ನವದೆಹಲಿ:ಅಮೇಠಿಯಲ್ಲಿ ಕಲಾಶ್ನಿಕೋವ್ ಮಾದರಿಯ ರೈಫಲ್ ಗಳನ್ನು ಉತ್ಪಾದಿಸುವ ಕಾರ್ಖಾನೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ್ದರು. ಭಾರತ ಹಾಗೂ ರಷ್ಯಾದ ಜಂಟಿ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಈ ಕಾರ್ಖಾನೆಯಲ್ಲಿ 7.50 ಲಕ್ಷ ಎ.ಕೆ.203 ರೈಫಲ್ ಗಳನ್ನು ತಯಾರಿಸಿ ನಮ್ಮ ಸೇನೆಯ ಬತ್ತಳಿಕೆಗೆ ಸೇರಿಸಲಾಗುತ್ತದೆ. ಎಕೆ 47ಗಿಂತಲೂ ಹೆಚ್ಚು ಸುಧಾರಿತವಾದ ಎಕೆ 203 ರೈಫಲ್ ನ ವೈಶಿಷ್ಟ್ಯ ಹೇಗಿದೆ ಗೊತ್ತಾ?
*ಎಕೆ-203 ರೈಫಲ್ ಪೂರ್ಣ ಪ್ರಮಾಣದ 7.62X39 ಎಂಎಂ ಕ್ಯಾಲಿಬರ್ ಹೊಂದಿದ್ದು, ಎರಡು ಮಾದರಿ ಹೊಂದಿದೆ. ಒಂದು ಸೆಮಿ ಆಟೋಮ್ಯಾಟಿಕ್ ಹಾಗೂ ಪೂರ್ಣ ಆಟೋಮ್ಯಾಟಿಕ್. ಅಲ್ಲದೇ ಎರಡು ಮಾದರಿಯ ಉದ್ದ ಹೊಂದಿದೆ. ಒಂದು 940 ಎಂಎಂ ಉದ್ದ, ಮತ್ತೊಂದು ಸ್ಟಾಕ್ ಪೋಲ್ಡೆಡ್ 705ಎಂಎಂ ಉದ್ದ.
*ಗ್ಯಾಸ್ ಚಾಲಿತ ಬೋಲ್ಟ್ ಲಾಕಿಂಗ್ ವ್ಯವಸ್ಥೆಯ ಎಕೆ-203 ರೈಫಲ್ ಒಂದು ನಿಮಿಷಕ್ಕೆ ಬರೋಬ್ಬರಿ 600 ರೌಂಡ್ಸ್ ಗುಂಡುಗಳು(ಸೆಕೆಂಡ್ ಗೆ 10 ರೌಂಡ್ಸ್) ಸಿಡಿಯುತ್ತದೆ. ಗನ್ ಬ್ಯಾರೆಲ್ ಉದ್ದ 415ಎಂಎಂ ಮತ್ತು ಗುಂಡುರಹಿತವಾಗಿ ಎಕೆ 203 ರೈಫಲ್ ತೂಕ 4.1 ಕಿಲೋ ಗ್ರಾಂ.
*ಭಾರತೀಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆ ಬಳಸುತ್ತಿರುವ INSAS ರೈಫಲ್ ಬದಲಿಗೆ ಎಕೆ 203 ನೀಡಲು ಸಿದ್ಧತೆ ನಡೆಸಲಾಗಿದೆ. INSAS ರೈಫಲ್ ತುಂಬಾ ಭಾರವಾಗಿದೆ. ಅಷ್ಟೇ ಅಲ್ಲ ಕಾರ್ಗಿಲ್ ಯುದ್ಧ ಸಮಯದಲ್ಲಿ INSAS ರೈಫಲ್ ಸೈನಿಕರಿಗೆ ಬಹಳಸಿದ್ದ ವೇಳೆ ತುಂಬಾ ಸಮಸ್ಯೆ ಕಾಣಿಸಿಕೊಂಡಿತ್ತು.
*ಎಕೆ 203 ಎಕೆ 47ನ ಸುಧಾರಿತ ಶ್ರೇಣಿಯ ರೈಫಲ್ ಆಗಿದೆ. ಇದರ ಮ್ಯಾಗಜೀನ್ ನಲ್ಲಿ 30 ಬುಲೆಟ್ಸ್ ಇರುತ್ತದೆ. ಇದು 400 ಮೀಟರ್ ದೂರದವರೆಗೆ ಶತ್ರುಗಳ ಮೇಲೆ ನಿಖರವಾಗಿ ದಾಳಿ ನಡೆಸಬಹುದಾಗಿದೆ. ಇದು ಐಎನ್ ಎಸ್ ಎಸ್ ರೈಫಲ್ ಗಿಂತ ಕಡಿಮೆ ಭಾರ ಹೊಂದಿದ್ದು, ನೂರಾರು ಗುಂಡುಗಳು ಏಕಕಾಲದಲ್ಲಿ ಸಿಡಿದರೂ ಕೂಡಾ ಮ್ಯಾಗಜಿನ್ ಬ್ಲಾಕ್ ಆಗುವುದಿಲ್ಲ. ಐಎನ್ ಎಸ್ ಎಸ್ ರೈಫಲ್ ನಲ್ಲಿ ಜಾಮ್ ಆಗುವ ಸಮಸ್ಯೆ ಹೆಚ್ಚಾಗಿತ್ತು.