Advertisement
ಸ್ವಚ್ಛತೆಗೆ ಆದ್ಯತೆ ನೀಡಿಹಲವು ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ಪುಷ್ಕಳವಾಗಿ ಸಂವರ್ಧನೆಗೊಳ್ಳಲು ಬೇಸಗೆ ಕಾಲ ಹೇಳಿ ಮಾಡಿಸಿದ ಸಮಯ. ಜತೆಗೆ ಈ ವಾತಾವರಣವು ರೋಗಾಣುಗಳ ಬೆಳವಣಿಗೆಯನ್ನು ನೂರ್ಮಡಿಗೊಳಿಸುವಂತಿರುತ್ತದೆ. ಆರಂಭದಲ್ಲಿ ಕಡಿಮೆ ತೀವ್ರತೆಯ ಸೋಂಕುಗಳನ್ನಷ್ಟೆ ಹರಡುವ ರೋಗಾಣುಗಳು ಅನಂತರದ ದಿನಗಳಲ್ಲಿ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರಬಹುದು. ಅಲ್ಲದೆ, ಬೇಸಗೆಯ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಮತ್ತೂಬ್ಬರಿಗೆ ಬಹುಬೇಗ ಹರಡುತ್ತವೆ. ಹಾಗಾಗಿ ರೋಗ ಬಾರದಂತೆ ತಡೆಯಲು ನಮ್ಮ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛವಾಗಿಡುವುದು ಮತ್ತು ವೈಯಕ್ತಿಕ ನೈರ್ಮಲ್ಯವೂ ಬಹು ಮುಖ್ಯ.
ಸಾಮಾನ್ಯವಾಗಿ ಬೇಸಗೆ ದಿನಗಳಲ್ಲಿ ದೇಹದಲ್ಲಿ ನೀರಿನಂಶ ಹೆಚ್ಚಿನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಆದ್ದರಿಂದ ದೇಹವನ್ನು ತಂಪಾಗಿಡಲು ಎಳನೀರು, ಕಲ್ಲಂಗಡಿ, ಕರಬೂಜದಂತಹ ಪಾನೀಯ, ಹಣ್ಣುಗಳನ್ನು ತಿನ್ನಿ. ಸೊಗದೆ ಬೇರು, ಜೀರಿಗೆ, ನಿಂಬೆ, ಮೂಸಂಬಿ, ಪುನರ್ಪುಳಿ ಹೀಗೆ ನೈಸರ್ಗಿಕ ಹಣ್ಣು, ಬೇರು ಇತ್ಯಾದಿಗಳಿಂದ ತಯಾರಿಸುವ ತಂಪು ಪಾನೀಯಗಳನ್ನು, ನೀರಿನ ಅಂಶ ಹೆಚ್ಚು ಇರುವ ಆಹಾರ ಪದಾರ್ಥಗಳನ್ನು ಸೇವಿಸಿ. ಇದರಿಂದ ದಾಹ ಕಡಿಮೆಯಾಗುವುದರೊಂದಿಗೆ ನಿರ್ಜಲೀಕರಣ ಸಮಸ್ಯೆಯಿಂದ ದೂರ ಉಳಿಯಬಹುದು. ಸಸ್ಯಾಹಾರಕ್ಕೆ ಆದ್ಯತೆ ನೀಡಿ
ಕೆಂಪು ಮಾಂಸವನ್ನು ತಿನ್ನುವುದನ್ನು ಕಮ್ಮಿ ಮಾಡಿ. ಬೇಸಗೆಯ ದಿನಗಳಲ್ಲಿ ಮಾಂಸಹಾರಕ್ಕಿಂತ ಸಸ್ಯಾಹಾರಕ್ಕೆ ಆದ್ಯತೆ ನೀಡಿ. ಅದರಲ್ಲಿಯೂ ದೇಹಕ್ಕೆ ತಂಪು ನೀಡುವ ಬಸಳೆ, ಸೌತೆಕಾಯಿ, ಸೋರೆಕಾಯಿ, ಬೂದು ಕುಂಬಳ, ಕ್ಯಾರೆಟ್, ಮೂಲಂಗಿ ಮತ್ತು ಸೊಪ್ಪು ತರಕಾರಿಗಳನ್ನು ನಿತ್ಯದ ಆಹಾರದಲ್ಲಿ ಬಳಸುವುದು ಆರೋಗ್ಯಕ್ಕೆ ತುಂಬಾ ಉಪಕಾರಿ.
Related Articles
ಈ ಸಂದರ್ಭದಲ್ಲಿ ಪದೇ ಪದೆ ಬಾಯಾರಿಕೆ, ದಣಿವು ಆಗುತ್ತಿರುತ್ತದೆ. ಹಾಗೆಂದು ಎಲ್ಲೆಂದರಲ್ಲಿ ದೊರೆಯುವ ನೀರನ್ನು ಸೇವಿಸುವುದು ಒಳಿತಲ್ಲ. ನೀರನ್ನು ಚೆನ್ನಾಗಿ ಕುದಿಸಿ, ಆರಿಸಿ ಕುಡಿಯುವುದನ್ನು ರೂಢಿಸಿಕೊಳ್ಳಿ. ಏಕೆಂದರೆ ಕಾಮಾಲೆ ಸೇರಿದಂತೆ ಕೆಲವು ಸಾಂಕ್ರಾಮಿಕ ರೋಗಗಳು ನೀರಿನಿಂದಲೇ ಹರಡುವುದರಿಂದ ಮುಂಜಾಗ್ರತೆ ವಹಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
Advertisement
ಬೇಸಗೆಯಲ್ಲಿ ಬೆನ್ನೇರುವ ಸಮಸ್ಯೆಗಳುಬೇಸಗೆ ಅವಧಿಯಲ್ಲಿ ಶರೀರದ ಶಕ್ತಿ ಮತ್ತು ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಮೂಗಿನಿಂದ ರಕ್ತಸ್ರಾವವಾಗುವುದು, ಉರಿಮೂತ್ರ, ಬೆವರುಸಾಲೆ ಬರುವುದು, ಸೆಕೆಬೊಕ್ಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಜತೆಗೆ ಈ ಸಮಯದಲ್ಲಿ ಜಲಾಶಯಗಳು ಬತ್ತಿ ನೀರು ಸಾಂದ್ರವಾಗಿರುತ್ತದೆ, ಮಲಿನವಾಗಿರುತ್ತದೆ. ಇದರಿಂದ ವಾಂತಿಭೇದಿ, ಭೇದಿ,ವಿಷಮಶೀತ ಜ್ವರ (ಟೈಫಾಯ್ಡ), ಕಾಮಾಲೆ ಮುಂತಾದ ಕಾಯಿಲೆಗಳು ಬರುತ್ತವೆ. ಬೇಸಗೆಯಲ್ಲಿನ ಈ ಕಾಯಿಲೆಗಳಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾಳಜಿ ವಹಿಸಬೇಕು. ಚರ್ಮ ಬಿರುಸಾಗುತ್ತದೆ
ಈ ಸಮಯದಲ್ಲಿ ಚರ್ಮ ಹಾಗೂ ಕೂದಲ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಹಾಗಾಗಿ ಚರ್ಮ ಮತ್ತು ಕೂದಲ ಆರೈಕೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಸೂರ್ಯನ ಕಿರಣಗಳಿಂದ ಚರ್ಮಕ್ಕಾಗುವ ಹಾನಿಯನ್ನು ತಪ್ಪಿಸಲು ಮೈಯನ್ನು ಸಂಪೂರ್ಣ ಮುಚ್ಚುವಂತಹ ದಿರಿಸುಗಳ ಧಾರಣೆ ಅಗತ್ಯ. ಅದರಲ್ಲೂ ಈ ದಿನಗಳಲ್ಲಿ ಸಡಿಲವಾದ ನೂಲಿನ ಬಟ್ಟೆಗಳನ್ನು, ಹತ್ತಿ ಬಟ್ಟೆಯನ್ನು ಉಪಯೋಗಿಸಿದರೆ ಇನ್ನೂ ಉತ್ತಮ. ಕೂದಲ ಕಾಳಜಿ
ಸೂರ್ಯನ ಕಾವಿನಿಂದ ತಲೆಗೂದಲು ಒಣಗುವ, ಬಿರುಸಾಗುವ ಮತ್ತು ಮಸುಕಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗಾಗಿ ತೆಂಗಿನಕಾಯಿ, ಆಲಿವ್ ಮತ್ತು ಅವಕಾಡೊ ಎಣ್ಣೆಯನ್ನು ಕೂದಲಿನ ತುದಿಯಿಂದ ಬುಡದವರೆಗೂ ಹಚ್ಚಿ. ಇದು ನೆತ್ತಿಯನ್ನು ತಣ್ಣಗಿಡುತ್ತದೆ. ಕೂದಲಿಗೆ ನೇರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸುವುದು ಮಾತ್ರವಲ್ಲದೆ, ನೆತ್ತಿಯಲ್ಲಿ ಆದ್ರìತೆಯ ಅಂಶ ಉಳಿಯಲು ಸಹಾಯ ಮಾಡುತ್ತದೆ. ಸಮತೋಲನ ಕಾಪಾಡಿಕೊಳ್ಳಿ
ಸೂರ್ಯನ ತಾಪದಿಂದ ಮನುಷ್ಯನ ದೇಹದಲ್ಲಿ ಬೆವರು ಜಾಸ್ತಿ ಉತ್ಪತ್ತಿಯಾಗುತ್ತದೆ. ಪರಿಣಾಮ ಶರೀರದಲ್ಲಿ ಇರುವ ನೀರಿನಂಶ ಮತ್ತು ಲವಣಗಳು ಕಡಿಮೆಯಾಗುತ್ತ ಇರುತ್ತವೆ. ಅದನ್ನು ಸಮತೋಲನ ಮಾಡಬೇಕಾದರೆ ಅದಷ್ಟು ಹೆಚ್ಚು ದ್ರವ ಪದಾರ್ಥಗಳನ್ನು ತೆಗೆದುಕೊಳ್ಳಬೇಕು. ಜತೆಗೆ ದಣಿವು ಆರಿಸಲು ತಂಪು ಪಾನೀಯಗಳಿಗಿಂತ ನೈಸರ್ಗೀಕ ಪೇಯಗಳಾದ ಎಳನೀರು, ಕಬ್ಬಿನ ಹಾಲು, ಮಜ್ಜಿಗೆ ಮತ್ತು ಕಲ್ಲಂಗಡಿ ಕಬೂìಜ ಶೀತ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಶೀತ ಜಲಸ್ನಾನ ಮಾಡುವುದರಿಂದ ಸಮತೋಲನ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
-ಕೃಷ್ಣ ರಾಘವ್ ಹೆಬ್ಟಾರ್
ವೈದ್ಯರು, ಆಯುರ್ವೇದ ವಿಭಾಗ
ಕೆ.ಎಂ.ಸಿ, ಮಣಿಪಾಲ ಎಚ್ಚರಿಕೆ ವಹಿಸಿ
ವಾರದಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆ ಆಗಿದ್ದು, ಮುಂಬರುವ ದಿನಗಳಲ್ಲಿಯೂ ಮಳೆ ಬರುವ ಸಾಧ್ಯತೆ ಇದೆ. ಆದರೆ ಇದು ಅನಿರ್ದಿಷ್ಟಾವಧಿಯಾಗಿದ್ದು, ಬಿಸಿಲು ಮಳೆ ಸುರಿಯುವುದರಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ಜತೆಗೆ ಮಳೆಯ ನೀರು ನಿಂತು ಕೊಳಚೆ ಆಗುವುದರಿಂದ ಆರೋಗ್ಯದ ಕುರಿತು ಹೆಚ್ಚಿನ ಜಾಗ್ರತೆವಹಿಸುವುದು ಉತ್ತಮ. ನೆನಪಿನಲ್ಲಿಡಬೇಕಾದ ಸಂಗತಿ
– ಬಿಗಿ ಬಟ್ಟೆಗಳನ್ನು ಧರಿಸುವುದು ಬೇಡ. ಸಡಿಲ ಉಡುಗೆತೊಡುಗೆ ಧರಿಸಿದರೆ ಉತ್ತಮ. ಬಿಗಿಯಾದ ಉಡುಪನ್ನು ಧರಿಸುವುದ ರಿಂದ ಬೆವರಿಗೆ ತುರಿಕೆ, ಕಜ್ಜಿಗಳಾಗಬಹುದು.
– ಶುಷ್ಕ, ಹಳಸಿದ, ಉಪ್ಪು, ಅತೀಖಾರ, ಮಸಾಲೆಯುಕ್ತ ಮತ್ತು ಕರಿದ ಪದಾರ್ಥ ಹಾಗೂ ಉಪ್ಪಿನಕಾಯಿ, ಹುಣಸೇಹಣ್ಣು ಮುಂತಾದ ಹುಳಿ, ಕಹಿ ಮತ್ತು ಒಗರು ರಸದ ಪದಾರ್ಥಗಳನ್ನು ಅತಿಯಾಗಿ ತಿನ್ನುವುದನ್ನು ತಡೆಯಬೇಕು.
– ಬೇಸಗೆಯಲ್ಲಿ ಲಘು ಆಹಾರಕ್ರಮ ಒಳ್ಳೆಯದು. ಅದರಲ್ಲೂ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಹೊಟ್ಟೆ ತುಂಬಾ ತಿನ್ನುವ ಬದಲು ಸ್ವಲ್ಪ-ಸ್ವಲ್ಪ ಆಹಾರವನ್ನು ಆಗಾಗ ತಿನ್ನಿ.
– ಕಾಫಿ- ಟೀ ಸೇವನೆ ಕಡಿಮೆ ಮಾಡಬೇಕು. ಕಾಬೋìನೇಟೆಡ್ ಪಾನೀಯಗಳನ್ನು ತ್ಯಜಿಸಬೇಕು. ನೈಸರ್ಗಿಕ ಪಾನೀಯಗಳನ್ನು, ಬೆಚ್ಚಗಿನ ಮಸಾಲೆ ರಹಿತ ಶುದ್ಧ ಆಹಾರವನ್ನು ಸೇವಿಸಬೇಕು.
– ಈ ಸಮಯದಲ್ಲಿ ಕಡಿಮೆ ವ್ಯಾಯಾಮ ಮಾಡುವುದು ಒಳಿತು. ಜತೆಗೆ ತಾಜಾ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. -ಸುಶ್ಮಿತಾ ಜೈನ್