ಹುಬ್ಬಳ್ಳಿ: ಇರುವ ಕೃಷಿ ಭೂಮಿಯನ್ನು ಕಿತ್ತು ಮೋಜಿನ ತಾಣವನ್ನಾಗಿಸುವ ಶಕ್ತಿಗಳ ಕೈಗೆ ನೀಡಿ, ರೈತರನ್ನು ಕೂಲಿಯಾಗಿಸಿ, ಕೃಷಿ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ಇಲ್ಲವಾಗಿಸುತ್ತಿರುವಾಗ, 2022ಕ್ಕೆ ರೈತರ ಆದಾಯ ದುಪ್ಪಟ್ಟು ಎಂಬುದು ರೈತರನ್ನು ಯಾಮಾರಿಸುವ ತಂತ್ರವಲ್ಲದೆ ಮತ್ತಿನ್ನೇನು? -ಇದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಅವರ ಅಭಿಮತ. “ಉದಯವಾಣಿ’ ಜತೆ ಮಾತನಾಡಿದ ಅವರು ಒಟ್ಟಾರೆ ಹೇಳಿದಿಷ್ಟು
ಪ್ರಧಾನಿಯಾದಿಯಾಗಿ, ಕೇಂದ್ರ ಸಚಿವರೆಲ್ಲರ ಪ್ರಮುಖ ಸ್ಲೋಗನ್ ಎಂದರೆ 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಎಂಬುದಾಗಿದೆ. ಇದ್ದ ಕೃಷಿ ಭೂಮಿ ಕಿತ್ತು ಕಾರ್ಪೋರೆಟ್ ಶಕ್ತಿಗಳ ಕೈಗೆ ನೀಡಿದ ಮೇಲೆ ರೈತರ ಆದಾಯ ದುಪ್ಪಟ್ಟು ಮಾತು ಎಲ್ಲಿಂದ ಬಂತು. ರೈತ ಇನ್ನಷ್ಟು ಬರ್ಬಾದ್ ಆಗೋದು ಗ್ಯಾರೆಂಟಿ. ಡಬ್ಲ್ಯೂಟಿಒ ಒಪ್ಪಂದದಲ್ಲೇ ಭಾರತದಲ್ಲಿ ಹಂತ-ಹಂತವಾಗಿ ಕೃಷಿ ಸಬ್ಸಿಡಿ ಕೈಬಿಡುವ, ಬೆಂಬಲ ಬೆಲೆಯಡಿ ಖರೀದಿ ಸ್ಥಗಿತಗೊಳಿಸುವ ಒಪ್ಪಂದವೇ ಗೊತ್ತಿಲ್ಲದ ರೀತಿಯಲ್ಲಿ ಜಾರಿಯಾಗುತ್ತಿದೆ. ರಸಗೊಬ್ಬರ ಮೇಲೆ ಈ ಹಿಂದೆ ಇದ್ದ 1.20 ಲಕ್ಷ ಕೋಟಿ ರೂ.ನಷ್ಟು ಸಬ್ಸಿಡಿ ಇದೀಗ 65 ಸಾವಿರ ಕೋಟಿ ರೂ.ಗಳಿಗೆ ಇಳಿದಿದೆ. ರೈತರ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ಎಂಬುದಿಲ್ಲ. ಎಂಎಸ್‌ಪಿಗಿಂತ ಕಡಿಮೆ ದರಕ್ಕೆ ಖರೀದಿಸಿದರೂ ಕಾನೂನು ಕ್ರಮ ಇಲ್ಲವಾಗಿದೆ.
ಷೇರು ಪೇಟೆಯಲ್ಲಿ ಇಬ್ಬರು ಪ್ರಮುಖ ಉದ್ಯಮಿಗಳ ಆದಾಯ ತೀವ್ರ ಹೆಚ್ಚಿದ್ದರೆ, ಮತ್ತೂಂದು ಕಡೆ ರೈತರ ಆತ್ಮಹತ್ಯೆ ದುಪ್ಪಟ್ಟು ಹಾಗಿದೆ. ಬೆಳೆವಿಮೆ ಪರಿಹಾರ ಇದ್ದೂ ಇಲ್ಲದಂತಾಗಿದ್ದರೂ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರೆ ಇಂತಹ ಕಾಗಕ್ಕ-ಗುಬ್ಬಕ್ಕನ ಕಥೆಗಳನ್ನು ರೈತರು ನಂಬಬೇಕೇ ಹೇಳಿ.
ಸಂವಾದಕ್ಕೇನು ಸಮಸ್ಯೆ : ದೆಹಲಿಯಲ್ಲಿ ನಡೆದ ರೈತರ ಹೋರಾಟವನ್ನು ಅವಮಾನಿಸುವ, ಸುಳ್ಳು ಸುದ್ದಿಗಳನ್ನು ಹಬ್ಬಿಸುವ, ದಮನ ಮಾಡುವ ಎಲ್ಲ ಯತ್ನಗಳು ನಡೆದವು. ಅದೆಲ್ಲವನ್ನು ಮೆಟ್ಟಿ ನಿಂತು ಹೋರಾಟ ಮುಂದುವರಿದಿದೆ. 54 ದಿನಗಳ ಹೋರಾಟದಲ್ಲಿ 64 ರೈತರು ಹುತಾತ್ಮರಾಗಿದ್ದಾರೆ. ಖಾಲಿಸ್ತಾನ ಪರ, ನಕ್ಸಲ್ ಪ್ರೇರಿತ ಹೋರಾಟವೆಂದು ಅವಮಾನಿಸಲಾಯಿತು. ಹೆದ್ದಾರಿಗಳಲ್ಲಿ 10 ಅಡಿ ಆಳಕ್ಕೆ ಕಂದಕಗಳನ್ನು ತೋಡಿ ದೆಹಲಿಗೆ ಬಾರದಂತೆ ಗಡಿ ಭದ್ರತಾ ಪಡೆಗಳನ್ನು ನಿಯೋಜಿಸಿ ತಡೆಯಲಾಯಿತು.
ಉತ್ತರ ಪ್ರದೇಶದಲ್ಲಿ ರೈತ ನಾಯಕರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಇಷ್ಟಾದರೂ ಸುಮಾರು 10 ಲಕ್ಷ ರೈತರು ಮಕ್ಕಳು, ವೃದ್ಧರೆನ್ನದೆ ಕುಟುಂಬ ಸಮೇತರಾಗಿ ಹೋರಾಟ ನಿರತರಾಗಿದ್ದಾರೆ. ವಿವಿಧ ವಿಷಯಗಳಿಗೆ ಶುಭ ಕೋರುವ, ಟ್ವೀಟ್ -ಸಂವಾದ ಮಾಡುವ ಪ್ರಧಾನಿಯವರಿಗೆ ಕೊರೆಯುವ ಚಳಿಯಲ್ಲೂ ಹೋರಾಟ ಬಿಡದ ರೈತರೊಂದಿಗೆ ಸಂವಾದ ಮಾಡಬೇಕು ಎಂದು ಯಾಕೆ ಅನ್ನಿಸುತ್ತಿಲ್ಲ. ರೈತರು ಇವರ ಪಕ್ಷಕ್ಕೆ ಮತ ಹಾಕಿಲ್ಲವೇ? ಹಸಿರು ಶಾಲು ಧರಿಸಿ ನಾಟಕ ಮಾಡುವ ಮೂಲಕ ರೈತರಿಗೆ ಟೋಪಿ ಹಾಕುವವರಿಗೆ ತಕ್ಕ ಪಾಠ ಕಲಿಸುವ ದಿನ ಬಂದೇ ಬರುತ್ತದೆ. 1977ರ ಇತಿಹಾಸ ಮರುಕಳುಹಿಸೀತೆಂಬ ಎಚ್ಚರಿಕೆ ಇರಬೇಕಿದೆ.
ಇದನ್ನೂ ಓದಿ:ಶ್ರೀ ಜಗನ್ನಾಥದಾಸರ ಜೀವನಚರಿತ್ರೆಗೆ ಮುಹೂರ್ತ
ಮಠಾಧೀಶರ ಮೌನವೇಕೆ?
ರಾಜ್ಯದ ಮಠಮಾನ್ಯಗಳು ಕಟ್ಟಿದ್ದು, ಬೆಳೆದಿದ್ದು, ಉಳಿದಿದ್ದು ರೈತರಿಂದಲೇ ಎಂಬುದು ಸ್ಪಷ್ಟ. ಅನ್ನ ನೀಡುವ, ಮಠಗಳು ಸೇರಿದಂತೆ ದೇಶವನ್ನೇ ಸಲುಹುವ ರೈತನೇ ಇಂದು ಸಂಕಷ್ಟಕ್ಕೆ ಸಿಲುಕಿದ್ದು, ಭವಿಷ್ಯದಲ್ಲಿ ದೊಡ್ಡ ಗಂಡಾಂತರಕ್ಕೆ ಸಿಲುಕುವ ಸ್ಥಿತಿಯತ್ತ ಸಾಗುತ್ತಿದ್ದರೂ, ಮಠಾ ಧೀಶರ ಮೌನ ಅಚ್ಚರಿ ಮೂಡಿಸಿದೆ. ಅನ್ನದಾತರ ನೆರವಿಗೆ ನಾವಿದ್ದೇವೆಎಂದು ಮಠಾಧಿಧೀಶರು ಸ್ವಯಂಪ್ರೇರಿತರಾಗಿ ಬೀದಿಗಿಳಿಯಬೇಕಿತ್ತು. ಅದು ಆಗದಿರುವುದು ನೋವು ತರಿಸಿದ್ದಂತೂ ನಿಜ.
ಅಮರೇಗೌಡ ಗೋನವಾರ