿನ್‌-2′, ಜೀವ ನಾಯಕರಾಗಿರುವ “ಕಿ’ ಹಾಗೂ ವಿಕ್ರಮ್‌ ಪ್ರಭು ಜೊತೆ “ಪಕ್ಕಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಮೂರು ಸಿನಿಮಾಗಳು ಸದ್ಯ ಚಿತ್ರೀಕರಣದಲ್ಲಿವೆ. 

3. ಕನ್ನಡ ಸಿನಿಮಾಗಳನ್ನು ನೀವು ಒಪ್ಪಿಕೊಳ್ಳುತ್ತಿಲ್ಲ ಎಂಬ ಮಾತಿದೆಯಲ್ಲ?
ಆ ತರಹ ಏನಿಲ್ಲ. ಸಾಕಷ್ಟು ಅವಕಾಶಗಳು ಕನ್ನಡದಿಂದ ನನಗೆ ಬರುತ್ತಿವೆ. ಆದರೆ, ಬೇರೆ ಸಿನಿಮಾಗಳಲ್ಲಿ ಬಿಝಿ ಇರುವಾಗ ನಾನು ಹೇಗೆ ಒಪ್ಪೋಕಾಗುತ್ತೆ ಹೇಳಿ. ಒಪ್ಪಿದ ಮೇಲೆ ಆ ಸಿನಿಮಾಕ್ಕೆ ಡೇಟ್ಸ್‌ ಹೊಂದಿಸಬೇಕು. ಇಲ್ಲವಾದರೆ ಆ ಚಿತ್ರತಂಡಕ್ಕೆ ಸಮಸ್ಯೆಯಾಗುತ್ತದೆ. ಆ ಕಾರಣದಿಂದ ನಾನು ಮೊದಲು ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸುತ್ತಿದ್ದೇನೆ.

Advertisement

4. ನೀವು ಕನ್ನಡ ಸಿನಿಮಾಗಳ ಪ್ರಮೋಶನ್‌ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ಮಾತಿದೆಯಲ್ಲಾ?
ಅದು ಸುಳ್ಳು. ನಾನು ಒಪ್ಪಿಕೊಂಡ ಸಿನಿಮಾಗಳನ್ನು ನಾನು ಪ್ರಮೋಶನ್‌ ಮಾಡುತ್ತೇನೆ. ಹಾಗಂತ ನಾನು ಬೇರೆ ಯಾವುದೋ ಸಿನಿಮಾದ ಚಿತ್ರೀಕರಣದಲ್ಲಿದ್ದಾಗ ಪ್ರಮೋಶನ್‌ಗೆ ಬನ್ನಿ ಎಂದು ಕರೆದರೆ ಹೇಗೆ ಬರೋಕ್ಕಾಗುತ್ತೆ ಹೇಳಿ.

5. “ಓ ಪ್ರೇಮವೇ’ ಸಿನಿಮಾದ ಪ್ರಮೋಶನ್‌ಗೆ ಕರೆದರೂ ನೀವು ಬರಲಿಲ್ಲವಂತೆ?
ಎರಡು ವರ್ಷದಿಂದ ಆ ಸಿನಿಮಾವನ್ನು ರಿಲೀಸ್‌ ಮಾಡುತ್ತೇನೆ ಎಂದು ಹೇಳಿಕೊಂಡೆ ಬಂದಿದ್ದರು. ಸಾಕಷ್ಟು ಬಾರಿ ಪ್ರಮೋಶನ್‌ಗೆ ನಾನು ಡೇಟ್‌ ಕೊಟ್ಟರೂ ಅದನ್ನು ಬಳಸಿಕೊಳ್ಳಲಿಲ್ಲ. ಈ ಸಿನಿಮಾದ ಪ್ರಮೋಶನ್‌ಗಾಗಿ ನಾನು ಬೇರೆ ಸಿನಿಮಾಗಳ ಚಿತ್ರೀಕರಣ ಕೂಡಾ ಮುಂದೆ ಹಾಕಿದೆ. ಆದರೆ, ಸಿನಿಮಾ ರಿಲೀಸ್‌ ಮಾಡಲೇ ಇಲ್ಲ. ಕೊನೆಗೆ ನಾನು ಬೇರೆ ಸಿನಿಮಾಗಳ ಚಿತ್ರೀಕರಣದಲ್ಲಿದ್ದಾಗ ಪ್ರಮೋಶನ್‌ಗೆ ಬನ್ನಿ ಎಂದರೆ ಹೇಗೆ ಬರೋಕ್ಕಾಗುತ್ತೆ ಹೇಳಿ?

6. ನೀವು ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ ಕೊಡುತ್ತಿಲ್ಲ, ಅಸಡ್ಡೆ ತೋರಿಸುತ್ತೀರಿ ಎಂಬ ಮಾತೂ ಇದೆಯಲ್ಲ?
ಆ ತರಹ ಸುದ್ದಿ ಹಬ್ಬಿಸುವವರಿಗೆ ನಾನೇನು ಮಾಡೋಕ್ಕಾಗುತ್ತೆ ಹೇಳಿ. ಕನ್ನಡ ಸಿನಿಮಾಗಳ ಬಗ್ಗೆ ಎಷ್ಟು ಪ್ರೀತಿ ಇದೆ ಎಂಬುದು ನನಗೆ ಗೊತ್ತು. ಕನ್ನಡ ನನ್ನ ಮನೆ. ನನ್ನ ಕೆರಿಯರ್‌ ಆರಂಭವಾಗಿದ್ದು ಇಲ್ಲಿಂದಲೇ. ಕನ್ನಡದವನ್ನು ಕಡೆಗಣಿಸುವ ಮಾತೇ ಇಲ್ಲ. ನಟಿಯಾಗಿ ನಾನು ಯಾವ ಭಾಷೆಯಲ್ಲಾದರೂ ಕೆಲಸ ಮಾಡಬಹುದು. ಸಿನಿಮಾಕ್ಕೆ ಭಾಷೆಯ ಹಂಗಿಲ್ಲ ಅಂದುಕೊಂಡಿದ್ದೇನೆ. 

7. ನೀವು ಅಕ್ಕ-ತಂಗಿ ಜೊತೆಯಾಗಿ ನಟಿಸುವ ಸಾಧ್ಯತೆ ಇದೆಯಾ?
ಗೊತ್ತಿಲ್ಲ, ಆದರೆ ಆ ಆಸೆಯಂತೂ ಇದೆ. ಮುಂದೆ ಅವಕಾಶ ಒದಗಿ ಬರುತ್ತಾ ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next